ಮಂಗಳವಾರ, ಮೇ 18, 2021
30 °C

ವೀರಗಲ್ಲುಗಳನ್ನು ರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರಗಲ್ಲುಗಳನ್ನು ರಕ್ಷಿಸಿ

ರಸ್ತೆ ಉಬ್ಬು ನಿರ್ಮಿಸಿ

ಜೆ.ಪಿ. ನಗರ ಎಂಟನೇ ಹಂತದ ವೆಂಕಟೇಶ್ವರ ಲೇಔಟ್‌ನ ಏಳನೇ ಅಡ್ಡ ರಸ್ತೆಯಲ್ಲಿ ದ್ವಿಚಕ್ರ ವಾಹನ, ಆಟೊ, ಕಾರು, ನೀರಿನ ಟ್ಯಾಂಕರ್‌ಗಳು ಅತಿ ವೇಗವಾಗಿ ಚಲಿಸುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿ ಮನೆಗಳಿದ್ದು ಮಕ್ಕಳು ಮನೆ ಮುಂದೆ ಓಡಾಡುತ್ತಾ ಆಟವಾಡುತ್ತಿರುತ್ತಾರೆ.

ಇದೇ ರಸ್ತೆಯಲ್ಲಿ ಶಾಲೆಯೂ ಇರುವ ಕಾರಣ ಸದಾ ಜನಸಂಚಾರವಿರುತ್ತದೆ. ರಸ್ತೆ ಬಳಕೆದಾರರ ಹಿತದೃಷ್ಟಿಯಿಂದ ವೆಂಕಟೇಶ್ವರ ಲೇಔಟ್‌ನ ಏಳನೇ ಅಡ್ಡ ರಸ್ತೆಯ ಸೂಕ್ತ ಸ್ಥಳಗಳಲ್ಲಿ ರಸ್ತೆ  ಉಬ್ಬುಗಳನ್ನು ನಿರ್ಮಿಸಿ ಬಿಳಿ ಪಟ್ಟಿ ಬಳಿಯುವುದು ಅತ್ಯಗತ್ಯ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ನನ್ನ ಮನವಿ.

–ವಿ. ಹೇಮಂತಕುಮಾರ, ಜೆ.ಪಿ.ನಗರ

*

ನಾಮಫಲಕ ಅಳವಡಿಸಿ

ಮಾಗಡಿ ರಸ್ತೆಯ ಬ್ಯಾಡರಳ್ಳಿಯಿಂದ, ತುಂಗಾ ನಗರ, ಅಂದ್ರಹಳ್ಳಿ, ಕಾಳಿಕಾನಗರ, ಪೀಣ್ಯ ಎರಡನೇ ಹಂತದ ಮಾರ್ಗವಾಗಿ ಜಾಲಹಳ್ಳಿ ಮೆಟ್ರೊ ರೈಲು ನಿಲ್ದಾಣಕ್ಕೆ ಇತ್ತೀಚೆಗೆ ಬಿಎಂಟಿಸಿಯವರು ಸಂಪರ್ಕ ಹೆಸರಿನ ಮಿನಿ ಬಸ್‌ಗಳ ಸಂಚಾರ ಆರಂಭಿಸಿದ್ದಾರೆ.

ಆದರೆ ಇದುವರೆಗೆ ಬಸ್ ಸೌಕರ್ಯ ಇಲ್ಲದೇ ಇದ್ದ ಕಾಳಿಕಾನಗರ ಸಾಯಿಬಾಬಾ  ನಗರ ಮೊದಲಾದ ಕಡೆಗಳಲ್ಲಿ ಯಾವುದೇ ನಿಲ್ದಾಣಗಳು ಇರುವುದಿಲ್ಲ. ಬಹಳ ಜನರಿಗೆ ಈ ಸೌಲಭ್ಯದ ಅರಿವಿಲ್ಲ. ಬಸ್ ಯಾವಾಗ ಬರುತ್ತದೆ, ಎಲ್ಲಿ ನಿಲ್ಲುತ್ತದೆ ಎಂಬುದನ್ನು ತಿಳಿಯಲು ಕನಿಷ್ಠ ನಿಲ್ದಾಣ ನಾಮಫಲಕಗಳನ್ನು ಅಳವಡಿಸಬೇಕಾಗಿ ವಿನಂತಿ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

–ಮಂಜುನಾಥ್ ಸಿ.ನೆಟ್ಕಲ್, ಕಾಳಿಕಾನಗರ

**

ವಿದ್ಯುತ್ ದೀಪ ಅಳವಡಿಸಿ

ಹೊಸಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಇರುವ ಇಂದ್ರಪ್ರಸ್ಥ ಹೋಟೆಲ್ ಬಳಿ ವಿದ್ಯುತ್ ದೀಪಗಳು ಇಲ್ಲದೆ ರಾತ್ರಿ ಹೊತ್ತು ಓಡಾಡುವವರಿಗೆ ತೊಂದರೆಯಾಗುತ್ತಿದೆ.  ಈ ದಾರಿಯಲ್ಲಿ ವಿದ್ಯುತ್ ದೀಪಗಳನ್ನು  ಶೀಘ್ರವಾಗಿ ಅಳವಡಿಸಬೇಕೆಂದು ಮನವಿ.

