ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನ್‌, ಐರ್ಲೆಂಡ್‌ಗೆ ‘ಟೆಸ್ಟ್‌’...

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಟೆಸ್ಟ್‌ ಮಾನ್ಯತೆ ನೀಡಿ ಹದಿನೇಳು ವರ್ಷಗಳ ನಂತರ ಟೆಸ್ಟ್‌ ಆಡುವ ರಾಷ್ಟ್ರಗಳ ಪಟ್ಟಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮತ್ತೆ ಎರಡು ತಂಡಗಳನ್ನು ಸೇರಿಸಿದೆ. ಅಫ್ಗಾನಿಸ್ತಾನ ಮತ್ತು ಐರ್ಲೆಂಡ್‌ ತಂಡಗಳ ಕಾಯುವಿಕೆಗೆ ಈ ಮೂಲಕ ತೆರೆ ಬಿದ್ದಿದೆ.

ಏಕದಿನ ಕ್ರಿಕೆಟ್‌ನಲ್ಲಿ ಅಚ್ಚರಿಯ ಫಲಿತಾಂಶಗಳ ಮೂಲಕ ಗಮನ ಸೆಳೆದ ಐರ್ಲೆಂಡ್‌ ಮತ್ತು ಸಮಸ್ಯೆಗಳ ನಡುವೆಯೇ ಸಾಧನೆಯ ಹಾದಿ ಹಿಡಿದಿರುವ ಅಫ್ಗಾನ್‌ ತಂಡಗಳ ಎದುರು ಈಗ ನಿಜವಾದ ಸವಾಲು ಇದೆ. ಈ ಕುರಿತು ವಿಕ್ರಂ ಕಾಂತಿಕೆರೆ ವಿವರಿಸಿದ್ದಾರೆ.

ಅದು 2006ರ ಜೂನ್‌ 13. ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿ ಸಂಭ್ರಮ ತುಂಬಿತ್ತು. ಯಾಕೆಂದರೆ ಅಲ್ಲಿ ಮೊತ್ತಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿತ್ತು. ಅಲ್ಲಿಗೆ ಪ್ರವಾಸ ಮಾಡಿದ ಇಂಗ್ಲೆಂಡ್‌ ತಂಡ ಏಕದಿನ ಪಂದ್ಯವನ್ನು ಆಡಿತ್ತು. ಅದು ಐರ್ಲೆಂಡ್‌ ಕ್ರಿಕೆಟ್‌ನ ಐತಿಹಾಸಿಕ ಕ್ಷಣವಾಗಿದ್ದರೂ ಹೊರಜಗತ್ತಿಗೆ ದೊಡ್ಡ ಸುದ್ದಿಯಾಗಿರಲಿಲ್ಲ. ಆದರೆ ಐರ್ಲೆಂಡ್‌ ಕ್ರಿಕೆಟ್ ತಂಡ ಪ್ರಪಂಚಕ್ಕೇ ಸುದ್ದಿಯಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಒಂದೇ ವರ್ಷದಲ್ಲಿ ಅಮೋಘ ಸಾಧನೆ ಮಾಡಿತು. 2007ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಎಲ್ಲರೂ ಹುಬ್ಬೇರಿಸಿ ನೋಡುವಂತೆ ಮಾಡಿತು. ಇದಾಗಿ ಹತ್ತು ವರ್ಷಗಳ ನಂತರ ಐರ್ಲೆಂಡ್ ಕ್ರಿಕೆಟ್‌ ಮತ್ತೊಮ್ಮೆ ಸಂಭ್ರಮದಲ್ಲಿದೆ. ಯಾಕೆಂದರೆ ತಂಡಕ್ಕೆ ಈಗ ಟೆಸ್ಟ್ ಮಾನ್ಯತೆ ಲಭಿಸಿದೆ.

