ಶುಕ್ರವಾರ, ಡಿಸೆಂಬರ್ 13, 2019
17 °C

ವಿದ್ಯಾರ್ಥಿನಿಯರಿಗೆ ಗ್ರಂಥಾಲಯ ಡಿಪ್ಲೊಮಾ ಕೋರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿನಿಯರಿಗೆ ಗ್ರಂಥಾಲಯ ಡಿಪ್ಲೊಮಾ ಕೋರ್ಸ್‌

ಪಿಯು ಪಾಸಾದ ಬಳಿಕ ಪದವಿಗೆ ಸೇರಲು ಇಷ್ಟವಿಲ್ಲದವರು, ಕಡಿಮೆ ಅವಧಿಯಲ್ಲಿ ಯಾವುದಾದರೂ ಕೋರ್ಸ್‌ ಮಾಡಿಕೊಂಡು ಬೇಗ ಉದ್ಯೋಗಕ್ಕೆ ಸೇರಬೇಕು ಎಂದು ಬಯಸುವವರು ಗ್ರಂಥಾಲಯ ವಿಜ್ಞಾನ ಹಾಗೂ ಮಾಹಿತಿ ನಿರ್ವಹಣಾ ಡಿಪ್ಲೊಮಾ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು.

ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ ಬೇಡ, ಪದವಿ ಪಡೆದರೆ ಮುಂದೆ ಉದ್ಯೋಗ ಸಿಗುತ್ತದೊ, ಇಲ್ಲವೊ ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳು ಈ ಕೋರ್ಸ್‌ ಸೇರುವುದು ಒಳ್ಳೆಯದು.

ಇದು ಎರಡು ವರ್ಷದ ಕೋರ್ಸ್‌. ಬೆಂಗಳೂರಿನ ಎಸ್‌.ಜೆ. ಪಾಲಿಟೆಕ್ನಿಕ್‌ ಆವರಣದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌, ಹಾಸನ ಮತ್ತು ಮಂಗಳೂರಿನ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಈ ಕೋರ್ಸ್‌ ಲಭ್ಯವಿದೆ. ಎರಡು ವರ್ಷದ ಕೋರ್ಸ್ ಪೂರ್ಣಗೊಳಿಸಿದ ನಂತರ ಸರ್ಕಾರಿ ಮತ್ತು ಖಾಸಗಿ ರಂಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಈಗಾಗಲೇ ಕೋರ್ಸ್ ಪೂರ್ಣಗೊಳಿಸಿರುವವರು ಇಸ್ರೊ, ಎಚ್‌ಎಎಲ್‌, ಎನ್‌ಎಎಲ್‌ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾಲಾ–ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸ ಬಹುದು. ಆರಂಭದಲ್ಲೇ ಕನಿಷ್ಠ ₹10ರಿಂದ ₹12ಸಾವಿರ ಸಂಬಳ ಸಿಗಲಿದೆ. ಹೆಣ್ಣುಮಕ್ಕಳು ಈ ಕೋರ್ಸ್ ಮಾಡಿಕೊಂಡರೆ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗಲಿದೆ.

ಅರ್ಹತೆ: ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲೆ ಸೇರಿದಂತೆ ಯಾವುದೇ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದವರು ಈ ಕೋರ್ಸ್‌ಗೆ ಸೇರಬಹುದು.   ಪರೀಕ್ಷಾ ಶುಲ್ಕ ಸೇರಿ ₹6 ಸಾವಿರದಲ್ಲಿ ಕೋರ್ಸ್ ಪೂರ್ಣಗೊಳಿಸಬಹುದು. ಪಿಯುಸಿ ನಂತರ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗದವರು, ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಹೆಚ್ಚಿನ ಹೊರೆ ಇಲ್ಲದೆ ಕೋರ್ಸ್ ಪೂರ್ಣಗೊಳಿಸಬಹುದು.

ಈಗಾಗಲೇ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು, ಜುಲೈ ಅಂತ್ಯದವರೆಗೂ ದಾಖಲಾಗಬಹುದು. ಅಲ್ಲದೆ ದ್ವಿತೀಯ ಪಿಯು ಪೂರಕಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಯಾವುದೇ ರೀತಿಯ ಪ್ರವೇಶ ಪರೀಕ್ಷೆ ಇರುವುದಿಲ್ಲ. ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಸರ್ಕಾರದ ಮೀಸಲಾತಿ ನಿಯಮಗಳಂತೆ ವಿವಿಧ ವರ್ಗದವರಿಗೆ ಮೀಸಲಾತಿ ಸೌಲಭ್ಯವಿದೆ.

ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡಿರುವ ಈ ಕೋರ್ಸ್‌ನಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೊನೆಯ ಸೆಮಿಸ್ಟರ್‌ನಲ್ಲಿ ಒಂದೂವರೆ ತಿಂಗಳ ಕಾಲ ತರಬೇತಿ ಇರುತ್ತದೆ. ಡಿಪ್ಲೊಮಾ ನಂತರ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಲು ಬಯಸುವವರು ಬಿ.ಲಿಬ್., ಎಂ.ಲಿಬ್. ಮಾಡಬಹುದು. ಡಿಪ್ಲೊಮಾ ಪೂರ್ಣಗೊಳಿಸಿ ಗ್ರಂಥಾಲಯ ಸಹಾಯಕರಾಗಿ ಕೆಲಸ ಮಾಡಲು ಅವಕಾಶವಿದೆ.

ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಕೋರ್ಸ್‌ ಲಭ್ಯ. ಗಣಿತ, ವಿಜ್ಞಾನ ವಿಷಯ ಇರುವುದಿಲ್ಲ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ, ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್ ಆವರಣದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿನಿಯರಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಕಂಪ್ಯೂಟರ್, ಆಟೊಮೇಷನ್, ಇ- ಡಾಕ್ಯೂಮೆಂಟ್ ಇ–ಲೈಬ್ರರಿ, ಇ-ಜರ್ನಲ್ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ವಿಷಯಗಳ ಬಗ್ಗೆಯೂ ಬೋಧಿಸಲಾಗುತ್ತದೆ.

ಮಾಹಿತಿಗೆ: 080 – 22282515, 9481426691

ಪ್ರತಿಕ್ರಿಯಿಸಿ (+)