ಶನಿವಾರ, ಡಿಸೆಂಬರ್ 7, 2019
24 °C

‘ಮೂಗು ಅಜ್ಜೀದು, ಬಣ್ಣ ಅಮ್ಮನದು’

Published:
Updated:
‘ಮೂಗು ಅಜ್ಜೀದು, ಬಣ್ಣ ಅಮ್ಮನದು’* ಸೋನು ಪಾಟೀಲ್‌, ಹೆಸರಲ್ಲೇ ಚಿನ್ನ ಹೊತ್ಕೊಂಡಿದ್ದೀರಿ?

ಹೌದು. ನಾನು ಚಿನ್ನದಂತಹ ಹುಡುಗಿ. ಗುಣನೂ ಚಿನ್ನದ ಹಾಗೇ ಇದೆ. ಕಷ್ಟದಲ್ಲಿರೋರಿಗೆ ನಾನು ಕೈಲಾದ ಸಹಾಯ ಮಾಡ್ತೀನಿ. ಚಿತ್ರೀಕರಣದಾಗ ಮೇಕಪ್‌ ಮ್ಯಾನ್‌ ಅಂತಾ ಇರ್ತಾರಲ್ವಾ ಅವರನ್ನೂ ‘ಸರಾ’ ಅಂತಾನೇ ಕರೀತೀನಿ.

ನಿಮ್ಮೂರು... ಏನು ಓದಿದ್ದೀರಿ?

ಬಾಗಲಕೋಟೆ ಜಿಲ್ಲೆಯ ಕಡಪಟ್ಟಿ ಅನ್ನೋ ಹಳ್ಳಿ ನಮ್ಮೂರು.ವಿಜಾಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಎಂಸಿಜೆ ಪದವಿ ಮುಗಿಸಿದ್ದೇನೆ.

ಖಡಕ್‌ ರೊಟ್ಟಿ ತಿನ್ತೀರಾ?

ವ್ಹಾವ್‌ ಖಡಕ್‌ ರೊಟ್ಟಿ ಅಂದ್ರೆ ಜೀವ. ಬರೀ ಮೊಸರು ಇದ್ರೂ ಸಾಕು ಹೊಟ್ಟೆ ತುಂಬಾ ರೊಟ್ಟಿ ತಿಂದುಬಿಡ್ತೀನಿ.

ಬರೀ ರೊಟ್ಟಿನಾ? ಡಯಟ್ ಕೂಡಾ ಮಾಡ್ತೀರಾ?

ಡಯಟ್ಟು ಗಿಯಟ್ಟು ಏನೂ ಮಾಡಲ್ಲ. ನಾನು ಏನೇ ತಿಂದ್ರೂ ಎಷ್ಟು ತಿಂದ್ರೂ ಹೀಗೇ ಇರ್ತೀನಿ. ಸೋ ಏನ್‌ ಬೇಕಾದ್ರೂ ತಿನ್ನೋ ಸ್ವಾತಂತ್ರ್ಯ ನನಗಿದೆ.

ನಿಮ್ಮ ಮನೇಲಿ ತರಕಾರಿ ಬೆಳೀತೀರಂತೆ?

ಹೌದೌದು. ನಾನು ಕೃಷಿಕರ ಮಗಳು.ಅಪ್ಪ ಕಲ್ಲಣಗೌಡ, ಅಮ್ಮ ಮಹಾದೇವಿ ಇಬ್ರೂ ಬೆಳಗ್ಗಿಂದ ಸಂಜೆವರೆಗೂ ಹೊಲದಲ್ಲಿರ್ತಾರೆ. ಕಬ್ಬು, ತರಕಾರಿ, ಗೋಂಜಾಳ್‌ ಬೆಳೀತೀವಿ.

ನೀವು ಕೃಷಿಕರ ಮಗಳು, ಎಂಸಿಜೆ ಪದವೀಧರೆ... ನಟಿಯಾಗುವ ಉಮೇದು ಯಾಕೆ?

ನಾನು ಹಳ್ಳಿಯವಳು, ಕೃಷಿಕರ ಮಗಳು ಎಂಬುದು ನನಗೆ ಹೆಮ್ಮೆಯ ಸಂಗತಿ. ಕಬ್ಬು, ತರಕಾರಿ, ಗೋಂಜಾಳ್‌ ಬೆಳೀತೀವಿ. ಹಸಿವು, ಬಡತನ, ಕಷ್ಟ, ಅವಮಾನ ಎಲ್ಲವನ್ನೂ ನಾನು, ನಮ್ಮಪ್ಪ ಅಮ್ಮ, ತಮ್ಮ ಅನುಭವಿಸಿದ್ದೀವಿ. ನೀನೇನು ನಟಿಯಾಗೋದು ಅಂತ ಮೂದಲಿಸಿದವರಿದ್ದಾರೆ. ಅವರಿಗೆಲ್ಲಾ ನಾನು ದೊಡ್ಡ ನಟಿಯಾಗಿ ಬೆಳೆದು ತೋರಿಸಬೇಕು.

ಪದವಿ ಮುಗಿಸುತ್ತಲೇ ಬೆಂಗಳೂರು ರೈಲು ಹತ್ತಿದಿರಂತೆ?

ನಿಜ. ಆಗಲೇ ಹೇಳಿದ್ನಲ್ಲ? ಹಳ್ಳಿಯ ಹೆಣ್ಣು ಮಕ್ಕಳು ಏನಿದ್ರೂ ಹೊಲದಲ್ಲಿ ಕೆಲಸ ಮಾಡಲು ಲಾಯಕ್ಕು ಅಂತ ಜನ ಆಡ್ಕೋತಾರೆ. ನಮ್ಮ ಪ್ರತಿಭೆ ಹೊಲದಲ್ಲಿ ಮಣ್ಣಾಗಬೇಕೇ ಎಂಬುದು ನನ್ನ ಪ್ರಶ್ನೆ. ಅದಕ್ಕೆ ಎಂಸಿಜೆ ಮುಗಿದ ತಕ್ಷಣ ಬೆಂಗಳೂರಿಗೆ ಬಂದುಬಿಟ್ಟೆ. ನಿರ್ದೇಶಕ ಪೃಥ್ವಿರಾಜ್‌ ಅನ್ನೋರು ನನಗೆ ನೈತಿಕ ಬೆಂಬಲ ಕೊಟ್ರು.

‌* ಬಳುಕುವ ಬಳ್ಳಿಗೆ ಸೋನು ಅಂತ ಹೆಸರಿಟ್ಟಂತೆ ಕಾಣ್ತೀರಲ್ಲ?

ಹ್ಹ ಹ್ಹ... ಮೆಚ್ಚುಗೆಗೆ ಧನ್ಯವಾದಗಳು. ನನಗೆ ಎಲ್ಲರೂ ಹೇಳ್ತಾರೆ, ನೀನು ಅಜ್ಜಿಯಾದಾಗ ನಿನ್ನ ಅಜ್ಜಿಯಂತೆಯೇ ಕಾಣುತ್ತೀ ಅಂತ. ಮೂಗು ಅಜ್ಜಿಯಂತಿದೆ. ಬಣ್ಣ ಅಮ್ಮನದು. ಒಳ್ಳೆಯ ಮೈಕಟ್ಟು, ಸೌಂದರ್ಯ ಕೊಟ್ಟ ದೇವರಿಗೆ ದೊಡ್ಡ ಥ್ಯಾಂಕ್ಸ್‌.*

* ರೈಲು ಹತ್ತಿ ಬಂದಾಗ ಕಂಡ ಕನಸು ನನಸಾಗಿದೆಯಾ?

ಬಹುತೇಕ ನನಸಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಬ್ರೇಕ್‌ ಸಿಕ್ಕಿದೆ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಒಳ್ಳೊಳ್ಳೆ ಅವಕಾಶಗಳು ಸಿಕ್ಕಿವೆ.

* ಯಾವ್ಯಾವ ಧಾರಾವಾಹಿಯಲ್ಲಿ ನಟಿಸಿದ್ರಿ?

ನಾನು ನಟಿಸಿದ ಮೊದಲ ಧಾರಾವಾಹಿ ಉದಯ ಟಿವಿಯ ‘ಮೊಗ್ಗಿನ ಮನಸು’. ನಂತರ ಒಂದಾದ ಮೇಲೊಂದು ಧಾರಾವಾಹಿಗಳಿಗೆ ಬಣ್ಣ ಹಚ್ಚಿದೆ. ‘ಗಾಂಧಾರಿ’, ‘ಅಮೃತವರ್ಷಿಣಿ’, ‘ಪಂಚ್‌ ಕಚ್ಚಾಯ’, ‘ಶ್ರೀಮಾನ್‌ ಶ್ರೀಮತಿ’, ‘ಗೀತಾಂಜಲಿ’ , ‘ಗಂಗಾ’, ‘ಜೈ ಆಂಜನೇಯ’...

* ಹಾಸ್ಯ ಪಾತ್ರಗಳೆಂದರೆ ಇಷ್ಟವಂತೆ? ಹಾಸ್ಯ ನಟಿಯಾಗುತ್ತೀರಾ?

ಸಾಧು ಕೋಕಿಲಾ ಅವರಂತಹ ಮೇರು ನಟನೊಂದಿಗೆ ಮೊದಲ ಚಿತ್ರದಲ್ಲೇ ಹಾಸ್ಯ ಪಾತ್ರ ಮಾಡಿದೆ. ಅವರ ಲವರ್‌ ಪಾತ್ರ. ಈ ಚಿತ್ರ ಬಿಡುಗಡೆಯಾಗಬೇಕಿದೆ. ‘ಜಾಗೃತಿ’, ‘ಶ್ರೀ ಕೊಟ್ಟೂರೇಶ್ವರ ಮಹಿಮೆ’, ‘ಪ್ರೀತಿ ಪ್ರಾಪ್ತಿರಸ್ತು’, ‘ಸಾಲಿಗ್ರಾಮ’, ‘ಕಣ್ಣಂಚಿನ ಈ ಕನಸಲ್ಲಿ’, ‘ಗರ, ‘ಗೋಸಿ ಗ್ಯಾಂಗ್‌’, ‘ಪ್ರೊಡಕ್ಷನ್‌ ನಂ. 1’, ಸಿನಿಮಾಗಳಲ್ಲಿ ಮುಖ್ಯಭೂಮಿಕೆ ಸಿಕ್ಕಿದೆ.

ಲವರ್‌ ಪಾತ್ರ ಮಾಡಿ ಖುಷಿಯಲ್ಲಿದ್ದೀರಿ. ನಿಮಗೆ ಕ್ರಶ್‌ ಆದರೆ ಯಾರ ಜತೆ ಆಗಬೇಕು?

ನಟ ಯಶ್‌ ಅಂದ್ರೆ ತುಂಬಾ ಇಷ್ಟ. ಆದ್ರೇನು ಮಾಡೋಣ ಅವರಿಗೆ ಮದುವೆ ಆಗೋಯ್ತು. ಧ್ರುವಸರ್ಜಾ ಅವರ ಜತೆ ಕ್ರಶ್‌ ಆಗಲಿ ದೇವರೇ ಅಂತ ಪ್ರಾರ್ಥಿಸ್ತಿದ್ದೀನಿ.

ಪ್ರತಿಕ್ರಿಯಿಸಿ (+)