ಶುಕ್ರವಾರ, ಡಿಸೆಂಬರ್ 13, 2019
20 °C

‘ಕಿರಿಕ್‌ ಪಾರ್ಟಿ’ ಜೋಡಿ ನಿಶ್ಚಿತಾರ್ಥ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಿರಿಕ್‌ ಪಾರ್ಟಿ’ ಜೋಡಿ ನಿಶ್ಚಿತಾರ್ಥ ಇಂದು

ಮಡಿಕೇರಿ: ಚಲನಚಿತ್ರ ನಟ ರಕ್ಷಿತ್‌ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥವು ಕೊಡಗು ಜಿಲ್ಲೆಯ ವಿರಾಜಪೇಟೆಯ ಸೆರೆನಿಟಿ ಹಾಲ್‌ನಲ್ಲಿ ಸೋಮವಾರ (ಜುಲೈ 3) ಸಂಜೆ 6.30ಕ್ಕೆ ನಡೆಯಲಿದೆ.

ಇತ್ತೀಚೆಗಷ್ಟೇ ತೆರೆ ಕಂಡಿದ್ದ ‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು. ಆ ಚಿತ್ರದಲ್ಲಿ ಕರ್ಣ– ಸಾನ್ವಿ ಪಾತ್ರದಲ್ಲಿ ಮಿಂಚಿದ್ದ ಜೋಡಿ ನಿಜಜೀವನದಲ್ಲೂ ಒಂದಾಗುತ್ತಿದೆ.

ಕರಾವಳಿಯ ಹುಡುಗ, ಕೊಡಗಿನ ಬೆಡಗಿಯ ನಿಶ್ಚಿತಾರ್ಥಕ್ಕೆ ರಶ್ಮಿಕಾ ಅವರ ತಂದೆ, ಉದ್ಯಮಿ ಹಾಗೂ ಕಾಫಿ ಬೆಳೆಗಾರ ಎಂ.ಮದನ್‌ ಮಂದಣ್ಣ ಮಾಲೀಕತ್ವದ ಸೆರೆನಿಟಿ ಹಾಲ್‌ನಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ರಶ್ಮಿಕಾಗೆ ಪರಭಾಷೆಯ ಚಿತ್ರಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿವೆ. ರಕ್ಷಿತ್ ಸಹ ‘ಶ್ರೀಮನ್‌ ನಾರಾಯಣ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಸುದೀಪ್‌ ನಾಯಕರಾಗಿರುವ ಚಿತ್ರವೊಂದರ ನಿರ್ದೇಶನಕ್ಕೂ ಅವಕಾಶ ಸಿಕ್ಕಿದೆ. ಇಬ್ಬರ ಸಮಯ ನೋಡಿಕೊಂಡು ಮದುವೆಯ ದಿನಾಂಕ ನಿಶ್ಚಯಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ರಕ್ಷಿತ್‌– ರಶ್ಮಿಕಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದು, ಸೋಮವಾರ ಬೆಳಿಗ್ಗೆ ವಿರಾಜಪೇಟೆಗೆ ಬರಲಿದ್ದಾರೆ.  ನಿಶ್ಚಿತಾರ್ಥಕ್ಕೆ ಪುನೀತ್‌ ರಾಜಕುಮಾರ್‌, ಸುದೀಪ್‌ ಸೇರಿದಂತೆ ಹಲವು ನಾಯಕ, ನಾಯಕಿಯರು ಸಾಕ್ಷಿ ಯಾಗುವ ನಿರೀಕ್ಷೆಯಿದೆ.

‘ಕೊಡವ ಶೈಲಿಯಲ್ಲಿ 1,500 ಜನರಿಗೆ ಔತಣಕೂಟಕ್ಕೆ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಸಂಗೀತ ಕಾರ್ಯಕ್ರಮವೂ ನಿಶ್ಚಿತಾರ್ಥಕ್ಕೆ ಮೆರುಗು ತರಲಿದೆ’ ಎಂದು ವ್ಯವಸ್ಥಾಪಕ ನವನೀತ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)