ಐರ್ಲೆಂಡ್‌ ಜೊತೆಗೆ ಟೆಸ್ಟ್ ಮಾನ್ಯತೆ ಗಳಿಸಿದ ಮತ್ತೊಂದು ತಂಡ ಅಫ್ಗಾನಿಸ್ತಾನ. ಐರ್ಲೆಂಡ್‌ಗೆ ಹೋಲಿಸಿದರೆ ಈ ತಂಡದ ಕಥೆ ತೀರಾ ಭಿನ್ನ. ಯೂರೋಪ್‌ನ ಸಂಪನ್ಮೂಲಗಳ ಅನುಕೂಲದಲ್ಲಿ ಬೆಳೆಯುತ್ತಿರುವ ಐರ್ಲೆಂಡ್‌ಗೆ ಇಂಗ್ಲೆಂಡ್‌ನ ಕ್ರೀಡಾಂಗಣಗಳ ಸದುಪಯೋಗ ಮಾಡಿಕೊಳ್ಳುವ ಅವಕಾಶವಿದೆ. ಆ ದೇಶದಲ್ಲೂ ನಾಲ್ಕು ಅಂತರರಾಷ್ಟ್ರೀಯ ಮೈದಾನಗಳಿವೆ. ಆದರೆ ಅಫ್ಗಾನಿಸ್ತಾನದವರು ‘ತವರಿನ ಅಂಗಳ’ದಲ್ಲಿ ಆಡಲು ಬೇರೆ ದೇಶಕ್ಕೆ ಹೋಗಬೇಕು. ಭದ್ರತೆಯ ಸಮಸ್ಯೆ ಇಲ್ಲಿನ ಕ್ರಿಕೆಟ್‌ ಬೆಳವಣಿಗೆ ಸವಾಲು ಒಡ್ಡಿದೆ. ಇಲ್ಲಿ ನಾಲ್ಕು ಕ್ರಿಕೆಟ್ ಕ್ರೀಡಾಂಗಣಗಳು ಇವೆ. ಎರಡು ನಿರ್ಮಾಣ ಹಂತದಲ್ಲಿವೆ.

ಆದರೂ ಶಾರ್ಜಾ ಮತ್ತು ಶ್ರೀಲಂಕಾದ ಡಂಬುಲಾದಲ್ಲಿ ತವರಿನ ಪಂದ್ಯಗಳನ್ನು ಆಡಿದ ಅಫ್ಗಾನಿಸ್ತಾನ ತಂಡಕ್ಕೆ ಈಗ ಭಾರತದ ನೋಯ್ಡಾ ಆಶ್ರಯ ನೀಡಿದೆ. ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್‌ ಬಿಟ್ಟರೆ ಬಲಿಷ್ಠ ರಾಷ್ಟ್ರಗಳ ವಿರುದ್ಧ ಜಯದ ದಾಖಲೆ ಹೊಂದಿಲ್ಲದ ಅಫ್ಗಾನಿಸ್ತಾನಕ್ಕೆ ಟೆಸ್ಟ್ ಮಾನ್ಯತೆ ಹೊಸ ಬಗೆಯ ಭರವಸೆ ತುಂಬಲಿದೆ.

ದೈತ್ಯರ ಸವಾಲಿಗೆ ‘ಶಿಶು’ಗಳ ಉತ್ತರ
ಐರ್ಲೆಂಡ್‌ ತಂಡ ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ದೈತ್ಯರನ್ನು ಮಣಿಸಿ ಅಪರೂಪದ ಸಾಧನೆ ಮಾಡಿದೆ.

2007ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಜೊತೆ ಟೈ ಸಾಧಿಸಿದ ತಂಡ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಸುದ್ದಿ ಮಾಡಿತು. ಈ ಪಂದ್ಯದಲ್ಲಿ ಸೋತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದರೆ, ಕ್ರಿಕೆಟ್ ಶಿಶುಗಳು ಸೂಪರ್ ಎಂಟರ ಹಂತದ ಹಾದಿಯನ್ನು ಸುಗಮ ಮಾಡಿಕೊಂಡರು.

ಈ ತಂಡದ ನಾಗಾಲೋಟ ಅಷ್ಟಕ್ಕೇ ಮುಗಿಯಲಿಲ್ಲ. ಮುಂದಿನ ವಿಶ್ವಕಪ್‌ನಲ್ಲೂ ಗಮನಾರ್ಹ ಸಾಧನೆ ಮಾಡಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಮೂರು ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಎದುರಾಳಿಗಳು ಮುಂದಿಟ್ಟ ಬೃಹತ್‌ ಮೊತ್ತವನ್ನು ತಂಡ ಸುಲಭವಾಗಿ ಬೆನ್ನತ್ತಿತ್ತು. ಕೆವಿನ್‌ ಓಬ್ರಿಯೆನ್‌ ವಿಶ್ವಕಪ್‌ನಲ್ಲಿ ವೇಗದ ಶತಕ ದಾಖಲಿಸಿ ಮಿಂಚಿದರು.

2015ರ ವಿಶ್ವಕಪ್‌ನಲ್ಲೂ ತಂಡದ ‘ದೈತ್ಯ’ಶಕ್ತಿ ಹೊರಸೂಸಿತು.

ಈ ಬಾರಿ ತಂಡ ಸೋಲಿಸಿದ್ದು ವೆಸ್ಟ್‌ ಇಂಡೀಸ್ ತಂಡವನ್ನು. 300ಕ್ಕೂ ಅಧಿಕ ರನ್‌ಗಳ ಗುರಿ ಬೆನ್ನತ್ತಿದ ತಂಡ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ಅಫ್ಗಾನಿಸ್ತಾನ ಮೊದಲ ಏಕದಿನ ಪಂದ್ಯ ಆಡಿದ್ದು 2009ರಲ್ಲಿ. ಇಲ್ಲಿಯವರೆಗೆ 83 ಪಂದ್ಯಗಳ ಪೈಕಿ 42ರಲ್ಲಿ ಜಯ ಗಳಿಸಿದೆ. ಐರ್ಲೆಂಡ್‌ ಈ ವರೆಗೆ 123 ಪಂದ್ಯಗಳನ್ನು ಆಡಿದ್ದು 51ರಲ್ಲಿ ಗೆಲುವು ಸಾಧಿಸಿದೆ. ಅಫ್ಗಾನಿಸ್ತಾನ ಟ್ವೆಂಟಿ–20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 2010ರಲ್ಲಿ. 61 ಪಂದ್ಯಗಳನ್ನು ಆಡಿದ್ದು 39ರಲ್ಲಿ ಜಯ ಗಳಿಸಿದೆ. ಐರ್ಲೆಂಡ್‌ 2008ರಿಂದ ಟ್ವೆಂಟಿ–20 ಕ್ರಿಕೆಟ್ ಆಡುತ್ತಿದೆ. 61 ಪಂದ್ಯಗಳ ಪೈಕಿ 26ರಲ್ಲಿ ಜಯ ಸಾಧಿಸಿದೆ.


(ಐರ್ಲೆಂಡ್ ತಂಡದ  ಕೆವಿನ್‌ ಓಬ್ರಿಯೆನ್‌)

ಅನುಭವಿಗಳಿಗೆ ವಯಸ್ಸು
ಎರಡೂ ತಂಡಗಳಿಗೂ ಈಗ ಟೆಸ್ಟ್‌ ಮಾನ್ಯತೆಯನ್ನು ಸದುಪಯೋಗಪಡಿಸಿಕೊಳ್ಳುವ ಸವಾಲು ಎದುರಾಗಿದೆ. ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ವಿಶ್ವದ ಗಮನ ಸೆಳೆದರೂ ಐದು ದಿನಗಳ ಪಂದ್ಯಗಳಲ್ಲಿ ಬಳಸಬೇಕಾದ ತಂತ್ರಗಳಲ್ಲಿ ನೈಪುಣ್ಯ ಸಾಧಿಸಲು ತಂಡಗಳು ಸಜ್ಜಾಗಬೇಕಿದೆ. ಉಭಯ ತಂಡಗಳಲ್ಲೂ ಅನುಭವಿಗಳಿಗೆ ವಯಸ್ಸಾಗಿದ್ದು ಯುವ ಆಟಗಾರರು ಅನುಭವ ಸಂಪಾದಿಸಿಕೊಳ್ಳಬೇಕಾಗಿದೆಯಷ್ಟೆ.

ಐರ್ಲೆಂಡ್‌ ಪರ ಮೂರು ಸಾವಿರಕ್ಕೂ ಅಧಿಕ ರನ್‌ ಸಂಪಾದಿಸಿರುವ ನಾಯಕ ವಿಲಿಯಮ್‌ ಪೋಟರ್‌ಫೀಲ್ಡ್‌, 99 ವಿಕೆಟ್ ಕಬಳಿಸಿರುವ ಆಲ್‌ರೌಂಡರ್‌ ಕೆವಿನ್ ಓಬ್ರಿಯೆನ್‌, ಎರಡು ಸಾವಿರ ರನ್‌ಗಳ ಸನಿಹದಲ್ಲಿರುವ ಎಡ್‌ ಜಾಯ್ಸ್‌ ಸೇರಿದಂತೆ ಒಂಬತ್ತು ಮಂದಿ 40ರ ಆಸುಪಾಸಿನಲ್ಲಿರುವವರು.

ಅಫ್ಗಾನ್‌ ತಂಡದಲ್ಲಿ ಆರು ಮಂದಿ 30 ವರ್ಷ ದಾಟಿದವರು ಇದ್ದಾರೆ. ಇವರ ಪೈಕಿ ಯಾರಿಗೂ ಇಲ್ಲಿಯ ವರೆಗೆ 2000 ರನ್ ಅಥವಾ 100 ವಿಕೆಟ್‌ ಗಳಿಸಲು ಸಾಧ್ಯವಾಗಲಿಲ್ಲ. ಇಂಥ ಸ್ಥಿತಿಯಲ್ಲಿ ತಂಡಗಳು ಟೆಸ್ಟ್‌ಗೆ ಹೇಗೆ ಸಜ್ಜಾಗುತ್ತವೆ ಎಂಬುದು ಕುತೂಹಲದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT