ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣ ಮಠವು ಒಬ್ಬ ಸ್ವಾಮೀಜಿಗೆ ಸೇರಿದ್ದಲ್ಲ

ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿಕೆ
Last Updated 2 ಜುಲೈ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಫ್ತಾರ್‌ ಕೂಟ ಏರ್ಪಡಿಸಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಲುವು ಖಂಡಿಸಿ ಶ್ರೀರಾಮಸೇನಾ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಸೇರಿದ್ದ ಪ್ರತಿಭಟನಾಕಾರರು, ‘ಗೋ ಭಕ್ಷಕರನ್ನು ಮಠದಲ್ಲಿ ಬಿಟ್ಟು ಅಪಮಿತ್ರ ಮಾಡಿದ್ದೇಕೆ?’, ‘ಮಸೀದಿಗಳ ಮುಂದೆ ಹಿಂದೂ ದೇವರ ಮೆರವಣಿಗೆ ವೇಳೆ ಕಲ್ಲು ತೂರಾಟ  ನಡೆಸಿದ್ದು ಸೌಹಾರ್ದವೇ?’ ಎಂಬ ಘೋಷಣೆಯ ಫಲಕಗಳನ್ನು ಪ್ರದರ್ಶಿಸಿದರು.

ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮಾತನಾಡಿ, ‘ವಿಶ್ವೇಶತೀರ್ಥ ಸ್ವಾಮೀಜಿ ಯತಿಗಳು. ಅವರ ವಿರುದ್ಧ ಈ ಪ್ರತಿಭಟನೆಯಲ್ಲ. ಹಿಂದೂ ಧರ್ಮದ ಪವಿತ್ರ ಸ್ಥಳದಲ್ಲಿ ಗೋಭಕ್ಷರಿಗೆ ಇಫ್ತಾರ್‌ ಕೂಟ ಏರ್ಪಡಿಸಿದ್ದಕ್ಕೆ ನಮ್ಮ ವಿರೋಧವಿದೆ’ ಎಂದು ಹೇಳಿದರು.
‘ಶ್ರೀಕೃಷ್ಣ ಮಠವು ಒಬ್ಬ ಸ್ವಾಮೀಜಿಗೆ ಸೇರಿದ್ದಲ್ಲ. ಅದು ಇಡೀ ಹಿಂದೂ ಸಮಾಜದ ಆಸ್ತಿ. ಅಲ್ಲಿ ಇಂಥ ಘಟನೆ ನಡೆದಿದ್ದು  ನೋವುಂಟು ಮಾಡಿದೆ.  

ಮುಂದೆ ಇಂಥ ಕಾರ್ಯಕ್ರಮ ಆಯೋಜಿಸುವ ಮುನ್ನ ವಿಶ್ವೇಶತೀರ್ಥ ಸ್ವಾಮೀಜಿ ಪಂಡಿತರ ಅಭಿಪ್ರಾಯ ಪಡೆಯಬೇಕು’ ಎಂದು ಒತ್ತಾಯಿಸಿದರು.
‘ಇಡೀ ಜಗತ್ತಿಗೆ ಶಾಂತಿ ಹಾಗೂ ಸೌಹಾರ್ದದ ಸಂದೇಶ ಕೊಟ್ಟಿದ್ದು ಹಿಂದೂ ಧರ್ಮ. ಅಂಥ ಧರ್ಮದವರು ಬೇರೆಯವರಿಂದ ಸೌಹಾರ್ದದ ಪಾಠ ಕಲಿಯಬೇಕಿಲ್ಲ. ಮುಸ್ಲಿಂ ಸಮಾಜದವರಿಗೆ ಸೌಹಾರ್ದ ಬೇಕಾದರೆ ಗೋಭಕ್ಷಣೆ ನಿಲ್ಲಿಸಲಿ. ಈ ಬಗ್ಗೆ ಮಠಾಧೀಶರೆಲ್ಲ  ಆ ಸಮಾಜದವರಿಗೆ ಬುದ್ಧಿ ಹೇಳಲಿ. ಗೋಭಕ್ಷಣೆ ನಿಲ್ಲಿಸಿದರೆ ಮಾತ್ರ ಹಿಂದೂ–ಮುಸ್ಲಿಂ ಭಾಯಿ–ಭಾಯಿ ಆಗುತ್ತಾರೆ’ ಎಂದು ಹೇಳಿದರು.

ಮಧ್ವಾಚಾರ್ಯರ ಬಗ್ಗೆ ಅಪಪ್ರಚಾರ: ‘ಮಧ್ವಾಚಾರ್ಯರು ಹಾಗೂ  ರಾಘವೇಂದ್ರ ಸ್ವಾಮೀಜಿ ಅವರು ಮುಸ್ಲಿಮರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇಬ್ಬರೂ ಮಹಾತ್ಮರು ಮುಸ್ಲಿಮರನ್ನು ಮಠ ಹಾಗೂ ಮಂದಿರಕ್ಕೆ ಸೇರಿಸಿಕೊಳ್ಳಲಿಲ್ಲ’ ಎಂದು ಮುತಾಲಿಕ್‌ ಹೇಳಿದರು.

‘ದೇವಸ್ಥಾನ ಹೋಗಿ ಮಠವಾಯ್ತು’
‘ಉಡುಪಿಯಲ್ಲಿ ಮೊದಲಿಗೆ ಶ್ರೀಕೃಷ್ಣ ದೇವಸ್ಥಾನವಿತ್ತು. ಮುಜರಾಯಿ ಇಲಾಖೆಗೆ ಸೇರುತ್ತದೆ ಎಂಬ ಭಯದಲ್ಲಿ ಅದನ್ನು ಮಠವನ್ನಾಗಿ ಮಾಡಿಕೊಂಡರು. ಆಕಸ್ಮಾತ್‌ ದೇವಸ್ಥಾನವಾಗಿದ್ದರೆ  ಇಫ್ತಾರ್‌ ಕೂಟವೇ ನಡೆಯುತ್ತಿರಲಿಲ್ಲ’ ಎಂದು ವಕೀಲ ಎನ್‌.ಪಿ.ಅಮೃತೇಶ್‌ ಹೇಳಿದರು.
‘ಕಳೆದ ವರ್ಷ ಹೈಕೋರ್ಟ್‌ನಲ್ಲೂ ಸರ್ಕಾರದ ಹಣದಲ್ಲಿ ಇಫ್ತಾರ್‌ ಕೂಟ ಏರ್ಪಡಿಸಲು ಅಡ್ವೊಕೇಟ್‌ ಜನರಲ್‌ ಸಿದ್ಧತೆ ಮಾಡಿದ್ದರು. ನಾವೆಲ್ಲ ವಿರೋಧಿಸಿದ್ದರಿಂದ ಆವರಣದಲ್ಲೇ 10 ಮಂದಿಗಷ್ಟೇ ಕೂಟ ಸೀಮಿತಗೊಳಿಸಿದರು.  ಅದಕ್ಕೆ ಆಹ್ವಾನವಿದ್ದರೂ ಯಾರೊಬ್ಬ ನ್ಯಾಯಾಧೀಶರು ಪಾಲ್ಗೊಳ್ಳಲಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT