ಬುಧವಾರ, ಡಿಸೆಂಬರ್ 11, 2019
20 °C
ಹಿರೇಹಳ್ಳಿ, ದಾಬಸಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರು, ಇಂದು ಸಚಿವರು–ಶಾಸಕರ ಸಭೆ

ಬುಗುಡನಹಳ್ಳಿ ಕೆರೆ ನೀರಿನ ಮೇಲೆ ಮತ್ತೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುಗುಡನಹಳ್ಳಿ ಕೆರೆ ನೀರಿನ ಮೇಲೆ ಮತ್ತೆ ಕಣ್ಣು

ತುಮಕೂರು: ನಗರದ ಬುಗುಡನಹಳ್ಳಿ ಕೆರೆಯಿಂದ ಹಿರೇಹಳ್ಳಿ ಹಾಗೂ ದಾಬಸಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀರು ತೆಗೆದುಕೊಂಡು ಹೋಗುವ ಹಳೆಯ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿದೆ.

ಈ ಬಗ್ಗೆ ಚರ್ಚಿಸಲು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಜುಲೈ 3ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಖನಿಜ ಭವನದ ಉದ್ಯೋಗ ಮಿತ್ರ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.

ಶಾಸಕರಾದ ಬಿ.ಸುರೇಶ್‌ಗೌಡ, ರಫೀಕ್‌ ಅಹಮದ್‌, ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ, ಕೈಗಾರಿಕಾಭಿವೃದ್ಧಿ ಆಯುಕ್ತರು, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆಯ ಮೇಯರ್‌ ಅವರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.

ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ 290ಎಂಸಿಎಫ್‌ಟಿ ಅಡಿ (29 ಕೋಟಿ ಘನ ಅಡಿ) ನೀರು ತೆಗೆದುಕೊಂಡು ಹೋಗಲಾಗುವುದು.   ಇಲ್ಲಿಂದ ಹಿರೇಹಳ್ಳಿ, ದಾಬಸಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀರು ಕೊಡುವ ಈ  ಯೋಜನೆಯನ್ನು 2008ರಲ್ಲಿ ರೂಪಿಸಲಾಗಿತ್ತು.

ಪಾಲಿಕೆಯ ಒಪ್ಪಿಗೆ ಪಡೆಯದೆ ಬುಗುಡನಗಹಳ್ಳಿ ಕೆರೆಯಲ್ಲಿ ಜಾಕ್ ವೆಲ್‌ ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ ಪಾಲಿಕೆಯು ಚಾಕ್‌ ವೆಲ್‌ ಕಾಮಗಾರಿ ಮುಂದುವರೆಸದಂತೆ ತಡೆ ಹಿಡಿದಿರುವ  ಕಾರಣ ಯೋಜನೆ ಅರ್ಧದಲ್ಲೆ ನಿಂತಿದೆ.

 ಮೈದಾಳ ಕೆರೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ರಫೀಕ್ ಅಹಮದ್‌ ಖಡಾಖಂಡಿತವಾಗಿ ಹೇಳುತ್ತಿದ್ದಾರೆ.

ಮೈದಾಳ ಕೆರೆಯಿಂದ 22 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ದೇವರಾಯಪಟ್ಟಣ ಕೆರೆಗೂ ನೀರು ಬೇಕಾಗಿದೆ. ಈ ಎರಡು ಕೆರೆಗಳಿಗೆ  ನೀರು ಕೊಡಬೇಕೆಂಬ ಒತ್ತಾಯವೂ ಇದೆ.

ಒಮ್ಮೆ ಮೈದಾಳ ಕೆರೆಗೆ ನೀರು ಕೊಟ್ಟರೆ ನಂತರ ಅಲ್ಲಿಂದ ಸುಲಭವಾಗಿ ಹಿರೇಹಳ್ಳಿ, ದಾಬಸಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀರು ತೆಗೆದುಕೊಂಡು ಹೋಗುತ್ತಾರೆ. ಇದನ್ನು ತಡೆಯಲು ಸಾಧ್ಯವಿಲ್ಲ. ಯೋಜನೆ ಜಾರಿಯಾದರೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಬಹುದು  ಎಂಬುದು ಪಾಲಿಕೆಯ ವಾದವಾಗಿದೆ.

' ನಗರಕ್ಕೆ 210 ಕೋಟಿ ವೆಚ್ಚದಲ್ಲಿ 24x7 ಗಂಟೆ ಕುಡಿಯುವ ನೀರು  ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬುಗುಡನಹಳ್ಳಿ ಹಾಗೂ ಹೆಬ್ಬಾಕ ಕೆರೆಯ ನೀರು ನಗರಕ್ಕೆ ಸಾಕಾಗುತ್ತಿಲ್ಲ. ಹೆಚ್ಚು ನೀರು ಬೇಕಾಗುವ ಸಲುವಾಗಿ ಬುಗುಡನಹಳ್ಳಿ ಕೆರೆಯಲ್ಲಿ 2 ಮೀಟರ್‌ ಆಳದವರೆಗೆ ಹೂಳು ತೆಗೆಯಲು ಸಹ ನಿರ್ಧರಿಸಲಾಗಿದೆ. ಇಂಥ ಸ್ಥಿತಿಯಲ್ಲಿ ಇಲ್ಲಿಂದ ನೀರು ಕೊಡಲು ಹೇಗೆ ಸಾಧ್ಯ' ಎಂದು ನಗರ ಪಾಲಿಕೆಯ ಎಂಜಿನಿಯರೊಬ್ಬರು ತಿಳಿಸಿದರು.

'ನಗರದ ಕೊಳಚೆ ನೀರು ಪುನರ್ ಬಳಕೆ ಮಾಡುವ ಕಡೆಗೆ ಗಮನ ಹರಿಸಬೇಕು. ಈ ಹಿಂದೆ ಕೆಎಐಡಿಬಿ ವತಿಯಿಂದ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು. ನಗರದ ಕೊಳಚೆ ನೀರು ಭೀಮಸಂದ್ರ ಕೆರೆಯಲ್ಲಿ ಸಂಗ್ರಹವಾಗುತ್ತಿದೆ. ಅದನ್ನು ಶುದ್ಧೀಕರಿಸಿ ನೆಲಮಂಗಲ, ದಾಬಸಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀಡಬಹುದು. ಈ ಬಗ್ಗೆ ಚಿಂತನೆ ನಡೆಸುವುದು ಒಳ್ಳೆಯದು.  ಹೇಮಾವತಿ ನೀರು ಕೊಡಲು ಒಪ್ಪಿದರೆ ಪಾಲಿಕೆಯ ಸದಸ್ಯರೆಲ್ಲರೂ ಮೇಯರ್ ನೇತೃತ್ವದಲ್ಲಿ ಧರಣಿ ಮಾಡುತ್ತೇವೆ' ಎಂದು ಪಾಲಿಕೆ ಸದಸ್ಯ ಟಿ.ಆರ್‌. ನಾಗರಾಜ್‌ ಹೇಳಿದರು.

**

ನಮಗೆ ನೀರು ಬೇಕು

ಪಾಲಿಕೆಯುವರು ಬುಗುಡನಹಳ್ಳಿ ಕೆರೆಯಲ್ಲಿ ಜಾಕ್‌ವೆಲ್‌ ಮಾಡಲು ಹಾಗೂ  ಕುಪ್ಪೂರು ಬಳಿ ಭೂ ಸ್ವಾಧೀನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಮೈದಾಳ ಬಳಿ ರೈಲು ಹಳಿ ಇರುವುರಿಂದ ಕೊಳವೆ ಮಾರ್ಗಕ್ಕೆ ಪರ್ಯಾಯ ಮಾರ್ಗ ಹುಡುಕಬೇಕು. ಈ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಮೈದಾಳ ಕೆರೆಗೆ ಹೇಮಾವತಿ ನೀರು ಕೊಡಬೇಕೆಂಬುದೇ ನಮ್ಮ ಒತ್ತಾಯ. ಮೈದಾಳ ಕೆರೆಯ ಮಳೆ ನೀರನ್ನು ಕೈಗಾರಿಕಾ ಪ್ರದೇಶಗಳಿಗೆ ನಾವು ಕೊಡುವುದಿಲ್ಲ. ಈ ಬಗ್ಗೆಯೂ ಚರ್ಚಿಸಲಾಗುವುದು ಎಂದು ಶಾಸಕ ಬಿ.ಸುರೇಶ್‌ ಗೌಡ ಹೇಳಿದರು.

