ಶನಿವಾರ, ಡಿಸೆಂಬರ್ 7, 2019
24 °C

ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ಸ್ಮಾರಕದ ಅಭಿವೃದ್ಧಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ಸ್ಮಾರಕದ ಅಭಿವೃದ್ಧಿ

ಬೀದರ್‌: ಹಿಂದೂ–ಮುಸ್ಲಿಮ್‌ ವಾಸ್ತುಶಿಲ್ಪದ ಪ್ರತೀಕವಾಗಿರುವ  ನಗರಕ್ಕೆ ಸಮೀಪದ ಫತೇಪುರದ ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ಸ್ಮಾರಕದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಒಟ್ಟು ₹ 30 ಲಕ್ಷ ವೆಚ್ಚದಲ್ಲಿ ಸ್ಮಾರಕದ ಜೀರ್ಣೋದ್ಧಾರ ಮಾಡುತ್ತಿದೆ.

ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ಸ್ಮಾರಕ ಹೈದರಾಬಾದ್‌ ಕರ್ನಾಟಕದಲ್ಲಿಯೇ ವಿಶಿಷ್ಟವಾಗಿದೆ. ಹಿಂದೂ–ಮುಸ್ಲಿಮ್‌ ವಾಸ್ತಶಿಲ್ಪಕ್ಕೆ ಕೈಗನ್ನಡಿಯಾಗಿದ್ದು, ಇಂದಿಗೂ ಧಾರ್ಮಿಕ ಸಮನ್ವಯತೆ ನೆಲೆಯಾಗಿ ನಿಂತಿದೆ. ಸಾಮಾನ್ಯವಾಗಿ ಮುಸ್ಲಿಮ್‌ ಅರಸರ ಗೋರಿಗಳೇ ಭವ್ಯ ಸ್ವರೂಪ ಪಡೆದುಕೊಂಡಿರುತ್ತವೆ. ರಾಜನಲ್ಲದಿದ್ದರೂ ಸಂತನ ಹೆಸರಲ್ಲಿ ಇಷ್ಟು ದೊಡ್ಡ ಸ್ಮಾರಕ ನಿರ್ಮಾಣ ಮಾಡಿರುವುದು ಅಚ್ಚರಿ ಮೂಡಿಸುತ್ತದೆ.

ಸ್ಮಾರಕದ ಗೊಮ್ಮಟವು ತಳಮಟ್ಟದಿಂದ 188 ಅಡಿ ಎತ್ತರದಲ್ಲಿದೆ. ಸ್ಮಾರಕದ ತಳಪಾಯ ಹಾಗೂ 20 ಅಡಿ ಎತ್ತರದ ವರೆಗಿನ ಕಾಮಗಾರಿ ಹಿಂದೂ ದೇವಾಲಯಗಳ ಮಾದರಿಯಲ್ಲಿಯೇ ಇದೆ. ಪರ್ಷಿಯನ್‌ ವಾಸ್ತುವಿನ್ಯಾಸಕಾರರು ಸ್ಥಳೀಯ ಕಟ್ಟಡ ಕಾರ್ಮಿಕರನ್ನು ಬಳಸಿ ಸ್ಮಾರಕ ನಿರ್ಮಿಸಿರುವ ಸಾಧ್ಯತೆ ಇದೆ. ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ನಿಧನದ ಮೊದಲು ಸ್ಮಾರಕ ನಿರ್ಮಿಸಲಾಯಿತೋ ಅಥವಾ ನಂತರ ಕಟ್ಟಲಾಯಿತೋ ಎನ್ನುವ ಬಗೆಗೆ ಸ್ಪಷ್ಟವಾದ ಮಾಹಿತಿ ಲಭ್ಯ ಇಲ್ಲ.

ಪಶ್ಚಿಮ ದಿಕ್ಕು ಹೊರತು ಪಡಿಸಿ ಮೂರು ದಿಕ್ಕಿನಲ್ಲೂ ಸ್ಮಾರಕಕ್ಕೆ ಪ್ರವೇಶ ದ್ವಾರಗಳಿವೆ. ಸ್ಮಾರಕದಲ್ಲಿ ಎರಡು ಗೋರಿಗಳೂ ಇವೆ.  ಸ್ಮಾರಕದ ಮೇಲ್ಮಹಡಿಯಲ್ಲಿ ಮಾತ್ರ ಮಹಿಳೆಯರ ಪ್ರವೇಶಕ್ಕೆ ಅವಕಾಶ ಇದೆ. ಸ್ಮಾರಕದ ಕೆಳ ಮಹಡಿಯಲ್ಲೂ ಎರಡು ಗೋರಿಗಳಿವೆ. ಕೆಳ ಮಹಡಿಯಲ್ಲಿ ಮಹಿಳೆಯರ ಪ್ರವೇಶ ನಿಷೇಧಿಸಲಾಗಿದೆ. 600 ವರ್ಷಗಳ ಹಿಂದೆ ನಿರ್ಮಿಸಿರುವ ಬೃಹತ್‌ ಕಟ್ಟಡ ನೋಡುಗರನ್ನು ಬೆರಗುಗೊಳಿಸುತ್ತದೆ.

ಫತೇಪುರದ ಗೊಮ್ಮಟವು ಬಹುತೇಕ ವಿಜಯಪುರದ ಗೋಲಗೊಮ್ಮಟದ ಮಾದರಿಯಲ್ಲಿಯೇ ಇದೆ. ಇಲ್ಲಿ ಸ್ವಲ್ಪಮಟ್ಟಿಗೆ ಪ್ರತಿಧ್ವನಿಯನ್ನೂ ಆಲಿಸಬಹುದಾಗಿದೆ.

ಜೀರ್ಣೋದ್ಧಾರಕ್ಕೆ ₹ 30 ಲಕ್ಷ: ‘ಐತಿಹಾಸಿಕ ಸ್ಮಾರಕದ ಅಭಿವೃದ್ಧಿ  ಕಾರ್ಯವನ್ನು  ರಾಜ್ಯ ಪುರಾತತ್ವ ಇಲಾಖೆ ₹ 30 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಸ್ಮಾರಕದ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆಗೆಯಲಾಗಿದೆ. ಹಾಳಾಗಿರುವ ಗಾರೆ ತೆಗೆದು ಹೊಸದಾಗಿ ಸುಣ್ಣದ ಗಾರೆ ಹಚ್ಚಲಾಗುತ್ತಿದೆ.

ಬಿದ್ದು ಹೋಗಿರುವ ಮರ್ಲಾನ್ ಹಾಗೂ ಮಿನಾರ್‌ಗಳನ್ನು ನಿರ್ಮಿಸುವ ಕಾರ್ಯ ನಡೆದಿದೆ’ ಎಂದು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧಾರವಾಡ ವೃತ್ತದ ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಪ್ರೇಮಲತಾ ಹೇಳುತ್ತಾರೆ.

ಇವರು ಯಾರು?

ಫತೇಪುರದಲ್ಲಿರುವುದು ಇರಾನ್‌ದ ಗಿಲಾನ್‌ ಮೂಲದ ಸಂತ ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ಅವರ ಸಮಾಧಿ. ಇವರು ನವದೆಹಲಿಯ ನಿಜಾಮುದ್ದಿನ್‌ ಔಲಿಯಾ ಹಾಗೂ ಹಜರತ್ ನಾಸಿರುದ್ದಿನ್ ರೌಷನ್‌ ಚಿರಾಗ್‌ ಅವರ ಶಿಷ್ಯರಾಗಿದ್ದಿರಬಹುದು.

ಫಕ್ರುಲ್‌ ಮುಲ್ಕ್‌ ಗಿಲಾನಿ ಚಿಕ್ಕವರಾಗಿದ್ದಾಗಲೇ ಧರ್ಮಯಾತ್ರೆ ಆರಂಭಿಸಿದ್ದರು. ದೆಹಲಿಯ ಮೊಹಮ್ಮದ್‌ ತುಘಲಕ್‌ ಅವರು ದೆಹಲಿಯಿಂದ ದೇವಗಿರಿಗೆ ರಾಜಧಾನಿ ಸ್ಥಳಾಂತರ ಮಾಡಿದಾಗ ಅವರೊಂದಿಗೆ ಗಿಲಾನಿ ಸಹ ದೇವಗಿರಿಗೆ ಬಂದಿದ್ದರು.

ಬಹಮನಿ ಸುಲ್ತಾನ ಅಹಮ್ಮದ್‌ ಶಾ ಬೀದರ್‌ ಅನ್ನು ರಾಜಧಾನಿಯನ್ನಾಗಿ ಮಾಡಿದ್ದ. 1428ರ ಆಸುಪಾಸಿನಲ್ಲಿ ಸಂತರ ತಂಡದೊಂದಿಗೆ ಗಿಲಾನಿ ಪಲ್ಲಕ್ಕಿಯಲ್ಲಿ ಕುಳಿತು ಬೀದರ್‌ಗೆ ಬಂದಿದ್ದ ಕಾರಣ ಇಲ್ಲಿನ ಜನ ಪಾಲ್ಕಿವಾಲೆ ಎಂದು ಕರೆಯುತ್ತಿದ್ದರು.

ಸುಲ್ತಾನ್‌ ಅಹಮ್ಮದ್‌ನ ಪುತ್ರ ಅಲ್ಲಾವುದ್ದಿನ್‌ನಿಗೆ ಶಾಯರಿಯಲ್ಲಿ ಬಹಳ ಆಸಕ್ತಿ ಇತ್ತು. ಆತ ತನ್ನ ಆಸ್ಥಾನದಲ್ಲಿ ಉರ್ದು ಕವಿಗಳಿಗೂ ಗೌರವದ ಸ್ಥಾನ ನೀಡಿದ್ದ. ದಖನಿ ಉರ್ದು ಕವಿ ಪದ್ಮರಾವ್‌ ಕದಂರಾವ್ ಅವರು ಮೊದಲ ಮಷನವಿ (ಪ್ರೇಮ ಮಹಾಕಾವ್ಯ) ಬರೆದಿದ್ದರು ಎಂದು ಪಾಕಿಸ್ತಾನದ ಉರ್ದು ಲೇಖಕ ಜಮೀಲ್‌ ಜಾಲಬಿ ಉಲ್ಲೇಖಿಸಿದ್ದಾರೆ.

ಪ್ರತಿಕ್ರಿಯಿಸಿ (+)