ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬರಿ ಬೆಳಗಲ್ಲೋ...

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿಗರ ಬದುಕಿಗೆ ಹತ್ತಿರದ ನಂದಿ ಬೆಟ್ಟ ವಾರಾಂತ್ಯದ ವಿಹಾರಕ್ಕೆ ಸುಂದರ ತಾಣ. ಕವಿ ಹೃದಯ ಹೊತ್ತವರು ಶುಭ್ರ ಸೂರ್ಯೋದಯದ ಸೊಬಗನ್ನು ಸವಿಯಲು ಬೆಳಕು ಹರಿಯುವ ಮೊದಲೇ ಅಲ್ಲಿಗೆ ಧಾವಿಸುವುದು ಸಮಂಜಸ.

ಆಗಷ್ಟೇ ಪೂರ್ವದೆಡೆ ಮೂಡುವ ಸೂರ್ಯಕಿರಣಗಳು ಅವುಗಳೆಲ್ಲದರ ಮಧ್ಯೆ ನುಸುಳಿ ಇಡೀ ಪರಿಸರವನ್ನೇ ಕ್ಯಾನ್ವಾಸ್‌ನಂತೆ ಮಾರ್ಪಡಿಸುತ್ತಾ  ನಂದಿ ಬೆಟ್ಟವನ್ನೂ ಬೆಳಗಿಸುವ ಪರಿ ‘ಬರಿ ಬೆಳಗಲ್ಲೋ ಅಣ್ಣಾ’ ಎಂಬ ಕವಿವಾಣಿಯಂತಿರುತ್ತದೆ.

ಅಂತಹದ್ದೊಂದು ಮುಂಜಾನೆ ಟಿ. ದಾಸರಹಳ್ಳಿಯ ಡಾ. ರಾಹುಲ್ ಕೊಠಾರಿ ಅವರು ತಮ್ಮ ಗೆಳೆಯ ಅಶೋಕ್ ಮಗಳೊಂದಿಗೆ ಅಲ್ಲಿಗೆ  ಭೇಟಿ ನೀಡಿದ್ದ ವೇಳೆ ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರ ಇದು.

ವೃತ್ತಿಯಲ್ಲಿ ದಂತ ವೈದ್ಯರಾಗಿದ್ದರೂ ನಾಲ್ಕು ವರ್ಷದೀಚೆಗೆ ಅವರು ಪ್ರಕೃತಿ, ಲ್ಯಾಂಡ್‌ಸ್ಕೇಪ್, ವನ್ಯಜೀವಿ ಛಾಯಾಗ್ರಹಣ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಬಳಸಿದ ಕ್ಯಾಮೆರಾ, ಕೆನಾನ್ 600 ಡಿ. ಜೊತೆಗೆ (18–135) ಎಂ.ಎಂ.  ಜೂಮ್‌ ಲೆನ್ಸ್.

ಈ ಚಿತ್ರದ ಎಕ್ಸ್‌ಪೋಶರ್ ವಿವರಗಳು ಇಂತಿವೆ: ಲೆನ್ಸ್ ಫೋಕಲ್ ಲೆಂಗ್ತ್ 26 ಎಂಎಂ ಅಳವಡಿಸಿ, ಅಪರ್ಚರ್ ಮೋಡಿನಲ್ಲಿ, ಎಕ್ಸ್‌ಪೋಶರ್ ವ್ಯಾಲ್ಯೂವನ್ನು (-1)  ಕಡಿಮೆ ಇಟ್ಟು, ಅಪರ್ಚರ್  ಎಫ್  5.6 , ಷಟರ್ ವೇಗ (1/25) ಸೆಕೆಂಡ್, ಐಎಸ್‌ಒ 100,  ಟ್ರೈಪಾಡ್ ಮೇಲೆ ಕ್ಯಾಮೆರಾವನ್ನು ಸಜ್ಜು ಮಾಡಿ, ಯಾವುದೇ  ಶೋಧಕವನ್ನೂ (ಫಿಲ್ಟರ್) ಬಳಸದೇ ಕ್ಲಿಕ್ಕಿಸಿದ್ದು.

ಈ ಛಾಯಾಚಿತ್ರದೊಂದಿಗಿನ ತಾಂತ್ರಿಕ ಹಾಗೂ ಕಲಾತ್ಮಕ ವಿಶ್ಲೇಷಣೆ ಇಂತಿವೆ: ಮುಂಜಾನೆಯ ಈ ಬಗೆಯ ಹೊರಾಂಗಣದ ಸಂದರ್ಭಗಳಲ್ಲಿ ಸಹಜ ಬೆಳಕಿನ ಗುಣಮಟ್ಟದ ಬಗ್ಗೆ ತಿಳುವಳಿಕೆ ಅಗತ್ಯ.  ಚಿತ್ರದ ಸೊಬಗಿಗೆ ಪೂರಕವಾಗುವ ನಾಲ್ಕು  ಅಂಶಗಳನ್ನು ಇಲ್ಲಿ ಗಮನಿಸೋಣ...

ಹೆಚ್ಚು ಪ್ರಖರವಾಗಿಲ್ಲದ ಹಿತವಾದ ತೆಳು ಪ್ರಕಾಶ ಬೀರುವ ಕಿರಣಗಳು (ಸಾಫ್ಟ್ ಲೈಟ್). ಬೆಳಕಿನ ಕೋನ (ಡೈರೆಕ್ಷನ್). ಸೂಕ್ತ ವರ್ಣ ಪ್ರಸರಣ, ಛಾಯಾಂತರ ಮತ್ತು ಕಾಂತಿ ಭೇದ (ಟೋನಲ್ ಡಿಸ್ಟ್ರಿಬ್ಯೂಶನ್, ಗ್ರೆಡೇಶನ್ ಮತ್ತು ಕಾಂಟ್ರಾಸ್ಟ್) ಮತ್ತು ಬೆಳಕಿನ ಹಿತ ಮಿತವಾದ ಪ್ರಮಾಣ (ಕ್ವಾಂಟಿಟಿ).

