ಶನಿವಾರ, ಡಿಸೆಂಬರ್ 7, 2019
25 °C

ಮಹಿಳೆಯ ಮೇಲೆ 4ನೇ ಬಾರಿ ಆ್ಯಸಿಡ್‌ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಮಹಿಳೆಯ ಮೇಲೆ 4ನೇ ಬಾರಿ ಆ್ಯಸಿಡ್‌ ದಾಳಿ

ಲಖನೌ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯೊಬ್ಬರ ಮೇಲೆ ನಾಲ್ಕನೇ ಬಾರಿಗೆ ಆ್ಯಸಿಡ್‌ ದಾಳಿ ನಡೆದಿದೆ.

ಈಕೆ 2012ರಲ್ಲಿ ಇರಿತಕ್ಕೂ ಒಳಗಾಗಿದ್ದರು. ಇದುವರೆಗೆ ಆಕೆಯ ಮೇಲೆ ದುಷ್ಕರ್ಮಿಗಳು ಐದು ಬಾರಿ  ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಲಖನೌದ ಅಲಿಗಂಜ್‌ನ ಹಾಸ್ಟೆಲ್‌ನಲ್ಲಿ ತಂಗಿದ್ದ ಆಕೆ ನೀರು ತರಲು ಕೊಳವೆಬಾವಿಯ ಬಳಿ ಹೋಗಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ಇದ್ದರೂ ದಾಳಿ ನಡೆದಿದೆ. ಮಹಿಳೆಯ ಮುಖದ ಬಲಭಾಗಕ್ಕೆ ಹಾನಿಯಾಗಿದ್ದು,  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಪೊಲೀಸ್ ಮೂಲಗಳ ಪ್ರಕಾರ ಈ ಹಿಂದೆ ಇದೇ ಮಹಿಳೆ  ಮೇಲೆ 3 ಬಾರಿ ಆ್ಯಸಿಡ್ ದಾಳಿಯಾಗಿತ್ತು. ಕಳೆದ  ಮಾರ್ಚ್‌ನಲ್ಲೂ ರಾಯ್‌ಬರೇಲಿಯಲ್ಲಿ ರುವ ತನ್ನ ಗ್ರಾಮದಿಂದ  ಲಖನೌಗೆ ರೈಲಿನಲ್ಲಿ ಬರುತ್ತಿದ್ದಾಗ  ಬಲತ್ಕಾರವಾಗಿ ಗಂಟಲಿಗೆ ಆ್ಯಸಿಡ್‌ ಸುರಿಯಲಾಗಿತ್ತು.  ಆಗ ಆಕೆಯ ಗಂಟಲಿನ ಭಾಗಕ್ಕೆ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ ಅವರು ಆಸ್ಪತ್ರೆಗೆ ಭೇಟಿ ನೀಡಿ ₹1ಲಕ್ಷ ಪರಿಹಾರ ಕೂಡ ನೀಡಿದ್ದರು. ಮಹಿಳೆ ಉಳಿದುಕೊಂಡಿರುವ ಹಾಸ್ಟೆಲ್‌ಗೆ ಭದ್ರತೆಯನ್ನೂ ನೀಡಲಾಗಿತ್ತು.

‘ಮಹಿಳೆಯ ಕುಟುಂಬದಿಂದ ಇದುವರೆಗೆ ದೂರು ದಾಖಲಾಗಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ದಾಳಿ ನಡೆದಾಗ ಭದ್ರತಾ ಸಿಬ್ಬಂದಿ ಮತ್ತು ಕೆಲವು ಹುಡುಗಿಯರು ಮಹಡಿಯಲ್ಲಿದ್ದರು. ಆದರೂ ದುಷ್ಕರ್ಮಿಗಳನ್ನು ಅವರಾರೂ ನೋಡಿಲ್ಲ. ಇದು ದುರದೃಷ್ಟಕರ.  ಈ  ದಾಳಿಯಲ್ಲಿ ಹಿಂದೆ  ದಾಳಿ ನಡೆಸಿದವರ ಕೈವಾಡವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ರಾಜ್ಯ ಮಹಿಳಾ ಕಲ್ಯಾಣ ಸಚಿವೆ ರೀಟಾ ಬಹುಗುಣ ಜೋಶಿ ಹೇಳಿದ್ದಾರೆ.

ಹಾಸ್ಟೆಲ್‌ ವಾರ್ಡನ್‌ ಆಗಲೀ, ಅಲ್ಲಿರುವ ಯುವತಿಯರಾಗಲೀ ಆರೋಪಿಗಳನ್ನು ಕಂಡಿಲ್ಲ. ಸಂತ್ರಸ್ತೆಯ  ಹೇಳಿಕೆಯನ್ನು ಪಡೆಯಲು ಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಲಖನೌನಿಂದ 100 ಕಿ.ಮೀ. ದೂರದಲ್ಲಿರುವ ಉಂಚಹಾರ್‌ ಗ್ರಾಮದಲ್ಲಿ 9 ವರ್ಷಗಳ ಹಿಂದೆ(2008)   ಇಬ್ಬರು  ವ್ಯಕ್ತಿಗಳು ಈಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿತ್ತು.  ಪ್ರಕರಣದ ವಿಚಾರಣೆ ನಡೆಯುತ್ತಿದ್ದು, 2011ರಲ್ಲಿ ಮೊದಲ ಬಾರಿಗೆ ಮಹಿಳೆ ಮೇಲೆ ಆ್ಯಸಿಡ್ ದಾಳಿಯಾಗಿತ್ತು. 2012ರಲ್ಲಿ ಚೂರಿಯಿಂದ ಇರಿತಕ್ಕೊಳಗಾಗಿದ್ದಳು, ಬಳಿಕ 2013ರಲ್ಲಿ ಮತ್ತು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ  ಆ್ಯಸಿಡ್ ದಾಳಿಯಾಗಿತ್ತು.

ಸದ್ಯ ಕಿಂಗ್‌ ಜಾರ್ಜ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಆಕೆಯೊಂದಿಗೆ ಸೆಲ್ಫಿ ತೆಗೆಸಿಕೊಂಡ ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.

***

ಮಗಳ ಶ್ರಾದ್ಧಕ್ಕೆ  ನೆರವು ಕೋರಿದ ತಂದೆ

ಪಟ್ನಾ:
ಆ್ಯಸಿಡ್‌ ದಾಳಿಗೆ ತುತ್ತಾಗಿ, ಸಾವಿಗೀಡಾದ ಮಗಳ ಶ್ರಾದ್ಧ ಮಾಡಲು ನೆರವು ನೀಡುವಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಶೈಲೇಶ್‌ ಪಾಸ್ವಾನ್‌ ಎಂಬುವರು  ಪತ್ರ ಬರೆದಿದ್ದಾರೆ. ಪತ್ರದ ಪ್ರತಿಯೊಂದನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

2012 ರ ಅಕ್ಟೋಬರ್‌ನಲ್ಲಿ ನಾಲ್ವರು ಕಿಡಿಗೇಡಿಗಳು ಪಟ್ನಾದಲ್ಲಿರುವ ಮನೆಗೆ ನುಗ್ಗಿ, ಮನೆಯ ಮಹಡಿಯಲ್ಲಿ ಮಲಗಿದ್ದ  ಪಾಸ್ವಾನ್‌ ಅವರ ಮಗಳು ಚಂಚಲಾ ಮೇಲೆ ಆ್ಯಸಿಡ್‌ ಎರಚಿದ್ದರು. ಸತತ ನಾಲ್ಕು ವರ್ಷಗಳು ಸಾವು ಬದುಕಿನ ನಡುವೆ ಹೋರಾಡಿ ಜೂನ್‌ 22 ರಂದು ಆಕೆ ಮೃತಪಟ್ಟಿದ್ದರು.  ಶೈಲೇಶ್‌ ಅವರು ಮಾಲಿಯಾಗಿ ಕೆಲಸ ಮಾಡುತ್ತಿದ್ದು ₹ 5000 ವೇತನ ಪಡೆಯುತ್ತಿದ್ದಾರೆ.

‘ಗ್ರಾಮಸ್ಥರ ನೆರವಿನಿಂದ ಮಗಳ ಅಂತ್ಯಸಂಸ್ಕಾರ ಮಾಡಿದ್ದೇನೆ. ಐದು ವರ್ಷಗಳಿಂದ ಮಗಳ ಚಿಕಿತ್ಸಾ ವೆಚ್ಚ ಭರಿಸಿದ್ದೇನೆ. ಇನ್ನು ಶ್ರಾದ್ಧ  ಮಾಡಲು ನೆರವು ಕೋರದೆ ಬೇರೆ ದಾರಿ ಇಲ್ಲ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)