ಶುಕ್ರವಾರ, ಡಿಸೆಂಬರ್ 13, 2019
20 °C

ಬಿಕ್ಕಟ್ಟು ಸೃಷ್ಟಿಸಿದ ಹೆದ್ದಾರಿಯ ಇಕ್ಕಟ್ಟು!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಬಿಕ್ಕಟ್ಟು ಸೃಷ್ಟಿಸಿದ ಹೆದ್ದಾರಿಯ ಇಕ್ಕಟ್ಟು!

ರಾಯಚೂರು: ಇಲ್ಲಿನ ಉದಯನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕೆಲಸ ನನೆಗುದಿಗೆ ಬಿದ್ದಿರುವ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ.

ಶಾಲೆ ಎದುರಿನ ಎಸ್‌ಎಲ್‌ವಿ ನಗರ ಸಂಚಾರಿ ಬಸ್‌ ನಿಲ್ದಾಣ ಪಕ್ಕದಲ್ಲಿ ಸುಮಾರು 100 ಮೀಟರ್‌ನಷ್ಟು ಹೆದ್ದಾರಿ ಇಕ್ಕಟ್ಟಾಗಿಯೆ ಉಳಿದಿದೆ. ಖಾಸಗಿ ವ್ಯಕ್ತಿಗಳು ಕಟ್ಟಡ ತೆರವುಗೊಳಿಸಲು ಒಪ್ಪದ ಕಾರಣದಿಂದ ರಸ್ತೆ ಅಗಲೀಕರಣ ನನೆಗುದಿಗೆ ಬಿದ್ದಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಆದರೆ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ವಹಿಸುತ್ತಿಲ್ಲ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯಾರು ಮಾಡಬೇಕು ಎನ್ನುವ ಗೊಂದಲಕ್ಕೆ ಉತ್ತರ ಕಂಡುಕೊಳ್ಳುತ್ತಿಲ್ಲ.

ರೈಲ್ವೆ ನಿಲ್ದಾಣ ಮಾರ್ಗದಿಂದ ಅಂಬೇಡ್ಕರ್‌ ವೃತ್ತ ಹಾಗೂ ಕೇಂದ್ರ ಬಸ್‌ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು ಈ ಇಕ್ಕಟ್ಟಾದ ರಸ್ತೆ ಭಾಗದಲ್ಲಿ ಜಾಗರೂಕತೆ ವಹಿಸುವುದು ಅನಿವಾರ್ಯ. ರಸ್ತೆ ವಿಶಾಲವಾಗಿದೆ ಎಂದು ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಬೈಕ್‌ ಸವಾರರು ಧುತ್ತೆಂದು ಕಾಣಿಸುವ ಇಕ್ಕಟ್ಟು ನೋಡಿ ಮುಗ್ಗರಿಸಿ ಬೀಳುವ ಪ್ರಸಂಗಗಳು ಪ್ರತಿನಿತ್ಯ ನಡೆಯುತ್ತಿವೆ.

ಇದೇ ರೀತಿ ಲಾರಿ ಹಿಂದಿಕ್ಕಿ ಹೋಗುವಾಗ ಓರ್ವ ಯುವಕ ಹಾಗೂ ಓರ್ವ ಮಹಿಳೆ ಬೈಕ್‌ನಿಂದ ಜಾರಿಬಿದ್ದು ಪ್ರಾಣ ಕಳೆದು ಕೊಂಡಿರುವ ಪ್ರತ್ಯೇಕ ಅಪಘಾತ ಘಟನೆಗಳು ಈ ಹಿಂದೆ ನಡೆದಿವೆ. ರಾಷ್ಟ್ರೀಯ ಹೆದ್ದಾರಿ ಎಲ್ಲ ಕಡೆಗೂ ವಿಶಾಲವಾಗಿದ್ದರೂ ಇದೊಂದು ಜಾಗದಲ್ಲಿ ಮಾತ್ರ ಇಕ್ಕಟ್ಟಾಗಿ ಉಳಿದು ಜನರ ಪ್ರಾಣ ಕಂಟಕವಾಗಿ ಪರಿಣಮಿಸಿದೆ.

