ಬುಧವಾರ, ಡಿಸೆಂಬರ್ 11, 2019
20 °C

ಕಬಡ್ಡಿ ಜನಪ್ರಿಯತೆ ಬೆನ್ನಟ್ಟಿ...

Published:
Updated:
ಕಬಡ್ಡಿ ಜನಪ್ರಿಯತೆ ಬೆನ್ನಟ್ಟಿ...

ಇದೊಂದು ಪವಾಡವಲ್ಲದೇ ಮತ್ತಿನ್ನೇನು..?

ಮಣ್ಣಿನಲ್ಲಿ ಆಡುವ ಒಂದು ಆಟವನ್ನು ನೂರಾರು ಕೋಟಿ ವಹಿವಾಟು ನಡೆಸುವಂತೆ ಮಾಡಿದರೆ ಅದು ವಿಸ್ಮಯವಲ್ಲವೇ? ದೇಶದಲ್ಲಿ ಹುಟ್ಟಿ ಬೆಳೆದರೂ ಕಾಳಜಿ ಇಲ್ಲದೆ ಸೊರಗಿದ್ದ ಒಂದು ಕ್ರೀಡೆಯನ್ನು ಕೇವಲ ಮೂರು ವರ್ಷಗಳಲ್ಲಿ ರಾಷ್ಟ್ರದ ಎರಡನೇ ಅತಿ ದೊಡ್ಡ ಕ್ರೀಡೆಯನ್ನಾಗಿ ಮಾಡುವುದು ಅಚ್ಚರಿ ಸಂಗತಿ ಅಲ್ಲವೇ? ಬಿಡುಗಾಸಿಗೆ ಪರದಾಡುತ್ತಿದ್ದ ಆಟಗಾರರ ಕೈಯಲ್ಲಿ ಹಣ ಓಡಾಡುವಂತೆ ಮಾಡಿದ ಹಾಗೂ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಿದ ಪರಿ ಪವಾಡವಲ್ಲದೇ ಮತ್ತಿನ್ನೇನು?

ಕೇವಲ ಮೂರು ವರ್ಷಗಳ ಹಿಂದೆ ಆರಂಭವಾಗಿ ಈಗ ದೇಶದ ಮಾರುಕಟ್ಟೆಯಲ್ಲಿ ದೊಡ್ಡ ‘ಬ್ರಾಂಡ್‌’ ಆಗಿ ಬೆಳೆದಿರುವ ಪ್ರೊ ಕಬಡ್ಡಿ ಲೀಗ್‌ ಕುರಿತು ಆಟಗಾರರು,ಕೋಚ್‌ಗಳು, ಫ್ರಾಂಚೈಸ್‌ ಮಾಲೀಕರು, ಸಂಘಟಕರು, ಪ್ರಾಯೋಜಕರುಮುಂಬೈನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎತ್ತಿದ ಪ್ರಶ್ನೆಗಳಿವು.

ನಿಜ, 2014ರಲ್ಲಿ ಆರಂಭವಾದ ಪ್ರೊ ಕಬಡ್ಡಿ ಲೀಗ್ ಈಗ ಭಾರತದಲ್ಲಿ ಕ್ರಿಕೆಟ್‌ ನಂತರದ ಸ್ಥಾನದಲ್ಲಿದೆ. ಜನಪ್ರಿಯತೆ ಹಾಗೂ ಆರ್ಥಿಕ ಮಾನದಂಡ ಇಟ್ಟುಕೊಂಡು ಈ ಮಾತನ್ನು ಹೇಳಬಹುದು. ಹಲವಾರು ವರ್ಷಗಳಿಂದ ನೆಚ್ಚಿನ ಕ್ರೀಡೆಗಳಾಗಿರುವ ಫುಟ್‌ಬಾಲ್‌, ಹಾಕಿ, ಬ್ಯಾಡ್ಮಿಂಟನ್‌, ಟೆನಿಸ್‌, ಚೆಸ್‌ಗೂ ಈ ಪರಿಯ ವಹಿವಾಟು ದೇಶದಲ್ಲಿ ನಡೆಯುತ್ತಿಲ್ಲ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ. ಚೀನಾದ ವಿವೊ ಮೊಬೈಲ್‌ ಕಂಪೆನಿಯು ಕಬಡ್ಡಿ ಲೀಗ್‌ನ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಐದು ವರ್ಷಗಳ ಅವಧಿಗೆ ₹ 300 ಕೋಟಿ ಒಪ್ಪಂದ ಮಾಡಿಕೊಂಡಿದೆ. ಐಪಿಎಲ್ ಜೊತೆಗಿನ ಒಪ್ಪಂದದ ಬಳಿಕ ಬೇರೆ ಕ್ರೀಡೆಯಲ್ಲಿ ಪ್ರಾಯೋಜಕರು ಹೂಡುತ್ತಿರುವ ಬಹುದೊಡ್ಡ ಮೊತ್ತವಿದೆ.

