ಶನಿವಾರ, ಡಿಸೆಂಬರ್ 14, 2019
21 °C

ಚೊಚ್ಚಲ ಪ್ರಶಸ್ತಿಯ ಕನಸು

ಜಿ. ಶಿವಕುಮಾರ Updated:

ಅಕ್ಷರ ಗಾತ್ರ : | |

ಚೊಚ್ಚಲ ಪ್ರಶಸ್ತಿಯ ಕನಸು

‘ಈ ಬಾರಿ ಇಂಗ್ಲೆಂಡ್‌ ನೆಲದಲ್ಲಿ ಏಕದಿನ ವಿಶ್ವಕಪ್‌ ಆಯೋಜನೆಯಾಗಿದೆ. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಜೊತೆಗೆ ವಿಶ್ವದ ಶ್ರೇಷ್ಠ ತಂಡಗಳ ಸವಾಲು ಮೀರಿ ನಿಲ್ಲಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ ಬಾರಿ ಟ್ರೋಫಿ ಎತ್ತಿ ಹಿಡಿಯುವುದು ನಮ್ಮ ಗುರಿ. ಒಂದು ವೇಳೆ ಪ್ರಶಸ್ತಿ ಗೆಲ್ಲಲಾಗದಿದ್ದರೆ ಸೆಮಿಫೈನಲ್‌ ಪ್ರವೇಶಿಸಬೇಕೆಂಬ ಪಣ ತೊಟ್ಟಿದ್ದೇವೆ...

ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಅವರು ವಿಶ್ವಕಪ್‌ಗೂ ಮುನ್ನ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ ಮಾತುಗಳಿವು.

ವಿಶ್ವಕಪ್‌ ಪ್ರಶಸ್ತಿಯ ಹಾದಿ ಎಷ್ಟು ಕಠಿಣ ಎಂಬುದು ಮಿಥಾಲಿ ಅವರ ಮಾತುಗಳಲ್ಲೇ ಸ್ಪಷ್ಟವಾಗಿದೆ. ಮಹಿಳಾ ಏಕದಿನ ವಿಶ್ವಕಪ್‌ಗೆ ನಾಲ್ಕು ದಶಕಗಳ ಇತಿಹಾಸವಿದೆ. 1973ರಲ್ಲಿ ಆರಂಭವಾದ ಟೂರ್ನಿಯಲ್ಲಿ ಇದುವರೆಗೂ ಆಸ್ಟ್ರೇಲಿಯಾ ತಂಡವೇ ಆಧಿಪತ್ಯ ಸಾಧಿಸಿದೆ. ಕಾಂಗರೂಗಳ ನಾಡಿನ ಬಳಗ ಆರು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಭಾರತದ ಪಾಲಿಗೆ ಪ್ರಶಸ್ತಿ ಕೈಗೆಟುಕದಾಗಿದೆ.

2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಯಾಗಿದ್ದ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. ಅದಕ್ಕೂ ಮುನ್ನ ಸತತ ಎರಡು ಟೂರ್ನಿಗಳಲ್ಲಿ (1997 ಮತ್ತು 2000) ಸೆಮಿಫೈನಲ್‌ ತಲುಪಿತ್ತು.

2009 ಮತ್ತು 2013ರ ಟೂರ್ನಿಗಳಲ್ಲಾದರೂ ಪ್ರಶಸ್ತಿ ಕನಸು ಸಾಕಾರಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಯಿತು. 2009ರಲ್ಲಿ ಮೂರನೇ ಸ್ಥಾನ ಗಳಿಸಿದ್ದ ತಂಡ ತವರಿನಲ್ಲೇ ನಡೆದಿದ್ದ (2013) ಟೂರ್ನಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಚಿಗುರಿದ ಕನಸು

ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಈ ಬಾರಿಯ ಟೂರ್ನಿಯಲ್ಲಿ ಮಿಥಾಲಿ ರಾಜ್‌ ಪಡೆ ಉತ್ತಮ ಆರಂಭವನ್ನೇ ಮಾಡಿದೆ. ಆರಂಭಿಕ ಎರಡೂ ಪಂದ್ಯ ಗಳಲ್ಲಿ ಬಲಿಷ್ಠ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳನ್ನು ಹಣಿದಿದೆ. ಹೀಗಾಗಿ ಚೊಚ್ಚಲ ಪ್ರಶಸ್ತಿಯ ಕನಸು ಗರಿಗೆದರಿದೆ.

ಜುಲೈ 2ರಂದು ಡರ್ಬಿಯಲ್ಲಿ ನಡೆಯುವ ಪಂದ್ಯದಲ್ಲಿ ಮಿಥಾಲಿ ಪಡೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲು ಎದುರಿಸಲಿದೆ. ಆ ನಂತರ ಶ್ರೀಲಂಕಾ (ಜುಲೈ 5), ದಕ್ಷಿಣ ಆಫ್ರಿಕಾ (ಜುಲೈ 8), ಆಸ್ಟ್ರೇಲಿಯಾ (ಜುಲೈ 12) ಮತ್ತು ನ್ಯೂಜಿಲೆಂಡ್‌ (ಜುಲೈ 15) ತಂಡಗಳ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಗೆದ್ದರೆ ನಾಲ್ಕರ ಘಟ್ಟದ ಹಾದಿ ಸುಗಮವಾಗಲಿದೆ.

ಭಾರತ ತಂಡದ ಹಿರಿಯ ಆಟಗಾರ್ತಿ ಮತ್ತು ಈ ಹಿಂದೆ ಬಾಂಗ್ಲಾದೇಶ ಮತ್ತು ಚೀನಾ ತಂಡಗಳ ಮುಖ್ಯ ಕೋಚ್‌ ಆಗಿದ್ದ ಮಮತಾ ಮಾಬೆನ್‌ ಅವರೂ ಭಾರತ ಪ್ರಶಸ್ತಿ ಗೆಲ್ಲುವ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಾರೆ.

‘ಈ ಬಾರಿ ನಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅತ್ಯುತ್ತಮ ಅವಕಾಶ ಇದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ನಮ್ಮ ಆಟಗಾರ್ತಿಯರು ಬೆಳೆದಿದ್ದಾರೆ. ಮೊದಲ ಎರಡು ಪಂದ್ಯ ಗಳಲ್ಲಿ ತಂಡ ಆಟದ ಎಲ್ಲಾ ವಿಭಾಗ ಗಳಲ್ಲೂ ಮೇಲುಗೈ ಸಾಧಿಸಿದೆ. ಸ್ಪಿನ್ನರ್‌ ಗಳು ತಂಡದ ಶಕ್ತಿಯಾಗಿದ್ದು ಫೀಲ್ಡಿಂಗ್‌ ನಲ್ಲೂ ಚುರುಕುತನ ತೋರುತ್ತಿರುವುದು ಗಮನಾರ್ಹ’ ಎಂದು ಕರ್ನಾಟಕದ ಮಮತಾ ಹೇಳುತ್ತಾರೆ.

**

2005ರ ವಿಶ್ವಕಪ್‌ ನೆನಪು

2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿತ್ತು.

ಲೀಗ್‌ ಹಂತದಲ್ಲಿ ಐರ್ಲೆಂಡ್‌, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳನ್ನು ಮಣಿಸಿದ್ದ ತಂಡ ನ್ಯೂಜಿಲೆಂಡ್‌ ವಿರುದ್ಧ 16ರನ್‌ಗಳಿಂದ ಸೋತಿತ್ತು. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಏಪ್ರಿಲ್‌ 7ರಂದು ನಡೆದಿದ್ದ ಸೆಮಿಫೈನಲ್‌ನಲ್ಲಿ 40 ರನ್‌ ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಹಣಿದಿದ್ದ ತಂಡ ಫೈನಲ್‌ನಲ್ಲಿ ಮುಗ್ಗರಿಸಿತ್ತು.

ಏಪ್ರಿಲ್‌ 10 ರಂದು ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 215ರನ್‌ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ 46 ಓವರ್‌ಗಳಲ್ಲಿ 117ರನ್‌ಗಳಿಗೆ ಹೋರಾಟ ಮುಗಿಸಿತ್ತು.

**

ಭಾರತದ ವಿಶ್ವಕಪ್‌ ಸಾಧನೆ


ಆಡಿದ ಪಂದ್ಯ: 54

ಗೆಲುವು: 28

ಸೋಲು: 24

ಟೈ: 1

ಫಲಿತಾಂಶವಿಲ್ಲ: 1

**

ಏಕದಿನ ಮಾದರಿಯಲ್ಲಿ ಭಾರತದ ಸಾಧನೆ

ಒಟ್ಟು ಪಂದ್ಯ:
 241

ಗೆಲುವು: 132

ಸೋಲು: 104

ಟೈ: 1

ಫಲಿತಾಂಶವಿಲ್ಲ: 4

ಪ್ರತಿಕ್ರಿಯಿಸಿ (+)