ಶನಿವಾರ, ಡಿಸೆಂಬರ್ 7, 2019
25 °C
ಬಾಣಸವಾಡಿಯಲ್ಲಿ ಆಫ್ರಿಕಾ ಪ್ರಜೆಗಳು–ಪೊಲೀಸರ ಸಂವಾದ

ವೀಸಾ ನವೀಕರಣ ಮಾಡಿಸದಿದ್ದರೆ ಕಠಿಣ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀಸಾ  ನವೀಕರಣ ಮಾಡಿಸದಿದ್ದರೆ ಕಠಿಣ ಕ್ರಮ

ಬೆಂಗಳೂರು: ‘ನಗರದಲ್ಲಿ ನೆಲೆಸಿರುವ 155 ಆಫ್ರಿಕಾ ಪ್ರಜೆಗಳ ವೀಸಾ ಅವಧಿ ಮುಕ್ತಾಯವಾಗಿದೆ. ಅವರೆಲ್ಲ ಆದಷ್ಟು ಬೇಗ ವೀಸಾ ನವೀಕರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್‌ ಎಚ್ಚರಿಕೆ ನೀಡಿದರು.

ನಗರದ ಬಾಣಸವಾಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಆಫ್ರಿಕಾ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವಿನ ಸಂವಾದದಲ್ಲಿ ಅವರು ಮಾತನಾಡಿದರು.

‘6,000 ಆಫ್ರಿಕಾ ಪ್ರಜೆಗಳು ನಗರದಲ್ಲಿ ನೆಲೆಸಿರುವ ದಾಖಲೆ ಇದೆ. ಅವರಲ್ಲಿ ಬಹುತೇಕರು ಅನಧಿಕೃತವಾಗಿ ವಾಸವಿದ್ದಾರೆ’ ಎಂದರು.

‘ಬೆಂಗಳೂರು ಶಾಂತಿಯುತ ನಗರ. ಇಲ್ಲಿಯ ಜನರ ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಆಫ್ರಿಕಾ ಪ್ರಜೆಗಳು ಸೇರಿ ಎಲ್ಲ ವಿದೇಶಿಗರು ಗೌರವಿಸಬೇಕು. ಸ್ಥಳೀಯರೊಂದಿಗೆ ಹೊಂದಿಕೊಂಡು ಬದುಕಬೇಕು’ ಎಂದರು.

ಬಾಡಿಗೆದಾರರ ಸಭೆ ಶೀಘ್ರ: ಆಫ್ರಿಕಾ ಪ್ರಜೆಯೊಬ್ಬರು ಮಾತನಾಡಿ, ‘ನಗರದಲ್ಲಿ ಹಲವರು ಮನೆ ಬಾಡಿಗೆ ಕೊಡಲು ನಿರಾಕರಿಸುತ್ತಿದ್ದಾರೆ. ವಾಸಿಸಲು ಸ್ಥಳವಿಲ್ಲದೆ ತೊಂದರೆಯಲ್ಲಿ ಸಿಲುಕಿದ್ದೇವೆ’ ಎಂದು ಹೇಳಿದರು. ಆಗ ನಿಂಬಾಳ್ಕರ್‌, ‘ಶೀಘ್ರವೇ ಬಾಡಿಗೆದಾರರ ಸಭೆ ಕರೆದು ಆ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದರು.

ತಪ್ಪು ಮಾಡಿದರೆ ಶಿಕ್ಷೆ: ‘ತಪಾಸಣೆ ಹೆಸರಿನಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ’ ಎಂದು ಆಫ್ರಿಕಾ ಪ್ರಜೆಯೊಬ್ಬರು ದೂರಿದರು. ಅದಕ್ಕೆ ನಿಂಬಾಳ್ಕರ್‌, ‘ಮಾದಕ ವಸ್ತು ಮಾರಾಟ ಮಾಡುವುದು ಅಪರಾಧ. ನಿಮ್ಮ ರಾಷ್ಟ್ರದ ಹಲವರು ಅದರಲ್ಲಿ ತೊಡಗಿದ್ದಾರೆ. ಅನುಮಾನ ಬಂದ ಕಡೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ’ ಎಂದರು.

ಸುರಕ್ಷಾ ಆ್ಯಪ್‌ ಬಗ್ಗೆ ಜಾಗೃತಿ: ಸಂವಾದದ ವೇಳೆ ಆಫ್ರಿಕಾ ಪ್ರಜೆಗಳಿಗೆ ಪೊಲೀಸ್‌ ಇಲಾಖೆಯ ಸುರಕ್ಷಾ ಆ್ಯಪ್‌ ಬಗ್ಗೆ ಜಾಗೃತಿ ಮೂಡಿಸಲಾಯಿತು. ತುರ್ತು ಸಂದರ್ಭದಲ್ಲಿ ಈ ಆ್ಯಪ್‌ ಬಳಕೆ ಮಾಡುವಂತೆ ಪೊಲೀಸರು ಕೋರಿದರು. ಹಲವು ಪ್ರಜೆಗಳು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ ಹಾಗೂ ಟ್ಯಾಬ್‌ಗಳಲ್ಲಿ ಅಳವಡಿಸಿಕೊಂಡರು.

ಪ್ರತಿಕ್ರಿಯಿಸಿ (+)