‘ಕಬಡ್ಡಿ ಲೀಗ್‌ ಆರಂಭಿಸಿದ ಮೊದಲ ವರ್ಷ ಪ್ರಾಯೋಜಕತ್ವ ಸಾಧ್ಯವೇ ಎಂದು ಕೇಳಿದಾಗ ಹೆಚ್ಚಿನವರು ಹಿಂದೆ ಮುಂದೆ ನೋಡಿದರು. ಈಗ ನೋಡಿ 24ಕಂಪೆನಿಗಳು ಜಾಹೀರಾತು ನೀಡಲು ಮುಂದೆ ಬಂದಿವೆ. ವಿಶ್ವದಲ್ಲಿ ಯಾವುದೇ ಕ್ರೀಡೆ ಇಷ್ಟು ವೇಗದಲ್ಲಿ ಜನಪ್ರಿಯತೆ ಪಡೆದ ಉದಾಹರಣೆ ಇಲ್ಲ. ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಐಪಿಎಲ್‌ ಟೂರ್ನಿಗಿಂತ ಹೆಚ್ಚಿನ ಪ್ರೇಕ್ಷಕರು ಕಬಡ್ಡಿ ಲೀಗ್‌ಗೆ ಇದ್ದಾರೆ. ಇದೊಂದು ಅಚ್ಚರಿಯ ಬೆಳವಣಿಗೆ.ಅಮಿತಾಭ್‌ ಬಚ್ಚನ್‌, ಅಮೀರ್‌ ಖಾನ್‌, ಶಾರುಖ್‌ ಖಾನ್‌, ಸಲ್ಮಾನ್ ಖಾನ್‌ ಅವರಂಥ ನಟರು ಕ್ರೀಡಾಂಗಣಕ್ಕೆ ಬಂದು ಕಬಡ್ಡಿ ವೀಕ್ಷಿಸುತ್ತಾರೆ ಎಂದು ಹಿಂದೆ ಯಾರಾದರೂ ಊಹಿಸಲು ಸಾಧ್ಯವಿತ್ತೇ ’ ಎಂದಿದ್ದು ಸ್ಟಾರ್‌ ಇಂಡಿಯಾ (ಸ್ಪೋರ್ಟ್ಸ್‌)ಉಪಾಧ್ಯಕ್ಷ (ಮಾರುಕಟ್ಟೆ) ಶುಭ್ರಾಂಶು ಸಿಂಗ್‌.

ಕಬಡ್ಡಿ ಕ್ರೀಡೆಯನ್ನು ಕಾಮನ್‌ವೆಲ್ತ್‌ ಹಾಗೂ ಒಲಿಂಪಿಕ್‌ ಕ್ರೀಡಾಕೂಟಕ್ಕೂ ತೆಗೆದುಕೊಂಡು ಹೋಗುವ ಪ್ರಯತ್ನಗಳು ನಡೆಯುತ್ತಿವೆ. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುರೋಪಿಯನ್‌ ಫುಟ್‌ಬಾಲ್‌ ಅಸೋಸಿಯೇಷನ್‌ ಸಂಸ್ಥಾಪಕ ಕ್ರೇಗ್‌ ಥಾಂಪ್ಸನ್‌, ಪ್ರೀಮಿಯರ್‌ ಲೀಗ್‌ನ(ಇಂಗ್ಲೆಂಡ್‌) ನಿಕ್‌ ಕೊವಾರ್ಡ್‌, ಕೀನ್ಯಾ ಕಬಡ್ಡಿ ತಂಡದ ಕೋಚ್‌ ಲವೆಂಟರ್‌ ಒಗುಟಾ ಈ ಬಗ್ಗೆ ಬೆಳಕು ಚೆಲ್ಲಿದರು.

‘ಕಬಡ್ಡಿ ಲೀಗ್‌ನಲ್ಲಿ ಪಾಲ್ಗೊಳ್ಳಲು ವಿದೇಶಿ ಆಟಗಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಕೀನ್ಯಾ, ಕೊರಿಯಾ ಹಾಗೂ ಇನ್ನಿತರ ದೇಶಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿವೆ. ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಬಡ್ಡಿಗೆ ಈಗ ಲಭಿಸಿರುವ ಜನಪ್ರಿಯತೆಯನ್ನು ಕಾಯ್ದುಕೊಂಡು ಹೋಗುವುದು ನಮ್ಮ ಮುಂದಿರುವ ಸವಾಲು. ಮೊದಲು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಬಡ್ಡಿಗೆ ಜಾಗ ಕಲ್ಪಿಸಲು ಪ್ರಯತ್ನಿಸಬೇಕು. 2024ಅಥವಾ 2028ರ ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಆಟವನ್ನು ಸೇರಿಸಲು ಪ್ರಯತ್ನಿಸಬಹುದು’ ಎಂದಿದ್ದು ಲೀಗ್ ಕಮಿಷನರ್ ಅನುಪಮ್‌ ಗೋಸ್ವಾಮಿ.

ಪ್ರೊ ಕಬಡ್ಡಿ ಲೀಗ್‌ನ ಐದನೇ ಆವೃತ್ತಿ ಈ ಬಾರಿ ಜುಲೈ 28ರಂದು ಹೈದರಾಬಾದ್‌ನಲ್ಲಿ ಆರಂಭವಾಗಿ ಅಕ್ಟೋಬರ್‌ 28ಕ್ಕೆ ಚೆನ್ನೈನಲ್ಲಿ ಕೊನೆಗೊಳ್ಳಲಿದೆ. 12 ತಂಡಗಳು 138 ಪಂದ್ಯಗಳನ್ನು ಆಡಲಿವೆ. ಬರೋಬ್ಬರಿ 90 ದಿನ ನಡೆಯಲಿದೆ.ಇದು ತುಸು ಆತಂಕ ಸೃಷ್ಟಿಸಿದೆ. ಏಕೆಂದರೆ ಅಷ್ಟು ಸುದೀರ್ಘ ಅವಧಿ ಆಸಕ್ತಿ ಕಾಯ್ದುಕೊಳ್ಳಲು ಸಾಧ್ಯವೇ, ವೀಕ್ಷಕರಿಗೆ ಬೋರು ಹೊಡೆಸುವುದಿಲ್ಲವೇ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಅದೇನೇ ಇರಲಿ, ಒಂದು ಕ್ರೀಡೆಯ ಮಾರುಕಟ್ಟೆಯನ್ನು ಹೀಗೂ ಬೆಳೆಸಬಹುದಲ್ಲವೇ?

*

ಹೋಟೆಲ್‌ ಕೆಲಸದಿಂದ ಟಿ.ವಿ ಪರದೆ ಮೇಲೆ...


ತುಂಬಾ ವರ್ಷಗಳ ಹಿಂದೆಯೇ ಪೋಷಕರು ಕುಂದಾಪುರದಿಂದ ಬಂದು ಮುಂಬೈನಲ್ಲಿ ನೆಲೆಸಿದ್ದರು. ತಂದೆ ಆಟೊ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಚಿಕ್ಕಂದಿನಿಂದಲೇ ನನಗೆ ಕಬಡ್ಡಿ ಮೇಲೆ ತುಂಬಾ ಪ್ರೀತಿ. ಉದ್ಯೋಗ ಗಿಟ್ಟಿಸಿಕೊಳ್ಳಲು ಅಥವಾ ವೃತ್ತಿಪರ ಆಟಗಾರನಾಗಬೇಕೆಂಬ ಕಾರಣಕ್ಕೆ ನಾನೇನೂ ಕಬಡ್ಡಿ ಆಡುತ್ತಿರಲಿಲ್ಲ.

ಮುಂಬೈನಲ್ಲಿ ಹುಟ್ಟಿ ಬೆಳೆದ ನಾನು ಅಂಧೇರಿಯ ಹೋಟೆಲೊಂದರಲ್ಲಿ ಕೆಲಸ ಮಾಡಿ ಕುಟುಂಬ ಮುನ್ನಡೆಸುತ್ತಿದ್ದೆ. ವಾರಾಂತ್ಯದಲ್ಲಿ ಕಬಡ್ಡಿ ಆಡುತ್ತಿದ್ದೆ. ಜೋಪಡಿಯಲ್ಲಿ ನಾವು ವಾಸ ಮಾಡುತ್ತಿದ್ದೆವು. ಕಬಡ್ಡಿ ಲೀಗ್‌ ಆರಂಭವಾಗಿದ್ದು ನನ್ನ ಜೀವನವನ್ನೇ ಬದಲಾಯಿಸಿದೆ. ಈಗ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರವಾಗಿದ್ದೇವೆ. ಖ್ಯಾತಿಯ ಜೊತೆಗೆ ಆರ್ಥಿಕ ಸಬಲೀಕರಣ ಸಾಧ್ಯವಾಗಿದೆ.

–ರಿಶಾಂಕ್‌ ದೇವಾಡಿಗ,

ಆಟಗಾರ, ಉತ್ತರಪ್ರದೇಶ ಯೋಧಾಸ್‌

ಪ್ರತಿಕ್ರಿಯಿಸಿ (+)