–ವಿನಯ್ ಕುಮಾರ್, ವಿಜಯನಗರ

*

ಸರ್ಕಾರಿ ಉದ್ಯಾನ ಈಗ ಗೊಬ್ಬರದ ಗುಂಡಿ

ಪೀಣ್ಯದ ಬಿಬಿಎಂಪಿ ವಾರ್ಡ್‌ 38ರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಿರುವ ಉದ್ಯಾನ ಈಗ ಹಸುವಿನ ಗೊಬ್ಬರ ತುಂಬುವ ಸ್ಥಳವಾಗಿದೆ. ಈ ವಾಸನೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಗೊಬ್ಬರದ ಗುಂಡಿಯ ಗಲೀಜಿನಿಂದ ಆರೋಗ್ಯವೂ ಹಾಳಾಗುತ್ತಿದೆ.

ಸಂಬಂಧಪಟ್ಟವರು ಇತ್ತ ಗಮನಹರಿಸಿ ಉದ್ಯಾನವನ್ನು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

– ಹನುಮಂತರಾಯಪ್ಪ, ಪೀಣ್ಯ

*

ಕಸದ ಸಮಸ್ಯೆಯಿಂದ ಮುಕ್ತಿ ನೀಡಿ

ಜ್ಞಾನಭಾರತಿ ಲೇಔಟ್‌ನ ಎರಡನೇ ಹಂತದ 22ನೇ ಅಡ್ಡರಸ್ತೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಸರಿಯಾಗಿ ಕಸದ ನಿರ್ವಹಣೆ ಮಾಡದೆ ಬೀದಿಯಲ್ಲಿ ಕಸವನ್ನು ಸುಡುತ್ತಿದ್ದಾರೆ. ಅಕ್ಕಪಕ್ಕದಲ್ಲಿ ಮಕ್ಕಳಿಗೂ ದೊಡ್ಡವರಿಗೂ ಇದರಿಂದ ಆರೋಗ್ಯದ ಸಮಸ್ಯೆಯಾಗಿದೆ.

ಒಂದೇ ಕಡೆ ಕಸವನ್ನು ತುಂಬುತ್ತಿರುವ ಕಾರಣ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ.

–ಮನೋಹರ್ ಎಚ್., ಜ್ಞಾನಭಾರತಿ ಲೇಔಟ್‌

*

ವೀರಗಲ್ಲುಗಳನ್ನು ರಕ್ಷಿಸಿ

ವೀರಗಲ್ಲು, ಅತ್ಮಬಲಿದಾನ ಕಲ್ಲುಗಳು ನಮ್ಮ ಇತಿಹಾಸದ ಕುರುಹುಗಳು. ಒಂದೊಂದು ಕಲ್ಲಿನ ಹಿಂದೆ ಒಂದೊಂದು ಕಥೆ ಇರುತ್ತದೆ.

ಹೆಸರಘಟ್ಟ ಹೋಬಳಿಯ ತುಂಬಾ ಅನೇಕ ವೀರಗಲ್ಲುಗಳಿವೆ. ಕೆಲವು ವೀರಗಲ್ಲುಗಳು ಗ್ರಾಮದ ಯಾವುದೋ ಪೊದೆಯಲ್ಲಿ ಬಿದ್ದಿರುತ್ತವೆ. ಇನ್ನು ಕೆಲವು ವೀರಗಲ್ಲುಗಳು ಸ್ಥಳೀಯರ ಮನೆಗಳ ಬಚ್ಚಲು ಮನೆಗೆ ಹಾಸುಗಲ್ಲುಗಳಾಗಿವೆ. ಕೆಲವು ಗ್ರಾಮಗಳಲ್ಲಿ ಈ ಕಲ್ಲುಗಳ ಕೆಳಗೆ ನಿಧಿ ಇದೆಯೆಂಬ ಮೂಢನಂಬಿಕೆಯಿಂದ ಕಲ್ಲನ್ನು ಹಾಳುಮಾಡಿರುತ್ತಾರೆ.

ಸಂಬಂಧಪಟ್ಟ ಇಲಾಖೆಯು ಚದುರಿ ಹೋಗಿರುವ ವೀರಗಲ್ಲುಗಳನ್ನು ಒಂದೆಡೆ ಸಂಗ್ರಹಿಸಿದರೆ ಇತಿಹಾಸದ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇಲಾಖೆಯು ಇದರತ್ತ ಗಮನಹರಿಸುವುದೇ?

–ಸಿ.ಎಸ್.ನಿರ್ವಾಣ ಸಿದ್ದಯ್ಯ, ಚಿಕ್ಕಬಾಣಾವರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.