ಶನಿವಾರ, ಡಿಸೆಂಬರ್ 14, 2019
25 °C
ರಾಜ್ಯಗಳಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದಿಂದ ಸೂಚನೆ

ಸರ್ಕಾರಿ ಕಟ್ಟಡದಲ್ಲೇ ಆಧಾರ್‌ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಸರ್ಕಾರಿ ಕಟ್ಟಡದಲ್ಲೇ ಆಧಾರ್‌ ಕೇಂದ್ರ

ನವದೆಹಲಿ: ಖಾಸಗಿಯವರು ನಡೆಸುತ್ತಿರುವ ಆಧಾರ್‌ ನೋಂದಣಿ ಕೇಂದ್ರಗಳು ಸೇರಿ ಎಲ್ಲ ನೋಂದಣಿ ಕೇಂದ್ರಗಳನ್ನು ಸರ್ಕಾರಿ ಅಥವಾ ಸ್ಥಳೀಯ ಸಂಸ್ಥೆಗಳ ಕಚೇರಿಗಳ   ಆವರಣಕ್ಕೆ ಸ್ಥಳಾಂತರಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ.ಈ ಸೆಪ್ಟೆಂಬರ್‌ ಒಳಗೆ ಸ್ಥಳಾಂತರ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ದೇಶದಾದ್ಯಂತ 25 ಸಾವಿರ ಆಧಾರ್‌ ನೋಂದಣಿ ಕೇಂದ್ರಗಳು ನೇರವಾಗಿ ಸರ್ಕಾರದ ಸುಪರ್ದಿಗೆ ಬರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.ನೋಂದಣಿ ಮತ್ತು ಪರಿಷ್ಕರಣೆಗೆ ಖಾಸಗಿ ಸಂಸ್ಥೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವುದನ್ನು ತಡೆಯುವ ಉದ್ದೇಶದಿಂದ ಪ್ರಾಧಿಕಾರ ಈ ಕ್ರಮ ತೆಗೆದುಕೊಂಡಿದೆ.ಖಾಸಗಿ ನೋಂದಣಿ ಕೇಂದ್ರಗಳ ಸ್ಥಳಾಂತರಕ್ಕಾಗಿ ಸರ್ಕಾರಿ ಕಟ್ಟಡಗಳಲ್ಲಿ ಇದೇ 31ರೊಳಗೆ ಸ್ಥಳ ಗುರುತಿಸುವಂತೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ ಭೂಷಣ್‌ ಹೇಳಿದ್ದಾರೆ.ನೋಂದಣಿ ಕೇಂದ್ರಗಳು ಸರ್ಕಾರಿ ಕಚೇರಿಗಳಿಗೆ ಸ್ಥಳಾಂತರವಾದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬ ನಿಲುವನ್ನು ಯುಐಡಿಎಐ ಹೊಂದಿದೆ.‘ಖಾಸಗಿ ನೋಂದಣಿ ಕೇಂದ್ರಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ. ಕೇಂದ್ರವನ್ನು ಗುರುತಿಸಿದರೂ ಅಲ್ಲಿ ಹೋದಾಗ ಅದು ಮುಚ್ಚಿರುತ್ತದೆ ಅಥವಾ ಅಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ’ ಎಂಬ ಹಲವು ದೂರುಗಳು ಬಂದಿವೆ.ಹಾಗಾಗಿ ಖಾಸಗಿ ನೋಂದಣಿ ಸಂಸ್ಥೆಗಳು ನಿಯಮಾನುಸಾರವೇ ಕಾರ್ಯ ನಿರ್ವಹಿಸಲು ಸರ್ಕಾರದ ಕಟ್ಟುನಿಟ್ಟಿನ ನಿಗಾ ಅಗತ್ಯ ಎಂಬ ಕಾರಣದಿಂದ ಸ್ಥಳಾಂತರಕ್ಕೆ ಸೂಚಿಸಲಾಗಿದೆ ಎಂದು ಭೂಷಣ್‌ ಹೇಳಿದ್ದಾರೆ.ಸರ್ಕಾರದಿಂದ ದೊರೆಯುವ ಸೇವೆ ಮತ್ತು ಸೌಲಭ್ಯಗಳು, ಸಹಾಯಧನಗಳು, ಪ್ಯಾನ್‌, ಜಿಎಸ್‌ಟಿ ನೋಂದಣಿ, ಬ್ಯಾಂಕ್‌ ಖಾತೆ, ಪಾಸ್‌ಪೋರ್ಟ್‌, ಆಸ್ತಿ ನೋಂದಣಿ ಗಳೆಲ್ಲದಕ್ಕೂ ಈಗ ಆಧಾರ್‌ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ.  ಹಾಗಾಗಿ ಆಧಾರ್‌ ನೋಂದಣಿ ಮತ್ತು ಪರಿಷ್ಕರಣೆಗೆ ಸುರಕ್ಷಿತ ಮತ್ತು ಜನರಿಗೆ ಅನುಕೂಲಕರ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸುವುದು ಅನಿವಾರ್ಯವಾಗಿದೆ.

ರಾಜ್ಯ ಸರ್ಕಾರಗಳು ತಮ್ಮದೇ ಕಟ್ಟಡ ದಲ್ಲಿ ತಮ್ಮದೇ ಸಿಬ್ಬಂದಿ ಹೊಂದಿರುವ ಕೇಂದ್ರಗಳನ್ನು ಆರಂಭಿಸಬಹುದು. ಇಲ್ಲವೇ, ಯುಐಡಿಎಐಯಲ್ಲಿ ನೋಂದಣಿ ಮಾಡಿಕೊಂಡಿರುವ ಖಾಸಗಿ ಸಂಸ್ಥೆಗಳನ್ನೂ ನಿಯೋಜಿಸಬಹುದು.ಆದರೆ ಖಾಸಗಿ ಸಂಸ್ಥೆಗಳ ವಿಶ್ವಾಸಾ ರ್ಹತೆ ಪರಿಶೀಲಿಸಬೇಕು ಮತ್ತು ಈ ಕೇಂದ್ರಗಳು ಸರ್ಕಾರದ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡ ಬೇಕು ಎಂದು ರಾಜ್ಯಗಳ ಮುಖ್ಯ ಕಾರ್ಯ ದರ್ಶಿಗಳಿಗೆ ಯುಐಡಿಎಐ ಜೂನ್‌ 28ರಂದು ಬರೆದ ಪತ್ರದಲ್ಲಿ ತಿಳಿಸಿದೆ.ಸರ್ಕಾರದ ನಿಗಾ ಇರುವ ಕಟ್ಟಡದಲ್ಲಿ ಕಚೇರಿ ತೆರೆಯಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ಸಿಗದಿದ್ದರೆ ಅಂತಹ ಕೇಂದ್ರ ಗಳನ್ನು ಮುಚ್ಚಬೇಕು ಎಂದು ಯುಐಡಿಎಐ ಹೇಳಿದೆ.ಸ್ಥಳಾಂತರಕ್ಕೆ ಗಡುವು

* ಸರ್ಕಾರಿ ಕಟ್ಟಡಗಳಲ್ಲಿ ಸ್ಥಳ ಗುರುತಿಸುವುದು ಜುಲೈ 31ರೊಳಗೆ ಪೂರ್ಣಗೊಳ್ಳಬೇಕು

* ಸ್ಥಳಾಂತರ ಪ್ರಕ್ರಿಯೆ ಆಗಸ್ಟ್‌ 31ರೊಳಗೆ ಪೂರ್ಣಗೊಳ್ಳಬೇಕು

* ಸೆಪ್ಟೆಂಬರ್‌ನಿಂದ ಸರ್ಕಾರಿ ಕಚೇರಿಗಳಲ್ಲಿಯೇ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು

* ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಅಥವಾ ಸ್ಥಳೀಯ  ಸಂಸ್ಥೆಗಳ ಕಚೇರಿಗಳಿಗೆ ಸ್ಥಳಾಂತರಿಸಬಹುದು

* ಬ್ಯಾಂಕುಗಳು, ತಾಲ್ಲೂಕು ಕಚೇರಿಗಳು ಅಥವಾ ಸರ್ಕಾರದ ನೇರ ಉಸ್ತುವಾರಿ ಸಾಧ್ಯವಿರುವ ಕಚೇರಿಗಳಿಗೂ ಸ್ಥಳಾಂತರಿಸಬಹುದು

* ತಾಲ್ಲೂಕು ಮಟ್ಟದಲ್ಲಿ ಆರಂಭದಲ್ಲಿ ಕನಿಷ್ಠ ಮೂರು ಕೇಂದ್ರಗಳಿರಬೇಕು. ಮುಂದೆ ಬೇಡಿಕೆ ಆಧಾರದಲ್ಲಿ ಸಂಖ್ಯೆಯನ್ನು ಪರಿಷ್ಕರಿಸಬಹುದು

ಪ್ರತಿಕ್ರಿಯಿಸಿ (+)