ಬುಧವಾರ, ಡಿಸೆಂಬರ್ 11, 2019
20 °C

ವಿದೇಶದಲ್ಲಿಯೂ ಮಲ್ಲಕಂಬದ ಕಂಪು...

Published:
Updated:
ವಿದೇಶದಲ್ಲಿಯೂ ಮಲ್ಲಕಂಬದ ಕಂಪು...

ಕ್ರೀಡೆಯಲ್ಲಿ ಚೀನಾ ವಿಶ್ವಕ್ಕೇ ದೊಡ್ಡಣ್ಣ. ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟ ಹೀಗೆ ಹಲವಾರು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರತಿ ಬಾರಿಯೂ ನೂರಾರು ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ಆ ದೇಶದವರು ಎಳೆಯ ವಯಸ್ಸಿನಲ್ಲಿದ್ದಾಗಲೇ ಕಠಿಣ ತರಬೇತಿ ನೀಡಿ ಮಕ್ಕಳನ್ನು ಸಾಹಸಕ್ಕೆ ಅಣಿ ಮಾಡಿರುತ್ತಾರೆ.

ಅತ್ಯಂತ ಸಾಹಸ ಕ್ರೀಡೆ ಎನಿಸಿರುವ ಜಿಮ್ನಾಸ್ಟಿಕ್ಸ್‌ಗೆ ಮೂರ್ನಾಲ್ಕು ವರ್ಷದವರಿದ್ದಾಗಿನಿಂದಲೇ ತರಬೇತಿ ನೀಡುತ್ತಾರೆ. ಆದ್ದರಿಂದ ಚೀನಾ ಈಗಾಗಲೇ ಕ್ರೀಡಾಶಕ್ತಿ ರಾಷ್ಟ್ರವಾಗಿ ಬೆಳೆದಿದೆ. ಆದರೂ ಆ ದೇಶದವರಿಗೆ ಸಾಧನೆಯ ಹಸಿವು ಇಂಗಿಲ್ಲ. ಎಲ್ಲಾ ಕ್ರೀಡಾಕೂಟಗಳಲ್ಲಿ ತಮ್ಮ ದೇಶದವರೇ ಮುಂಚೂಣಿಯಲ್ಲಿರಬೇಕು ಎನ್ನುವ ಆಶಯ ಚೀನಾದ್ದು.

ಆದ್ದರಿಂದ 2020ರ ಟೋಕಿಯೊ ಒಲಿಂಪಿಕ್ಸ್‌ ಮತ್ತು ಮುಂದಿನ ವರ್ಷ ಇಂಡೊನೇಷ್ಯಾದಲ್ಲಿ ಆಯೋಜನೆಯಾಗಿರುವ ಏಷ್ಯನ್‌ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಚೀನಾ ಈಗಾಗಲೇ ತಯಾರಿ ಆರಂಭಿಸಿದೆ. ಆಯಾ ಕ್ರೀಡೆಗಳಲ್ಲಿ ಪರಿಣತಿ ಹೊಂದಿರುವ ಕ್ರೀಡಾಪಟುಗಳನ್ನು ಕರೆಯಿಸಿ ಅವರಿಂದ ತರಬೇತಿ ಕೊಡಿಸುತ್ತಿದ್ದಾರೆ. ಇಂಥದ್ದೊಂದು ಅವಕಾಶ ಈಗ ಕರ್ನಾಟಕದ ಮಲ್ಲಕಂಬ ಸಾಧಕರಿಗೆ ಲಭಿಸಿದೆ.

ರಾಜ್ಯದ ಒಟ್ಟು ಎಂಟು ಮಲ್ಲಕಂಬ ಕ್ರೀಡಾಪಟುಗಳು ತರಬೇತಿ ನೀಡಲು ಚೀನಾದ ಕ್ಸಿಯೆಮನ್‌ ನಗರಕ್ಕೆ ತೆರಳಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ಮೈಲಾರಿ ಕಾಲವಾಡ, ಮಾರುತಿ ಮರಿಯಪ್ಪನವರ, ಕರಿಯಪ್ಪ ಕಳ್ಳಿಮನಿ, ದಶರಥ ಚವ್ಹಾಣ, ರಫೀಕ್‌ ಗಿಡದಬುಡಕಿನ ಹಾಗೂ ಹಸನಸಾಬ್ ಕುಂದಗೋಳ ಹೋಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಭೀಮಣ್ಣ ಹಡಪಡ ಹಾಗೂ ಮೈಲಾರಲಿಂಗ ಹನುಮಂತ ಅವರೂ ಈ ತಂಡದ ಜೊತೆಗೆ ಇದ್ದಾರೆ.

ಮೂರು ತಿಂಗಳು ನಡೆಯಲಿರುವ ತರಬೇತಿಯಲ್ಲಿ 500ರಿಂದ 1000 ಚೀನಾದ ಸ್ಪರ್ಧಿಗಳಿಗೆ ಮಲ್ಲಕಂಬ ಮತ್ತು ಯೋಗದ ಬಗ್ಗೆ ಹೇಳಿ ಕೊಡುತ್ತಾರೆ. ಈ ತಂಡದಲ್ಲಿರುವ ಕೆಲವರು ಮೊದಲು ಥಾಯ್ಲೆಂಡ್‌ನ ಫುಕೆಟ್‌ ನಗರಕ್ಕೆ ಹೋಗಿ ತರಬೇತಿ ನೀಡಿದ್ದರು. ಇದೇ ವರ್ಷದ ಡಿಸೆಂಬರ್‌ನಲ್ಲಿ ಕೆನಡಾದ ರಾಜಧಾನಿ ಒಟೊವಾಕ್ಕೆ ತೆರಳಲಿದ್ದಾರೆ.

ವಿದೇಶಿ ನಂಟು

ಭಾರತದಲ್ಲಿಯೇ ಅಷ್ಟೇನೂ ಜನಪ್ರಿಯ ಹೊಂದದ ಮಲ್ಲಕಂಬ ವಿದೇಶದಲ್ಲಿ ತನ್ನ ಕಂಪು ಪಸರಿಸಿದ್ದು ಹೇಗೆ, ಚೀನಾ, ಕೆನಡಾ, ಥಾಯ್ಲೆಂಡ್‌ನಂಥ ರಾಷ್ಟ್ರಗಳನ್ನು ಆಕರ್ಷಿಸಿದ್ದು ಹೇಗೆ ಎನ್ನುವ ಕುತೂಹಲ ಸಾಕಷ್ಟು ಜನರಲ್ಲಿದೆ. ಇದರ ಮೂಲ ಇರುವುದು ಬೆಂಗಳೂರಿನ ಬಳಿ ಇರುವ ಬಿಡದಿಯಲ್ಲಿ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮದಲ್ಲಿ ಕೆಲ ವರ್ಷಗಳಿಂದ ಮಲ್ಲಕಂಬ ತರಬೇತಿ ನೀಡಲಾಗುತ್ತಿದೆ.

ಈ ಸಾಹಸ ಕ್ರೀಡೆ ಕಲಿಯುವ ಸಲುವಾಗಿ ಹಲವು ವಿದೇಶಿಗರು ಆಶ್ರಮಕ್ಕೆ ಆಗಾಗ ಬರುತ್ತಲೇ ಇರುತ್ತಾರೆ. ಅಲ್ಲಿಗೆ ಬರುವ ವಿದೇಶಿ ಪ್ರಜೆಗಳು ಮಲ್ಲಕಂಬದಿಂದ ಆಕರ್ಷಿತಗೊಂಡು ತಮ್ಮ ದೇಶಕ್ಕೆ ಇಲ್ಲಿನ ಸಾಹಸಿಗಳನ್ನು ಕರೆಯಿಸಿಕೊಂಡು ತರಬೇತಿ ಪಡೆಯುತ್ತಿದ್ದಾರೆ.

ಮಡೊಳ್ಳಿ ಗ್ರಾಮದಲ್ಲಿ ಶಿಕ್ಷಕರಾಗಿರುವ ಸಿದ್ಧಾರೂಢ ಹೂಗಾರ ಅವರು ಆಶ್ರಮದಲ್ಲಿ ಮಲ್ಲಕಂಬದ ಕುರಿತು ತರಬೇತಿ ನೀಡುತ್ತಿದ್ದಾರೆ. ಆಶ್ರಮದಲ್ಲಿ ಹಾಕಲಾಗಿರುವ 108 ಕಂಬಗಳ ಮೇಲೆ 1008 ಜನ ಗುರುಪೂರ್ಣಿಮೆಯ ದಿನದಂದು ಮಲ್ಲಕಂಬ ಸಾಹಸ ತೋರಿಸಲಿದ್ದಾರೆ.

ಜಿಮ್ನಾಸ್ಟಿಕ್ಸ್‌ ಅಭ್ಯಾಸಕ್ಕೆ ಅನುಕೂಲ

ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್‌ನಲ್ಲಿ ಮಲ್ಲಕಂಬ ಇನ್ನೂ ಸ್ಥಾನ ಪಡೆದುಕೊಂಡಿಲ್ಲ. ಆದರೂ ಚೀನಾ ದೇಶದವರು ಜಿಮ್ನಾಸ್ಟಿಕ್ಸ್‌ನಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡುವ ಸಲುವಾಗಿ ತಮ್ಮ ದೇಶದ ಮಕ್ಕಳಿಗೆ ಮೊದಲು ಮಲ್ಲಕಂಬ ತರಬೇತಿ ಕೊಡಿಸುತ್ತಿದ್ದಾರೆ.

