ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಆರ್ಥಿಕ ಪ್ರಗತಿಯ ಹೊಸ ಮನ್ವಂತರಕ್ಕೆ ಮುನ್ನುಡಿ

Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಶುಕ್ರವಾರ ಮಧ್ಯರಾತ್ರಿಯಿಂದ (ಜುಲೈ 1) ದೇಶದ ಅರ್ಥ ವ್ಯವಸ್ಥೆಯು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಸುಸೂತ್ರವಾಗಿ ಪಲ್ಲಟಗೊಂಡಿದೆ.   

₹ 130 ಲಕ್ಷ ಕೋಟಿಗಳಷ್ಟು ಮೊತ್ತದ ದೇಶಿ ಆರ್ಥಿಕತೆ ಮತ್ತು 130 ಕೋಟಿ ಜನರು ಒಂದೇ ಮಾರುಕಟ್ಟೆ ವ್ಯಾಪ್ತಿಗೆ ಬರುವ ಅಪರೂಪದ ಕ್ಷಣಕ್ಕೆ ಸಂಸತ್ತಿನ ಸೆಂಟ್ರಲ್‌ ಹಾಲ್‌ ಸಾಕ್ಷಿಯಾಗಿದೆ. ಬಹುಹಂತದ ಸಂಕೀರ್ಣ ತೆರಿಗೆ ವ್ಯವಸ್ಥೆ ಈಗ ಸರಳಗೊಂಡಿದೆ. ತೆರಿಗೆ ವ್ಯವಸ್ಥೆಯ ನಿರ್ವಹಣೆ, ನಿಗಾ ವ್ಯವಸ್ಥೆ ಮತ್ತು ಸಂಗ್ರಹ ಸುಲಲಿತಗೊಳ್ಳಲಿದೆ. ತೆರಿಗೆ ಸಂಗ್ರಹವೂ ಹಿಗ್ಗಲಿದೆ.

ಒಂದು ದೇಶ, ಒಂದು ತೆರಿಗೆ ಮತ್ತು ಒಂದೇ ಮಾರುಕಟ್ಟೆ ಪರಿಕಲ್ಪನೆ   ಕಾರ್ಯರೂಪಕ್ಕೆ ಬಂದಾಗಿದೆ.   ದೇಶಿ ಅರ್ಥ  ವ್ಯವಸ್ಥೆಯ ಏಕೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ.  ಸರಕುಗಳ ತಯಾರಕರು, ಗ್ರಾಹಕರು ಮತ್ತು ವಾಣಿಜ್ಯ ವಹಿವಾಟಿನ ಎಲ್ಲ ಭಾಗಿದಾರರ ಹಿತರಕ್ಷಣೆಯಾಗಲಿದೆ.  ವ್ಯಾಪಾರ– ವಹಿವಾಟು ಮತ್ತು ಸರಕುಗಳ ಸಾಗಣೆಗೆ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳ ನಡುವೆ ಇನ್ನು ಮುಂದೆ ಗೋಡೆಗಳೇ ಇರುವುದಿಲ್ಲ.

ಕೆಲ ವರ್ತಕ ಸಂಘಟನೆಗಳ ಪ್ರತಿಭಟನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ರಾಜಕೀಯ ಪಕ್ಷಗಳ ಬಹಿಷ್ಕಾರದ ಮಧ್ಯೆ ಅತಿದೊಡ್ಡ ತೆರಿಗೆ ಸುಧಾರಣಾ ಉಪಕ್ರಮ ಜಾರಿಗೆ ಬಂದಾಗಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೆ ತಡೆ ಒಡ್ಡುವ ಜಿಎಸ್‌ಟಿಯು, ‘ಉತ್ತಮ ಮತ್ತು ಸರಳ ತೆರಿಗೆ ವ್ಯವಸ್ಥೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಅಸ್ಪಷ್ಟ, ಪರಿಪಕ್ವವಲ್ಲ.

ಪೂರ್ವಭಾವಿ ಸಿದ್ಧತೆಗಳು ಅಪೂರ್ಣವಾಗಿವೆ. ತೆರಿಗೆದಾರರ ಎಲ್ಲ ಗೊಂದಲಗಳನ್ನು ದೂರ ಮಾಡಿಲ್ಲ. ಒಂದೇ ತೆರಿಗೆ ಎನ್ನುವ ಪರಿಕಲ್ಪನೆಯೂ ಜಾರಿಗೆ ಬಂದಿಲ್ಲ ಎನ್ನುವ ಟೀಕೆಯೂ ಇದೆ. ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ರಸಗೊಬ್ಬರ ಮತ್ತು ಟ್ರ್ಯಾಕ್ಟರ್‌ ಬಿಡಿಭಾಗಗಳ ಮೇಲಿನ ತೆರಿಗೆ ದರ ತಗ್ಗಿಸಿರುವುದು ಇಂತಹ ಆಕ್ಷೇಪಗಳಿಗೆ ಪುಷ್ಟಿ ನೀಡುತ್ತದೆ.

ವ್ಯಾಪಕ ಪ್ರಮಾಣದ ಸುಧಾರಣಾ ಕ್ರಮ ಜಾರಿಯ ಆರಂಭದ ದಿನಗಳಲ್ಲಿ ಇಂತಹ ಅಡಚಣೆಗಳು ಸಹಜ.  ಆದರೆ, ಕೆಲ ವರ್ತಕ ಸಂಘಟನೆಗಳ ಪ್ರತಿಭಟನೆ ಮತ್ತು ರಾಜಕೀಯ ಪಕ್ಷಗಳ ಅಸಹಕಾರದ ಕಾರಣಕ್ಕೆ ಇಡೀ ಪ್ರಕ್ರಿಯೆ ದುರ್ಬಲಗೊಳ್ಳಬಾರದು. ಇದರ ಪ್ರಯೋಜನ   ಮತ್ತು ಬೆಲೆ ಏರಿಕೆ ಸಾಧ್ಯತೆಯನ್ನು ಬಿಡಿ, ಬಿಡಿಯಾಗಿ ನೋಡುವುದರ ಬದಲು ಸಮಗ್ರವಾಗಿ ಪರಿಗಣಿಸಬೇಕು.

ಆರ್ಥಿಕ ವೃದ್ಧಿ ದರ ಹೆಚ್ಚಿಸುವ ಶಕ್ತಿವರ್ಧಕವಾಗಿಯೂ ಜಿಎಸ್‌ಟಿ ಕಾರ್ಯನಿರ್ವಹಿಸಲಿದೆ.  ಉಪ್ಪಿನಿಂದ ಐಷಾರಾಮಿ ಸರಕುಗಳವರೆಗೆ ಬಳಕೆದಾರರು ಕಟ್ಟುವ ತೆರಿಗೆಯು ಕೇಂದ್ರ ಮತ್ತು ರಾಜ್ಯಗಳಲ್ಲಿ ಹಂಚಿಕೆಯಾಗಲಿದೆ.  ತೆರಿಗೆ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲಿದೆ. ಪಾರದರ್ಶಕತೆ ತರಲು ನೆರವಾಗಲಿದೆ. ‘ತೆರಿಗೆ ಭಯೋತ್ಪಾದನೆ’ ಗುಮ್ಮ ದೂರವಾಗಲಿದೆ. ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಭಿನ್ನವಾಗಿರುವಾಗ ಅವೆಲ್ಲವುಗಳನ್ನು ಬದಿಗಿಟ್ಟು ಜಿಎಸ್‌ಟಿ ಜಾರಿಗೆ ಎಲ್ಲ ರಾಜ್ಯಗಳು ಮುಂದಡಿ ಇಟ್ಟು ಒಮ್ಮತಾಭಿಪ್ರಾಯಕ್ಕೆ ಬಂದಿರುವುದು ಐತಿಹಾಸಿಕ ವಿದ್ಯಮಾನವಾಗಿದೆ. 

ವೈವಿಧ್ಯಮಯ ಆರ್ಥಿಕತೆಯಲ್ಲಿ ತೆರಿಗೆ ಏಕರೂಪತೆ ಸಾಧ್ಯವಾಗಿದ್ದರೂ, ಅದರ ಪರಿಣಾಮಗಳು ಭಿನ್ನವಾಗಿರಲಿವೆ.  ಎಲ್ಲರನ್ನೂ ಸಮಾನವಾಗಿ ತೃಪ್ತಿಪಡಿಸಲೂ ಸಾಧ್ಯವಾಗಲಾರದು. ಹೊಸ ವ್ಯವಸ್ಥೆ ಜಾರಿಗೆ ಪೂರಕವಾದ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಸಣ್ಣ ವರ್ತಕರು, ವಹಿವಾಟುದಾರರಿಗೆ ಇದರ ಪ್ರಯೋಜನ ಸಂಪೂರ್ಣವಾಗಿ ಮನದಟ್ಟಾಗಿಲ್ಲ.  ಸರ್ಕಾರ, ವಾಣಿಜ್ಯೋದ್ಯಮ ಸಂಘಟನೆಗಳು ಈ ಲೋಪವನ್ನು ಆದ್ಯತೆ ಮೇರೆಗೆ ನಿವಾರಿಸಬೇಕು.  ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್‌, ಮದ್ಯವನ್ನೂ ಆದಷ್ಟು ಬೇಗ ಇದರ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರಗಳೂ ಸಹಕರಿಸಬೇಕು.

ಇದರ ಯಶಸ್ಸಿನ ಕೀರ್ತಿ ಬಿಜೆಪಿಗಷ್ಟೇ ಹೋಗಲಾರದು. ಎಲ್ಲ ರಾಜಕೀಯ ಪಕ್ಷಗಳಿಗೆ ಇದರಲ್ಲಿ ಸಮಾನ ಪಾಲಿದೆ.  ಅರ್ಥ ವ್ಯವಸ್ಥೆ ಮತ್ತು ಸಮಾಜ ಸುಧಾರಣೆಯ ಸಾಧನ ರೂಪದಲ್ಲಿ ಜಿಎಸ್‌ಟಿಯು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಎಲ್ಲ ಭಾಗಿದಾರರೂ ಸಹಕರಿಸಬೇಕು. ಕೈಗಾರಿಕೆಗಳ ಸ್ಪರ್ಧಾತ್ಮಕತೆ ಹೆಚ್ಚಿಸಲು ಜಿಎಸ್‌ಟಿ ನೆರವಾದರೆ ವಿಶ್ವದಲ್ಲಿಯೇ ಅತ್ಯಂತ ತ್ವರಿತ ಬೆಳವಣಿಗೆ ಕಾಣುತ್ತಿರುವ ಹೆಗ್ಗಳಿಕೆಯ ದೇಶಿ ಅರ್ಥ ವ್ಯವಸ್ಥೆ ಅಲ್ಪಾವಧಿಯಲ್ಲಿ ಇನ್ನೊಂದು ಮಜಲಿಗೆ ಹೊರಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT