ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲ್ಲೇಶ್ವರ ಪರಿಸರದಲ್ಲಿ ಮೈಸೂರು ಕಂಡೆ’

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ನಾನು ಹುಟ್ಟಿದ್ದು ಬೆಳೆದದ್ದು ಮೈಸೂರಿನಲ್ಲಿ. ನನ್ನಪ್ಪ ಸಾಹಿತಿ ಮಳಲಿ ವಸಂತಕುಮಾರ್. ಅಲ್ಲಿಯೇ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮಾಡಿದೆ. ಉದ್ಯೋಗ ಅರಸಿ 1997ರಲ್ಲಿ ಬೆಂಗಳೂರಿಗೆ ಬಂದೆ.  ಆಗ ಇಂದಿರಾನಗರದಲ್ಲಿ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ಕೆಲಸ ಸಿಕ್ಕಿತು. ಆದರೆ ಕಚೇರಿ ಇದ್ದದ್ದು ಪೀಣ್ಯದಲ್ಲಿ. ಅಲ್ಲಿಗೆ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಮತ್ತಿಕೆರೆಯಲ್ಲಿ ಮನೆ ಮಾಡಿದೆ. ನಂತರ ಎಚ್‌ಎಂಟಿ ಆವರಣದಲ್ಲಿ ಇಸ್ರೊ ವಸತಿ ಸಮುಚ್ಚಯ ತಲೆಯೆತ್ತಿತು. 12 ವರ್ಷ ಅಲ್ಲಿಯೇ ವಾಸವಾಗಿದ್ದೆ.

ಮತ್ತಿಕೆರೆಯಿಂದ ಕಚೇರಿಗೆ 20 ನಿಮಿಷದಲ್ಲಿ ತಲುಪುತ್ತಿದ್ದೆ. ಈಗ ಸಂಚಾರ ದಟ್ಟಣೆಯಿಂದಾಗಿ ಒಂದು ಗಂಟೆ ಆಗುತ್ತದೆ. ಇಂದಿರಾನಗರದಲ್ಲಿ ಇದ್ದಾಗ ಮೆಜೆಸ್ಟಿಕ್‌ಗೆ 313 ಸಂಖ್ಯೆಯ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಮನೆಗೆ ಬರುವಾಗಲೂ ಅದೇ  ಬಸ್‌ಗಳನ್ನು ಕಾಯುತ್ತಿದ್ದೆ. ಬಸ್‌ಗಳು ಈಗಿನಂತೆ ತುಂಬಿತುಳುಕುತ್ತಿರಲಿಲ್ಲ. ಬಸ್‌ನಲ್ಲಿ ಕುಳಿತು ನಗರವನ್ನು ನೋಡುವುದಕ್ಕೆ ಖುಷಿಯಾಗುತ್ತಿತ್ತು. ಆಗ ಇಂದಿರಾನಗರ 100 ಅಡಿ ರಸ್ತೆಯಲ್ಲಿ ಅಂಗಡಿಗಳೇ ಇರಲಿಲ್ಲ; ಮನೆಗಳಷ್ಟೇ ಇದ್ದವು. ಆಗ ಅದು ಕಮರ್ಷಿಯಲ್‌ ರಸ್ತೆ ಆಗಿರಲಿಲ್ಲ. ಈಗ ಜಗತ್ತಿನ ಬಹುತೇಕ  ಬ್ರ್ಯಾಂಡ್‌ಗಳ ಮಳಿಗೆಗಳು, ರೆಸ್ಟೊರೆಂಟ್‌ಗಳು ತಲೆಯೆತ್ತಿವೆ. ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಮಂದಿ ಕಾಣಸಿಗುತ್ತಾರೆ. ಮನೆಗಳೆಲ್ಲಾ ಕಂಪೆನಿಗಳಾಗಿ ಬದಲಾಗಿವೆ.

ಮತ್ತಿಕೆರೆ ಪರಿಸರ: ಕಚೇರಿಯಿಂದ ಮತ್ತಿಕೆರೆಯ ಮನೆಗೆ ಕಚೇರಿ ವಾಹನದಲ್ಲಿ 15 ನಿಮಿಷದಲ್ಲಿ ತಲುಪುತ್ತಿದ್ದೆ. ಸಂಚಾರ ದಟ್ಟಣೆ ಅಷ್ಟಾಗಿ ಇರಲಿಲ್ಲ. ಈಗ ಹೊರ ವರ್ತುಲ ರಸ್ತೆ ಇದೆ. ಮೇಲ್ಸೇತುವೆ ಆಗಿದೆ. ರಸ್ತೆಯ ಅಂದವೇ ಬದಲಾಗಿದೆ.

ಕಮ್ಮಗೊಂಡನಹಳ್ಳಿಯಿಂದ  ಅಯ್ಯಪ್ಪ ದೇವಸ್ಥಾನದವರೆಗೆ ಹೆಚ್ಚು ಮನೆಗಳಿರಲಿಲ್ಲ. ಮರಗಿಡಗಳು ಹೆಚ್ಚಿದ್ದವು. ಒಂಟಿಯಾಗಿ ಓಡಾಡುವುದಕ್ಕೆ ಭಯವಾಗುತ್ತಿತ್ತು. ಎಷ್ಟೋ ಬಾರಿ ಮೊಲ, ಮುಂಗುಸಿ, ಹಾವುಗಳನ್ನು ನೋಡಿದ್ದೆ. ಅಷ್ಟೊಂದು ಹಸಿರು ಇತ್ತು. ಈಗ ಜಲಸೌಧ ಇದೆ, 32 ಅಂತಸ್ತಿನ ಪ್ಲಾಟಿನಂ ಸಿಟಿಯಾಗಿದೆ. ಕಂಪೆನಿಗಳೆಲ್ಲಾ ತಲೆ ಎತ್ತಿ, ಬ್ಯುಸಿ ನಗರವಾಗಿದೆ. ಪೀಣ್ಯ ಮೆಟ್ರೊ ಆದ ಮೇಲೆ ಮತ್ತಷ್ಟು ಜನಸಂದಣಿ ಹೆಚ್ಚಾಯಿತು. ಈ ಭಾಗದಲ್ಲಿ ವಾಸಕ್ಕೆ ಬರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಈಗ ರಾತ್ರಿ ಒಬ್ಬಳೇ ಕಾರಿನಲ್ಲಿ ಕಚೇರಿಯಿಂದ ಮನೆಗೆ ಬರುವಷ್ಟು ನಗರ ಬೆಳೆದಿದೆ.

ಇಸ್ರೊ ವಸತಿ ಸಮುಚ್ಚಯಕ್ಕೆ ಬಂದ ಮೇಲೆ ಬೇರೊಂದು ಲೋಕದ ಪರಿಚಯವಾಯಿತು. ನೆರೆಹೊರೆಯಲ್ಲಿ ವಿವಿಧ ರಾಜ್ಯಗಳ ಜನರಿದ್ದರು. ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದಾಗಿತ್ತು. ಎಚ್‌ಎಂಟಿ ಕ್ಯಾಂಪಸ್‌ ಕಾಡಿನಂತಿತ್ತು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೆವು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದರು. ನಾವೆಲ್ಲ ಬಿಡುವಿನ ವೇಳೆಯಲ್ಲಿ ಹೊರರಾಜ್ಯಗಳ ಮಂದಿಗೆ ಕನ್ನಡ ಹೇಳಿಕೊಡುತ್ತಿದ್ದೆವು. ಪ್ರತಿ ಭಾನುವಾರ ಯಶವಂತಪುರ ಸಂತೆಗೆ ಹೋಗಿ  ತಾಜಾ ತರಕಾರಿ ತರುತ್ತಿದ್ದೆವು.

ಐದು ವರ್ಷಗಳ ಹಿಂದೆ ವಿದ್ಯಾರಣ್ಯಪುರ ಸಮೀಪದ ವರದರಾಜಸ್ವಾಮಿ ಲೇಔಟ್‌ನಲ್ಲಿ ಮನೆ ಕಟ್ಟಿಸಿ ನಾನು, ಗಂಡ ಮತ್ತು ಮಗಳು ವಾಸವಾಗಿದ್ದೇವೆ.

ಬೆಂಗಳೂರಿನಲ್ಲಿ ನನಗೆ ಇಷ್ಟವಾಗುವಾಗುತ್ತಿದ್ದ ಬಡಾವಣೆಗಳೆಂದರೆ ಮಲ್ಲೇಶ್ವರ ಮತ್ತು ಜಯನಗರ.

ಹೂವಿನ ಪರಿಮಳ ಬೀರುವ ಮಲ್ಲೇಶ್ವರ ಮಾರುಕಟ್ಟೆ, ಸಾಲು ಮರಗಳಿಂದ ಕಂಗೊಳಿಸುತ್ತಿದ್ದ ಸಂಪಿಗೆ ರಸ್ತೆಯಲ್ಲಿ ಓಡಾಡಿದರೆ ಮೈಸೂರಿನಲ್ಲಿದ್ದೇನೆ ಎಂಬ ಅನುಭವವಾಗುತ್ತಿತ್ತು. ಹಬ್ಬಹರಿದಿನಗಳಲ್ಲಿ ಮನೆ ಮಂದಿಯೆಲ್ಲ  ಸಾಯಿಬಾಬಾ, ಕಾಡು ಮಲ್ಲೇಶ್ವರ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದೆವು. ರಜೆ ದಿನಗಳಲ್ಲಿ ಸಾಗರ್‌ ಹೋಟೆಲ್‌ಗೆ ಹೋಗಿ ಬೆಣ್ಣೆ ದೋಸೆ ತಿನ್ನುತ್ತಿದ್ದೆವು. ಜಯನಗರ  ವಿದ್ಯಾರ್ಥಿ ಭವನ, ಬಸವನಗುಡಿ ರಾಮಕೃಷ್ಣ ಆಶ್ರಮ ನೆಚ್ಚಿನ ತಾಣಗಳಾಗಿದ್ದವು.

ಇಪ್ಪತ್ತು ವರ್ಷಗಳ ಹಿಂದೆ ಮಲ್ಲೇಶ್ವರ ಈಗಿನಷ್ಟು ಬ್ಯುಸಿ ಆಗಿರಲಿಲ್ಲ. ಶಾಂತವಾಗಿತ್ತು. ಅಡ್ಡರಸ್ತೆಗಳೆಲ್ಲ ಕಿರಿದಾಗಿದ್ದವು. ಕನ್ನಡಿಗರು ಹೆಚ್ಚಿದ್ದರಿಂದ ಇಲ್ಲಿಗೆ ಬರಲು ಖುಷಿಯಾಗುತ್ತಿತ್ತು. ಈಗ ದೊಡ್ಡ ಮಾಲ್‌  ತಲೆಯೆತ್ತಿದೆ. ಮಲ್ಲೇಶ್ವರ ಪ್ರಮುಖ ಮಾರುಕಟ್ಟೆ ಸ್ಥಳವಾಗಿದೆ. ವಾರಾಂತ್ಯ ಹಾಗೂ ಹಬ್ಬಗಳ ಸಮಯದಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಇರುತ್ತದೆ.

ನಾಟಕ ನೋಡಲು ರಂಗಶಂಕರ, ರವೀಂದ್ರ ಕಲಾಕ್ಷೇತ್ರಕ್ಕೆ ಹೋಗುತ್ತಿದ್ದೆವು. ‘ಗುಮ್ಮ ಬಂತು ಗುಮ್ಮ’ ನಾಟಕವನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಪ್ರದರ್ಶನಗಳಿಗೆ ಮಿಸ್‌ ಮಾಡದೇ ಹೋಗುತ್ತಿದ್ದೆ. ಬಸವನಗುಡಿಯ ಕಡಲೆಕಾಯಿ ಪರಿಷೆ ತಪ್ಪಿಸುತ್ತಿರಲಿಲ್ಲ. ಹದಿನೈದು ವರ್ಷಗಳ ಹಿಂದೆ ದೇವಸ್ಥಾನದೊಳಗೆ ಆರಾಮಾಗಿ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದೆವು. ಹಳ್ಳಿಗಳಿಂದ ಬಂದ ರೈತರು ಕಡಲೆಕಾಯಿ ಮಾರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಈಗ ಪರಿಷೆ ನಾಮಕಾವಸ್ಥೆ. ಜನದಟ್ಟಣೆ ಹೆಚ್ಚಿರುತ್ತದೆ.  ಪ್ರೇಮಿಗಳ ಅಡ್ಡಾ ಆಗಿದೆ. ಪ್ಲಾಸ್ಟಿಕ್‌ ವ್ಯಾಪಾರಿಗಳು ಕಂಡುಬರುತ್ತಾರೆ.

ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆಯುತ್ತಿದ್ದ ಚಿತ್ರೋತ್ಸವಗಳಿಗೆ ಹೋಗುತ್ತಿದ್ದೆವು. ಕೋಟೆ ಮೈದಾನದಲ್ಲಿ ಆಯೋಜಿಸುತ್ತಿದ್ದ ಖಾದಿ ಉತ್ಸವವನ್ನೂ  ಮಿಸ್‌ ಮಾಡುತ್ತಿರಲಿಲ್ಲ. ನಗರದಲ್ಲಿ ಕೆಲವು ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಹೋಗುತ್ತಿದ್ದೆವು.

ಈಗ ಮನೆಗೆ ಹತ್ತಿರವಿರುವ ಜಿಕೆವಿಕೆಗೆ ಹೋಗಿ ಸಸಿಗಳು, ಹಣ್ಣು ತರುತ್ತೇವೆ.  ಬೆಂಗಳೂರಿನ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಂಡು ನಗರದ ಆಚೆ ಸುತ್ತುವುದಕ್ಕೆ ಖುಷಿಯಾಗುತ್ತದೆ.

‘ಮಾಮ್‌’ ನಿಯಂತ್ರಣ

ಹಾಸನದ ಉಪಗ್ರಹ ನಿಯಂತ್ರಣ ಕೇಂದ್ರದಲ್ಲಿ (ಎಂಸಿಎಫ್) ಒಂದು ವರ್ಷ ತರಬೇತಿ ಪಡೆದೆ. 1997ರಲ್ಲಿ ಸಹಾಯಕ ವಿಜ್ಞಾನಿಯಾಗಿ ಇಸ್ರೊದಲ್ಲಿ ಉದ್ಯೋಗ ಸಿಕ್ಕಿತು. ಸೈಂಟಿಸ್ಟ್‌ ಎಂಜಿನಿಯರ್‌ ಸಿ ಗ್ರೇಡ್‌ ಹುದ್ದೆಯದು.

ನಾನು ಕೆಲಸಕ್ಕೆ ಸೇರಿಕೊಂಡಾಗ ಇಸ್ರೊ ನಿಯಂತ್ರಣದ ಐದು ಉಪಗ್ರಹಗಳಿದ್ದವು. ಅವುಗಳನ್ನು ನಿಯಂತ್ರಿಸುವ ತಂಡದಲ್ಲಿ ನಾನು ಒಬ್ಬಳಾದೆ. ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿದೆ.

ಆರಂಭದಲ್ಲಿ ಒಂದು ಉಪಗ್ರಹಕ್ಕೆ ಇಬ್ಬರು ನಿಯಂತ್ರಕರಿರುತ್ತಿದ್ದೆವು. ಉಪಗ್ರಹಗಳು ಹೆಚ್ಚಾದಂತೆ ಎರಡು ಉಪಗ್ರಹಗಳನ್ನು ಒಬ್ಬರೇ ನಿಯಂತ್ರಿಸುವ ಹೊಣೆ ನಮ್ಮದಾಯಿತು. ಆಗಿನ ಶ್ರಮದಿಂದಾಗಿಯೇ ‘ಮಂಗಳಯಾನ’ (ಮಾರ್ಸ್‌ ಆರ್ಬಿಟರ್‌ ಮಿಷನ್‌– ಮಾಮ್‌)  ನಿಯಂತ್ರಿಸಲು ಸಾಧ್ಯವಾಯಿತು. ಈಗ ಉಪಗ್ರಹದ ಆಪರೇಷನ್‌ ಮ್ಯಾನೇಜರ್‌ ಆಗಿದ್ದೇನೆ.

(ಮನೆ ಗ್ರಂಥಾಲಯದಲ್ಲಿ ರೂಪ)

ಉಪಗ್ರಹ ಉಡಾವಣೆ ಆದ ಕ್ಷಣದಿಂದ ಇವತ್ತಿನವರೆಗೂ ಉಪಗ್ರಹದ ಹೆಲ್ತ್‌, ಪ್ರೊಗ್ರಾಂ ಮಾಡುವುದು, ಇಡೀ ಉಪಗ್ರಹದ ಜವಾಬ್ದಾರಿ ನಮ್ಮ ನಿಯಂತ್ರಣ ತಂಡದ್ದಾಗಿದೆ. ಜೂನ್19ಕ್ಕೆ ಮಾಮ್‌ ಮಂಗಳ ಕಕ್ಷೆಯಲ್ಲಿ ಸಾವಿರ ದಿನ ಪೂರೈಸಿದೆ.

ಭೂಮಿಯಿಂದ ಮಾಮ್‌, 40 ಕೋಟಿ ಕಿಲೋಮೀಟರ್‌ ದೂರದಲ್ಲಿದೆ. ನಾವು ಒಂದು ಸಿಗ್ನಲ್‌ ಕಳುಹಿಸಿದರೆ ತಲುಪಲು 22 ನಿಮಿಷ ಆಗುತ್ತದೆ. ಬೇರೆ ಉಪಗ್ರಹಗಳಿಗೆ ಕ್ಷಣಮಾತ್ರದಲ್ಲಿ ತಲುಪುತ್ತದೆ. ಅಲ್ಲಿಂದ ತಲುಪಿದೆ ಎಂಬ ಸಂದೇಶ ಬರಲು 22 ನಿಮಿಷ ಬೇಕು. ದಿನದ 24 ಗಂಟೆಯೂ ಮಾಮ್‌ ಅನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದೇವೆ. ಓಷನ್‌ಸ್ಯಾಟ್‌, ಯೂತ್‌ ಸ್ಯಾಟ್‌ ನಿಯಂತ್ರಿಸುವ ತಂಡದ ವ್ಯವಸ್ಥಾಪಕಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದೇನೆ.

ಸ್ಕ್ಯಾಟ್‌ ಸ್ಯಾಟ್‌: ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ  ಈ  ಉಪಗ್ರಹ. ಸಮುದ್ರದ ಮೇಲಿನ ಗಾಳಿ ಯಾವ ದಿಕ್ಕಿಗೆ ಎಷ್ಟು ವೇಗದಲ್ಲಿ ಬೀಸುತ್ತಿದೆ ಎಂಬುದನ್ನು ತಿಳಿಯಲು ನೆರವಾಗುತ್ತದೆ.

ಇತ್ತೀಚೆಗೆ ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಿದ ಚಂಡಮಾರುತದ ಬಗ್ಗೆ ನಾಲ್ಕೈದು ದಿನಗಳ ಮುಂಚೆಯೇ ಅಲ್ಲಿನ ಸರ್ಕಾರಗಳಿಗೆ ಮುನ್ಸೂಚನೆ ನೀಡಿದ್ದರಿಂದ, ಹದಿನೈದು ಸಾವಿರ ಜನರನ್ನು ಸ್ಥಳಾಂತರ ಮಾಡಲು ಸಾಧ್ಯವಾಯಿತು. ಮುನ್ಸೂಚನೆ ನೀಡಿ ಸಾವಿರಾರು ಮಂದಿಯ ಜೀವ ಉಳಿಯಲು ಕಾರಣವಾಗಿದ್ದಕ್ಕೆ ಅಲ್ಲಿನ ಸರ್ಕಾರಗಳು ಪ್ರಶಂಸೆ ಪತ್ರವನ್ನೂ ಕಳುಹಿಸಿದ್ದವು. ನಮಗೂ ಇದರಿಂದ ವೃತ್ತಿ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT