ಶುಕ್ರವಾರ, ಡಿಸೆಂಬರ್ 13, 2019
17 °C

ಸ್ಟಾಕ್ ಕ್ಲಿಯರ್‌ಗಾಗಿ ಹಳೆಯ ದರದ ಲೇಬಲ್

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಸ್ಟಾಕ್ ಕ್ಲಿಯರ್‌ಗಾಗಿ ಹಳೆಯ ದರದ ಲೇಬಲ್

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರಿಕೃತ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್‌ಟಿ) ಕೆಲ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಿಗೆ ವರವಾಗಿ ಪರಿಣಮಿಸಿದೆ. ವರ್ಷದಿಂದ ಮಾರಾಟವಾಗದೆ ಉಗ್ರಾಣಗಳಲ್ಲಿ ಉಳಿದುಕೊಂಡಿರುವ ಗೃಹ ಬಳಕೆಯ ವಸ್ತುಗಳನ್ನು ಒಮ್ಮೆಲೆ ಖಾಲಿ ಮಾಡಿಕೊಳ್ಳಲು ಮುಂದಾಗಿರುವ ಮಳಿಗೆಗಳು, ಈ ವಸ್ತುಗಳಿಗೆ ಜಿಎಸ್‌ಟಿ ಪೂರ್ವ ಬೆಲೆಯ ಲೆಬಲ್ ಹಚ್ಚಿ ಮಾರಾಟ ಮಾಡುತ್ತಿವೆ.

ಬಿಗ್‌ ಬಜಾರ್, ಗಿರಿಯಾಸ್‌, ರಿಲಯನ್ಸ್ ಸೇರಿದಂತೆ ಕೆಲ ಗೃಹೋಪಯೋಗಿ ಮಾರಾಟ ವಸ್ತುಗಳ ಮಳಿಗೆಗಳು ಇಂತಹದ್ದೊಂದು ಸುಲಭದ ಹಾದಿ ಹಿಡಿದಿವೆ. ಸಾಮಾನ್ಯವಾಗಿ ಇಂತಹ ವಾಣಿಜ್ಯ ಮಳಿಗೆಗಳು ತಯಾರಿಕಾ ಕಂಪೆನಿಗಳಿಂದ ಸಗಟು ದರದಲ್ಲಿ ವಸ್ತುಗಳನ್ನು ಖರೀದಿಸುತ್ತವೆ. ಆದರೆ, ಆ ಪೈಕಿ ಅವಧಿಗೆ ಮುಂಚೆ ಮಾರಾಟವಾಗುವ ವಸ್ತುಗಳು ಕೆಲವು ಮಾತ್ರ. ಫ್ರಿಡ್ಜ್, ವಾಷಿಂಗ್ ಮಷಿನ್, ಎಲ್‌ಇಡಿ ಟಿ.ವಿ, ಐರನ್ ಬಾಕ್ಸ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು ಮಾರಾಟವಾಗುವುದು ಸ್ವಲ್ಪ ತಡವಾಗುತ್ತದೆ.

ಈ ರೀತಿ ಉಳಿದುಕೊಳ್ಳುವ ವಸ್ತುಗಳ ಶೀಘ್ರ ಮಾರಾಟಕ್ಕೆ ಇದೀಗ ಜಿಎಸ್‌ಟಿ ವರವಾದಂತಿದೆ. ಜಿಎಸ್‌ಟಿ ಜಾರಿ ಬಳಿಕ, ಗೃಹೋಪಯೋಗಿ ಬಳಕೆ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಗಗನಕ್ಕೇರುತ್ತದೆ ಎಂಬ ಜನರ ಆತಂಕ ವ್ಯಾಪಾರಿಗಳಿಗೆ ಬಂಡವಾಳವಾಗಿದೆ. ಅದಕ್ಕಾಗಿಯೇ, ‘ಜಿಎಸ್‌ಟಿ ಪೂರ್ವ ಬೆಲೆ’ ಎಂದು ಜಾಹೀರಾತು ಕೊಟ್ಟು, ಉಗ್ರಾಣದಲ್ಲಿ ದೂಳು ತಿನ್ನುತ್ತಿರುವ ವಸ್ತುಗಳನ್ನು ಖಾಲಿ ಮಾಡಿಕೊಳ್ಳುತ್ತಿವೆ.

ವ್ಯತ್ಯಾಸವಿಲ್ಲ:ದೊಡ್ಡ ಮಳಿಗೆಗಳು ಸ್ಟಾಕ್ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಹಬ್ಬ–ಹರಿದಿನ ಸೇರಿದಂತೆ ಕೆಲ ವಿಶೇಷ ದಿನಗಳಲ್ಲಿ ರಿಯಾಯ್ತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವುದು ಸಾಮಾನ್ಯ. ಈಗ ಅದೇ ರೀತಿಯ ರಿಯಾಯ್ತಿ ಮಾರಾಟಕ್ಕೆ ಜಿಎಸ್‌ಟಿ ಪೂರ್ವ ಬೆಲೆಯಲ್ಲಿ ಮಾರಾಟ ಎಂಬ ಲೆಬಲ್ ಅಂಟಿಸಿ, ಜನರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿವೆ.

‘ಟಿ.ವಿ, ಮೊಬೈಲ್‌ಗಳಾದಿಯಾಗಿ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳ ಪೈಕಿ, ವರ್ಷಕ್ಕೆ ಕಡಿಮೆ ಎಂದರೂ ಎರಡು ಮಾಡೆಲ್‌ಗಳು ಬರುತ್ತವೆ. ಆಗ, ಮೊದಲಿನ ಮಾಡೆಲ್ ಹಳೆಯದಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಕಂಪೆನಿಗಳು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಗಾರ್ಮೆಂಟ್ ಉದ್ಯಮಕ್ಕೂ ಈ ತಂತ್ರ ಹೊಸದೇನಲ್ಲ. ಕೆಲ ಬ್ರಾಂಡೆಡ್ ಕಂಪೆನಿಗಳು ಮುಂದುವರಿದ ನಗರಗಳಲ್ಲಿ ಔಟ್‌ಲೆಟ್ ಮಳಿಗೆಗಳನ್ನು ತೆರೆದು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುತ್ತಾರೆ’ ಎಂದು ಹುಬ್ಬಳ್ಳಿಯ ಗೃಹೋಪಯೋಗಿ ವಸ್ತುಗಳ ಮಳಿಗೆಯ ಮಾರುಕಟ್ಟೆ ವ್ಯವಸ್ಥಾಪಕ ಹರ್ಷವರ್ಧನ್  ಹೇಳಿದರು.

‘ಜಿಎಸ್‌ಟಿ’ ಬಿಲ್‌: ಜಿಎಸ್‌ಟಿ ಜಾರಿ ಯಾದ ತಕ್ಷಣವೇ ಪ್ರತಿ ವಸ್ತುಗಳ ಬೆಲೆಯಲ್ಲಿ ವ್ಯತ್ಯಯವಾಗುತ್ತದೆ ಎನ್ನಲಾಗಿತ್ತು. ಆದರೆ, ಬಹುತೇಕ ಮಳಿಗೆಗಳಲ್ಲಿ ದರದಲ್ಲಿ ಅಂತಹ ವ್ಯತ್ಯಾಸ ಕಂಡುಬಂದಿಲ್ಲವಾದರೂ, ಗ್ರಾಹಕರಿಗೆ ನೀಡು ವ ಬಿಲ್‌ಗಳಲ್ಲಿ ಮಾತ್ರ ಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ತೆರಿಗೆಯ ವಿವರಗಳಿವೆ.

‘ಜಿಎಸ್‌ಟಿ ಜಾರಿಗೆ ಮುಂಚೆ ಹಾಗೂ ಜಾರಿ ನಂತರ ಬೆಲೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ, ಕಂಪೆನಿಯಿಂದ ಯಾವುದೇ ನಿರ್ದೇಶನ ಬಂದಿಲ್ಲ. ಮುಂಚೆ ಎಷ್ಟು ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೊ, ಈಗಲೂ ಅದೇ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ಆದರೆ, ಜಿಎಸ್‌ಟಿ ತೆರಿಗೆ ಕಡಿತ ಮಾಡಿಕೊಂಡು ಬಿಲ್ ನೀಡುತ್ತಿದ್ದೇವೆ. ಇನ್ನು ಮೂರ್ನಾಲ್ಕು ದಿನ ಹೀಗೆ ನಡೆಯುವ ಸಾಧ್ಯತೆ ಇದ್ದು, ಹೊಸ ಸ್ಟಾಕ್ ಬಂದ ಬಳಿಕ ಜಿಎಸ್‌ಟಿ ಪ್ರಕಾರ, ವಸ್ತುಗಳ ಬೆಲೆ ಏರಿಕೆಯಾಗಲಿದೆ’ ಎನ್ನುತ್ತಾರೆ ರಿಲಯನ್ಸ್ ಡಿಜಿಟಲ್‌ನ ಮಾರಾಟ ಪ್ರತಿನಿಧಿ.

ಮುಗಿಬಿದ್ದು ಖರೀದಿಸಿದರು

‘ಜೂನ್ ತಿಂಗಳಾಂತ್ಯದಲ್ಲಿ ಮಳಿಗೆಗೆ ಬಂದ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಎಲ್‌ಇಡಿ ಟಿ.ವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿ ದಂತೆ ಉಗ್ರಾಣದಲ್ಲಿ ಇದ್ದ ಹಲವು ವಸ್ತುಗಳು ಮಾರಾಟ ವಾದವು. ಗ್ರಾಹಕರು ಹೆಚ್ಚಾಗಿದ್ದರಿಂದ, ರಾತ್ರಿಯೂ ಮಳಿಗೆಯ ಬಾಗಿಲನ್ನು ಒಂದೂವರೆ ತಾಸು ತಡವಾಗಿ ಮುಚ್ಚಬೇಕಾಯಿತು.

ಒಂದೇ ವಾರದಲ್ಲಿ ಒಂದು ತಿಂಗಳಲ್ಲಿ ಆಗುವಷ್ಟು ವ್ಯಾಪಾರವಾಯಿತು’ ಎಂದು ಹೆಸರು ಹೇಳಲಿಚ್ಛಿಸದ ಗೃಹೋಪಯೋಗಿ ವಸ್ತುಗಳ ಮಳಿಗೆಯ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)