ಈ ಚಿತ್ರದಲ್ಲಿ ಮುನ್ನೆಲೆಯ ವಸ್ತುಗಳ ಸಹಜ ಮತ್ತು ಆಕರ್ಷಕ ಕೆಂಪು (ಉಡುಪಿನ ಭಾಗ), ಕಡು ಹಸಿರು (ಉದ್ದನೆಯ ಮರ) ಮತ್ತು ಕಾಲು ದಾರಿಯ ಹಸಿರಂಚಿನ ಕಂದು ಬಣ್ಣ  ಸರಿಯಾಗಿ ಮೂಡಿವೆ.  ಹಿನ್ನೆಲೆಯಲ್ಲಿ  ತೆಳು ನೀಲ ವರ್ಣದ ಭೂಪ್ರದೇಶಕ್ಕೆ ಹೊಂದಿ ಸಾಗುವ ಗಾಢ ನೀಲಿ ಆಕಾಶ ಮೋಹಕವಾಗಿ ಕಾಣಿಸುತ್ತಿದೆ.

ಚಲನೆಯಲ್ಲಿರುವ ಎಡಭಾಗದ ಮಹಿಳೆಯ ಕೈ ಸ್ವಲ್ಪ ಅಲುಗಿದಂತಿರುವುದು  ಕಡಿಮೆ ಷಟರ್ ವೇಗ ಅಳವಡಿಸಿರುವುದರಿಂದ. ತಾಂತ್ರಿಕವಾಗಿ ಅದು 1/125 ನಷ್ಟು ಹೆಚ್ಚಿನ ಸೆಕೆಂಡ್ ಷಟರ್ ವೇಗ ಮತ್ತು ಒಟ್ಟಾರೆ ಎಕ್ಸ್‌ಪೋಶರ್‌ಗೆ ಪೂರಕವಾದ ಐ.ಎಸ್.ಒ  200 ಇದ್ದಿದ್ದರೆ  ವ್ಯಕ್ತಿ ಚಲನೆಯಲ್ಲಿರಬಹುದಾದ ಸನ್ನಿವೇಶ ಒದಗಿ ಬಂದರೆ ತೊಂದರೆಯಾಗದು.

ಕಲಾತ್ಮಕವಾಗಿ ಡಾ.ರಾಹುಲ್ ಕೊಠಾರಿ ಅವರ ಛಾಯಾಚಿತ್ರ ಗ್ರಹಿಕೆಯ ನೈಪುಣ್ಯತೆಯ ಜೊತೆ ಸೃಜನಶೀಲತೆಯೂ ಕೆಳಗಿನ ಅಂಶಗಳಿಂದ ಧೃಡಪಡಿಸುತ್ತದೆ.

ಮುಖ್ಯವಸ್ತುಗಳಾದ ತಂದೆ-ಮಗಳ ಭಾಗ ‘ಗೋಲ್ಡನ್ ಕ್ರಾಸ್‌ರೂಲ್’ನಲ್ಲಿನಂತೆ  ಚೌಕಟ್ಟಿನ ಒಂದು ಮೂರಂಶದಲ್ಲಿದೆ.   ಇಬ್ಬರ ಹಿಂಭಾಗವೂ ನೆರಳಿನಿಂದ ಕಂದಿರುವ ಈ ಭಾಗದ ಸಮತೋಲನ ಕಾಯಲು ಬಲಭಾಗದ ಉದ್ದನೆಯ ವೃಕ್ಷ ಹಾಗೂ ಅದರ ಗಾಢ ಹಸಿರು-ಕಪ್ಪು ಛಾಯೆಯು ವೈದೃಶ್ಯದ (ಟೋನಲ್ ಕಾಂಟ್ರಾಸ್ಟ್) ಅಪಾಯವನ್ನು ತಪ್ಪಿಸಿದೆ. ಮುನ್ನೆಲೆಯಲ್ಲಿ ನೀಳವಾದ ವೃಕ್ಷದ ಜೊತೆ ನಿಂತಿರುವ ಇಬ್ಬರ ಭಂಗಿಗೆ    ಮುಂಭಾಗದಲ್ಲಿ ರೂಪಿತವಾಗಿರುವ  ದಿಗಂತದವರೆಗಿನ ಕೆಳಗಿನ ಭೂಪ್ರದೇಶದ ಅಗಾಧತೆಯನ್ನು ನೋಡುಗನ ಕಣ್ಮನಕ್ಕೆ ಭಾವನಾತ್ಮಕವಾಗಿ ಹಿಡಿಯಬಲ್ಲ ಅಂತರಭಾಸವನ್ನು (ಪರ್ಸ್ಪೆಕ್ಟಿವ್) ಸರಿಯಾದ ಕ್ಯಾಮೆರಾ ಕೋನದಿಂದ ಲಂಬವಾದ ಚೌಕಟ್ಟಿನಲ್ಲಿ ಸೃಷ್ಟಿಸಿರುವುದು ಛಾಯಾಚಿತ್ರಕಾರರ ಕಲಾ ಪ್ರಜ್ನೆಗೆ ಸಾಕ್ಷಿಯಾಗಿದೆ.

*

(ksrajaram173@gmail.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT