ಶುಕ್ರವಾರ, ಡಿಸೆಂಬರ್ 6, 2019
19 °C

ಸೋಸಲೆ ವ್ಯಾಸರಾಜ ಮಠ; ಪ್ರಹ್ಲಾದಾಚಾರ್ಯ ಪೀಠಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಸಲೆ ವ್ಯಾಸರಾಜ ಮಠ; ಪ್ರಹ್ಲಾದಾಚಾರ್ಯ ಪೀಠಾರೋಹಣ

ತಿ.ನರಸೀಪುರ (ಮೈಸೂರು): ವಿದ್ವಾಂಸ ಪ್ರೊ.ಡಿ.ಪ್ರಹ್ಲಾದಾಚಾರ್ಯ ಅವರು ತಿರಮಕೂಡಲಿನ ಸೋಸಲೆ ವ್ಯಾಸರಾಜ ಮಠದ 41ನೇ ಪೀಠಾಧಿಪತಿಯಾಗಿ ಭಾನುವಾರ ಪೀಠಾರೋಹಣ ಮಾಡಿದರು. ಮಠದ ಶೇಷಚಂದ್ರಿಕಾ ಬೃಂದಾವನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯಾಗಿ ಅವರು ಮಠದ ಸಾರಥ್ಯ ವಹಿಸಿಕೊಂಡರು.

ಪೀಠಾರೋಹಣದ ಅಂಗವಾಗಿ ಮಠಕ್ಕೆ ಕಳೆ ಬಂದಿತ್ತು. ಪ್ರಹ್ಲಾದಾಚಾರ್ಯರು ಶನಿವಾರ ಸಂಜೆ ಆತ್ಮಶ್ರಾದ್ಧ ಹಾಗೂ ಭಾನುವಾರ ಬೆಳಿಗ್ಗೆ ವಿರಜ ಹೋಮ ನೆರವೇರಿಸಿದರು. ಬಳಿಕ ಸಂಗಮದಲ್ಲಿ ಮಿಂದು, ಜನಿವಾರ ಸಹಿತ ಉಟ್ಟ ಬಟ್ಟೆಯನ್ನು ನದಿಗೆ  ಅರ್ಪಿಸಿದರು.

ಮಠದಿಂದ ನೀಡಿದ ಸಾಂಪ್ರದಾಯಿಕ ವಸ್ತ್ರ ಧರಿಸಿ, ಅಧಿಕಾರ ದಂಡ ಸ್ವೀಕರಿಸಿದರು. ಮಠಕ್ಕೆ ಧಾವಿಸಿ ಗೋಪಾಲಕೃಷ್ಣನಿಗೆ ಪೂಜೆ ನೆರವೇರಿಸಿದರು. ತಲೆ ಮೇಲೆ ಕೃಷ್ಣನ ವಿಗ್ರಹ ಇಟ್ಟು ವೇದ, ಮಂತ್ರಘೋಷಗಳ ನಡುವೆ ಹೊಸ ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು. ನಂತರ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.

ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ‘ಮಠದ ಬಗ್ಗೆ ಎದ್ದಿದ್ದ ಗೊಂದಲ, ಆತಂಕ ದೂರವಾಗಿವೆ. ಮಠದ ಭಕ್ತರಲ್ಲಿ ಸಾಮರಸ್ಯ ಮೂಡಿಸುವಲ್ಲಿ ಸರ್ಕಾರ ನೇಮಿಸಿದ ಆಡಳಿತಾಧಿಕಾರಿ ಜೈರಾಜ್‌ ಯಶಸ್ವಿಯಾಗಿದ್ದಾರೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಕಾಲಕ್ರಮೇಣ ಆಡಳಿತವನ್ನೂ ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದರು.

ನಿರ್ಗಮಿತ ಪೀಠಾಧಿಪತಿ ವಿದ್ಯಾಮನೋಹರತೀರ್ಥ ಸ್ವಾಮೀಜಿ, ರಾಯರ ಮಠದ ಸುಭಧೇಂದ್ರ ತೀರ್ಥ ಸ್ವಾಮೀಜಿ, ಉತ್ತರಾಧಿಕಾರಿ ವಿದ್ಯಾವಿಜಯ ತೀರ್ಥ ಸ್ವಾಮೀಜಿ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಹೈಕೋಟ್‌ ನಿವೃತ್ತ ನ್ಯಾಯಮೂರ್ತಿ ವೆಂಕಟೇಶ್‌ ಮೂರ್ತಿ, ಆಡಳಿತಾಧಿಕಾರಿ ಕೆ.ಜೈರಾಜ್ ಇದ್ದರು.

ಪ್ರತಿಕ್ರಿಯಿಸಿ (+)