ಭಾನುವಾರ, ಡಿಸೆಂಬರ್ 8, 2019
21 °C
ವರ್ತಕ ಸಮೂಹದ ಅನುಮಾನಗಳಿಗೆ ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್ ಆಧಿಯಾ ವಿವರಣೆ

ಜಿಎಸ್‌ಟಿ: 7 ಮಿಥ್ಯೆಗಳಿಗೆ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ: 7 ಮಿಥ್ಯೆಗಳಿಗೆ ಸ್ಪಷ್ಟನೆ

ನವದೆಹಲಿ: ದೇಶದಾದ್ಯಂತ ಸರಕು ಮತ್ತು ಸೇವಾತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಎರಡು ದಿನಗಳಲ್ಲಿಯೇ ವರ್ತಕ ಸಮೂಹದಲ್ಲಿ ಮೂಡಿರುವ ಪ್ರಮುಖ ಅನುಮಾನಗಳನ್ನು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಪರಿಹರಿಸಿದ್ದಾರೆ.ಜಿಎಸ್‌ಟಿ ಕಾರ್ಯವೈಖರಿ ಸ್ವರೂಪದ ಬಗ್ಗೆ ಸರಳ ವಿವರಣೆ ನೀಡಿರುವ ಅವರು, ಸರಣಿ ಟ್ವೀಟ್‌ ಮೂಲಕ ವರ್ತಕರು ಮತ್ತು ವಾಣಿಜ್ಯೋದ್ಯಮಿಗಳ ಮನದಲ್ಲಿ ಮೂಡಿರುವ ಗೊಂದಲ ದೂರ ಮಾಡಲು ಪ್ರಯತ್ನಿಸಿದ್ದಾರೆ. ‘ಗ್ರಾಹಕರು ಯಾವುದೇ ಗಾಳಿಸುದ್ದಿಗೆ ಕಿವಿಗೊಡಬೇಡಿ. ಕಟ್ಟುಕಥೆಗಳನ್ನು ನಂಬಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ‘ಜಿಎಸ್‌ಟಿ ಜಾರಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ಇರಲಿದೆ’ ಎಂದು  ಅವರು ಭರವಸೆ ನೀಡಿದ್ದಾರೆ.‘ವಿದ್ಯುತ್‌, ನೀರು ಪೂರೈಕೆಯಂತಹ ಬಿಲ್‌ಗಳನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸುವ ಬಳಕೆದಾರರು ಎರಡು ಬಾರಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎನ್ನುವುದು ಸಂಪೂರ್ಣ ಆಧಾರರಹಿತವಾಗಿದೆ. ತೆರಿಗೆ ಇಲಾಖೆ ಸಂಪರ್ಕಿಸಿ ಖಚಿತಪಡಿಸಿಕೊಳ್ಳದೆ ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.‘ಜಿಎಸ್‌ಟಿ ಜಾರಿಗೆ ಯಾರೊಬ್ಬರೂ ದೊಡ್ಡ ಕಂಪ್ಯೂಟರ್‌, ಸಾಫ್ಟ್‌ವೇರ್‌ ಅಳವಡಿಸಲು ಹೆಚ್ಚು ವೆಚ್ಚ ಮಾಡಬೇಕಾಗಿಲ್ಲ. ಸರಕು ಪೂರೈಕೆದಾರರು ಮತ್ತು ಖರೀದಿದಾರರು (ಬಿಟುಬಿ) ಕೂಡ ದೊಡ್ಡ ಪ್ರಮಾಣದಲ್ಲಿ  ಐ.ಟಿ ಮೂಲಸೌಕರ್ಯ ಅಳವಡಿಸಿಕೊಳ್ಳಬೇಕಾಗಿಲ್ಲ. ಮೂರು ತಿಂಗಳಿಗೊಮ್ಮೆ ರಿಟರ್ನ್‌ ಸಲ್ಲಿಸಿದರೆ ಸಾಕು. ಸರ್ಕಾರ ಉಚಿತವಾಗಿ ಸಾಫ್ಟ್‌ವೇರ್‌ ನೀಡಲಿದೆ’ ಎಂದಿದ್ದಾರೆ.ನೇರ ತೆರಿಗೆ ಸುಧಾರಣೆ

ಜಿಎಸ್‌ಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ನೇರ ತೆರಿಗೆ ವ್ಯವಸ್ಥೆಯಲ್ಲಿಯೂ ಸಮಗ್ರ ಸುಧಾರಣೆ ತರಲಿದೆ. ‘ನಮ್ಮ ಆದಾಯ ತೆರಿಗೆ ಕಾನೂನುಗಳನ್ನು ಅರ್ಥೈಸಿಕೊಳ್ಳಲು ಮೇಧಾವಿಗಳಿಂದಲೂ ಸಾಧ್ಯವಿಲ್ಲ’ ಎಂದು  ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿರುವುದು, ನೇರ ತೆರಿಗೆ ಸಂಹಿತೆ (ಡಿಟಿಸಿ) ಜಾರಿಗೆ ಬರುವ ಸುಳಿವು ಎಂದೇ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ವ್ಯಾಖ್ಯಾನಿಸುತ್ತಿದ್ದಾರೆ.ಜಿಎಸ್‌ಟಿಗೆ ಪೂರಕವಾಗಿ ‘ಡಿಟಿಸಿ’ ಜಾರಿಗೆ ತರಲು ಹಣಕಾಸಿಗೆ ಸಂಬಂಧಿಸಿದ  ಸಂಸದೀಯ ಸಮಿತಿಯು ಕೂಡ ಸರ್ಕಾರವನ್ನು ಒತ್ತಾಯಿಸಿದೆ.ಸಮಗ್ರ ಧೋರಣೆ ಇರಲಿ

ಜಿಎಸ್‌ಟಿ ಕಾರಣಕ್ಕೆ ಬೆಲೆಗಳು ಏರಿಕೆಯಾಗಲಿವೆ ಎನ್ನುವುದನ್ನು ಮಾಜಿ ರೆವೆನ್ಯೂ ಕಾರ್ಯದರ್ಶಿ ಶಕ್ತಿಕಾಂತ್‌ ದಾಸ್‌ ತಳ್ಳಿಹಾಕಿದ್ದಾರೆ. ‘ಬಳಕೆದಾರರು ಸರಕು ಮತ್ತು ಸೇವೆಗಳ ತೆರಿಗೆ ಹೆಚ್ಚಳವನ್ನು ಒಂದು ಬದಿಯಿಂದ ಮಾತ್ರ ನೋಡುತ್ತಿದ್ದಾರೆ. ಉದ್ದಿಮೆಗೆ  ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸೌಲಭ್ಯ ಒದಗಿಸಿರುವುದನ್ನು ಗಮನಿಸಲ್ಲ. ಇದು  ತೆರಿಗೆ ದರ ಹೆಚ್ಚಳದ ಹೊರೆ ತಗ್ಗಿಸಲಿದೆ. ತೆರಿಗೆ ಸುಧಾರಣಾ ಕ್ರಮವನ್ನು ಸಮಗ್ರವಾಗಿ ನೋಡಬೇಕು’ ಎಂದಿದ್ದಾರೆ.ಅನುಮಾನಗಳಿಗೆ ಪರಿಹಾರ

ಮಿಥ್ಯೆ 1:  ವರ್ತಕರು ಕಂಪ್ಯೂಟರ್‌  ಅಥವಾ ಇಂಟರ್‌ನೆಟ್‌ ಮೂಲಕವೇ ಎಲ್ಲ ಬೆಲೆಪಟ್ಟಿಗಳನ್ನು (ಇನ್‌ವೈಸ್‌) ಸಿದ್ಧಪಡಿಸಬೇಕು.

ವಸ್ತುಸ್ಥಿತಿ: ಕಂಪ್ಯೂಟರ್‌, ಇಂಟರ್‌ನೆಟ್‌ ಇಲ್ಲದೆಯೂ ಎಕ್ಸೆಲ್‌ ಮಾದರಿಗಳಲ್ಲೂ ಸರಕುಪಟ್ಟಿ ಸಿದ್ಧಪಡಿಸಬಹುದು.

ಮಿಥ್ಯೆ 2: ಜಿಎಸ್‌ಟಿಯಡಿ ವಹಿವಾಟು ನಿರ್ವಹಿಸಲು ನಿರಂತರವಾಗಿ ಇಂಟರ್‌ನೆಟ್‌ ಬಳಸುತ್ತಿರಬೇಕು.

ವಸ್ತುಸ್ಥಿತಿ:  ಪ್ರತಿ ತಿಂಗಳೂ ಲೆಕ್ಕಪತ್ರ (ರಿಟರ್ನ್‌) ಸಲ್ಲಿಸುವಾಗ ಮಾತ್ರ ಇಂಟರ್‌ನೆಟ್‌ನ ಅಗತ್ಯ ಇರಲಿದೆ.ಮಿಥ್ಯೆ 3: ನನ್ನ ಬಳಿ ತಾತ್ಕಾಲಿಕ ಗುರುತಿನ ಸಂಖ್ಯೆ (ಐ.ಡಿ) ಇದೆ. ವಹಿವಾಟು ನಿರ್ವಹಿಸಲು ನಾನು ಅಂತಿಮ ಐ.ಡಿ ಎದುರು ನೋಡುತ್ತಿರುವೆ.

ವಸ್ತುಸ್ಥಿತಿ: ತಾತ್ಕಾಲಿಕ ಐ.ಡಿಯೇ ನಿಮ್ಮ ಜಿಎಸ್‌ಟಿಎನ್‌ ಅಂತಿಮ ಸಂಖ್ಯೆಯಾಗಿದೆ. ಯಾವುದೇ ಹಿಂಜರಿಕೆ ಇಲ್ಲದೆ ವಹಿವಾಟು ಮುಂದುವರೆಸಿ.ಮಿಥ್ಯೆ 4: ನನ್ನ ವಹಿವಾಟಿನ ಸರಕಿಗೆ ಈ ಹಿಂದೆ ವಿನಾಯ್ತಿ ಇತ್ತು. ಹೀಗಾಗಿ ವಹಿವಾಟು ಮುಂದುವರೆಸಲು ನನಗೆ ಹೊಸ ನೋಂದಣಿ ಸಂಖ್ಯೆ ತುರ್ತಾಗಿ ಬೇಕಾಗಿದೆ.

ವಸ್ತುಸ್ಥಿತಿ: ನೀವು ಈಗಲೂ ವಹಿವಾಟು ಮುಂದುವರೆಸಬಹುದು. 30 ದಿನಗಳಲ್ಲಿ ನಿಮ್ಮ ನೋಂದಣಿಯಾಗಲಿದೆ.ಮಿಥ್ಯೆ 5: ಪ್ರತಿ ತಿಂಗಳೂ ಮೂರು ರಿಟರ್ನ್ಸ್‌ಗಳನ್ನು ಭರ್ತಿ ಮಾಡಬೇಕು.

ವಸ್ತುಸ್ಥಿತಿ: ಮೂರು ಭಾಗಗಳನ್ನು ಒಳಗೊಂಡಿರುವ ಒಂದೇ ರಿಟರ್ನ್ ಸಲ್ಲಿಸಿದರೆ ಸಾಕು. ಮೊದಲ ಭಾಗವನ್ನು  ಡೀಲರ್‌ ಭರ್ತಿ ಮಾಡಿದರೆ ಸಾಕು. ಉಳಿದ ಎರಡು ಭಾಗಗಳನ್ನು ಕಂಪ್ಯೂಟರ್ ಸ್ವಯಂಚಾಲಿತವಾಗಿ ಭರ್ತಿ ಮಾಡಿಕೊಳ್ಳಲಿದೆ.ಮಿಥ್ಯೆ 6: ಸಣ್ಣ ವರ್ತಕರೂ ಬೆಲೆಪಟ್ಟಿ ಗೆ ಅನುಗುಣವಾಗಿ  ರಿಟರ್ನ್‌ನಲ್ಲಿ ವಿವರಣೆ ನೀಡಬೇಕು.

ವಸ್ತುಸ್ಥಿತಿ: ಗ್ರಾಹಕರಿಗೆ ಸರಕು ಮಾರಾಟ ಮಾಡುವ (ಬಿಟುಸಿ) ಚಿಲ್ಲರೆ ವಹಿವಾಟುದಾರರು  ಒಟ್ಟಾರೆ ಮಾರಾಟದ ಸಂಕ್ಷಿಪ್ತ ವಿವರಣೆ ನೀಡಿದರೆ ಸಾಕು.ಮಿಥ್ಯೆ 7: ಈ ಹಿಂದಿನ ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್‌) ಹೋಲಿಸಿದರೆ, ಜಿಎಸ್‌ಟಿ ದರಗಳು ದುಬಾರಿಯಾಗಿವೆ.

ವಸ್ತುಸ್ಥಿತಿ: ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ಅಬಕಾರಿ ಮತ್ತು ಇತರ ತೆರಿಗೆಗಳು ಮರೆಮಾಚಿದ ಸ್ವರೂಪದಲ್ಲಿ ಇದ್ದವು. ಜಿಎಸ್‌ಟಿಯಲ್ಲಿ ಅವೆಲ್ಲವೂ ವಿಲೀನಗೊಂಡಿವೆ. ಹೀಗಾಗಿ ತೆರಿಗೆ ದರಗಳು ದುಬಾರಿ ಎನ್ನುವ ಭಾವನೆ ಮೂಡಿಸಿವೆ.

ಪ್ರತಿಕ್ರಿಯಿಸಿ (+)