ಶುಕ್ರವಾರ, ಡಿಸೆಂಬರ್ 6, 2019
19 °C

ಸಹವರ್ತಿ ಕಲಿಕೆ: ಕೂಡಿ ಕಲಿಯುವ ಸುಖ

Published:
Updated:
ಸಹವರ್ತಿ ಕಲಿಕೆ: ಕೂಡಿ ಕಲಿಯುವ ಸುಖ

ಪ್ರತಿಯೊಂದು ಕಲಿಕಾ ಪಧ್ಧತಿಯೂ ತನ್ನದೇ ಆದ ವಿಶಿಷ್ಠತೆ ಇರುತ್ತದೆ. ಒಂದು ಪದ್ದತಿ ಜಾರಿಗೆ ಬರುವುದರ ಹಿಂದೆ ಅವಿತರ ಪ್ರಯತ್ನ ಹಾಗೂ ಸಾಕಷ್ಟು ಪ್ರಯೋಗಗಳು ನಡೆದಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಲಿಕಾ ಪದ್ಧತಿಯೆಂದರೆ ‘ಸಹವರ್ತಿ ಕಲಿಕೆ’. ಇಲ್ಲಿ ಕಲಿಯುವವರ ನಡುವೆ ನೇರವಾದ ಮುಖಾಮುಖಿ ಸಂದರ್ಶನ ಏರ್ಪಡುತ್ತದೆ. ಕಲಿಕಾರ್ಥಿಗಳು ಸಣ್ಣ ಗುಂಪಾಗಿ ಸೇರಿ ಕಲಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಕಲಿಕೆ ಹೆಚ್ಚು ಸಂತಸದಾಯಕ ಹಾಗೂ ಶಾಶ್ವತವಾಗಿರುತ್ತದೆ.

ಒಬ್ಬ ಕಲಿಕಾರ್ಥಿ ಇನ್ನೊಬ್ಬ ಕಲಿಕಾರ್ಥಿಯ ಜೊತೆಗೂಡಿ ಕಲಿಯುವುದೇ ‘ಸಹವರ್ತಿ ಕಲಿಕೆ’. ಇಲ್ಲಿ ಇನ್ನೊಬ್ಬ ಕಲಿಕಾರ್ಥಿಯಿಂದ ತಾವೂ ಕಲಿಯುತ್ತಾರೆ. ಜೊತೆಗೆ ಇನ್ನೊಬ್ಬ ಕಲಿಕಾರ್ಥಿಗೆ ಕಲಿಸುವ ಮೂಲಕ ತಾವೂ ಬೆಳೆಯುತ್ತಾರೆ. ಹಾಗಾಗಿ ಸಹವರ್ತಿ ಕಲಿಕೆಯಲ್ಲಿ ಕಲಿಕೆ ಎಂಬುದು ಏಕಮುಖ ಪ್ರಕ್ರಿಯೆ ಆಗದೇ ದ್ವಿಮುಖ ಪ್ರಕ್ರಿಯೆಯಾಗುತ್ತದೆ.

ಸಹವರ್ತಿ ಕಲಿಕೆಯು ಪ್ರತಿಯೊಬ್ಬ ಕಲಿಕಾರ್ಥಿಗೆ ಮಹತ್ವದ ಅನುಭವಗಳನ್ನು ಕಟ್ಟಿಕೊಡುತ್ತದೆ. ಕಲಿಕಾರ್ಥಿಗಳ ನಡುವಿನ ಅವಿನಾಭಾವ ಸಂಬಂಧ ಗಟ್ಟಿಗೊಳ್ಳುತ್ತದೆ. ಅದು ಎಂದಿಗೂ ಮುರಿಯಲಾಗದ ಸ್ನೇಹಸೇತುವಾಗಿ ಪರಿವರ್ತನೆಗೊಳ್ಳುತ್ತದೆ. ಕುಟುಂಬದ ಸದಸ್ಯರು ಅಥವಾ ಒಡಹುಟ್ಟಿದವರಿಗಿಂತ ಉತ್ತಮವಾದ ಆಯ್ಕೆಯ ಅವಕಾಶಗಳು ಇರುವುದು ಸಹವರ್ತಿಗಳಲ್ಲಿ ಮಾತ್ರ. ಇಲ್ಲಿನ ಕಲಿಕೆ ಮುಕ್ತವಾಗಿ ಸಾಗುವುದರಿಂದ ಕಲಿಕೆ ತುಂಬ ಸರಳವಾಗಿಯೂ ಸುಗಮವಾಗಿಯೂ ನಡೆಯುತ್ತದೆ. ಯಾವುದೇ ರೀತಿಯ ಮಾನಸಿಕ ಒತ್ತಡಗಳಾಗಲೀ, ನಿರ್ಭಂಧಗಳಾಗಲೀ ಇಲ್ಲದಿರುವುದರಿಂದ ಕಲಿಕೆ ಸುಮನೋಹರವಾಗಿರುತ್ತದೆ.

ಸಹವರ್ತಿ ಸಂಬಂಧಗಳು ಗಟ್ಟಿಗೊಳ್ಳಲು ಶಾಲೆ ಒಂದು ಮಾಧ್ಯಮ ಇದ್ದಂತೆ. ಬಹುತೇಕ ಸ್ನೇಹಿತರು ತಮ್ಮ ಕಲಿಕಾ ಅನುಭವಗಳನ್ನು ಹಂಚಿಕೊಳ್ಳಲು ಶಾಲೆ ಮುಖ್ಯವಾಹಿನಿಯಾಗಿರುತ್ತದೆ. ಸಹವರ್ತಿಗಳು ನಿಗದಿತ ಪಠ್ಯಕ್ಕಿಂತ ಜೀವನಾನುಭಗಳನ್ನು ಕಲಿಸುವುದು ಹೆಚ್ಚು. ಎಂದರೆ ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಸಹಕಾರ, ನಂಬಿಕೆ, ಕ್ಷಮೆ, ಸಹಾನುಭೂತಿ, ಬೆಂಬಲ, ಶಿಷ್ಟಾಚಾರಗಳಂತಹ ಮಾನವೀಯ ಮೌಲ್ಯಗಳನ್ನು ಸಹವರ್ತಿಗಳಿಂದ ಬೆಳೆಸಿಕೊಳ್ಳುತ್ತಾರೆ.

ಸಹವರ್ತಿ ಕಲಿಕೆಯಿಂದ ಕಲಿಕಾರ್ಥಿಗಳು ಬೆಳೆಸಿಕೊಳ್ಳುವ ಮೌಲ್ಯಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ:

ಸಹಾನುಭೂತಿ: ಮಕ್ಕಳು ಜೊತೆಗೂಡಿ ಕಲಿಯುವುದರಿಂದ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ಸಹವರ್ತಿಗಳ ಜೀವನವನ್ನು, ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಅವರ ಸ್ನೇಹ ನಿಕಟವಾಗುತ್ತದೆ ಮತ್ತು ಬೇರ್ಪಡಿಸಲಾರದ ಬಂಧವಾಗಿ ಏರ್ಪಡುತ್ತದೆ. ಪರಸ್ಪರರ ಕಷ್ಟಗಳಿಗೆ ಪ್ರತಿಸ್ಪಂಧಿಸುವ, ಸಹಾನುಭೂತಿ ತೋರುವ ಗುಣಗಳು ಬೆಳೆಯುತ್ತವೆ.

ಸ್ವೀಕರಣ: ಸಹವರ್ತಿಗಳ ನಡುವಿನ ನ್ಯೂನತೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅವರ ಪ್ರತಿಭೆಗಳನ್ನು ಒಪ್ಪಿಕೊಳ್ಳುವುದನ್ನು ಸಹವರ್ತಿ ಕಲಿಕೆ ಮೂಡಿಸುತ್ತದೆ. ಹಾಗೆಯೇ ಸಹವರ್ತಿಗಳ ಉತ್ತಮ ಅಭಿಪ್ರಾಯಗಳನ್ನು ಪರಸ್ಪರ ಸ್ವೀಕರಿಸುವ ಗುಣವನ್ನು ಬೆಳೆಸುತ್ತದೆ.

ತಿಳಿವಳಿಕೆ ಮತ್ತು ಕಾಳಜಿ: ಸಹವರ್ತಿ ಕಲಿಕೆಯಲ್ಲಿ ಸ್ನೇಹಿತರಿಂದ ಸ್ನೇಹಿತರಿಗಾಗಿ ಕಲಿಕೆ ಮುಂದುವರೆಯುವುದರಿಂದ ಅವರ ಪರಿಸ್ಥಿತಿ ಮತ್ತು ಅವಶ್ಯಕತೆಗಳನ್ನು ತಿಳಿದುಕೊಳ್ಳಬಹುದಾಗಿದೆ. ಇಂದರಿಂದ ಪರಿಸ್ಥಿತಿಗನುಗುಣವಾಗಿ ಒಬ್ಬರು ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸುವುದನ್ನು ಕಲಿಯುತ್ತಾರೆ. ಜೊತೆಗೆ ಎಲ್ಲ ಸಂದರ್ಭಗಳಲ್ಲೂ ಇತರರನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯುತ್ತಾರೆ. ಸ್ನೇಹಿತರು ಹಾಗೂ ಅವರ ಕುಟುಂಬವರ್ಗದ ಜೊತೆಗೆ ಅಹಿತಕರ ವತನೆಗೆ ಅವಕಾಶ ಇರುವುದಿಲ್ಲ.

ಬೆಂಬಲ: ದುರಭ್ಯಾಸಗಳನ್ನು ಬಿಡಿಸುವಲ್ಲಿ ಸಹವರ್ತಿಗಳ ನೇರ ಬೆಂಬಲದ ಅಗತ್ಯವಿದೆ. ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹವರ್ತಿಗಳು ಏನು ಮಾಡಬೇಕು, ಹೇಗೆ ವರ್ತಿಸಬೇಕು – ಎಂಬುದನ್ನು ಕಲಿಸುತ್ತದೆ. ಇದರಿಂದಾಗಿ ಸ್ನೇಹಿತರ ನಡುವೆ ಮುರಿಯಲಾರದ ಬಂಧವು ಏರ್ಪಟ್ಟು ಸ್ನೇಹಕ್ಕೆ ಮೆರಗು ಬರುತ್ತದೆ. ಸ್ನೇಹಿತರ ನಡುವೆ ಸರಿಯಾದ ವಿಧಾನಗಳನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ.  ತಪ್ಪು ನಿರ್ಧಾರಗಳನ್ನು ಸರಿಯಾದ ಮಾರ್ಗದರ್ಶನದಿಂದ ತಿದ್ದಲು ಸ್ನೇಹಿತರ ಬೆಂಬಲ ಅಗತ್ಯ.

ಸಭ್ಯತೆ: ಸಹವರ್ತಿ ಕಲಿಕೆಯು ಎಲ್ಲ ವಿಷಯಗಳ ಸಂವಹನದಲ್ಲಿ, ಎಂದರೆ ಸ್ನೇಹಿತರೊಂದಿಗೆ, ಗುರುಗಳೊಂದಿಗೆ, ಹಿರಿಯರೊಂದಿಗೆ ಶಿಷ್ಟರಾಗಿರುವುದನ್ನು ಕಲಿಸುತ್ತದೆ. ಸಹವರ್ತಿ ಕಲಿಕೆಯಲ್ಲಿ ಮುಕ್ತವಾದ ಸಂವಹನ ಇರುವುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಸಮರ್ಥನೆಯನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ತಿಳಿಸಲು ಸಹಕಾರಿ. ನಿರ್ಧಾರ ಅಥವಾ ವರ್ತನೆ ಏಕೆ ಸೂಕ್ತವಾಗಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ಹಾಗೂ ಇತರರಲ್ಲಿ ಸಭ್ಯತೆ ಬೆಳೆಸಿಕೊಳ್ಳಲು ಸಹವರ್ತಿ ಕಲಿಕೆ ಸಹಕಾರಿ.

ಹಂಚಿಕೊಳ್ಳುವಿಕೆ: ಯಶಸ್ಸಿನ ಸಂತೋಷದ ಕ್ಷಣಗಳನ್ನು, ನೋವು-ನಲಿವುಗಳನ್ನು, ದುಃಖ-ದುಮ್ಮಾನಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಸಹವರ್ತಿಗಳಿಂದ ಕಲಿಯಬಹುದು. ಸರಳ ಪದಗಳಲ್ಲಿ ಅನುಭವಗಳನ್ನು ಹಂಚಿಕೊಳ್ಳಲು ಇದು ಸಹಾಯಕ. ಹಂಚಿಕೊಳ್ಳುವಿಕೆ ಕೇವಲ ಭಾವನೆಗಳಿಗೆ ಮಾತ್ರ ಸೀಮಿತವಾಗಿರಬೇಕು, ಹಣ ಅಥವಾ ಐಹಿಕ ವಿಷಯಗಳಲ್ಲಿ ಇನ್ನೊಬ್ಬರ ಸ್ವಾತಂತ್ರ್ಯದ ದುರುಪಯೋಗ ಒಳ್ಳೆಯದಲ್ಲ ಎಂಬುದನ್ನು ಕೂಡ ಸಹವರ್ತಿ ಕಲಿಕೆ ಕಲಿಸುತ್ತದೆ. ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವುದರಿಂದ ಬಾಂಧವ್ಯ ಗಟ್ಟಿಯಾಗುವುದಲ್ಲದೆ, ‘ನಾವು ಒಂಟಿಯಲ್ಲ’ ಎಂಬ ಭರವಸೆಯೂ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗುತ್ತದೆ.

