ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

63 ಮದ್ಯದಂಗಡಿಗಳಿಗೆ ಬೀಗಮುದ್ರೆ

ಸುಪ್ರೀಂ ಕೋರ್ಟ್‌ ನೀಡಿದ್ದ ಗಡುವು ಮುಕ್ತಾಯ, ಸ್ಥಳಾಂತರಗೊಳ್ಳದ ಅಂಗಡಿಗಳಿಗೆ ಬೀಗ
Last Updated 3 ಜುಲೈ 2017, 6:08 IST
ಅಕ್ಷರ ಗಾತ್ರ

ಕೋಲಾರ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಹೆದ್ದಾರಿ ಆಸುಪಾಸಿನ ಮದ್ಯದಂಗಡಿಗಳ ಸ್ಥಳಾಂತರಕ್ಕೆ ನೀಡಿದ್ದ ಗಡುವು ಮುಗಿದಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಸ್ಥಳಾಂತರಗೊಳ್ಳದ 63 ಮದ್ಯದಂಗಡಿಗಳಿಗೆ ಶುಕ್ರವಾರ ರಾತ್ರೋರಾತ್ರಿ ಬೀಗಮುದ್ರೆ ಹಾಕಿದ್ದಾರೆ.

ನಗರ ಪ್ರದೇಶದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯಿಂದ 500 ಮೀಟರ್ ಮತ್ತು ಗ್ರಾಮೀಣ ಪ್ರದೇಶದಲ್ಲಿ 220 ಮೀಟರ್‌ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳನ್ನು ಜೂನ್ 30ರೊಳಗೆ ಸ್ಥಳಾಂತರಿಸುವಂತೆ ಅಥವಾ ಮುಚ್ಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಮದ್ಯದಂಗಡಿಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರವು ನಗರ ಮತ್ತು ಪಟ್ಟಣ ಪ್ರದೇಶಗಳ ಮಧ್ಯೆ ಹಾದು ಹೋಗುವ ರಾಜ್ಯ ಹೆದ್ದಾರಿಗಳನ್ನು ಡಿ-ನೋಟಿಫೈ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಗಳನ್ನು ಹೊರತುಪಡಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳನ್ನು ನಗರ ಅಥವಾ ಸ್ಥಳೀಯ ಪ್ರಾಧಿಕಾರಗಳ ರಸ್ತೆ ಎಂದು ಘೋಷಿಸಿತ್ತು.

ಜಿಲ್ಲೆ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಷ್ಟ್ರೀಯ ಹೆದ್ದಾರಿ ಹಾಗೂ ಡಿ-ನೋಟಿಫೈ ಆಗದ ರಾಜ್ಯ ಹೆದ್ದಾರಿಯಲ್ಲಿ 85 ಮದ್ಯದಂಗಡಿಗಳಿದ್ದವು. ನಗರಸಭೆ ವ್ಯಾಪ್ತಿಯಲ್ಲಿ 26, ಪುರಸಭೆ ವ್ಯಾಪ್ತಿಯಲ್ಲಿ 5 ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 54 ಮದ್ಯದಂಗಡಿಗಳು ನಿಗದಿತ ಗಡುವಿನ ಪ್ರಕಾರ ಶುಕ್ರವಾರ (ಜೂನ್‌ 30) ರಾತ್ರಿ 12 ಗಂಟೆಯೊಳಗೆ ಸ್ಥಳಾಂತರವಾಗಬೇಕಿತ್ತು.

ಆದರೆ, 22 ಮದ್ಯದಂಗಡಿಗಳು ಮಾತ್ರ ಬೇರೆಡೆಗೆ ಸ್ಥಳಾಂತರವಾಗಿದ್ದವು. ಹೀಗಾಗಿ ಜಿಲ್ಲೆಯಾದ್ಯಂತ ಮಧ್ಯ ರಾತ್ರಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಸ್ಥಳಾಂತರಗೊಳ್ಳದ 63 ಮದ್ಯದಂಗಡಿಗಳಿಗೆ ಬೀಗಮುದ್ರೆ ಹಾಕಿದರು.

ಸರಕಿನ ಲೆಕ್ಕಾಚಾರ: ‘ಜಿಲ್ಲೆಯಲ್ಲಿ ಒಟ್ಟಾರೆ 229 ಮದ್ಯದಂಗಡಿಗಳಿದ್ದು, ಸುಪ್ರೀಂ ಕೋರ್ಟ್‌ ಆದೇಶದಂತೆ ನಗರ ಪ್ರದೇಶದಲ್ಲಿ ಹೆದ್ದಾರಿಯಿಂದ 500 ಮೀಟರ್ ಮತ್ತು ಗ್ರಾಮೀಣ ಪ್ರದೇಶದಲ್ಲಿ 220 ಮೀಟರ್‌ ವ್ಯಾಪ್ತಿಯಿಂದ ಹೊರಗಿರುವ 166 ಮದ್ಯದಂಗಡಿಗಳ ಪರವಾನಗಿ ನವೀಕರಿಸಲಾಗಿದೆ. 22 ಮದ್ಯದಂಗಡಿಗಳನ್ನು ಮಾಲೀಕರೇ ಸ್ಥಳಾಂತರ ಮಾಡಿದ್ದಾರೆ. ಸ್ಥಳಾಂತರಗೊಳ್ಳದ 63 ಅಂಗಡಿಗಳಲ್ಲಿನ ಮದ್ಯದ ಸರಕಿನ ಲೆಕ್ಕಾಚಾರ ಹಾಕಿ ಬಂದ್ ಮಾಡಿಸಲಾಗಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ.ಸುಮಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

**

ಅಂಗಡಿ ಸ್ಥಳಾಂತರಿಸುವಾಗ ಅಧಿಕಾರಿಗಳನ್ನು ಸಂಪರ್ಕಿಸಿದರೆ ಬೀಗಮುದ್ರೆ ತೆರೆದು ಅವರಿಗೆ ಮದ್ಯದ ಸರಕು ಹಿಂದಿರುಗಿಸಲಾಗುತ್ತದೆ
-ಕೆ.ಕೆ. ಸುಮಿತಾ, ಅಬಕಾರಿ ಇಲಾಖೆ ಉಪ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT