ಶನಿವಾರ, ಡಿಸೆಂಬರ್ 7, 2019
25 °C

ಬ್ರ್ಯಾಂಡ್‌ ಸರ್ಕಾರಿ ಶಾಲೆಗಳು!

Published:
Updated:
ಬ್ರ್ಯಾಂಡ್‌ ಸರ್ಕಾರಿ ಶಾಲೆಗಳು!

ಶಾಲೆಗಳೆಲ್ಲ ಪ್ರಾರಂಭವಾಗಿ ನಿಧಾನವಾಗಿ ಕಾರ್ಯಕ್ಕೆ ತೊಡಗಿರುವ ಸಮಯದಲ್ಲಿ ಈ ಶಿಕ್ಷಣ ವ್ಯವಸ್ಥೆಯನ್ನು ಕುರಿತು ಯೋಚಿಸುವುದು, ಚಿಂತಿಸುವುದು ಬಹಳ ಮುಖ್ಯವಾಗಿ ಆಗಬೇಕಾದ ಕಾರ್ಯ. ಸಾಮಾನ್ಯವಾಗಿ ಇದು ತಜ್ಞರ ಕೆಲಸ ಎಂದುಕೊಂಡು ಇದನ್ನು ನಾವು ಯೋಚಿಸುವುದೇ ಇಲ್ಲ.

ಜನಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಈ ವ್ಯವಸ್ಥೆ ಹೇಗಿದೆ? ಅದರ ಕುಂದು ಕೊರತೆಗಳೇನು? ಆಗಬೇಕಿರುವ ಕಾಯಕಲ್ಪವೇನು? ಎಂದು ಯೋಚಿಸಿದರೆ ವ್ಯವಸ್ಥೆ ಗಟ್ಟಿಯಾಗುತ್ತದೆ. ನಮ್ಮ ದೇಶದ ಶಿಕ್ಷಣವ್ಯವಸ್ಥೆ ಜಗತ್ತಿನಲ್ಲಿಯೇ ದೊಡ್ಡದು. ಪ್ರತಿ ಹಳ್ಳಿಯ ಒಂದು ಕಿಲೋಮೀಟರ್‍ ಫಾಸಲೆಯಲ್ಲೊಂದು ಸರ್ಕಾರಿ ಶಾಲೆಯಿದೆ ಎಂದು ವರದಿಯೊಂದು ಹೇಳುತ್ತದೆ. ನಿಜ, ಇಂದು ಮಧ್ಯಮವರ್ಗದ ಜನರು ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಹೋಗುತ್ತಿದ್ದಾರೆ. ಆದರೆ, ನಾವು ಗಮನಿಸಿದರೆ ಆ ವಲಸೆ ಶಿಕ್ಷಣಕ್ಷೇತ್ರದಲ್ಲಿ ಮಾತ್ರವಲ್ಲ ಇತರೆಡೆಗಳಲ್ಲಿಯೂ ಆಗುತ್ತಿದೆ. ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳನ್ನು ತೊರೆದು ಖಾಸಗಿ ಆಸ್ಪತ್ರೆಗಳತ್ತ ಸಾಗಿದ್ದಾರೆ. ಹಾಗೆಯೇ, ಇಂದು ಸರ್ಕಾರದ ಪಡಿತರ ವ್ಯವಸ್ಥೆಯಾದ ನ್ಯಾಯಬೆಲೆ ಅಂಗಡಿಗಳನ್ನೂ ತೊರೆದಿದ್ದಾರೆ. ಇನ್ನು ಕೆಲವು ವಿಭಾಗಗಳನ್ನು ನೋಡಬಹುದು, ಆದರೆ, ಅಲ್ಲಿ ಮಧ್ಯಮವರ್ಗದ ಜನಗಳಿಗೆ ಉತ್ತಮ ಸೇವೆ ಲಭ್ಯವಾಗುತ್ತಿದೆಯೇ? ಇದು ಯಕ್ಷಪ್ರಶ್ನೆ. ಉದಾಹರಣೆಗೆ: ಖಾಸಗಿ ಆಸ್ಪತ್ರೆಗೆ ಹೋಗುತ್ತಿರುವ ಮಧ್ಯಮವರ್ಗದ ಜನರಿಗೆ ಅಗತ್ಯವಾದ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ದೊರೆಯುತ್ತಿದೆಯೇ? ವಸ್ತುನಿಷ್ಠವಾಗಿ ಯಾರಾದರೂ ಸಂಶೋಧನೆ, ಸರ್ವೇ ನಡೆಸಿ ನೋಡಬೇಕಾದ ವಿಷಯವಿದು.

