ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟ್ಟಿಯಾಗುತ್ತಿದೆ ಕಂದವಾರ ಬಾಗಿಲು

ದಿನೇ ದಿನೇ ಬೀಳುತ್ತಿರುವ ರಾಶಿ, ರಾಶಿ ತ್ಯಾಜ್ಯ, ಐತಿಹಾಸಿಕ ಸ್ಮಾರಕದ ಸಮೀಪದಲ್ಲಿಯೇ ಅಸಹ್ಯಕರ ವಾತಾವರಣ
Last Updated 3 ಜುಲೈ 2017, 6:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಹು ಹಿಂದೆ ಈ ಪ್ರದೇಶವನ್ನು ಆಳಿದ ಪಾಳೆಯಗಾರರ ಆಡಳಿತಾವಧಿಯಲ್ಲಿ ನಗರದ ಪ್ರತಿಷ್ಠಿತ ಮಾರ್ಗಗಳಲ್ಲಿ ಒಂದಾಗಿದ್ದ ಕಂದವಾರ ಬಾಗಿಲು ಇವತ್ತು ಕಸದ ತೊಟ್ಟಿಯಾಗಿ ಬದಲಾಗುತ್ತಿದೆ.

ಕಂದವಾರ ಕೆರೆಯ ಕೋಡಿಯಲ್ಲಿ ದಿನೇ ದಿನೇ ಬಂದು ಬೀಳುತ್ತಿರುವ ರಾಶಿ, ರಾಶಿ ತ್ಯಾಜ್ಯ ಐತಿಹಾಸಿಕ ಸ್ಮಾರಕದ ಸಮೀಪದಲ್ಲಿಯೇ ಅಸಹ್ಯಕರ ವಾತಾವರಣ ಸೃಷ್ಟಿಸುತ್ತಿದೆ.

ನಗರದಿಂದ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಒಂದಾದ ಈ ರಸ್ತೆ ಇಕ್ಕೆಲದಲ್ಲಿ ಸದ್ಯ ಹಳೇ ಕಟ್ಟಡಗಳ ಕೆಡವಿದಾಗ ಸೃಷ್ಟಿಯಾಗುವ ಭಗ್ನಾವಶೇಷ, ಒಡೆದ ಗಾಜಿನ ಬಾಟಲಿಗಳು, ಹರಿದ ಚಪ್ಪಲಿಗಳು, ಅನುಪಯುಕ್ತ ವಸ್ತುಗಳು, ಊರೊಳಗಿನ ತ್ಯಾಜ್ಯ.. ಹೀಗೆ ತರಹೆವಾರಿ ಕಸದ ರಾಶಿಗಳನ್ನು ನೋಡಬಹುದು.

ಈ ತ್ಯಾಜ್ಯದ ರಾಶಿಗಳ ನಡುವೆಯೇ ರಾತ್ರಿ ವೇಳೆಯಲ್ಲಿ ಮಾಂಸ ಮಾರಾಟದ ಮಳಿಗೆಯವರು ಕೂಡ ಅಳಿದುಳಿದ ಮಾಂಸದ ತ್ಯಾಜ್ಯವನ್ನು ಇಲ್ಲಿ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಇಲ್ಲಿ ದುರ್ನಾತದ ಜತೆಗೆ ನಾಯಿಗಳು ಜಮಾಯಿಸುತ್ತವೆ. ಇಂತಹ ಗಲೀಜು ವಾತಾವರಣದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ತಳ್ಳಿ ಹಾಕುವಂತಿಲ್ಲ.

ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಹೋಗುವ ಪ್ರವೃತ್ತಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ಜತೆಗೆ ಅನೇಕ ಸಮಸ್ಯೆಗಳನ್ನು  ಸೃಷ್ಟಿಸುತ್ತಿದೆ. ಸಾರ್ವಜನಿಕರಲ್ಲಿ ಪೌರಪ್ರಜ್ಞೆ ಜಾಗೃತಗೊಳಿಸುವ ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ನಗರಸಭೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ನಾಗರಿಕರ ಒತ್ತಾಯ.

ಇಲ್ಲಿ ಸುರಿಯುವ ಕಸ ರಾಶಿಯೊಳಗಿನ ತ್ಯಾಜ್ಯ ಜೋರಾಗಿ ಮಳೆ ಸುರಿದಾಗ ಹರಿದು ಕೆರೆ ಕಾಲುವೆಯನ್ನು ಮುಚ್ಚುತ್ತಿದೆ. ಇದರಿಂದಾಗಿ ಕಾಲುವೆಯಲ್ಲಿ ಹೂಳು ತುಂಬಿ ಮಳೆ ಸುರಿದರೆ ವಿವಿಧೆಡೆ ಸಮಸ್ಯೆ ಸೃಷ್ಟಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಕಂದವಾರ ಕೆರೆ ಅಂಗಳದ ಮೇಲೆ ವಾಯು ವಿಹಾರಕ್ಕೆ ಬರುವ ನಗರದ ಜನರು ತ್ಯಾಜ್ಯದ ರಾಶಿ ನಡುವೆಯೇ ಇರುವ ದಾರಿಯಲ್ಲಿ ಮೂಗು ಮುಚ್ಚಿಕೊಂಡು ಸಾಗಬೇಕಾಗಿದೆ.

‘ನಗರಸಭೆಯ ಅಧಿಕಾರಿಗಳ ಜಾಣ ಕುರುಡುತನ, ನಿರ್ಲಕ್ಷ್ಯದಿಂದಾಗಿ ರಸ್ತೆಗಳ ನೈರ್ಮಲ್ಯ ಹಾಳಾಗುತ್ತಿದೆ. ಜನಸಾಮಾನ್ಯರು ಪಾದಚಾರಿ ಮಾರ್ಗದ ಸಮಸ್ಯೆಯನ್ನು ಎದುರಿಸುತ್ತಿರುವ ಹೊತ್ತಿನಲ್ಲಿಯೇ ಈ ರೀತಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಸುಬ್ಬರಾಯನ ಪೇಟೆ ನಿವಾಸಿ ಅವಿನಾಶ್ ಹೇಳಿದರು.

‘ಚಿಕ್ಕಬಳ್ಳಾಪುರ ತಾಲ್ಲೂಕಾಗಿ ಇದ್ದಾಗಲೇ ನಗರ ಎಷ್ಟೊ ಚೆನ್ನಾಗಿತ್ತು. ಜಿಲ್ಲಾ ಕೇಂದ್ರವಾಗಿ ದಶಕ ಸಮೀಪಿಸುತ್ತ ಬಂದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಗರದಲ್ಲಿ ಎಲ್ಲಿಯೂ ಸಹ ಸುಸಜ್ಜಿತವಾದ ಪಾದಚಾರಿ ಮಾರ್ಗವಿಲ್ಲ. ಹೋಗಲಿ ನಡೆದು ಹೋಗಲು ದಾರಿಯಾದರೂ ಇದೆಯೇ ಎಂದರೆ ಅಲ್ಲಿ ಕಸದ ರಾಶಿಗಳು ಎದುರಾಗುತ್ತವೆ. ಜನಸಾಮಾನ್ಯರ ತೊಂದರೆ ಆಲಿಸುವವರೇ ಇಲ್ಲ’ ಎಂದು ಕಂದವಾರ ಬಾಗಿಲು ನಿವಾಸಿ ಅನಂತರಾಮ್‌ ತಿಳಿಸಿದರು.

‘ನಗರ ಪ್ರವೇಶ ಮಾರ್ಗಗಳನ್ನು ಕೊಳಕು ಮಾಡುವ ಈ ಕೆಲಸಕ್ಕೆ ತುರ್ತಾಗಿ ಕಡಿವಾಣ ಹಾಕಬೇಕಾಗಿದೆ. ಇಂತಹ ಸಮಸ್ಯೆಗಳನ್ನು ಬೆಳೆಯಲು ಬಿಟ್ಟು ನಗರದೊಳಗೆ ಏನೇ ಅಭಿವೃದ್ಧಿ ಮಾಡಿದರೂ ನಗರದ ಸೌಂದರ್ಯ ಹೆಚ್ಚಿಸಲು ಸಾಧ್ಯವಿಲ್ಲ. ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಈ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಬೇಕಿದೆ’ ಎಂದು ನಗರ್ತಪೇಟೆ ನಿವಾಸಿ ಅಭಿರಾಮ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT