ಶುಕ್ರವಾರ, ಡಿಸೆಂಬರ್ 13, 2019
16 °C
ನಿತ್ಯವೂ ಟ್ಯಾಂಕರ್ ನೀರು ಹಿಡಿದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸುವ ನಾಗರಿಕರು

ಆದರ್ಶನಗರದಲ್ಲಿ ನೀಗದ ನೀರಿನ ಬರ

ಡಿ.ಎಂ. ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಆದರ್ಶನಗರದಲ್ಲಿ ನೀಗದ ನೀರಿನ ಬರ

ತುಮಕೂರು: ಬೇಸಿಗೆ ಪೂರ್ಣಗೊಂಡರೂ ನಗರದ 20ನೇ ವಾರ್ಡ್ ವ್ಯಾಪ್ತಿಯ ಆದರ್ಶ ನಗರದಲ್ಲಿ ನೀರಿನ ಸಮಸ್ಯೆ ಪರಿಹಾರವಾಗಿಲ್ಲ ಎನ್ನುವ ದೂರುಗಳು ಅಲ್ಲಿನ ನಾಗರಿಕರಿಂದ ಕೇಳಿಬಂದಿವೆ.

ಆದರ್ಶನಗರದಲ್ಲಿ ಮಧ್ಯಮ, ಮೇಲ್ಮಧ್ಯಮ ಹಾಗೂ ಶ್ರೀಮಂತ ಕುಟುಂಬಗಳು ಹೆಚ್ಚು ವಾಸಿಸುತ್ತಿವೆ. ಬಹುತೇಕ ಮನೆಗಳ ಬಳಿ ಆಳೆತ್ತರ ಸಂಪ್‌ಗಳಿವೆ. ಬಹುತೇಕರು ಮಹಾನಗರ ಪಾಲಿಕೆ ಅಳವಡಿಸಿರುವ ನಲ್ಲಿಗಳಲ್ಲಿ ಯಾವಾಗ ನೀರು ಹರಿಯುತ್ತದೆ ಎಂದು ಕಾಯಬೇಕಾಗಿದೆ. ನೀರಿಗಾಗಿ ಪರಿತಪಿಸಬೇಕಾಗಿದೆ. ಮಳೆಗಾಲ ಆರಂಭವಾದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದುಕೊಂಡಿದ್ದೆವು. ಆದರೆ ಆ ನಿರೀಕ್ಷೆ ಹುಸಿಯಾಗಿದೆ ಎಂದು ಸಮಸ್ಯೆ ಬಗ್ಗೆ ತಿಳಿಸುವರು.

ಈಗಲೂ ಟ್ಯಾಂಕರ್‌ಗಳಲ್ಲಿ ಪಾಲಿಕೆ ನೀರು ಸರಬರಾಜು ಮಾಡುತ್ತಿದೆ. ಆದರೆ ಇಷ್ಟು ದಿನವಾದರೂ ಸಮಸ್ಯೆಯನ್ನು ಪೂರ್ಣವಾಗಿ ಪರಿಹರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವರು.

‘ಒಂದೂವರೆ ತಿಂಗಳ ಹಿಂದೆ ನಲ್ಲಿಗಳಲ್ಲಿ ನೀರು ಬಂದಿತ್ತು. ಈಗ ನಾಲ್ಕು ದಿನಗಳ ಹಿಂದೆ ನೀರು ಬಂದಿದೆ. ಮತ್ತೆ ಇನ್ನು ಯಾವಾಗ  ನಲ್ಲಿಯಲ್ಲಿ ತೊಟ್ಟಿಕ್ಕುವುದೋ ತಿಳಿಯದು’ ಎನ್ನುತ್ತಾರೆ ಆದರ್ಶ ನಗರದ 1ನೇ ಮುಖ್ಯ ರಸ್ತೆ ನಿವಾಸಿ ಶ್ರೀನಿವಾಸ್.

