ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನದಿಂದ ಬಡತನ ಹೆಚ್ಚಳ: ಆತಂಕ

ಮದ್ಯವರ್ಜನ ಶಿಬಿರದಲ್ಲಿ ಸಾಹಿತಿ ರಘುನಾಥ ಸಲಹೆ
Last Updated 3 ಜುಲೈ 2017, 5:55 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮದ್ಯಪಾನ ಬಡವರ ಬಡತನ ಹೆಚ್ಚಿಸುತ್ತದೆ. ಮದ್ಯ ವ್ಯಸನಿಗಳು ಅನಾರೋಗ್ಯ ಪೀಡಿತರಾಗಿ, ಕುಟುಂಬವನ್ನು ಬೀದಿಪಾಲು ಮಾಡುವ ಅಪಾಯ ಇರುವುದರಿಂದ, ಮದ್ಯಪಾನ ಮಾಡುವ ಚಟವನ್ನು ಬಿಡಬೇಕು ಎಂದು ಸಾಹಿತಿ ಸ. ರಘುನಾಥ ಹೇಳಿದರು.

ತಾಲ್ಲೂಕಿನ ಚಿರುವನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ಸಭಾ ಭವನದಲ್ಲಿ  ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ 1071ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಯಾರಾದರೂ ಮದ್ಯ ಕೊಡಲು ಬಂದರೆ, ಜನರು ಕುಡಿಯುವ ನೀರು ಕೊಡುವಂತೆ ಕೇಳಬೇಕು. ಅನ್ನ, ವಿದ್ಯುತ್‌, ರಸ್ತೆ, ಶೌಚಾಲಯ ಕೊಡುವಂತೆ ಆಗ್ರಹಿಸಬೇಕು. ಕುಡಿತ ಕಲಿಸುವ ವ್ಯಕ್ತಿಗಳನ್ನು ನಿರಾಕರಿಸಬೇಕು. ಆದರೆ, ಮದ್ಯ ವಿತರಿಸಲು ಮುಂದಾಗುವ ವ್ಯಕ್ತಿಗಳೇ ಮದ್ಯಪಾನ ಕೂಡದು ಎಂದು ಹೇಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು.

ಮದ್ಯಪಾನ ಮಾಡುವುದು ಬಡವರ ಜೀವನ ಶೈಲಿಯಲ್ಲ. ಆದರೆ ಕೆಲವರು ಅಮಲಿನ ಗುಂಗಿಗೆ ಆಕರ್ಷಿತರಾಗುತ್ತಾರೆ. ಇದರಿಂದ ಬಡತನ ಹಾಗೂ ಕಷ್ಟ ಹೆಚ್ಚುತ್ತದೆ. ಆದ್ದರಿಂದ ಕುಡಿತ ಬಿಟ್ಟು ಕೆರೆ, ಕುಂಟೆಗಳಲ್ಲಿ ನೀರು ಮಳೆ ನೀರು ನಿಲ್ಲುವಂತೆ ಮಾಡಬೇಕು. ಹೊಲಗದ್ದೆಗಳಿಗೆ ಹಿಂದಿರುಗಬೇಕು. ಮಡದಿ ಮಕ್ಕಳೊಂದಿಗೆ ಕಾಲ ಕಳೆಯಬೇಕು. ಮತ ಕೇಳುವವರು ಬಂದು ಹೊಲದ ಬದುವಿನ ಮೇಲೆ ನಿಲ್ಲಬೇಕು. ರೈತನ ಕೈ ಬೇಡುವ ಕೈ ಆಗಬಾರದು. ಕೊಡುವ ಕೈ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಶಿಬಿರದಲ್ಲಿ 72 ಶಿಬಿರಾರ್ಥಿಗಳಿಗೆ ಕುಟುಂಬದ ಸದಸ್ಯರೊಂದಿಗೆ ಸಹಪಂಕ್ತಿ ಭೋಜನ ಏರ್ಪಡಿಸಲಾಗಿತ್ತು. ಮೊದಲ ತುತ್ತನ್ನು ಅವರವರ ಕುಟುಂಬದ ಸದಸ್ಯರು ಪರಸ್ಪರ ತಿನ್ನಿಸುವ ಮೂಲಕ, ಪ್ರೀತಿಯ ಪರಿಸರವನ್ನು ಮನೆಯಲ್ಲೂ ಕಾಯ್ದುಕೊಳ್ಳುವ ಸಂದೇಶ ನೀಡಲಾಯಿತು.

ಕೋಚಿಮುಲ್‌ ಮಾಜಿ ಅಧ್ಯಕ್ಷ ಚಿರುವನಹಳ್ಳಿ ಲಕ್ಷ್ಮಣಗೌಡ, ಶಿಬಿರಾಧಿಕಾರಿ ನಂದಕುಮಾರ್‌, ಕ್ಷೇತ್ರ ಯೋಜನಾಧಿಕಾರಿ ಸುರೇಶ್‌ ಶೆಟ್ಟಿ, ಮೇಲ್ವಿಚಾರಕ ನಾಗರಾಜ ಭಂಡಾರಿ, ಸೇವಾ ಪ್ರತಿನಿಧಿ ನರಸಿಂಹಮೂರ್ತಿ, ಕಸಬಾ ಮೇಲ್ವಿಚಾರಕ ನಾಗರಾಜ್‌ ಶಿಬಿರದಲ್ಲಿ ಇದ್ದರು.

ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಳ್ತಂಗಡಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಕಸಬಾ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ.

ತಾಲ್ಲೂಕು ಕೃಷಿಕ ಸಮಾಜ, ನಂಬಿಹಳ್ಳಿ, ಚಲ್ದಿಗಾನಹಳ್ಳಿ, ಜೆ.ತಿಮ್ಮಸಂದ್ರ, ದಳಸನೂರು ಗ್ರಾಮ ಪಂಚಾಯಿತಿಗಳು, ಕಸಬಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು

**

ವ್ಯಸನ ವ್ಯಕ್ತಿತ್ವದ ಜೊತೆಗೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ವ್ಯಸನ ಮುಕ್ತ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.
–ಸ. ರಘುನಾಥ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT