ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ನಲ್ಲಿ ಯಶಸ್ಸು ಕಂಡ ‘ಸಮರ್ಥ’

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ದೈಹಿಕವಾಗಿ ಓಡಾಡಲು, ಸ್ಪಷ್ಟವಾಗಿ ಮಾತನಾಡಲು ಈತ ಅಸಮರ್ಥ. ಆದರೆ ಬುದ್ಧಿಮತ್ತೆ ಬೇಡುವ ಚೆಸ್‌ ಆಟದಲ್ಲಿ ಮಾತ್ರ ಈತ ಹೆಸರಿಗೆ ತಕ್ಕಂತೆ ಆಡಬಲ್ಲ ಚತುರ. 18 ವರ್ಷದ ಸಮರ್ಥ್ ಜಗದೀಶ ರಾವ್‌ ದೈಹಿಕ ಇತಿಮಿತಿಗಳ ನಡುವೆಯೂ ಮೂರು–ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನೂ ಗೆಲ್ಲುತ್ತ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.

ಇತ್ತೀಚೆಗೆ ಅಮೆರಿಕದ ಒರ್ಲಾಂಡೊದಲ್ಲಿ ನಡೆದ ಅಂಗವಿಕಲರ ವಿಶ್ವ ಜೂನಿಯರ್‌ (20 ವರ್ಷದೊಳಗಿನವರ) ಚೆಸ್‌ ಚಾಂಪಿಯನ್‌ಷಿಪ್‌ನ ದೈಹಿಕ ನ್ಯೂನತೆಯುಳ್ಳವರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.

ಹುಟ್ಟಿನಿಂದ ಕಾಣಿಸಿಕೊಂಡ ‘ಸೆರೆಬ್ರಲ್‌ ಪಾಲ್ಸಿ’ (ನರಬಿಗಿತ) ಸಮಸ್ಯೆಯಿಂದ ಸಮರ್ಥ್‌ ಓಡಾಡಲಾರ. ಮಾತೂ ಅಸ್ಪಷ್ಟ. ಆದರೆ ತಂದೆ ಜಗದೀಶ್‌ ರಾವ್‌ ಅವರು ಮಗುವಿನಂತೆ ಹೊತ್ತುಕೊಂಡು ಬಂದು ಚೆಸ್‌ ಬೋರ್ಡ್ ಮುಂದೆ ಕೂರಿಸಿದ ಮೇಲೆ ಈತ  ಚುರುಕು. ಎಷ್ಟು ಹೊತ್ತು ಬೇಕಾದರೂ ಆಡಬಲ್ಲ ಉತ್ಸಾಹಿ. ಅಂಗವಿಕಲರ ವಿಭಾಗದಲ್ಲಿ ಮಾತ್ರವಲ್ಲ, ಕಿರಿಯರ ಮುಕ್ತ ವಿಭಾಗದಲ್ಲೂ ಈತ ಪ್ರಶಸ್ತಿ ಗೆದ್ದುಕೊಂಡ ಉದಾಹರಣೆಗಳೂ ಇವೆ.

ಫಿಡೆ (ವಿಶ್ವ ಚೆಸ್‌ ಫೆಡರೇಷನ್‌ನ ಸಂಕ್ಷಿಪ್ತ ರೂಪ) ಕ್ರಮಾಂಕಪಟ್ಟಿಯಲ್ಲಿ ಸಮರ್ಥ್‌ ಅವರ ಪ್ರಸಕ್ತ ರೇಟಿಂಗ್‌ 1,392 (ಈಗ ಅದು ಇನ್ನೂ ಹೆಚ್ಚಾಗಲಿದೆ). ಆದರೆ ಆ ರೇಟಿಂಗ್‌ ಆತನ ಆಟಕ್ಕೆ ನ್ಯಾಯ ಬಗೆಯುವಂತೆ ಕಾಣುವುದಿಲ್ಲ. ‘ಒರ್ಲಾಂಡೊದಲ್ಲಿ ಕೆಲವು ಆಟಗಾರರು ಅವರ ಆಟ ನೋಡಿದ ಮೇಲೆ ಈ ರೇಟಿಂಗ್ ತುಂಬಾ ಕಡಿಮೆಯಿದೆ ಎಂದು ಹೇಳುತ್ತಿದ್ದರು. ಆಟದ ಮಟ್ಟ ನೋಡಿದಾಗ ಇದು 1800ರ ಮೇಲಿರುವಂತೆ ಕಾಣುತ್ತಿದೆ ಎಂದು ಪ್ರಶಂಸಿಸುವಾಗ ನನಗೆ ಹೆಮ್ಮೆ ಎನಿಸಿತು’ ಎನ್ನುತ್ತಾರೆ  ಜಗದೀಶ್‌ ರಾವ್‌.

‘ಜರ್ಮನಿಯ ಗ್ರ್ಯಾಂಡ್‌ ಮಾಸ್ಟರ್‌ ಥಾಮಸ್‌ ಲೂಥರ್‌ ಅವರು ಟೂರ್ನಿಯ ವೇಳೆ ಮಧ್ಯಾಹ್ನ ತರಬೇತಿ ನೀಡುತ್ತಿದ್ದರು. ಅದರಲ್ಲಿ ಚೆಸ್‌ ಸಮ ಸ್ಯೆಗಳನ್ನು (ಪಝಲ್‌) ನೀಡುತ್ತಿದ್ದಾಗ ಸಮರ್ಥ್‌ ಕೂಡ ಅದನ್ನು ಬಿಡಿಸುತ್ತಿದ್ದ. ಅದನ್ನು ನೋಡಿ ಸಂತೋಷವಾಯಿತು’ ಎನ್ನುತ್ತಾರೆ ಅವರು.

ಪ್ರತಿ ಟೂರ್ನಿಗೂ ಮಗನ ಜೊತೆ ಜಗದೀಶ್‌ ಹೋಗು ತ್ತಾರೆ. ಎತ್ತಿಕೊಂಡು ಹೋಗಿ ನಿಗದಿಯಾದ ಬೋರ್ಡ್‌ ಮುಂದೆ ಕೂರಿಸುತ್ತಾರೆ. ಅಷ್ಟೇ ಅಲ್ಲ, ಸೂಚಿಸಿದ ಕಾಯಿಗಳನ್ನು ಮುನ್ನಡೆಸಲು ಸಹಾಯ ಮಾಡುತ್ತಾರೆ.

ಈತ ಚೆಸ್‌ ಆಡಲು ಆರಂಭಿಸಿದ್ದು 2013ರಲ್ಲಿ. ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ 30 ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಆಡಿದ್ದಾರೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಸಮರ್ಥ್‌. ಅಲ್ಲಿ ಎಸ್‌ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಾಣಿಜ್ಯ ವ್ಯಾಸಂಗ ಮಾಡುತ್ತಿರುವ ಈತ ಕಲಿಕೆಯಲ್ಲೂ ಹಿಂದೆ ಬಿದ್ದಿಲ್ಲ.

‘ಅಖಿಲ ಭಾರತ ಚೆಸ್‌ ಫೆಡರೇಷನ್‌, ಚೆಸ್‌ ಫೆಡರೇಷನ್‌ ಆಫ್‌ ಫಿಸಿಕಲಿ ಡಿಸೇಬಲ್ಡ್‌ ನಮಗೆ ಅಮೆರಿಕದ ಟೂರ್ನಿಗೆ ಹೋಗಲು ಸಹಾಯ ಮಾಡಿದವು. ಭಾರತ ಕ್ರೀಡಾ ಪ್ರಾಧಿಕಾರ ನಮ್ಮಿಬ್ಬರ ವಿಮಾನ ಪ್ರಯಾಣದ ವೆಚ್ಚವನ್ನು ಭರಿಸಿತು. ಅಮೆರಿಕದಲ್ಲಿ ಮಿಯಾಮಿಯ ನಂದಿ ಕನ್ನಡ ಸಂಘಟನೆಗಳ ಕೂಟ ಊಟೋಪಚಾರಕ್ಕೆ ಸಹಾಯ ಮಾಡಿತು’ ಎಂದು ಜಗದೀಶ್‌ ಸ್ಮರಿಸುತ್ತಾರೆ.ಮಗನ

ಚೆಸ್‌ ಮೋಹಕ್ಕೆ ತಂದೆ ಮತ್ತು ತಾಯಿ ವಿನುತಾ ಭಟ್‌ ಮಾಡಿರುವ ತ್ಯಾಗ ಕಡಿಮೆಯೇನಲ್ಲ. ಮಗನಿಗೆ ಶಾಲಾ ದಿನಗಳಲ್ಲಿ ಒಂಟಿತನ ಕಾಡದಂತೆ ಚೆಸ್‌ ಕಲಿಸಿದ್ದು ತಾಯಿಯೇ ಎಂಬುದು ವಿಶೇಷ.

*
ಸಮರ್ಥ್‌ನ ಸಾಧನೆ

2015ರ ಜೂನ್‌: ಸ್ಲೊವಾಕಿಯಾದ ಬ್ರಾಟಿಸ್ಲಾವಾದಲ್ಲಿ ನಡೆದ ಐಪಿಸಿಎ ವಿಶ್ವ ದೈಹಿಕ ಅಸಮರ್ಥರ ಚೆಸ್‌ ಟೂರ್ನಿಯ ಜೂನಿಯರ್‌ ವಿಭಾಗದಲ್ಲಿ ಕಂಚಿನ ಪದಕ.

2016ರ ಜುಲೈ: ಸರ್ಬಿಯಾದ ನೋವಿಸಾಡ್‌ನಲ್ಲಿ ಐಪಿಸಿಎ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.

2017 ಮೇ–ಜೂನ್‌: ಸ್ಲೊವಾಕಿಯಾದ ರುಝೊಮ್‌ಬೆರೆಕ್‌ನಲ್ಲಿ ಐಪಿಸಿಎ ವಿಶ್ವ ವೈಯಕ್ತಿಕ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ. ಬ್ಲಿಟ್ಸ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಚಿನ್ನದ ಪದಕ.

2017 ಜೂನ್‌: ಅಮೆರಿಕದ ಒರ್ಲಾಂಡೊದಲ್ಲಿ ನಡೆದ ಅಂಗವಿಕಲರ ವಿಶ್ವ ಚಾಂಪಿಯನ್‌ಷಿಪ್‌ನ ದೈಹಿಕ ಅಸಮರ್ಥರ ವಿಭಾಗದಲ್ಲಿ ಮೊದಲ ಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT