ಬುಧವಾರ, ಡಿಸೆಂಬರ್ 11, 2019
25 °C
ನೈರ್ಮಲ್ಯ ಸಮಸ್ಯೆ: ಬಡಾವಣೆಗಳಲ್ಲಿ ವಿಪರೀತ ಸೊಳ್ಳೆ ಕಾಟ, ಅನಾರೋಗ್ಯದಿಂದ ತತ್ತರಿಸಿದ ಜನರು

ನಗರದಲ್ಲಿ ಡೆಂಗಿ– ಚಿಕುನ್ ಗುನ್ಯಾ ರುದ್ರನರ್ತನ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ನಗರದಲ್ಲಿ ಡೆಂಗಿ– ಚಿಕುನ್ ಗುನ್ಯಾ ರುದ್ರನರ್ತನ

ಕೋಲಾರ: ನಗರದಲ್ಲಿ ಮಳೆ ಸುರಿದಿದ್ದೆ ತಡ ಡೆಂಗಿ, ಚಿಕುನ್‌ ಗುನ್ಯಾ ಕಾಯಿಲೆಗಳ ರುದ್ರನರ್ತನ ಶುರುವಾಗಿದೆ. ನಗರವಾಸಿಗಳಲ್ಲಿ ಜ್ವರ, ಶೀತ, ತಲೆನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವಿನ ಲಕ್ಷಣ ಕಾಣಿಸಿಕೊಂಡಿದ್ದು, ಎಲ್ಲೆಡೆ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಕಳೆದ ತಿಂಗಳು ಮಳೆಯಾಗಿದ್ದರಿಂದ ಗುಂಡಿ, ಚರಂಡಿ ಹಾಗೂ ಕೊಳಚೆ ಪ್ರದೇಶದಲ್ಲಿ ನೀರು ನಿಂತು ನೈರ್ಮಲ್ಯ ಸಮಸ್ಯೆ ಎದುರಾಗಿದೆ. ರಸ್ತೆಗಳ ಬದಿಯಲ್ಲಿ ವಿಲೇವಾರಿಯಾಗದೆ ಬಿದ್ದಿರುವ ತ್ಯಾಜ್ಯದ ಜತೆ ಮಳೆ ನೀರು ಸೇರಿ ಕಸ ಸ್ಥಳದಲ್ಲೇ ಕೊಳೆಯಲಾರಂಭಿಸಿದೆ. ಬಡಾವಣೆಗಳಲ್ಲಿ ಸೊಳ್ಳೆ ಕಾಟ ಹೆಚ್ಚಿದ್ದು, ಜ್ವರದಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.

ನಗರದ ಕಾರಂಜಿಕಟ್ಟೆ, ರೆಹಮತ್‌ನಗರ, ಗಾಂಧಿನಗರ, ಕೀಲುಕೋಟೆ, ಜಯನಗರ, ಕುರುಬರಪೇಟೆ, ಕೋಗಿಲಹಳ್ಳಿ, ಕನಕಪಾಳ್ಯ, ವಿನೋಬನಗರ ಬಡಾವಣೆಗಳಲ್ಲಿ ಕಳೆದೊಂದು ವಾರದಲ್ಲಿ ಸಾಕಷ್ಟು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಕಾಯಿಲೆ ಕಾಣಿಸಿಕೊಂಡಿದೆ.

ಈ ವಿಷಯ ತಿಳಿದ ಜಿಲ್ಲಾ ಕಣ್ಗಾವಲು ಘಟಕ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಬಡಾವಣೆಗಳಿಗೆ ಪ್ರತಿನಿತ್ಯ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಅಲ್ಲದೇ, ಅನಾರೋಗ್ಯಪೀಡಿತರ ರಕ್ತಮಾದರಿ ಸಂಗ್ರಹಿಸುತ್ತಿದ್ದಾರೆ.

ಲಕ್ಷಣಗಳೇನು?: ಈಡಿಸ್‌ ಇಜಿಫ್ಟ್‌ ಎಂಬ ಸೊಳ್ಳೆಯಿಂದ ಡೆಂಗಿ ಜ್ವರ ಬರುತ್ತದೆ. ಸೋಂಕುಪೀಡಿತವಾದ ಈ ಸೊಳ್ಳೆಯು ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಯು ಮನುಷ್ಯರಿಗೆ ಹಗಲು ವೇಳೆಯಲ್ಲಿ ಕಚ್ಚುತ್ತದೆ. ಇನ್ನು ಚಿಕುನ್‌ ಗುನ್ಯಾ ಕಾಯಿಲೆಯು ವೈರಸ್‌ನಿಂದ ಬರುತ್ತದೆ. ತೀವ್ರ ಜ್ವರ, ತಲೆನೋವು, ಶೀತ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಈ ಕಾಯಿಲೆಗಳ ಪ್ರಮುಖ ಲಕ್ಷಣಗಳಾಗಿವೆ. ಜ್ವರದ ತೀವ್ರತೆ ಜಾಸ್ತಿಯಾದರೆ ಬಾಯಿ, ಮೂಗು, ಚರ್ಮ ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ.

ಹತೋಟಿ ವಿಧಾನ: ಸೊಳ್ಳೆಗಳ ನಿಯಂತ್ರಣವು ಡೆಂಗಿ ಮತ್ತು ಚಿಕುನ್‌ ಗುನ್ಯಾ ಕಾಯಿಲೆ ಹತೋಟಿಗೆ ಮುಖ್ಯ ವಿಧಾನ. ಮನೆಯ ಸಿಮೆಂಟ್‌ ತೊಟ್ಟಿ, ಡ್ರಮ್‌ ಹಾಗೂ ಮಡಿಕೆಯಲ್ಲಿ ಶೇಖರಿಸಿಟ್ಟಿರುವ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಜತೆಗೆ ಮನೆಯ ಸುತ್ತಲಿನ ಚರಂಡಿ ಹಾಗೂ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲೂ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ. ಆದ ಕಾರಣ ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು. ಅದೇ ರೀತಿ ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಸ್ವಚ್ಛತೆಯ ಅರಿವು: ಡೆಂಗಿ, ಚಿಕುನ್‌ ಗುನ್ಯಾ ಪ್ರಕರಣಗಳ ಹೆಚ್ಚಳದಿಂದ ಕಂಗೆಟ್ಟಿರುವ ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಡ್ರಮ್‌, ಮನೆಯ ತೊಟ್ಟಿಗಳಲ್ಲಿನ ನೀರನ್ನು ಖಾಲಿ ಮಾಡಿ ವಾರದಲ್ಲಿ ಒಮ್ಮೆಯಾದರೂ ಒಣಗಲು ಬಿಡುವಂತೆ ತಿಳಿ ಹೇಳುತ್ತಿದ್ದಾರೆ. ನಗರಸಭೆ ವತಿಯಿಂದ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ರಾಸಾಯನಿಕ ಹೊಗೆ ಸಿಂಪಡಣೆ (ಫಾಗಿಂಗ್‌) ಮಾಡಲಾಗುತ್ತಿದೆ.

ಬಡಾವಣೆಯಲ್ಲಿ ಹಲವರಿಗೆ ಜ್ವರ ಬಂದಿದೆ. ಡೆಂಗಿ ಮತ್ತು ಚಿಕುನ್‌ ಗುನ್ಯಾ ನಿಯಂತ್ರಣಕ್ಕೆ ನಗರವಾಸಿಗಳು ನಗರಸಭೆ ಜತೆ ಕೈಜೋಡಿಸಬೇಕು. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ನಗರಸಭೆ ಆಯುಕ್ತ ಎಸ್‌.ಎ. ರಾಮ್‌ಪ್ರಕಾಶ್‌ ಮನವಿ ಮಾಡಿದ್ದಾರೆ.

**

28 ಮಂದಿಗೆ ಡೆಂಗಿ

ನಗರದಲ್ಲಿ 28 ಮಂದಿಗೆ ಡೆಂಗಿ ಮತ್ತು 3 ಮಂದಿಗೆ ಚಿಕುನ್‌ಗುನ್ಯಾ ಇರುವುದು ರಕ್ತ ಪರೀಕ್ಷೆಯಿಂದ ಖಚಿತವಾಗಿದೆ. ಜ್ವರದಿಂದ ಬಳಲುತ್ತಿರುವ 200ಕ್ಕೂ ಹೆಚ್ಚು ಮಂದಿಯ ರಕ್ತ ಮಾದರಿ ಸಂಗ್ರಹಿಸಲಾಗಿದೆ. ಚರಂಡಿ ಮತ್ತು ಗುಂಡಿಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ವೃದ್ಧಿಸಿರುವುದು ಕಾಯಿಲೆಗೆ ಪ್ರಮುಖ ಕಾರಣ.

–ಡಾ.ವಿಜಯಕುಮಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ

*

ಕಾಯಿಲೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರದಲ್ಲಿ ಕರಪತ್ರ ಹಂಚಲಾಗುತ್ತಿದೆ ಮತ್ತು ಆಟೊಗಳಲ್ಲಿ ಪ್ರಚಾರ ನಡೆಸಲಾಗುತ್ತಿದೆ

-ಎಸ್‌.ಎ.ರಾಮ್‌ಪ್ರಕಾಶ್‌, ನಗರಸಭೆ ಆಯುಕ್ತ

*

ವೈದ್ಯರು ನಿವಾಸಿಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ದಿನೇ ದಿನೇ ಅನಾರೋಗ್ಯಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಆತಂಕವಾಗಿದೆ

-ಕುಪ್ಪಮ್ಮ, ವಿನೋಬನಗರ ನಿವಾಸಿ

ಪ್ರತಿಕ್ರಿಯಿಸಿ (+)