ಶುಕ್ರವಾರ, ಡಿಸೆಂಬರ್ 6, 2019
18 °C
​​ಕೆಂಪೇಗೌಡ ಮೆಟ್ರೊ ನಿಲ್ದಾಣ: ಪೊಲೀಸ್‌ ಅಧಿಕಾರಿಗಳ ಸೂಚನೆ ಮೇರೆಗೆ ಕ್ರಮ

ಹಿಂದಿ ನಾಮಫಲಕ ಮರೆಮಾಚಿದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದಿ ನಾಮಫಲಕ ಮರೆಮಾಚಿದ ಸಿಬ್ಬಂದಿ

ಬೆಂಗಳೂರು: ಹಿಂದಿ ಹೇರಿಕೆ ಮೇಲಿನ ಹೋರಾಟ ತೀವ್ರಗೊಂಡ ಕಾರಣ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೊ ಇಂಟರ್‌ಚೇಂಜ್‌ ನಿಲ್ದಾಣದ ಸಿಬ್ಬಂದಿ ಇಲ್ಲಿ ಹಿಂದಿಯಲ್ಲಿ ಬರೆದಿದ್ದ ನಾಮಫಲಕದ ಮೇಲೆ ಸ್ಟಿಕ್ಕರ್‌ ಅಂಟಿಸಿ, ಮರೆಮಾಚುವಂತೆ ಮಾಡಿದ್ದಾರೆ.‘ಮೆಟ್ರೊದಲ್ಲಿ ಹಿಂದಿ ಬಳಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಲು ಸಿದ್ಧತೆ ಮಾಡಿದ್ದಾರೆ. ಅವರು ದಾಳಿ ನಡೆಸಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಮಸ್ಯೆಯಾಗುತ್ತದೆ. ಹಾಗಾಗಿ ನೀವೇ ಹಿಂದಿ ಫಲಕವನ್ನು ಅಳಿಸಿ ಎಂದು ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದರು. ಹಾಗಾಗಿ ಹಿಂದಿ ನಾಮಫಲಕಕ್ಕೆ ಸ್ಟಿಕ್ಕರ್‌ ಅಂಟಿಸಿದ್ದೇವೆ’ ಎಂದು ನಿಲ್ದಾಣದ ಸಿಬ್ಬಂದಿಯೊಬ್ಬರು ತಿಳಿಸಿದರು.ಈ ನಿಲ್ದಾಣದ ಬಳಿ ಮೀಸಲು ಪೊಲೀಸ್‌ ಪಡೆಯ ತುಕಡಿಯನ್ನೂ ನಿಯೋಜಿಸಲಾಗಿದೆ. 

‘ನಮ್ಮ ಮೆಟ್ರೊ’ದಲ್ಲಿ ಅನವಶ್ಯಕವಾಗಿ  ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ #nammametrohindibeda (ನಮ್ಮಮೆಟ್ರೊಹಿಂದಿಬೇಡ), #nammametrokannadasaaku (ನಮ್ಮ ಮೆಟ್ರೊಕನ್ನಡಸಾಕು) ಟ್ವಿಟರ್ ಅಭಿಯಾನ ಆರಂಭವಾಗಿತ್ತು.ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಲು ಟ್ವಿಟರ್ ಅಭಿಯಾನ ನಡೆಸುತ್ತಿರುವ ಬನವಾಸಿ ಬಳಗ ಮನವಿ ಮಾಡಿತ್ತು. ಇದಕ್ಕೆ ಅನೇಕ ಕನ್ನಡ ಸಂಘಟನೆಗಳು ಕೈಜೋಡಿಸಿದ್ದವು. ‘ಹಿಂದಿ ಫಲಕಗಳನ್ನು ತೆರವುಗೊಳಿಸದಿದ್ದರೇ ನಾವೇ ಈ ಕಾರ್ಯ ಮಾಡಬೇಕಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಚ್ಚರಿಸಿದ್ದರು.ಚಾಲಕ ಅಸ್ವಸ್ಥ

‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ  ಕರ್ತವ್ಯ ನಿರತರಾಗಿದ್ದ  ರೈಲು ಚಾಲಕರೊಬ್ಬರು ಭಾನುವಾರ ಅಸ್ವಸ್ಥಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕೆಂಪೇಗೌಡ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸಂಚರಿಸಬೇಕಾದ  ಮೆಟ್ರೊವನ್ನು  ಪೋಕೊ ಟ್ರ್ಯಾಕ್‌ನಲ್ಲಿ (ರೈಲು ಮಾರ್ಗ ಬದಲಾಯಿಸುವ ಸಲುವಾಗಿ ನಿರ್ಮಿಸಿದ ಪ್ರತ್ಯೇಕ ಹಳಿ) ಚಲಾಯಿಸುತ್ತಿದ್ದಾಗ 23 ವರ್ಷದ ಚಾಲಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೂ ಅವರು ಕೆಂಪೇಗೌಡ ನಿಲ್ದಾಣದವರೆಗೆ ತಂದಿದ್ದರು. ಆ ರೈಲಿನಲ್ಲಿ ಪ್ರಯಾಣಿಕರು ಇರಲಿಲ್ಲ.‘ಬಳಲಿದ್ದ ಚಾಲಕ,  ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿ ರೈಲಿನಿಂದ ಇಳಿದರು. ತಕ್ಷಣವೇ ಕುಸಿದುಬಿದ್ದರು. ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೃದಯದ ತೊಂದರೆ ಗಳೇನೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)