ವಿಶ್ವಾಸದ ಉಲ್ಲಂಘನೆಗೆ ತಡೆ: ಸಹವರ್ತಿ ಕಲಿಕೆಯು ನಂಬಿಕೆಗೆ ಯೋಗ್ಯವಾದ ಮಾಹಿತಿಯ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ. ಆ ಮೂಲಕ ಅವರ ನಡುವಿನ ವಿಶ್ವಾಸದ ಉಲ್ಲಂಘನೆಯನ್ನು ತಡೆಯುತ್ತದೆ. ಒಂದು ವೇಳೆ ಮಾಹಿತಿ ಸೋರಿಕೆಯಾದರೆ ಸ್ನೇಹಬಂಧ ಕಳಚುತ್ತದೆ ಎಂಬ ಭಯ ಇರುವುದರಿಂದ ಸ್ನೇಹಿತರು ಹೆಚ್ಚು ಆಪ್ತಮಿತ್ರರಾಗುತ್ತಾರೆ; ದ್ರೋಹ ಮಾಡುವ ಬುದ್ಧಿ ಬೆಳೆಯದೆ ನೈತಿಕತೆ ಎಚ್ಚರವಾಗಿರುತ್ತದೆ.

ಭಿನ್ನಾಭಿಪ್ರಾಯಗಳು ದೂರ: ಚಿಕ್ಕ ಚಿಕ್ಕ ವಾದ–ಸಂವಾದಗಳು ಮತ್ತು ಘರ್ಷಣೆಗಳು ಸ್ನೇಹದ ಭಾಗಗಳಾಗಿರುತ್ತವೆ. ವಾದ ಮತ್ತು ಘರ್ಷಣೆಗಳಲ್ಲಿ ಭಿನ್ನಾಭಿಪ್ರಾಯಗಳ ಸಂಘರ್ಷ ಸಹಜ. ಈ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಸಹವರ್ತಿ ಕಲಿಕೆ ಸಹಕಾರಿ. ಎಲ್ಲರಿಗೂ ಅವರವೇ ಆದ ಅಭಿಪ್ರಾಯಗಳು ಇರುವುದು ಸಹಜ ಎಂಬ ವಾಸ್ತವಬುದ್ಧಿ ಬೆಳೆಯುತ್ತದೆ. ಇನ್ನೊಬ್ಬರ ಅನಿಸಿಕೆಗಳನ್ನು ಆಲಿಸಬೇಕು; ನಮಗೆ ಒಪ್ಪಿಗೆ ಆಗದಿರುವುದನ್ನು ಸರಿಯಾದ ಕ್ರಮದಲ್ಲಿ ಮಂಡಿಸಬೇಕು ಎಂಬ ತಿಳಿವಳಿಕೆಯೂ ಮೂಡುತ್ತದೆ. ಇದರಿಂದ ಭಿನ್ನಾಭಿಪ್ರಾಯಗಳ ನಡುವೆಯೂ ಐಕ್ಯದಿಂದ ಮುನ್ನುಗ್ಗುವ ಗುಣಗಳು ಬೆಳೆಯುತ್ತವೆ.

ಸ್ವಾವಲಂಬನೆಗೆ ಪೂರಕ: ಪ್ರತಿಯೊಬ್ಬರೂ ಸ್ವಲ್ಪ ಸಮಯವಾದರೂ ಏಕಾಂತವನ್ನು ಬಯಸುತ್ತಾರೆ. ಸ್ನೇಹಿತರ ಭಾವನೆಗಳನ್ನು ಅರ್ಥಮಾಡಿಕೊಂಡ ನಂತರ ಅವರೊಂದಿಗೆ ನಿಗದಿತ ಅಂತರ ಕಾಪಾಡಿಕೊಳ್ಳುವುದನ್ನು ಸಹವರ್ತಿ ಕಲಿಕೆ ಕಲಿಸುತ್ತದೆ. ಪದೇ ಪದೇ ತಮ್ಮ ಬೇಡಿಕೆ ಪೂರೈಕೆಗೆ ಸ್ನೇಹಿತರನ್ನು ಒತ್ತಾಯಿಸುವುದನ್ನು ತಪ್ಪಿಸಿ, ಅವರ ಏಕಾಂತವನ್ನೂ ಖಾಸಗಿತನವನ್ನೂ ಗೌರವಿಸುವ, ಒಪ್ಪುವ ಬುದ್ಧಿ ಬೆಳೆಯುತ್ತದೆ. ಜೊತೆಗೆ ಕಲಿಕಾರ್ಥಿಯನ್ನು ಸ್ವಾವಲಂಬಿಯಾಗಿ ಬೆಳೆಯಲೂ ಪ್ರಚೋದಿಸುತ್ತದೆ.