**

ವಾದ ಮಂಡನೆ

ತುಮಕೂರು:
‘ತುಮಕೂರು ನಗರಕ್ಕೆ  1.135 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಬುಗುಡನಹಳ್ಳಿ ಕೆರೆಯ ಸಾಮರ್ಥ್ಯ 0.25 ಟಿಎಂಸಿ ಅಡಿ ಆಗಿದೆ. ವರ್ಷದಲ್ಲಿ ನಾಲ್ಕು ಸಲ ಕೆರೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಹೀಗಾಗಿ ಹಿರೇಹಳ್ಳಿ, ದಾಬಸಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀರು ಕೊಡಲು ಸಾಧ್ಯವಿಲ್ಲ ಎಂಬ ವಾದವನ್ನು ನಾಳೆಯ ಸಚಿವರ ಸಭೆಯಲ್ಲಿ ಮಂಡಿಸಲಾಗುವುದು’ ಎಂದು ಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್  ಉದಯ್‌ಕುಮಾರ್‌  ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಕ್ಕೆ 2004–05ರಲ್ಲಿ ಹೇಮಾವತಿಯಿಂದ 0.98 ಟಿಎಂಸಿ ಅಡಿ ನೀರು ಬಿಡಲಾಗಿತ್ತು. ಆ ವರ್ಷ ಬಿಟ್ಟರೆ ಈವರೆಗೂ ನಗರಕ್ಕೆ ಬಿಟ್ಟಿರುವ ನೀರಿನ ಪ್ರಮಾಣ  0.6 ಟಿಎಂಎಸಿ ಅಡಿ ಮೀರಿಲ್ಲ. ಈ ನೀರು ನಮಗೇ ಸಾಕಾಗುತ್ತಿಲ್ಲ’ ಎಂದು ಮಾಹಿತಿ ನೀಡಿದರು.

**

ಹೆಚ್ಚುವರಿ ನೀರು ಹಂಚಿಕೆ ಇಲ್ಲ

2008ರ ಡಿಸೆಂಬರ್‌ 11ರಂದು ಬೆಂಗಳೂರಿನಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಎರಡೂ ಕೈಗಾರಿಕಾ ಪ್ರದೇಶಗಳಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ಅನುಮತಿ ನೀಡಲಾಗಿತ್ತು.

ನಗರಕ್ಕೆ ಹಂಚಿಕೆಯಾಗಿರುವ 1.13 ಟಿಎಂಸಿ ಅಡಿ ಹೇಮಾವತಿ ನೀರಿನಲ್ಲೆ ತುಮಕೂರಿನಿಂದ 26 ಕಿಲೋ ಮೀಟರ್‌ ದೂರದ ಈ ಎರಡೂ ಕೈಗಾರಿಕಾ ಪ್ರದೇಶಗಳಿಗೆ ನೀರು ನೀಡಬೇಕೆಂಬ ಷರತ್ತಿನಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗಿದೆ. ನೀರು ಒದಗಿಸುವ ಮಾರ್ಗ ಮಧ್ಯದಲ್ಲಿ ಸಿಗುವ ದೇವರಾಯಪಟ್ಟಣದ ಕೆರೆಗೂ ನೀರು ನೀಡಬೇಕು ಎಂದು ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದರೆ  ಕೈಗಾರಿಕಾ ಪ್ರದೇಶಗಳಿಗೆ ತಕ್ಷಣ ನೀರು  ನಿಲ್ಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಪ್ರತಿಕ್ರಿಯಿಸಿ (+)