ಇಕ್ಕಟ್ಟಿನ ರಸ್ತೆಗೆ ಹೊಂದಿಕೊಂಡು ಬಸ್‌ ನಿಲ್ದಾಣ ಹಾಗೂ ತೆರೆದ ಚರಂಡಿ ಇವೆ. ಸಿಟಿ ಬಸ್‌ ಹಾಗೂ ಆಟೊ ಇಳಿಯುವಾಗ ಮತ್ತು ಹತ್ತುವಾಗ ಪ್ರಯಾಣಿಕರು ಸ್ವಲ್ಪ ಯಾಮಾರಿದರೂ ಚರಂಡಿಗೆ ಬೀಳುತ್ತಾರೆ. ಇಕ್ಕಟ್ಟಿನ ರಸ್ತೆಯಿಂದಾಗಿ ಆಗಾಗ ಸಂಚಾರ ದಟ್ಟಣೆ ಏರ್ಪಡುತ್ತದೆ.

ಜನರಿಗೆ ತೊಂದರೆ

ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣ ಕೂಡಲೇ ಮಾಡಬೇಕು.  ಅಪಘಾತ ತಪ್ಪಿಸಲು ಸರ್ಕಾರಿ ಅಧಿಕಾರಿಗಳು ತುರ್ತು ಕ್ರಮವಹಿಸಬೇಕು. ರಸ್ತೆ ಸಂಚಾರ ಸುಗಮಗೊಳಿಸಲು ಪರಿಹಾರ ಕಂಡು ಹಿಡಿಯಬೇಕು. ಅಗಲೀಕರಣ ವಿಳಂಬವಾದಷ್ಟು  ತೊಂದರೆ ಅನುಭವಿಸುವುದು ಹೆಚ್ಚಾಗುತ್ತಿದೆ.

ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಬಹುಜನ ಅಭಿವೃದ್ಧಿ ಸಮಿತಿ ಜಿಲ್ಲಾಧ್ಯಕ್ಷ ಎ. ಉರುಕುಂದಪ್ಪ ಆಲೂರು.

ಪ್ರಾಣ ಸಂಕಟವಾದ ಸಂಚಾರ

ನಗರದ ಆರ್‌ಟಿಒ ವೃತ್ತದಿಂದ ಗಂಜ್‌ ವೃತ್ತದವರೆಗೆ 6.2 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದ್ದು, ತಗ್ಗುಗಳು ಬಿದ್ದಿವೆ. ಇಲ್ಲಿ ಸಂಚಾರವೆಂದರೆ ಪ್ರಾಣ ಸಂಕಟ ಎನ್ನುವಂತಾಗಿದೆ. ಗೋಶಾಲೆ ರಸ್ತೆಯಲ್ಲಿ ಹಾಗೂ ಸ್ಟೇಷನ್‌ ವೃತ್ತದ ಸಮೀಪದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ರಸ್ತೆಯ ಒಂದು ಬದಿಯಲ್ಲೆ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಸಂಚಾರ ದಟ್ಟಣೆ ಹಾಗೂ ದೂಳಿನ ಸಮಸ್ಯೆಯೂ ಎದುರಿಸುವಂತಾಗಿದೆ.

ಹೆದ್ದಾರಿಯ ವಿವರ

167 ಸಂಖ್ಯೆಯ ಜಡಚರ್ಲಾ–ಹಗರಿ ರಾಷ್ಟ್ರೀಯ ಹೆದ್ದಾರಿ

6.2 ಕಿ.ಮೀ.  ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ

2 ಅಪಘಾತದಲ್ಲಿ ಮೃತರಾದವರು

ಪ್ರತಿಕ್ರಿಯಿಸಿ (+)