ಭಾನುವಾರ, ಡಿಸೆಂಬರ್ 15, 2019
21 °C

ದೋಸೆ ಮೇಲಿನ ತೆರಿಗೆ ₹2 ಕೋಟಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ದೋಸೆ ಮೇಲಿನ ತೆರಿಗೆ ₹2 ಕೋಟಿ ಸಂಗ್ರಹ

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ದೋಸೆಯಿಂದಲೇ ವರ್ಷಕ್ಕೆ ₹ 2 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ’ ಎಂದು ಕೇಂದ್ರ ಇಂಧನ ಸಚಿವ ಪೀಯೂಷ್‌ ಗೋಯಲ್ ಹೇಳಿದರು.ಭಾನುವಾರ ಏರ್ಪಡಿಸಿದ್ದ ಜಿಎಸ್‌ಟಿ ಅವಲೋಕನ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದೋಸೆ ತಿಂದರೆ ಎರಡು ಮೂರು ರೂಪಾಯಿ  ಜಾಸ್ತಿಯಾಗುತ್ತದೆ ಎಂದು ನೀವು   ಭಾವಿಸುತ್ತೀರಿ. ಕೇವಲ ದೋಸೆಯ ಮೇಲಿನ ತೆರಿಗೆಯಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಲಿದೆ. ₹50 ಕೊಟ್ಟು ತಿನ್ನುವ ಒಂದು ದೋಸೆ ಮೇಲಿನ ತೆರಿಗೆ ಒಬ್ಬ ಬಡ ವಿದ್ಯಾರ್ಥಿಯ ಶಿಕ್ಷಣ ಅಥವಾ ಬಡ ಮಹಿಳೆಯ ವೈದ್ಯಕೀಯ ವೆಚ್ಚಕ್ಕೆ ಬಳಕೆಯಾಗುತ್ತದೆ. ಹಾಗಾಗಿ ದೋಸೆ ತಿನ್ನಲು ಯೋಚನೆ ಮಾಡಬೇಡಿ’ ಎಂದು ಹೇಳಿದರು.ಉಳ್ಳವರು ಮತ್ತು ಬಡವರ ನಡುವಣ ಆರ್ಥಿಕ ಅಸಮಾನತೆ  ಹೆಚ್ಚುತ್ತಿದೆ. ಸಂಪತ್ತಿನ ಕಾರಣಕ್ಕೆ ಭಾರತ ಹೋಳಾಗಬಾರದು. ಎಲ್ಲರಿಗೂ ಸಂಪತ್ತಿನ ಹಂಚಿಕೆಯಾಗಿ ಜೀವನ ಮಟ್ಟ ಸುಧಾರಿಸಬೇಕು ಎಂಬುದೇ ಸರ್ಕಾರದ ಉದ್ದೇಶ. ತೆರಿಗೆ ಹಣದಿಂದ ಬಡವರು ಮತ್ತು ಆದಿವಾಸಿಗಳ ಶಿಕ್ಷಣ, ಆರೋಗ್ಯ, ವಿದ್ಯುತ್‌, ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.‘ನಾನೂ ಕೂಡ ವ್ಯಾಪಾರಿ ಕುಟುಂಬದಿಂದಲೇ ಬಂದವನು. ವ್ಯಾಪಾರಿಗಳು ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದೂ  ಗೊತ್ತು. ಎರಡೆರಡು ಲೆಕ್ಕ ಇಡುತ್ತಿದ್ದರು. ಗ್ರಾಹಕರು ಬಿಲ್‌ ಕೇಳಿದರೆ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುತ್ತಿದ್ದರು.  ಜನರು ಸ್ವಲ್ಪ ಹಣ ಉಳಿಸಲು  ಬಿಲ್‌ ಪಡೆಯದೇ ವಸ್ತುಗಳನ್ನು ಖರೀದಿಸುತ್ತಿದ್ದರು.  ಇಂದಿನ ವ್ಯಾಪಾರಿ ಸಮುದಾಯಗಳ ಯುವಕರು ಈ ರೀತಿ ವ್ಯಾಪಾರ– ವ್ಯವಹಾರ ನಡೆಸಲು ಬಯಸುವುದಿಲ್ಲ. ಪಾರದರ್ಶಕ ವ್ಯವಹಾರ ನಡೆಸಲು ಬಯಸುತ್ತಾರೆ’ ಎಂದರು.‘ಜಿಎಸ್‌ಟಿ ಜಾರಿಯಿಂದ ಒಂದಷ್ಟು ಜನರು ಚಿಂತೆಗೀಡಾಗಿದ್ದಾರೆ. ಹಳೆಯ ಪದ್ಧತಿಯೇ ಇರಬೇಕು ಎಂದು ಬಯಸಿದ್ದರು. ನೋಟು ರದ್ದತಿ ಸಂದರ್ಭದಲ್ಲೂ ಇಂತಹದ್ದೇ ಅಭಿಪ್ರಾಯ ಕೇಳಿ ಬಂದಿತ್ತು. ಹೊಸ ವ್ಯವಸ್ಥೆಗಳನ್ನು ಜಾರಿಗೆ  ತಂದರೆ ದೇಶ ಹೇಗೆ ನಡೆಯಬೇಕು ಎಂಬುದಾಗಿ ಪ್ರಶ್ನಿಸುತ್ತಾರೆ. ಹಾಗಿದ್ದರೆ, ಪಾರದರ್ಶಕವಲ್ಲದ ಹಳೆ ವ್ಯವಸ್ಥೆಯೇ ಮುಂದುವರಿಯಬೇಕೆ’ ಎಂದು ಅವರು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)