‘ನೀರಿನ ಸಮಸ್ಯೆ ಪರಿಹರಿಸುವಂತೆ ವಾರ್ಡ್ ಸದಸ್ಯರಲ್ಲಿ ಕೋರಿದ್ದೆವು. ಅವರು ಇಡೀ ಬಡಾವಣೆಯಲ್ಲಿ ಎಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ ಎಂದರು.  ಎಂಟತ್ತು ಕಿಲೋ ಮೀಟರ್ ದೂರದಲ್ಲಿ ಕೊಳವೆ ಬಾವಿ ತೆಗೆಸಿ ಬಡಾವಣೆಗೆ ನೀರು ಪೂರೈಸಿ ಎಂದು ಕೋರಿದರೂ ಕ್ರಮ ಕೈಗೊಂಡಿಲ್ಲ’ ಎಂದು ನೊಂದು ನುಡಿದರು.

‘ಒಂದು ಟ್ಯಾಂಕರ್ ನೀರಿಗೆ ₹ 450 ನೀಡಬೇಕು. ವಾರಕ್ಕೆ ಒಂದು ಟ್ಯಾಂಕರ್ ನೀರು ಖಾಲಿಯಾಗುತ್ತದೆ. ನಮ್ಮ ಸಮಯಕ್ಕೆ ಟ್ಯಾಂಕರ್ ನೀರು ದೊರೆಯುವುದು ಕಷ್ಟ’ ಎನ್ನುತ್ತಾರೆ ಬಡಾವಣೆ  ನಿವಾಸಿ ರಾಮಕೃಷ್ಣಪ್ಪ.

‘ನಿತ್ಯ ಒಂದು ಮನೆಗೆ 10 ರಿಂದ 15 ಬಿಂದಿಗೆ ಟ್ಯಾಂಕರ್ ನೀರು ಕೊಡಲಾಗುತ್ತಿದೆ. ನಿತ್ಯವೂ ಟ್ಯಾಂಕರ್‌ ಹಿಂದೆ ತೆರಳಿ ನೀರು ಹಿಡಿಯಲು ಸಾಧ್ಯವೇ. ಬೇರೆ ಕೆಲಸಗಳು ಇರುವುದಿಲ್ಲವೇ. ಆ ನೀರು ಯಾವುದಕ್ಕೂ ಸಾಕಾಗುವುದಿಲ್ಲ’ ಎಂದು ಬಡಾವಣೆಯ ಕೆಲವು ನಿವಾಸಿಗಳು ಅಲವತ್ತುಕೊಳ್ಳುತ್ತಾರೆ.

ಎಲ್ಲೆಡೆ ನೀರಿನ ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುವ ನಾಗರಿಕರು, ಆದಷ್ಟು ಪರ್ಯಾಯ ಮಾರ್ಗಗಳನ್ನು ಹುಡುಕಿ ಸಮಸ್ಯೆಯನ್ನು ವಾರ್ಡ್ ಸದಸ್ಯರು ಹಾಗೂ ಅಧಿಕಾರಿಗಳು ಪರಿಹರಿಸಬೇಕು ಎಂದು ಆಗ್ರಹಿಸುವರು.

**

ನೀರು ಹಿಡಿಯುವವರು ಕಡಿಮೆ

‘ಬೀದಿ ದೀಪ, ಕಸ, ಚರಂಡಿ ಸಮಸ್ಯೆಗಳನ್ನು ಹೇಳಿದ ತಕ್ಷಣವೇ ಪರಿಹರಿಸಬಹುದು. ಆದರೆ ಹೇಮಾವತಿಯಲ್ಲಿಯೂ ನೀರಿಲ್ಲ, ಮೈದಾಳದ ಕೆರೆಯಲ್ಲಿಯೂ ನೀರು ಕಡಿಮೆಯಾಗಿದೆ. ಇಂತಹ ಸಮಯದಲ್ಲಿ ನಾಗರಿಕರು ಸಹಕಾರ ನೀಡಬೇಕು. ಅಲ್ಲದೆ ಒಂದೂವರೆ ತಿಂಗಳವರೆಗೂ ನೀರು ಬಿಡದಷ್ಟು ನಾವು ಕಠಿಣವಾಗಿಲ್ಲ’ ಎನ್ನುವರು 20ನೇ ವಾರ್ಡ್‌ ಸದಸ್ಯರಾದ ಹನುಮಂತರಾಯಪ್ಪ.

‘ನನ್ನ ವಾರ್ಡ್‌ ವ್ಯಾಪ್ತಿಯ ಶೇ 70ರಷ್ಟು ಟ್ಯಾಂಕರ್ ನೀರನ್ನು  ಪೂರೈಸಲಾಗುತ್ತಿದೆ. ಆದರೆ ಟ್ಯಾಂಕರ್ ನೀರನ್ನು ಹಿಡಿದುಕೊಳ್ಳಲು ಮುಂದೆ ಬರುವರ ಸಂಖ್ಯೆಯೇ ಕಡಿಮೆ. ಈ ರೀತಿ ಮಾಡಿದರೆ ಹೇಗೆ. ಎಲ್ಲ ವಿಷಯಕ್ಕೂ ಸದಸ್ಯರನ್ನು ದೂರುವ ಬದಲು ಜನರೂ ಇಂತಹ ಸಮಯದಲ್ಲಿ ಸಹಕಾರ ನೀಡಬೇಕು’ ಎಂದು ಹೇಳುತ್ತಾರೆ.

‘ಅಂಬೇಡ್ಕರ್ ನಗರ, ಎನ್‌.ಆರ್.ಕಾಲೊನಿಗೂ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಕೊಳೆಗೇರಿ ಜನರ ಬಳಿ ನೀರು ಸಂಗ್ರಹಕ್ಕೆ ಸಂಪ್, ಸಿಂಥೆಟಿಕ್ ಇಲ್ಲ. ಆದರ್ಶನಗರದಲ್ಲಿ ವಾಸಿಸುವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಉತ್ತಮವಾಗಿದ್ದಾರೆ, ಬುದ್ಧಿವಂತರೂ ಇದ್ದಾರೆ. ಟ್ಯಾಂಕರ್ ನೀರನ್ನು ಸಂಪ್‌ಗೆ ಬಿಡಿ ಎನ್ನುವ ಮನೋಭಾವದವರು ಇದ್ದಾರೆ. ಎರಡು ಕಡೆ 1200 ಅಡಿ ಆಳದ ಕೊಳವೆ ಬಾವಿ ಕೊರೆಸಿದೆವು. ನೀರು ಸಿಗಲಿಲ್ಲ. ಅಂತಿಮವಾಗಿ ಬಡಾವಣೆ ಹೊರಗಿನ ಕೆರೆಯಲ್ಲಿ ಕೊಳವೆಬಾವಿ ತೆಗೆಸಿ ಪೈಪ್ ಮೂಲಕ ನೀರು ಸರಬರಾಜು ಮಾಡೋಣ ಎಂದುಕೊಂಡಿದ್ದೆವು. ಆದರೆ ಅಲ್ಲೂ ನೀರು ದೊರೆಯಲಿಲ್ಲ’ ಎಂದು ತಿಳಿಸಿದರು.

‘ಹಳೆಯ ಕೊಳವೆ ಬಾವಿಯನ್ನು ಮರುಪೂರಣಗೊಳಿಸಲು ಮುಂದಾದಾಗ ಸಮಸ್ಯೆಗಳು ಎದುರಾಯಿತು. ಈಗ ಎರಡು ಕೊಳವೆಬಾವಿಯಲ್ಲಿ ಅಲ್ಪ ಸ್ವಲ್ಪ ನೀರು ಲಭ್ಯವಾಗುತ್ತಿದೆ. ಅದನ್ನೇ ನೀಡುತ್ತಿದ್ದೇವೆ. ನೀರಿನ ಸಮಸ್ಯೆ ಇಲ್ಲದಾಗ ಸಾಕಷ್ಟು ನೀರು ಹರಿಸಲಾಗಿದೆ. ಆಗ ಇದೇ ಜನರು ಹೊಗಳಿದ್ದಾರೆ. ಈಗ ಎಲ್ಲೆಡೆ ನೀರಿನ ಸಮಸ್ಯೆ ಇದೆ. ಸಹಕರಿಸಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)