ಶುಕ್ರವಾರ, ಡಿಸೆಂಬರ್ 6, 2019
17 °C

ಗುಂಟೂರು ಹುಡುಗನ ಯಶಸ್ಸು

Published:
Updated:
ಗುಂಟೂರು ಹುಡುಗನ ಯಶಸ್ಸು

2014ರ ಜುಲೈ. ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯ ಶೌಚಾಲಯದಲ್ಲಿ ಕದಂಬಿ ಶ್ರೀಕಾಂತ್ ಪ್ರಜ್ಞೆ ಕಳೆದುಕೊಂಡು ಕುಸಿದರು. ಹೀಗೆ ಆದಾಗ ಗೋಪಿಚಂದ್ ಅವರಾಗಲೀ, ಅಕಾಡೆಮಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸುಬ್ಬರಾವಮ್ಮ ಆಗಲೀ ಅಲ್ಲಿ ಇರಲಿಲ್ಲ.

ಉಳಿದ ಸಿಬ್ಬಂದಿ ಶ್ರೀಕಾಂತ್ ಅವರನ್ನು ಕಾರ್ಪೊರೇಟ್ ಆಸ್ಪತ್ರೆಗೆ ಸೇರಿಸಿದರು. ‘ಮಿದುಳು ಜ್ವರದಿಂದ ಹೀಗಾಗಿದೆ. ಕೆಲವು ಗಂಟೆಗಳ ಕಾಲ ಗಮನಿಸಬೇಕು. ಈಗಲೇ ಏನನ್ನೂ ಹೇಳುವುದು ಕಷ್ಟ’ ಎಂಬ ವೈದ್ಯರ ಮಾತು ಕೇಳಿ ಎಲ್ಲರೂ ಮಂಕಾದರು.

ತೀವ್ರ ನಿಗಾ ಘಟಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀಕಾಂತ್ ಅವರನ್ನು ಕಂಡು ಗೋಪಿಚಂದ್‌ಗೆ ಇನ್ನಿಲ್ಲದ ಆತಂಕ. ಶ್ರೀಕಾಂತ್ ಅವರ ಬಂಧು-ಮಿತ್ರರ ಕಣ್ಣಲ್ಲಿ ನೀರು. ಕೊನೆಗೂ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಾಗ ಎಲ್ಲರೂ ನಿರಾಳರಾದರು.

ಹಾಗೆ ಆದ ಮೇಲೆ ಬ್ಯಾಡ್ಮಿಂಟನ್ ಆಟದಲ್ಲಿ ಶ್ರೀಕಾಂತ್ ಮತ್ತೆ ಹಳೆಯ ಲಯ ಕಂಡುಕೊಳ್ಳಲು ತಿಂಗಳುಗಳೇ ಬೇಕಾದವು. ಕೆಲವು ಟೂರ್ನಿಗಳಲ್ಲಿ ಅವರು ಸೋಲುಂಡರು. ಆದರೆ, ಛಲ ಬಿಡಲಿಲ್ಲ. ‘ಚೀನಾ ಓಪನ್ ಸೀರೀಸ್ ಪ್ರೀಮಿಯರ್‌’ ಫೈನಲ್ಸ್‌ನಲ್ಲಿ ಲಿನ್ ದಾನ್ ಅವರಿಗೆ ಸೋಲುಣಿಸಿದ ಮೇಲೆ ಭಾರತದ ಈ ಯುವಕನಿಗೆ ಆತ್ಮವಿಶ್ವಾಸ ಮರಳಿತು. ಐದು ಬಾರಿ ವಿಶ್ವ ಚಾಂಪಿಯನ್ ಆಗಿ, ಎರಡು ಸಲ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಆಟಗಾರ ಲಿನ್ ದಾನ್. ಅವರದ್ದೇ ನೆಲದಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಸೋಲಿಸಿದ ಸಾಧನೆಯನ್ನು ಶ್ರೀಕಾಂತ್ ಮಾಡಿದ್ದು 2014ರ ನವೆಂಬರ್‌ನಲ್ಲಿ.

ಗುಂಟೂರು ಹುಡುಗ ಶ್ರೀಕಾಂತ್. ಗೋಪಿಚಂದ್ ಅಕಾಡೆಮಿ ಸೇರಿದ್ದು 2008-09ರಲ್ಲಿ. ಸೇರಿದರು ಎನ್ನುವುದಕ್ಕಿಂತ ಅವರ ಅಪ್ಪ ಕೆ.ವಿ.ಎಸ್. ಕೃಷ್ಣ ಬಲವಂತವಾಗಿ ಸೇರಿಸಿದರು ಎಂದೇ ಹೇಳಬೇಕು. ಶ್ರೀಕಾಂತ್ ಅಣ್ಣ ನಂದಗೋಪಾಲ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ. ಅವರು 2008ರಲ್ಲಿ ಗೋಪಿಚಂದ್ ಅಕಾಡೆಮಿಯಲ್ಲಿನ ತರಬೇತುದಾರರಲ್ಲಿ ಒಬ್ಬರಾಗಿದ್ದರು. ತಂದೆ ಕೃಷ್ಣ ಅವರಿಗೆ ಚಿಕ್ಕ ಮಗ ಶ್ರೀಕಾಂತ್‌ಗೆ ಯಾವುದರಲ್ಲೂ ಆಸಕ್ತಿ ಇಲ್ಲವಲ್ಲ ಎಂಬ ಚಿಂತೆ ಕಾಡುತ್ತಿತ್ತು.

ಅಮ್ಮ ರಾಧಾ ಮಗನನ್ನು ಮುದ್ದುಗರೆದು ಬೆಳೆಸಿದ್ದರು. ಆಟವನ್ನಾದರೂ ಆಡಿ ಬೆವರು ಹರಿಸಲಿ ಎಂದು ಬಲವಂತವಾಗಿ 13ರ ಬಾಲಕ ಶ್ರೀಕಾಂತ್‌ನನ್ನು ಅಕಾಡೆಮಿಗೆ ಸೇರಿಸಿದರು. ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ತರಬೇತಿ ಪಡೆಯುತ್ತಿದ್ದ ತಂಡಗಳ ಹುಡುಗರ ಸಾಲಿನಲ್ಲಿ ಶ್ರೀಕಾಂತ್‌ನನ್ನು ಗೋಪಿಚಂದ್ ನಿಲ್ಲಿಸಿದರು.

ಅಪ್ಪ ಬಲವಂತವಾಗಿ ತಂದು ಸೇರಿಸಿದ್ದ ಹುಡುಗ ಚುರುಕಾಗಿ ಆಡುತ್ತಿರುವುದು ಗೋಪಿಚಂದ್ ಅವರಿಗೆ ಗೊತ್ತಾದದ್ದು 2011ರಲ್ಲಿ. ತಕ್ಷಣ ಹುಡುಗನನ್ನು ಅವರು ಸಿಂಗಲ್ಸ್ ಅಭ್ಯಾಸಕ್ಕೆ ಹಚ್ಚಿದರು. ಅಲ್ಲಿಂದಾಚೆಗೆ ಶ್ರೀಕಾಂತ್ ಬ್ಯಾಡ್ಮಿಂಟನ್ ವೃತ್ತಿ ಬದುಕಿನ ಗ್ರಾಫ್ ಬದಲಾಯಿತು.

2013ರಲ್ಲಿ ಅನೇಕ ಎದುರಾಳಿಗಳಿಗೆ ಅವರ ಆಟದ ಬಿಸಿ ತಾಕಿತು. ಮಾಲ್ಡೀವ್ಸ್ ಇಂಟರ್‌ನ್ಯಾಷನಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಾಗ ಶ್ರೀಕಾಂತ್ ಮುಖ ಮೊರದಗಲ. ಅದು ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ. 2013ರ ಜೂನ್‌ನಲ್ಲಿ ದಕ್ಕಿಸಿ ಕೊಂಡದ್ದು. ಜಾನ್ ಫ್ರೊಹ್ಲಿಚ್, ಅನೂಪ್ ಶ್ರೀಧರ್ ಹಾಗೂ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದ ಝುಲ್ಫದ್ಲಿ ಝುಲ್ಕಿಫಿ ಮೂವರನ್ನೂ ಸೋಲಿಸಿದ ನಂತರ ಸಂದ ಪ್ರಶಸ್ತಿ ಅದು.

ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಕಲಿತ ಅನೂಪ್ ಶ್ರೀಧರ್ ಆಗ ಗುಂಟೂರು ಹುಡುಗನ ಕುರಿತು ಹೀಗೆ ಪ್ರತಿಕ್ರಿಯಿಸಿದ್ದರು: ‘ಶ್ರೀಕಾಂತ್ ಪದೇ ಪದೇ ನನಗೆ ಸವಾಲುಗಳನ್ನು ಒಡ್ಡುತ್ತಲೇ ಇದ್ದ. ಸರ್ವ್‌ಗೆ ಅವನು ಪ್ರತಿಕ್ರಿಯಿಸುವ ರೀತಿ ಅದ್ಭುತ. ಅದು ದಾಳಿಕೋರ ತಂತ್ರ. ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಅದರ ಬಿಸಿಯನ್ನು ಮಾಲ್ಡೀವ್ಸ್ ಪ್ರಶಸ್ತಿಗಾಗಿ ನಡೆದ ಹೋರಾಟದಲ್ಲಿ ಕಂಡೆ’.

ಆಸ್ಟ್ರೇಲಿಯಾ ಓಪನ್‌ನಲ್ಲಿ ಇದೇ ಶ್ರೀಕಾಂತ್ ಮೊನ್ನೆ ಗೆದ್ದಾಗ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಭಿನಂದಿಸಿ ಟ್ವೀಟ್ ಮಾಡಿದರು. ‘ನಿಮ್ಮ ಅಭಿನಂದನೆ ಕೋಟಿ ಜನರ ಹಾರೈಕೆಗೆ ಸಮ’ ಎಂದು ಶ್ರೀಕಾಂತ್ ನಮ್ರವಾಗಿ ಪ್ರತಿಕ್ರಿಯಿಸಿದರು.

ದೊಡ್ಡ ಗೆಲುವಿನ ನಂತರವೂ ಉತ್ತಮ ಪ್ರಾಯೋಜಕರನ್ನು ಆಕರ್ಷಿಸಲು ಅವರು ಹೆಣಗುತ್ತಿದ್ದಾರೆ.

ಪ್ರತಿಕ್ರಿಯಿಸಿ (+)