ದೇಹವನ್ನು ಭಾಗಿಸುವ, ದೇಹದ ಮೇಲೆ ನಿಯಂತ್ರಣ ಸಾಧಿಸುವ, ಎತ್ತರಕ್ಕೆ ಜಿಗಿಯುವ ಕೌಶಲ ಜಿಮ್ನಾಸ್ಟಿಕ್ಸ್‌ನಲ್ಲಿ ಮುಖ್ಯವಾಗುತ್ತದೆ. ಆ ಸಾಹಸ ಕ್ರೀಡೆಗೆ ಮಲ್ಲಕಂಬದ ಸಾಹಸವೇ ಮೂಲ. ಆದ್ದರಿಂದ ವಿದೇಶಿಯರ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ.

‘ಮಲ್ಲಕಂಬ ಸಾಹಸ ಮಾಡುವಾಗ ಜಿಮ್ನಾಸ್ಟಿಕ್ಸ್‌ ಭಂಗಿಯ ಕೆಲ ಅಂಶಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಜಿಮ್ನಾಸ್ಟಿಕ್ಸ್‌ನಲ್ಲಿ ಪರಿಣತಿ ಹೊಂದಲು ಮಲ್ಲಕಂಬ ಮುಖ್ಯವಾಗುತ್ತದೆ. ಆದ್ದರಿಂದ ಬೇರೆ ದೇಶದವರು ಈಗ ಭಾರತದ ಕ್ರೀಡೆಯತ್ತ ಮುಖ ಮಾಡಿದ್ದಾರೆ. ನಮ್ಮ ದೇಶದಲ್ಲಿ ಮಲ್ಲಕಂಬಕ್ಕೆ ಇನ್ನಷ್ಟು ಪ್ರಚಾರ ಸಿಗಬೇಕು’ ಎಂದು ಸಿದ್ಧಾರೂಢ ಹೂಗಾರ ಹೇಳುತ್ತಾರೆ.

ಚಾಂಪಿಯನ್‌ಷಿಪ್‌ ಮುಖ್ಯವಲ್ಲ: ‘ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಷ್ಟೇ ಪಾಲ್ಗೊಳ್ಳಲು ಮಲ್ಲಕಂಬ ಅಭ್ಯಾಸ ಮಾಡಿದರೆ ಸಾಲದು. ನಿತ್ಯ ಜೀವನದಲ್ಲಿ ವ್ಯಾಯಾಮ, ಯೋಗ ಹೇಗೆ ಮುಖ್ಯವೋ ಅದೇ ರೀತಿ ಮಲ್ಲಕಂಬ ಸಾಹಸ ಅಗತ್ಯ. ಈ ಕ್ರೀಡೆಯನ್ನು ಬದುಕಿನ ಭಾಗವಾಗಿ ಸ್ವೀಕರಿಸಬೇಕು. ವಿದೇಶಗಳಿಗೆ ಹೋಗಿ ಹೇಳಿಕೊಟ್ಟರೆ ನಮ್ಮ ಕ್ರೀಡೆಯೂ ಬೆಳೆಯುತ್ತದೆ. ನಮ್ಮವರಿಗೂ ಗೌರವ ಸಿಗುತ್ತದೆಯಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.

ಆಹಾರವೇ ಮುಖ್ಯ

ಮಲ್ಲಕಂಬ ಸಾಹಸಕ್ಕೆ ಸಾಕಷ್ಟು ದೈಹಿಕ ಶ್ರಮ ಅಗತ್ಯವಿರುವ ಕಾರಣ ಆಹಾರ ಮುಖ್ಯವಾಗುತ್ತದೆ ಎಂದು ಹೂಗಾರ ಅಭಿಪ್ರಾಯಪಡುತ್ತಾರೆ.

‘ಒಟ್ಟಿಗೆ ಹೊಟ್ಟೆಬಿರಿಯುವಷ್ಟು ತಿನ್ನುವ ಬದಲು, ಮೂರ್ನಾಲ್ಕು ಗಂಟೆಗೊಮ್ಮೆ ಹಸಿವಿಗೆ ತಕ್ಕಷ್ಟು ತಿಂದರೆ ಮಲ್ಲಕಂಬ ಸಾಹಸ ಮಾಡುವವರ ಆರೋಗ್ಯಕ್ಕೆ ಒಳ್ಳೆಯದು. ಸ್ಥಿರತೆ, ದೇಹ ಹಾಗೂ ಮನಸ್ಸಿನ ನಡುವೆ ಹೊಂದಾಣಿಕೆ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)