ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌.ಎಚ್‌– 66ರಲ್ಲಿ ಐಆರ್‌ಬಿಯಿಂದ ಸುರಕ್ಷಾ ಕ್ರಮ

Last Updated 3 ಜುಲೈ 2017, 5:53 IST
ಅಕ್ಷರ ಗಾತ್ರ

ಕಾರವಾರ: ಕುಮಟಾ ತಾಲ್ಲೂಕಿನ ತಂಡ್ರಕುಳಿ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮುಂಬೈನ ಐಆರ್‌ಬಿ ಕಂಪೆನಿಯು ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಹದಿನೈದು ದಿನಗಳ ಹಿಂದೆ ತಂಡ್ರಕುಳಿಯಲ್ಲಿ ಹೆದ್ದಾರಿಯಂಚಿನ ಗುಡ್ಡ ಕುಸಿದು ಮೂವರು ಮಕ್ಕಳು ದಾರುಣವಾಗಿ ಸಾವಿಗೀಡಾಗಿದ್ದರು.

ಬಳಿಕ ಸಭೆ ನಡೆಸಿದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ‘ಹೆದ್ದಾರಿಯಲ್ಲಿ ಯಾವುದೇ ಅನಾಹುತ ಆಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಚತುಷ್ಪಥ ಕಾಮಗಾರಿ ಕೈಗೊಂಡಿರುವ ಐಆರ್‌ಬಿ ಕಂಪೆನಿಗೆ ಸ್ಪಷ್ಪ ಸೂಚನೆ ನೀಡಿದ್ದರು. ಒಂದು ವೇಳೆ ಇನ್ನೊಮ್ಮೆ ಇಂಥ ದುರಂತ ಘಟಿಸಿದರೆ ಕಂಪೆನಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಅವರು ಎಚ್ಚರಿಸಿದ್ದರು.

ಕೈಗೊಂಡ ಕ್ರಮಗಳೇನು?: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕಳೆದ ಎರಡು ವರ್ಷಗಳಿಂದ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಹಲವೆಡೆ ಹೆದ್ದಾರಿ ಅಂಚಿನ ಗುಡ್ಡವನ್ನು ಬಗೆದು ರಸ್ತೆ ವಿಸ್ತರಣೆ ಮಾಡಲಾಗಿದೆ. ಇನ್ನು ಕೆಲವಡೆ ಈ ಕಾರ್ಯ ಭರದಿಂದ ಸಾಗಿದೆ. ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಅಲ್ಲದೇ 100 ಮೀಟರ್‌ ಅಂತರಕ್ಕೆ ನಾಲ್ಕು ಅಡಿ ಎತ್ತರದ ಸಣ್ಣ ಪ್ಲಾಸ್ಟಿಕ್‌ ಪೈಪನ್ನು ಅಳವಡಿಸಿ ಅದರ ತುದಿಯಲ್ಲಿ ಪ್ರತಿಫಲಕಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ಸಂಚಾರ ಮಾಡುವ ವಾಹನ ಸವಾರರಿಗೆ ಹೆದ್ದಾರಿ ಮಾರ್ಗವನ್ನು ತಿಳಿಯಲು ಇದು ಸಹಕಾರಿಯಾಗಿದೆ. ತಿರುವು ಇದ್ದ ಸ್ಥಳದಲ್ಲಿ ಎಚ್ಚರಿಕೆ ದೀಪಗಳನ್ನು ಅಳವಡಿಸಲಾಗಿದೆ.

ರಕ್ಷಣಾ ತಂಡ ಸನ್ನದ್ಧ: ಜಿಲ್ಲೆಯ ಅಂಕೋಲಾ, ಮಾದನಗೇರಿ, ಬೇಂಗ್ರೆಯ ಹೆದ್ದಾರಿ ಸಮೀಪದ ರಕ್ಷಣಾ ತಂಡಗಳನ್ನು ಇರಿಸಲಾಗಿದೆ. ರಕ್ಷಣಾ ಸಿಬ್ಬಂದಿ ಜತೆಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಒದಗಿಸಲಾಗಿದ್ದು, ದಿನದ 24 ಗಂಟೆಗಳು ರಕ್ಷಣಾ ಕಾರ್ಯಕ್ಕೆ ಸನ್ನದ್ಧವಾಗಿದೆ.

‘ಹೆದ್ದಾರಿಯಲ್ಲಿನ ಅಪಾಯಕಾರಿ ಸ್ಥಳಗಳ ಬಳಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಜುಲೈ 15ರೊಳಗೆ ಇದು ಪೂರ್ಣಗೊಳ್ಳಲಿದೆ’ ಎಂದು ಐಆರ್‌ಬಿ ಕಂಪೆನಿಯ ಮಾಡರ್ನ್‌ ರೋಡ್‌ ಮೇಕರ್ಸ್‌ ಪ್ರೈವೇಟ್‌ ಲಿಮಿಟೆಡ್‌ ತಿಳಿಸಿದೆ.

* * 

ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಐಆರ್‌ಬಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಇದರಿಂದ ವಾಹನ ಸವಾರರಿಗೆ ಅನುಕೂಲವಾಗಿದೆ
ಎಚ್‌.ಪ್ರಸನ್ನ
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT