ಬುಧವಾರ, ಡಿಸೆಂಬರ್ 11, 2019
20 °C

ಶಬ್ದಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಜತೆ ಮಸೀದಿಯ ಚಿತ್ರ: ವಿವಾದಕ್ಕೀಡಾದ ಐಸಿಎಸ್‌ಇ ಆರನೇ ತರಗತಿ ವಿಜ್ಞಾನ ಪಠ್ಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶಬ್ದಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಜತೆ ಮಸೀದಿಯ ಚಿತ್ರ: ವಿವಾದಕ್ಕೀಡಾದ ಐಸಿಎಸ್‌ಇ ಆರನೇ ತರಗತಿ ವಿಜ್ಞಾನ ಪಠ್ಯ

ನವದೆಹಲಿ: ಐಸಿಎಸ್‌ಇ ಆರನೇ ತರಗತಿಯ ವಿಜ್ಞಾನ ಪಠ್ಯದಲ್ಲಿ ಶಬ್ದಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಜತೆ ಮಸೀದಿಯ ಚಿತ್ರವನ್ನು ಬಳಸಿರುವುದು ವಿವಾದಕ್ಕೆ ಗುರಿಯಾಗಿದೆ. ಮಸೀದಿಯ ಚಿತ್ರ ಬಳಸಿರುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದು, ಪ್ರಕಾಶಕರು ಕ್ಷಮೆಯಾಚಿಸಿದ್ದಾರೆ.

ಸೆಲಿನಾ ಪ್ರಕಾಶನ ಪ್ರಕಟಿಸಿರುವ ಪಠ್ಯ ಪುಸ್ತಕದಲ್ಲಿ ಶಬ್ದಮಾಲಿನ್ಯದ ಕುರಿತ ಪಾಠವಿದೆ. ಇದರಲ್ಲಿ ರೈಲು, ಕಾರು, ವಿಮಾನ ಮತ್ತು ಮಸೀದಿಯ ಚಿತ್ರಗಳನ್ನು ಬಳಸಲಾಗಿದ್ದು, ಇವುಗಳು ಶಬ್ದಮಾಲಿನ್ಯಕಾರಕ ಎಂಬಂತೆ ಬಿಂಬಿಸಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಮಸೀದಿಯ ಚಿತ್ರ ಬಳಸಿರುವುದಕ್ಕೆ ನೆಟ್ಟಿಗರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಪುಸ್ತಕವನ್ನು ಹಿಂಪಡೆಯಬೇಕೆಂದು ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ.

ಇದರ ಬೆನ್ನಲ್ಲೇ, ಕ್ಷಮೆಯಾಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕಾಶಕ ಹೇಮಂತ್ ಗುಪ್ತಾ ಅವರು, ಪುಸ್ತಕದಲ್ಲಿ ಬಳಸಲಾಗಿರುವ ಚಿತ್ರವನ್ನು ಬದಲಾಯಿಸುವುದಾಗಿ ಭರವಸೆ ನೀಡಿದ್ದಾರೆ. ಚಿತ್ರ ಬಳಸಿದ್ದರಿಂದಾಗಿ ಯಾರದೇ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

‘ಐಸಿಎಸ್‌ಇ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿ ಮಸೀದಿ ಚಿತ್ರದೊಂದಿಗೆ ಶಬ್ದಮಾಲಿನ್ಯದ ಬಗ್ಗೆ ವಿವರಣೆ ನೀಡಲಾಗಿದೆ. ಇದರ ಅರ್ಥವೇನು? ಆಜಾನ್‌ನಿಂದ (ಬಾಂಗ್) ಶಬ್ದಮಾಲಿನ್ಯವಾಗುತ್ತದೆಯೇ?’ ಎಂದು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಾರ್ಯಾಲಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಹ್ಯಾಶ್‌ಟ್ಯಾಗ್‌ ಜತೆಗೆ ಉಲ್ಲೇಖಿಸಲಾಗಿದೆ.

‘ಐಸಿಎಸ್‌ಇ ಪಠ್ಯ ಪುಸ್ತಕದಲ್ಲಿ ಶಬ್ದಮಾಲಿನ್ಯಕ್ಕೆ ಸಂಬಂಧಿಸಿ ಕಾರು, ರೈಲು, ವಿಮಾನದ ಜತೆಗೆ ಮಸೀದಿಯ ಚಿತ್ರ ಬಳಸಲಾಗಿದೆ. ಸೋನು ನಿಗಮ್ ಶಿಕ್ಷಣ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ’ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಆಜಾನ್‌ನಿಂದಾಗಿ ಮುಂಜಾವ ನೆಮ್ಮದಿಯಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ಸೋನು ನಿಗಮ್ ಇತ್ತೀಚೆಗೆ ಹೇಳಿದ್ದು ದೇಶದಾದ್ಯಂತ ವಿವಾದಕ್ಕೀಡಾಗಿತ್ತು.

ಪ್ರತಿಕ್ರಿಯಿಸಿ (+)