ಶನಿವಾರ, ಡಿಸೆಂಬರ್ 14, 2019
22 °C
ಐಐಐಟಿ–ಬಿ 17ನೇ ಘಟಿಕೋತ್ಸವ: ಹೊಸ ವಿಧಾನಗಳ ಶೋಧಿಸುವ ಆಸಕ್ತಿ ಬಿಚ್ಚಿಟ್ಟ ಚಿನ್ನದ ಪದಕ ವಿಜೇತರು

ಸೈಬರ್‌ ಭದ್ರತೆ ಒದಗಿಸಲು ಪದವೀಧರರ ತವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಬರ್‌ ಭದ್ರತೆ ಒದಗಿಸಲು ಪದವೀಧರರ ತವಕ

ಬೆಂಗಳೂರು: ‘ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಭದ್ರತೆ ವಿಚಾರದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ಪರಿಹರಿಸಲು ಹೊಸ ವಿಧಾನಗಳನ್ನು ಶೋಧಿಸುವುದೇ ನಮ್ಮ ಮುಂದಿರುವ ಸವಾಲು’

ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ (ಐಐಐಟಿ–ಬಿ)ಯ 17ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪಡೆದ ಪದವೀಧರರ ಮನದ ಮಾತಿದು.

ಎಂ.ಟೆಕ್‌ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಉತ್ತರಾಖಂಡದ ಗೌರವ್‌ ಕುಮಾರ್‌ ಜೈನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇಷ್ಟುದಿನ ನಾವು ನೀಡುವ ನಿರ್ದೇಶನಗಳನ್ನು ಆಧರಿಸಿ ಕಂಪ್ಯೂಟರ್‌ಗಳಿಂದ ಫಲಿತಾಂಶ ಬರುತ್ತಿತ್ತು.

ಈಗ ಡೇಟಾವನ್ನು ಸ್ವಯಂಚಾಲಿಕವಾಗಿ ಸಂಸ್ಕರಿಸಿ ಫಲಿತಾಂಶ ನೀಡುವ ಯಂತ್ರಗಳ ಆವಿಷ್ಕಾರ ನಡೆದಿದೆ. ಇದರಿಂದ ಕೆಲಸ ಕಾರ್ಯಗಳು ಇನ್ನಷ್ಟು ಸುಲಭವಾಗಲಿವೆ, ಹಾಗೆಯೇ, ಮಾಹಿತಿ ಸೋರಿಕೆಯಾಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಸುರಕ್ಷಿತವಾಗಿ ಸ್ವಯಂಚಾಲಿಕ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಮಷಿನ್‌ ಲರ್ನಿಂಗ್‌ ಇನ್‌ಫರ್ಮೇಷನ್‌ ಟೆಕ್ನಾಲಜಿಯಲ್ಲಿ ಸಂಶೋಧನೆ ಮಾಡುವ ಆಸಕ್ತಿ ಇದೆ’ ಎಂದರು.

ಸ್ಯಾಮ್‌ಸಂಗ್‌ ಕಂಪೆನಿಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೌರವ್‌ ಅವರಿಗೆ 8 ವರ್ಷದ ಮಗಳಿದ್ದಾಳೆ. ಕಂಪೆನಿ ಕೆಲಸ ಮತ್ತು ಮನೆ ನಿರ್ವಹಣೆ ಮಾಡುತ್ತಲೇ ಓದಿ ಪದಕ ಗಳಿಸಿದ ಇವರ ಸಾಧನೆಗೆ ಪತ್ನಿ ವಿದ್ಯಾ ಸಹ ಸಂತೋಷ ವ್ಯಕ್ತಪಡಿಸಿದರು.

ವರ್ಷದ ಉತ್ತಮ ವಿದ್ಯಾರ್ಥಿ ಪದಕ ಗಳಿಸಿದ ರಾಜಾಜಿನಗರದ ಯಶವಂತ ಮೋಹನ್‌ ಕೊಂಡಿ, ‘ಡೇಟಾ ಭದ್ರತೆ ವಿಷಯದಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಮಾಹಿತಿ ತಂತ್ರಜ್ಞಾನ ಭದ್ರತೆ ಕುರಿತು ಅಧ್ಯಯನ(ಕ್ರಿಪ್ಟೊಗ್ರಫಿ) ಮಾಡಲು ಯುಎಸ್‌ಎನ ಬೋಸ್ಟನ್‌ ವಿಶ್ವವಿದ್ಯಾಲಯದಲ್ಲಿ ಸೇರಿದ್ದೇನೆ. ಅಲ್ಲಿ ಐದು ವರ್ಷಗಳ ಅಧ್ಯಯನದ ಬಳಿಕ ಸೈಬರ್‌ ಭದ್ರತೆ ಕ್ಷೇತ್ರದಲ್ಲಿ  ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆ ನಿರ್ದೇಶಕ ಇಂದ್ರನೀಲ್‌ ಮನ್ನಾ, ಐಐಐಟಿ–ಬಿ ನಿರ್ದೇಶಕ ಎಸ್‌. ಸಡಗೋಪನ್‌, ಇನ್ಫೊಸಿಸ್‌ನ ಸಹ ಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್‌, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

***

ಅಂಧ ವಿದ್ಯಾರ್ಥಿನಿಗೆ ಚಿನ್ನದ ಪದಕ

ಅಂಧ ವಿದ್ಯಾರ್ಥಿನಿ ವೈ.ವಿದ್ಯಾ ಅವರು ಎಂ.ಎಸ್ಸಿ  (ಡಿಜಿಟಲ್‌ ಸೊಸೈಟಿ) ವಿಷಯದಲ್ಲಿ ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ಅಂಧರು ವಿಜ್ಞಾನ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವ ನವೋದ್ಯಮ ಆರಂಭಿಸುವುದು ಅವರ ಕನಸು.

‘ಗಣಿತ ಹಾಗೂ ವಿಜ್ಞಾನ ನನ್ನ ನೆಚ್ಚಿನ ವಿಷಯಗಳು. ಇವುಗಳ ಕಲಿಕೆ ಕಷ್ಟವಾಗಿತ್ತು. ನನ್ನ ಪರಿಸ್ಥಿತಿ ಬೇರೆಯವರಿಗೆ ಬರಬಾರದು. ವಿಜ್ಞಾನ ಕಲಿಕೆಗೆ ಅನುಕೂಲವಾಗುವ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ನವೋದ್ಯಮ ಸ್ಥಾಪನೆ ಮಾಡುವ ಉದ್ದೇಶ ಇದೆ’ ಎಂದರು. ಇವರಿಗೆ ಅಂಧ ಸಾಧಕಿ ಹೆಲನ್‌ ಕೆಲ್ಲರ್‌ ಆದರ್ಶವಂತೆ.

***

ಹಣಕ್ಕಾಗಿ ಆವಿಷ್ಕಾರ ಮಾಡಬೇಡಿ.  ಪರಿಸರ ಮತ್ತು ಮಾನವನ ನೈತಿಕತೆಗೆ ಧಕ್ಕೆಯಾಗದಂತೆ ಶೋಧನೆ ಮಾಡಿ. ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚುವಂತಿರಲಿ

ಇಂದ್ರನೀಲ್‌ ಮನ್ನಾ, ಕಾನ್ಪುರ ಐಐಟಿ ನಿರ್ದೇಶಕ

ಪ್ರತಿಕ್ರಿಯಿಸಿ (+)