ಶುಕ್ರವಾರ, ಡಿಸೆಂಬರ್ 6, 2019
17 °C

‘ಇ–ಪೇಮೆಂಟ್ ವ್ಯವಸ್ಥೆ ಶೀಘ್ರ ಜಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇ–ಪೇಮೆಂಟ್ ವ್ಯವಸ್ಥೆ ಶೀಘ್ರ ಜಾರಿ’

ಗದಗ: ‘ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಸ್ಕರಣಾ ಘಟಕ ಹಾಗೂ ಗೋದಾ ಮುಗಳನ್ನು ಪ್ರಾರಂಭಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಎ.ಪಿ.ಎಂ.ಸಿ ಆವರಣದಲ್ಲಿ ಧಾನ್ಯಗಳ ಶುದ್ಧೀಕರಣ ಘಟಕ ಹಾಗೂ ಗೋದಾಮುಗಳ ಉದ್ಘಾಟನೆ ಹಾಗೂ ಹೂವಿನ ಮಾರುಕಟ್ಟೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಶನಿವಾರ ನೆರವೇರಿಸಿ ಅವರು ಮಾತನಾಡಿದರು.

ಗದಗ ಎ.ಪಿ.ಎಂ.ಸಿ ರೈತರ ಪರವಾ ಗಿದ್ದು, ಇಲ್ಲಿ ನಡೆಯುವ ಇ–ಟೆಂಡರ್, ಗ್ರೇಡಿಂಗ್ ವ್ಯವಸ್ಥೆ ರಾಜ್ಯಕ್ಕೆ ಮಾದರಿ ಆಗಿದೆ. ಈ ಕುರಿತು ರಾಷ್ಟ್ರಮಟ್ಟದ ಹಿರಿಯ ಅಧಿಕಾರಿಗಳ ತಂಡ ಅಧ್ಯಯನ ನಡೆಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಶೀಘ್ರದಲ್ಲೇ ಇ–ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಜಿಲ್ಲೆ ಮತ್ತೊಂದು ಮೈಲಿಗಲ್ಲಿನತ್ತ ದಾಪು ಗಾಲು ಇಡಲಿದೆ’ ಎಂದರು.

‘ರಾಜ್ಯ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಒಟ್ಟು 1.50 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ದುಡಿಯುವ ಕೈಗಳಿಗೆ ನರೇಗಾ ಯೋಜನೆಯಡಿ ಉದ್ಯೋಗ, ಪಶು ಭಾಗ್ಯ ಯೋಜನೆಯಡಿ ಪಶು ಸಂಪತ್ತು ಹೆಚ್ಚಿಸುವ ಮೂಲಕ ಕ್ಷೀರಧಾರೆ ಯೋಜನೆಯಡಿ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತ ಕುಟುಂಬಕ್ಕೆ ದೊರಕುವಂತೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಈಚಿನ ದಿನಗಳಲ್ಲಿ ರೈತರ ಬದುಕು ಅತ್ಯಂತ ಕಷ್ಟಕರವಾಗಿದೆ. ರೈತರು ಬೆಳೆದ ಬೆಳೆಗಳಿಗೆ ತಾವೇ ದರ ನಿಗದಿ ಮಾಡುವಂತಹ ಶಕ್ತಿ ತುಂಬುವ ಕಾರ್ಯ ವನ್ನು ಸರ್ಕಾರ ಮಾಡುತ್ತಿದೆ. ಗದಗ ಎ.ಪಿ.ಎಂ.ಸಿ ಇಂದು ಯಾಂತ್ರೀಕೃತ ವಾಗಿದ್ದು, ರೈತರು ಬೆಳೆದಂತಹ ಬೆಳೆ ಶುದ್ಧೀಕರಿಸಿ ಉತ್ತಮ ಬೆಲೆಗೆ ಮಾರಾಟ ಮಾಡುವ ಮೂಲಕ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ರೈತರು ತಮ್ಮ ಉತ್ಪನ್ನ ಮಾರಾಟ ಮಾಡುವ ಸಮಯದಲ್ಲಿ ಆಗುತ್ತಿರುವ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಇ–ಪೇಮೆಂಟ್ ವ್ಯವಸ್ಥೆ ಯನ್ನು ಜಾರಿಗೆ ತರಲಾಗುವುದು. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ನಿಗದಿತ ಸಮಯದಲ್ಲಿ ಮಾರಾಟ ಮಾಡಲು ಅನುಕೂಲವಾಗಲಿದೆ’ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ತಿಳಿಸಿದರು.

ಶಾಸಕ ರಾಮಕೃಷ್ಣ ದೊಡಮನಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ಸದಸ್ಯ ಸಿದ್ದು ಪಾಟೀಲ, ನರಗುಂದ ಎ.ಪಿ.ಎಂ.ಸಿ ಅಧ್ಯಕ್ಷ ನಾಗಲಿಂಗರೆಡ್ಡಿ ಮೇಟಿ, ಗದಗ ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಉಪಾಧ್ಯಕ್ಷ ಎನ್.ಎಸ್.ಹಿರೇಮನಿ ಪಾಟೀಲ, ಕಾರ್ಯದರ್ಶಿ ಎಂ.ನಂಜುಡ ಸ್ವಾಮಿ ಇದ್ದರು.

* * 

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಶೀಘ್ರ ಮಳೆ ಸುರಿಯುವಂತಾಗಲು ಜುಲೈ ಅಂತ್ಯದೊಳಗೆ ರಾಜ್ಯದಲ್ಲಿ ಮೋಡ ಬಿತ್ತನೆ ಪ್ರಾರಂಭಿಸಲಾಗುವುದು

ಎಚ್.ಕೆ.ಪಾಟೀಲ

ಗ್ರಾಮೀಣಾಭಿವೃದ್ಧಿ ಸಚಿವ

ಪ್ರತಿಕ್ರಿಯಿಸಿ (+)