ಶಿಕ್ಷಣದ ವಿಷಯದಲ್ಲಿ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಸಂಶೋಧನೆಗಳಾಗಿದ್ದು, ಅವುಗಳಲ್ಲಿ ಸರ್ಕಾರಿ ಶಾಲೆಗಳೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಇದರ ಅರ್ಥ ಸರ್ಕಾರಿ ವ್ಯವಸ್ಥೆ ಸಂಪೂರ್ಣ ದೋಷರಹಿತವಾಗಿದೆ ಮತ್ತು ಖಾಸಗಿ ವಲಯ ಸಂಪೂರ್ಣ ಭ್ರಷ್ಟ ಎಂದಲ್ಲ. ಖಾಸಗೀ ವಲಯದಲ್ಲಿ ಅತ್ಯುತ್ತಮ ಶಾಲೆಗಳಿವೆ. ನೂತನ ಪ್ರಯೋಗಳು, ಹೊಸ ಹೊಸ ಶಿಕ್ಷಣ ಸಿದ್ಧಾಂತಗಳ ಪ್ರಯೋಗ ಚಿಂತನ ಮಂಥನಗಳು ನಡೆದಿವೆ.

ಮೊದಲು ಖಾಸಗಿ ವ್ಯವಸ್ಥೆಯನ್ನು ಅವಲೋಕಿಸೋಣ. ಇಲ್ಲಿ ಐದು ನಕ್ಷತ್ರಗಳ ದರ್ಜೆಯ ಶಾಲೆಗಳನ್ನು ಚರ್ಚೆಯಿಂದ ಹೊರಗಿಡೋಣ. (ಅವುಗಳು ಸಹ ಅವುಗಳದ್ದೇ ದರ್ಜೆಯ ಬೇರೆ ದೇಶದ ಶಾಲೆಗಳಿಗೆ ಹೋಲಿಸಿದರೆ ಸಾಧನೆ ನಗಣ್ಯ ಎಂದು ಸಾಬೀತಾಗಿದೆ.) ಉಳಿದ ಖಾಸಗಿ ಶಾಲೆಗಳಲ್ಲಿ ಎರಡು ವರ್ಗಗಳಿವೆ. ಒಂದು - ಮಠಮಾನ್ಯಗಳು ಅಥವಾ ದಾನಿಗಳ ಬೆಂಬಲದಿಂದ ನಡೆಯುತ್ತಿರುವ ಖಾಸಗಿ ಶಾಲೆಗಳು; ಮತ್ತೊಂದು - ಅನುದಾನರಹಿತ ಜನರು ನೀಡುವ ಶುಲ್ಕದಿಂದ ನಡೆಯುತ್ತಿರುವ ಶಾಲೆಗಳು. ಸರ್ಕಾರದಿಂದ ಅನುದಾನ ಪಡೆದರೂ ಬಹುತೇಕ ಶಾಲೆಯ ಖರ್ಚುಗಳು ಜನರು ನೀಡುವ ಶುಲ್ಕದಿಂದಲೇ ನಡೆಯುತ್ತವೆ. ಈ ಕುರಿತಾಗಿ ತುಂಬ ಕುತೂಹಲಕರವಾದ ಸಂಶೋಧನೆಗಳು ನಡೆದಿವೆ.

ಒಂದು ಶಾಲೆಯನ್ನು ನಡೆಸಬೇಕಾದಲ್ಲಿ ಬಹುದೊಡ್ಡ ಖರ್ಚು ಬರುವುದು ಶಿಕ್ಷಕರ ಸಂಬಳ ಹಾಗೂ ಇತರ ಸಲವತ್ತುಗಳು. ದಾನಿಗಳ ಅಥವಾ ಮಠಮಾನ್ಯ/ಸಂಘಸಂಸ್ಥೆಗಳ ಬೆಂಬಲವಿರದ ಖಾಸಗಿ ಶಾಲೆಗಳು ಕೇವಲ ಮಕ್ಕಳಿಂದ ಪಡೆಯುವ ಶುಲ್ಕದಿಂದಲೇ ಇದನ್ನು ಭರಿಸಬೇಕಾಗುತ್ತದೆ. ಈಗ ಒಬ್ಬ ಶಿಕ್ಷಕನಿಗೆ ಕೊಡಬೇಕಾದ ಸಂಬಳವೆಷ್ಟು - ಎಂಬ ಪ್ರಶ್ನೆ ಪ್ರಮುಖವಾಗುತ್ತದೆ. ಒಬ್ಬ ಉತ್ತಮ ಶಿಕ್ಷಕನನ್ನು ಶಾಲೆ ಉಳಿಸಿಕೊಳ್ಳಬೇಕು ಎಂಬುದಾದರೆ ಅವನು ಅಥವಾ ಅವಳು ಸಮಾಜದಲ್ಲಿ ಒಂದು ಗೌರವಯುತ ಜೀವನ ನಡೆಸುವಂತಹ ಸಂಬಳವನ್ನು ಶಾಲೆ ಪಾವತಿಸಬೇಕಾಗುತ್ತದೆ. ಇಂದಿನ ದಿನಮಾನಗಳಲ್ಲಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸರಿಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂಪಾಯಿಗಳಷ್ಟು ತಿಂಗಳ ಸಂಬಳವನ್ನು ಒಂದು ಗೌರವಯುತ ಸಂಬಳ ಎಂದು ಪರಿಗಣಿಸಬಹುದು ಎಂದು ಒಂದು ಲೆಕ್ಕಾಚಾರ ಹೇಳುತ್ತದೆ.

ಅಂದರೆ ನಲವತ್ತು ಮಕ್ಕಳಿರುವ ಒಂದು ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ 625 ರೂಪಾಯಿಗಳಷ್ಟು ಶುಲ್ಕವನ್ನು ತಿಂಗಳಿಗೆ ನೀಡಬೇಕಾಗುತ್ತದೆ. ಶಾಲೆಯ ಇತರ ಖರ್ಚುಗಳನ್ನು ಗಣಿಸಿದರೆ ಇದು ಸಾವಿರವೂ ಆಗಬಹುದು! ಇದು ಚೆನ್ನಾಗಿ ನಡೆಯುವ ಖಾಸಗಿ ಶಾಲೆಯ ಕತೆ. ಆದರೆ ಭಾರತದ ಶೇ. 75ರಷ್ಟು ಜನ ಇದನ್ನು ಭರಿಸಲಾರರು! ಹಾಗಾಗಿಯೇ ಇಂದು ಎಷ್ಟೋ ಖಾಸಗಿ ಶಾಲೆಗಳಲ್ಲಿ ಎರಡು ಸಾವಿರದಿಂದ ಆರುಸಾವಿರದವರೆಗಿನ ತಿಂಗಳ ಸಂಬಳವನ್ನು ನೀಡಲಾಗುತ್ತಿದೆ.

ವೃತ್ತಿನಿಪುಣ ಶಿಕ್ಷಕರು ಇಂತಹ ಶಾಲೆಗಳನ್ನು ಜಿಗಿಹಲಗೆಯಾಗಿ ಮಾತ್ರ ಬಳಸಿಕೊಳ್ಳುತ್ತಾರೆ, ಮತ್ತೆ ಕೆಲವರು ಗತ್ಯಂತರವಿಲ್ಲದೆ ಸೇವೆ ಸಲ್ಲಿಸುತ್ತಿರುತ್ತಾರೆ. ಇಲ್ಲಿಯೂ ಸಣ್ಣ ಮೊತ್ತಕ್ಕೆ ಕೆಲಸ ಮಾಡುತ್ತಿರುವ ತ್ಯಾಗಮಯಿ ಶಿಕ್ಷಕರಿದ್ದಾರೆ, ನಿಜ, ಆದರೆ, ಅವರ ಸಂಖ್ಯೆ ದೊಡ್ಡದಲ್ಲ. ಅದೂ ಅಲ್ಲದೆ, ನಮ್ಮ ಶಿಕ್ಷಣವ್ಯವಸ್ಥೆಯನ್ನು ಕೆಲವೇ ಕೆಲವು ತ್ಯಾಗಮಯಿಗಳ ಹೆಗಲಿಗೇರಿಸುವುದು ತರವಲ್ಲ. ಅದ್ದರಿಂದ ಈ ಖರ್ಚುಗಳನ್ನು ‘ನಿಭಾಯಿಸಬಲ್ಲ’ ಖಾಸಗಿ ಶಾಲೆಗಳು ಮಾತ್ರ ಚೆನ್ನಾಗಿ ನಡೆಯಿತ್ತವೆ. ಇದು ಸಮಾಜದಲ್ಲಿ ಉಳ್ಳವರ ಮತ್ತು ಬಡವರ ನಡುವಿನ ಕಂದಕವನ್ನು ಹೆಚ್ಚಿಸುತ್ತದೆ. ಉತ್ತಮ ಶಿಕ್ಷಣ ‘ಉಳ್ಳವರಿಗಾಗಿ ಮಾತ್ರ’ ಎಂಬ ಸ್ಥಿತಿಯನ್ನು ತಂದೊಡ್ಡುತ್ತದೆ.

