ಮಂಗಳವಾರ, ಡಿಸೆಂಬರ್ 10, 2019
16 °C

ಪ್ರತಿಯೊಬ್ಬ ಯೋಧ ಗೌರವಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಯೊಬ್ಬ ಯೋಧ ಗೌರವಾರ್ಹ

ಶಿಡ್ಲಘಟ್ಟ: ‘ಪ್ರತಿಯೊಬ್ಬ ಯೋಧನೂ ಗೌರವಾರ್ಹ ಹಾಗೂ ಅಭಿನಂದನೀಯ. ಯಾವುದೇ ಸೈನಿಕನನ್ನು ಕೀಳಾಗಿ ನೋಡಬೇಡಿ. ಕನಿಷ್ಠ ಗೌರವವನ್ನು ಸಲ್ಲಿಸಿ. ಸಾಕಷ್ಟು ಪರಿಶ್ರಮ, ಬುದ್ಧಿಮತ್ತೆ ಇದ್ದವರು ಮಾತ್ರ ಭಾರತೀಯ ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಬಲ್ಲರು’ ಎಂದು ರಾಷ್ಟ್ರಪತಿಗಳ ಗ್ಯಾಲಂಟರಿ ಸೇನಾ ಮೆಡಲ್‌ ಪುರಸ್ಕೃತ ಹಾಗೂ ಕಾರ್ಗಿಲ್‌ ವೀರ ಯೋಧ ಕ್ಯಾಪ್ಟನ್‌ ನವೀನ್‌ ನಾಗಪ್ಪ ತಿಳಿಸಿದರು.

ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನ ಆವರಣದಲ್ಲಿ ಶನಿವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ ‘ಯೋಧ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅತ್ಯಂತ ಉತ್ಕೃಷ್ಟ ಜನರನ್ನು ಮಾತ್ರ ಸೇನೆಗೆ ಆಯ್ಕೆ ಮಾಡಿ, ತರಬೇತಿ ನೀಡಲಾಗುತ್ತದೆ. ಅಂತಹ ಶ್ರೇಷ್ಠರು ನೀವಾಗಿ. ನಮ್ಮ ಕಾಲ ಚಕ್ರ ಮುಗಿದು ನಿಮಗೆ ನಾವು ಜವಾಬ್ದಾರಿಯನ್ನು ಹಸ್ತಾಂತರಿಸಿದ್ದೇವೆ. ಸೇನೆಗೆ ಸೇರಲಾಗದಿದ್ದರೆ ನಿರಾಶೆ ಪಡಬೇಕಿಲ್ಲ. ಇರುವ ಸ್ಥಳದಲ್ಲೇ ದೇಶಕ್ಕೆ ಉಪಯೋಗವಾಗುವ ಕೆಲಸಗಳನ್ನು ಮಾಡಿ. ಹೆತ್ತವರಿಗೆ, ನಾಡಿಗೆ ಕೀರ್ತಿಯನ್ನು ತನ್ನಿ’ ಎಂದು ಕಿವಿಮಾತು ಹೇಳಿದರು.

ಕಾರ್ಗಿಲ್‌ ಯುದ್ಧ ನಡೆದಾಗ ಇದ್ದ ಪರಿಸ್ಥಿತಿ, ಯುದ್ಧದಲ್ಲಿ ಪಾಯಿಂಟ್‌ 4875 ಕಾರ್ಯಾಚರಣೆಯಲ್ಲಿ ತಾವು 120 ಸೈನಿಕರನ್ನು ಮುನ್ನಡೆಸಿಕೊಂಡು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಊಟ ನಿದ್ರೆಯಿಲ್ಲದೆ ನಡೆದ ಹೋರಾಟ, ಒಂದೊಂದೇ ಬಂಕರ್‌ಗಳ ವಶ. ಗ್ರೇನೇಡ್‌ ಸಿಡಿದಾಗ ನುಜ್ಜುಗುಜ್ಜಾಗಿದ್ದ ತಮ್ಮ ಎರಡು ಕಾಲುಗಳನ್ನು ಎಳೆದುಕೊಂಡು ತೆವಳುತ್ತಾ ಬೆಟ್ಟವಿಳಿದದ್ದು, ಕ್ಯಾ.ವಿಕ್ರಂಬಾತ್ರಾರ ವೀರಮರಣ, 21 ತಿಂಗಳ ಆಸ್ಪತ್ರೆಯ ವಾಸ ಮುಂತಾದ ಸಂಗತಿಗಳನ್ನು ವಿವರಿಸಿದರು.

ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಮತ್ತು ತಾಯಿ ಮಾತನಾಡಿ, ಅತ್ಯಂತ ಬುದ್ಧಿವಂತನಾಗಿದ್ದ ಮೇಜರ್‌ ಸಂದೀಪ್‌ ಅವರ ಬಾಲ್ಯ, ದೇಶದ ಬಗೆಗಿನ ಗೌರವ, ಭಕ್ತಿ, ಸೇನೆಗೆ ಸೇರಿ ಎನ್‌ಎಸ್‌ಜಿಗೆ ಆಯ್ಕೆಯಾಗಿ ತರಬೇತಿ ಪಡೆದದ್ದರು. ನಂತರ ಮುಂಬೈನಲ್ಲಿ ತಾಜ್‌ ಹೋಟೆಲ್‌ ಒಳಗೆ ಅಡಗಿದ್ದ ಉಗ್ರರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ವೀರಮರಣವನ್ನಪ್ಪಿದ್ದ ವಿಷಯಗಳನ್ನು ವಿವರಿಸಿದರು.

ಯಣ್ಣಂಗೂರಿನ ಯೋಧ ರವಿಕುಮಾರ್‌ ಮಾತನಾಡಿ, ‘ಸಾವು ಎಲ್ಲಿದ್ದರೂ ಬರುತ್ತದೆ. ಆದರೆ ಯೋಧನ ಸಾವು ಶ್ರೇಷ್ಠವಾದದ್ದು. ಉತ್ತಮ ನಾಗರಿಕರಾಗುವುದು ಸಹ ದೇಶ ಸೇವೆಯೇ’ ಎಂದರು. ಹುತಾತ್ಮ ಯೋಧ ಯಣ್ಣಂಗೂರು ಗಂಗಾಧರ್‌ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಗಿಲ್‌ ವೀರ ಯೋಧ ಕ್ಯಾ.ನವೀನ್‌ ನಾಗಪ್ಪ, ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಮತ್ತು ತಾಯಿ, ಯಣ್ಣಂಗೂರಿನ ಯೋಧ ರವಿಕುಮಾರ್‌ ಅವರನ್ನು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಮತ್ತು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ‘ಅಮರ ಮಧುರ ಪ್ರೇಮ’ ಕಾದಂಬರಿ ಕರ್ತೃ ವೇಣುಗೋಪಾಲ್‌, ಬೆಳ್ಳೂಟಿ ಸಂತೋಷ್‌, ಕಪಿಲಮ್ಮ ಕಾಲೇಜಿನ ಸಂಸ್ಥಾಪಕ ಎನ್‌.ಆರ್‌.ಕೃಷ್ಣಮೂರ್ತಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಪ್ರಾಂಶುಪಾಲ ಸುದರ್ಶನ್‌, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌, ಅಮೃತಕುಮಾರ್‌, ಎಸ್‌.ಸತೀಶ್‌, ದೇವರಮಳ್ಳೂರು ಮಹೇಶ್‌, ನಾಗರಾಜ್‌, ನರಸಿಂಹಮೂರ್ತಿ, ಜಗದೀಶ್‌, ಮಂಜುನಾಥ್‌, ಶಿಕ್ಷಕಿಯರಾದ ಹೇಮಾವತಿ, ಮಾಲತಿ ಹಾಜರಿದ್ದರು.

ಯೋಧನ ಮನೆಗೆ ಭೇಟಿ, ಸಾಂತ್ವನ

ಕಾರ್ಗಿಲ್‌ ವೀರ ಯೋಧ ಕ್ಯಾ.ನವೀನ್‌ ನಾಗಪ್ಪ, ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಮತ್ತು ತಾಯಿ, ಯಣ್ಣಂಗೂರಿನ ಹುತಾತ್ಮ ಯೋಧ ಗಂಗಾಧರ್‌ ಮನೆಗೆ ಭೇಟಿ ನೀಡಿ ಗಂಗಾಧರ್‌ ತಂದೆ ತಾಯಿ, ಪತ್ನಿ ಮತ್ತು ಮಗನಿಗೆ ಸಾಂತ್ವನ ಹೇಳಿದರು.

‘ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ, ಇನ್ನೊಬ್ಬನನ್ನು ಕಳೆದುಕೊಳ್ಳಲು ಇಷ್ಟವಿಲ್ಲ’ ಎಂದು ತಮ್ಮ ಎರಡನೆ ಮಗ ಯೋಧ ರವಿಕುಮಾರ್‌ನನ್ನು ಸೇನೆಗೆ ವಾಪಸ್‌ ಕಳಿಸುವುದಿಲ್ಲ ಎಂದ ಪೋಷಕರಿಗೆ ಸಮಾಧಾನ ಹೇಳಿದರು.

‘ನಾವು ಇದ್ದೊಬ್ಬ ಮಗನನ್ನೇ ಕಳೆದುಕೊಂಡೆವು, ಕಾರ್ಗಿಲ್‌ ಯುದ್ಧದಲ್ಲಿ ಕಾಲು ಕಳೆದುಕೊಂಡಿದ್ದಾರೆ ನೋಡಿ. ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಉನ್ನಿಕೃಷ್ಣನ್‌ ಧೈರ್ಯ ತುಂಬಿದರು.

 

ಪ್ರತಿಕ್ರಿಯಿಸಿ (+)