ಪ್ರೀತಿ ಮತ್ತು ಗೌರವ: ಪ್ರೀತಿ ಮತ್ತು ಗೌರವಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಏಕೆಂದರೆ ಪ್ರೀತಿ ಇರುವಲ್ಲಿ ಗೌರವವಿರುತ್ತದೆ, ಗೌರವ ಇರುವಲ್ಲಿ ಪ್ರೀತಿ ಇರುತ್ತದೆ. ಪರಸ್ಪರರನ್ನು ಅರ್ಥಮಾಡಿಕೊಂಡ ಮೇಲೆ ಅವರ ನೋವಿಗೆ ಸ್ಪಂದಿಸುವುದನ್ನು ಕಲಿಸುತ್ತದೆ. ಇದರಿಂದ ಪರಸ್ಪರರ ಪ್ರೀತಿ–ಗೌರವಗಳು ಹೆಚ್ಚಾಗುತ್ತವೆ. ಪ್ರೀತಿ ಮತ್ತು ಗೌರವ ಇಲ್ಲದೆಡೆ ಸಂಬಂಧಕ್ಕೆ ಬೆಲೆಯಿಲ್ಲ ಎಂಬುದನ್ನೂ ಕಲಿಸುತ್ತದೆ.

ಕ್ಷಮೆ: ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂಬುದು ಸಹವರ್ತಿ ಕಲಿಕೆಯಿಂದ ಸ್ಪಷ್ಟವಾಗುತ್ತದೆ. ಸಹಚರರೊಂದಿಗೆ ಕಲಿಯುವಾಗ ಇತರರ ನ್ಯೂನತೆಗಳ ಜೊತೆಗೆ ನಮ್ಮ ಮಿತಿಗಳೂ ಗೋಚರವಾಗುತ್ತವೆ. ಇದು ಪರಸ್ಪರರ ತಪ್ಪುಗಳನ್ನು ಕ್ಷಮಿಸುವ ಕ್ಷಮಾಗುಣವನ್ನು ಕಲಿಸುತ್ತದೆ. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ ಎನ್ನುವುದನ್ನೂ ಈ ಮಿತಿಗಳು ವಿಶದಪಡಿಸುತ್ತವೆ.

ಸಹವರ್ತಿ ಕಲಿಕೆಯಿಂದ ಕಲಿಕಾರ್ಥಗಳಲ್ಲಿ ಅಂತರ್ಗತವಾಗಿ ಬೆಳೆಯುವ ಮೌಲ್ಯಗಳನ್ನು ಯಾವ ಪಠ್ಯಪುಸ್ತಕವೂ, ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ಇಂತಹ ಮೌಲ್ಯಗಳನ್ನು ನಮ್ಮ ಮಕ್ಕಳಲ್ಲಿ ಬೆಳೆಸಲು ಸಹವರ್ತಿ ಕಲಿಕೆಯನ್ನು ಬೆಂಬಲಿಸೋಣ, ಪ್ರೋತ್ಸಾಹಿಸೋಣ, ಅವರನ್ನು ತೊಡಗಿಸೋಣ.

*

ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಸಹವರ್ತಿ ಕಲಿಕೆ ಸಹಕಾರಿ. ಎಲ್ಲರಿಗೂ ಅವರವೇ ಆದ ಅಭಿಪ್ರಾಯಗಳು ಇರುವುದು ಸಹಜ ಎಂಬ ವಾಸ್ತವಬುದ್ಧಿ ಬೆಳೆಯುತ್ತದೆ. ಇನ್ನೊಬ್ಬರ ಅನಿಸಿಕೆಗಳನ್ನು ಆಲಿಸಬೇಕು; ನಮಗೆ ಒಪ್ಪಿಗೆ ಆಗದಿರುವುದನ್ನು ಸರಿಯಾದ ಕ್ರಮದಲ್ಲಿ ಮಂಡಿಸಬೇಕು ಎಂಬ ತಿಳಿವಳಿಕೆಯೂ ಮೂಡುತ್ತದೆ. ಇದರಿಂದ ಭಿನ್ನಾಭಿಪ್ರಾಯಗಳ ನಡುವೆಯೂ ಐಕ್ಯದಿಂದ ಮುನ್ನುಗ್ಗುವ ಗುಣಗಳು ಬೆಳೆಯುತ್ತವೆ.

(ಲೇಖಕರು ಶಿಕ್ಷಕ)

ಪ್ರತಿಕ್ರಿಯಿಸಿ (+)