ಈಗ ವಿಶ್ವದ ಬಹುದೊಡ್ಡ ಶಿಕ್ಷಣವ್ಯವಸ್ಥೆ ಎಂದು ಹೆಸರಾದ ನಮ್ಮ ದೇಶದ ಸರ್ಕಾರಿ ಶಿಕ್ಷಣವ್ಯವಸ್ಥೆಯ ಸಮಸ್ಯೆಗಳೇನು ಎಂದು ನೋಡೋಣ. ತಜ್ಞರು ಸರ್ಕಾರಗಳ ವ್ಯವಸ್ಥೆಯಲ್ಲಿನ ದೋಷ ದೊಡ್ಡ ಸಂಸ್ಥೆಗಳಲ್ಲಿನ ದೋಷಗಳೇ ಆಗಿವೆ ಎನ್ನುತ್ತಾರೆ. ಅಂದರೆ, ಇಲ್ಲಿನ ದೋಷ: ತೀರ್ಮಾನಗಳನ್ನು ಯಶಸ್ವಿಯಾಗಿ ಜಾರಗೆ ತರಲಾಗದಿರುವುದು, ಗುಣಮಟ್ಟದ ಸಿಬ್ಬಂದಿಯನ್ನು ಉಳಿಸಿಕೊಳ್ಳುವ, ಪ್ರೋತ್ಸಾಹಿಸಿ ಬೆಳೆಸುವ ವ್ಯವಸ್ಥೆಯ ಅಭಾವ. ಜೊತೆಗೆ, ಯುಕ್ತ ಅನುದಾನದ ಕೊರತೆ. ಒಮ್ಮೆ ಇವನ್ನು ಸರಿಪಡಿಸಿಬಿಟ್ಟರೆ ದೇಶದ ಶಿಕ್ಷಣಕ್ಷೇತ್ರ ಅದ್ಭುತ ಯಶಸ್ಸನ್ನು ಹೊಂದುತ್ತದೆ. ಇದು ಕೇವಲ ಆಶಾವಾದವಲ್ಲ, ಅಧ್ಯಯನಗಳಿಂದ ಕಂಡುಕೊಂಡಿರುವ ಸತ್ಯ. ನಮ್ಮಲ್ಲಿ ನಡೆದಿರುವ ಅಧ್ಯಯನಗಳಲ್ಲಿ ಸರ್ಕಾರಿ ಶಿಕ್ಷಣವ್ಯವಸ್ಥೆಯಲ್ಲಿ ಸ್ವಾರ್ಥರಹಿತ, ಅತ್ಯುತ್ತಮ ಶಿಕ್ಷಕರು, ಆಡಳಿತಗಾರರು ಸಿಬ್ಬಂದಿ ಇದ್ದಾರೆ. ಇವರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ಒದಗಿಸಿ, ಯುಕ್ತ ಬದಲಾವಣೆಗಳನ್ನು ಮಾಡಿದರೆ ಸಾಕು. ಅಧ್ಯಯನಗಳಲ್ಲಿ ಕಂಡುಕೊಂಡಿರುವಂತೆ ಬಹಳ ಮುಖ್ಯವಾಗಿ ಆಗಬೇಕಾಗಿರುವುದು ಅವಶ್ಯ ಸಿಬ್ಬಂದಿಗಳ ನೇಮಕಾತಿ ಹಾಗೂ ಹಣಕಾಸಿನ ನೆರವು. ಇವನ್ನು ನಮ್ಮ ಸರ್ಕಾರ ನೆರವೇರಿಸಿದರೆ ಸಂವಿಧಾನದ ಆಶಯ ಪೂರ್ಣಗಳೊಳ್ಳಲು ಸಹಕಾರಿಯಾಗುತ್ತದೆ. ಇಲ್ಲಿ ನಾವು ಅತ್ಯಗತ್ಯವಾಗಿ ಪರಿಗಣಿಸಬೇಕಾಗಿರುವುದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಯುವ ಹಕ್ಕಿಲ್ಲ. ಒಂದು ಪರೀಕ್ಷೆ ಕೊಟ್ಟು ಇದರಲ್ಲಿ ತೇರ್ಗಡೆಯಾದವರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ ಎನ್ನುವಂತಿಲ್ಲ. ಬಹುತೇಕ ಮಕ್ಕಳ ಪೋಷಕರು ಒಂದೋ ಅವಿದ್ಯಾವಂತರು ಇಲ್ಲವೇ ಮೊದಲ ಪೀಳಿಗೆ ವಿದ್ಯಾವಂತರು. ಹೀಗಿದ್ದರೂ ನಮ್ಮ ಸರ್ಕಾರಿ ಶಾಲಾ ವ್ಯವಸ್ಥೆ ಅನೇಕ ಅಧ್ಯಯನಗಳಲ್ಲಿ ಉತ್ತಮ ಎಂದು ತೋರಿಬಂದಿರುವುದು ಸೋಜಿಗವಲ್ಲ, ನಮ್ಮ ಜನರ ಸತ್ವ. ಇದನ್ನು ಪುರಸ್ಕರಿಸಿ, ಬೆಂಬಲಿಸಬೇಕಾದ್ದು ನಮ್ಮ ಕರ್ತವ್ಯ.

ಎಂದರೆ, ಸರ್ಕಾರಿ ಶಾಲೆಗಳನ್ನು ಒಂದು ಬ್ರ್ಯಾಂಡ್‍ ಆಗಿ, ಆದರೆ ಬ್ರ್ಯಾಂಡ್‍ ಎಂಬುದರ ಲಾಭಕೋರ ಪರಿವೇಶವನ್ನು ಬಿಟ್ಟು, ಅಭಿವೃದ್ಧಿಪಡಿಸಬೇಕು. ಆಗ ನಮ್ಮ ದೇಶದ ಎಲ್ಲದ ವರ್ಗದ ಮಕ್ಕಳಿಗೂ ಅಗತ್ಯ ಶಿಕ್ಷಣ ನಾವು ಕೊಡುವ ತೆರಿಗೆಯ ಹಣದಿಂದಲೇ ದೊರೆಯುತ್ತದೆ. ಶಿಕ್ಷಣಕ್ಷೇತ್ರವನ್ನು ಖಾಸಗಿಕರಣದಿಂದ ಹೊರಗಿಡಬೇಕು ಖಾಸಗಿಕರಣದ ಬಹುದೊಡ್ಡ ಪ್ರತಿಪಾದಕನಾದ ಆಡಮ್‍ ಸ್ಮಿತ್‍ ಎಂದು ಮೂರು ಶತಮಾನಗಳ ಹಿಂದೆಯೇ ಹೇಳಿದ್ದನಲ್ಲವೆ?

ಬನ್ನಿ, ಬ್ರ್ಯಾಂಡ್‍ ಸರ್ಕಾರಿ ಶಾಲೆಗಳು ನಮ್ಮ ಗುರಿಯಾಗಲಿ!

*

ನಮ್ಮ ಶಿಕ್ಷಣವ್ಯವಸ್ಥೆಯನ್ನು ಕೆಲವೇ ಕೆಲವು ತ್ಯಾಗಮಯಿಗಳ ಹೆಗಲಿಗೇರಿಸುವುದು ತರವಲ್ಲ. ಖರ್ಚುಗಳನ್ನು ‘ನಿಭಾಯಿಸಬಲ್ಲ’ ಖಾಸಗಿ ಶಾಲೆಗಳು ಮಾತ್ರ ಚೆನ್ನಾಗಿ ನಡೆಯಿತ್ತವೆ. ಇದು ಸಮಾಜದಲ್ಲಿ ಉಳ್ಳವರ ಮತ್ತು ಬಡವರ ನಡುವಿನ ಕಂದಕವನ್ನು ಹೆಚ್ಚಿಸುತ್ತದೆ. ಉತ್ತಮ ಶಿಕ್ಷಣ ‘ಉಳ್ಳವರಿಗಾಗಿ ಮಾತ್ರ’ ಎಂಬ ಸ್ಥಿತಿಯನ್ನು ತಂದೊಡ್ಡುತ್ತದೆ.

ಪ್ರತಿಕ್ರಿಯಿಸಿ (+)