ಭಾನುವಾರ, ಡಿಸೆಂಬರ್ 8, 2019
21 °C

ಮತ್ತೆ ಯಥಾಸ್ಥಿತಿಗೆ ಮರಳಿದ ಸಂಚಾರ ಸಮಸ್ಯೆ!

ಸುಭಾಸ ಎಸ್. ಮಂಗಳೂರ Updated:

ಅಕ್ಷರ ಗಾತ್ರ : | |

ಮತ್ತೆ ಯಥಾಸ್ಥಿತಿಗೆ ಮರಳಿದ ಸಂಚಾರ ಸಮಸ್ಯೆ!

ಕಲಬುರ್ಗಿ: ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಅನೇಕ ಸುಧಾರಿತ ಕ್ರಮಗಳನ್ನು ಕೈಗೊಂಡರೂ ಸಂಚಾರ ವ್ಯವಸ್ಥೆ ಮತ್ತೆ ಹಳೆಯ ಸ್ಥಿತಿಗೆ ಮರಳಿದ್ದು, ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಆಟೊ ಚಾಲಕರು ರಸ್ತೆ ಮಧ್ಯೆದಲ್ಲಿಯೇ ಆಟೊಗಳನ್ನು ನಿಲುಗಡೆ ಮಾಡುತ್ತಿರುವುದು ಸಂಚಾರ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಬಗ್ಗೆ ಸಾಕಷ್ಟು ತಿಳಿವಳಿಕೆ, ಎಚ್ಚರಿಕೆ ನೀಡಿದರೂ ಆಟೊ ಚಾಲಕರು ಮಾತ್ರ ಬದಲಾಗಿಲ್ಲ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಹಾಗೂ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಪಿ.ಶಾಂತಿನಾಥ ಅವರು ತಿಂಗಳುಗಟ್ಟಲೆ ಕಾರ್ಯಾಚರಣೆ ನಡೆಸಿ ಸಂಚಾರ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಕೈಗೊಂಡಿದ್ದರು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.

ಅದರಲ್ಲೂ ಎಸ್‌ವಿಪಿ ವೃತ್ತದಲ್ಲಿ ಮೈಕ್ರೋಫೋನ್ ಮೂಲಕ ಸೂಚನೆ ನೀಡುವ ವ್ಯವಸ್ಥೆಯಿಂದ ಸಂಚಾರ ದಟ್ಟಣೆ ನಿಯಂತ್ರಣ ಸುಲಭ ಸಾಧ್ಯವಾಗಿತ್ತು. ಆದರೆ, ಆ ಸೇವೆ ಈಗ ಸ್ಥಗಿತಗೊಂಡ ಪರಿಣಾಮ ಮತ್ತೆ ಯಥಾಸ್ಥಿತಿ ಎನ್ನುವಂತಾಗಿದೆ.

ಎಸ್‌ವಿಪಿ ವೃತ್ತದ ನಾಲ್ಕೂ ರಸ್ತೆಗಳಲ್ಲಿ ಆಟೊಗಳು ಮತ್ತೆ ರಸ್ತೆಯನ್ನು ಆಕ್ರಮಿಸುತ್ತಿರುವುದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ನೌಕರರು ತೊಂದರೆ ಅನುಭವಿಸುವಂತಾಗಿದೆ.

‘ಆಟೊ ಚಾಲಕರ ನಿಯಂತ್ರಣ ಕಷ್ಟಸಾಧ್ಯ. ಎಷ್ಟೇ ಹೇಳಿದರೂ ಎರಡು ದಿನ ಸರಿಯಾಗಿರುತ್ತಾರೆ. ಮಾರನೇ ದಿನ ಮತ್ತೆ ಎಂದಿನಂತೆ ರಸ್ತೆ ಮಧ್ಯೆಯೇ ನಿಲ್ಲಿಸುತ್ತಾರೆ. ಹಲವು ಬಾರಿ ದಂಡ ವಿಧಿಸಿದರೂ ಪ್ರಯೋಜನವಾಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಕರ್ತವ್ಯನಿರತ ಸಂಚಾರ ಕಾನ್‌ಸ್ಟೆಬಲ್‌ಗಳು ಹೇಳುತ್ತಾರೆ.

‘ರೈಲುಗಳು ಬರುವ ಮತ್ತು ಹೊರಡುವ ವೇಳೆ ಎಸ್‌ವಿಪಿ ವೃತ್ತದಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಅದನ್ನು ನಿಯಂತ್ರಿಸಲಾಗುತ್ತಿದೆ. ಟ್ರಾಫಿಕ್ ಸಿಗ್ನಲ್‌ ಇದ್ದರೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಬಂದ್ ಮಾಡಿದ್ದೇವೆ. ಸಂಚಾರ ನಿಯಂತ್ರಣ ವಿಷಯದಲ್ಲಿ ವಾಹನ ಸವಾರರು, ಸಾರ್ವಜನಿಕರು ಮತ್ತು ಆಟೊ ಚಾಲಕರು ಪೊಲೀಸರೊಂದಿಗೆ ಕೈಜೋಡಿಸಬೇಕು’ ಎಂದು ಅವರು ಹೇಳುತ್ತಾರೆ.

ಎಸ್‌ವಿಪಿ ವೃತ್ತದಲ್ಲಿ ಸಿಗ್ನಲ್ ಬಂದ್

‘ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಈ ಹಿಂದೆ ಟ್ರಾಫಿಕ್ ಸಿಗ್ನಲ್ ಬಳಕೆ ಮಾಡಲಾಗುತ್ತಿತ್ತು. ಅದರಲ್ಲೂ ಕಡು ಬೇಸಿಗೆಯಲ್ಲೂ ಟ್ರಾಫಿಕ್ ಸಿಗ್ನಲ್‌ಗಳು ಆನ್ ಆಗಿರುತ್ತಿದ್ದವು. ಆದರೆ ಈಗ ಸಿಗ್ನಲ್ ಬಳಕೆ ಸ್ಥಗಿತಗೊಳಿಸಲಾಗಿದೆ. ಕೆಲವೊಮ್ಮೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿಲ್ಲ’ ಎಂದು ವಾಹನ ಸವಾರರು ಆರೋಪಿಸುತ್ತಾರೆ.

ವೈರ್‌ಲೆಸ್ ಮೈಕ್ ಸೂಚನೆ ಸ್ಥಗಿತ!

ಪಟೇಲ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚಾರ ಪೊಲೀಸರು ವೈರ್‌ಲೆಸ್‌ ಮೈಕ್ ಮೂಲಕ (ಮೈಕ್ರೋಫೋನ್‌) ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಚನೆ ನೀಡುತ್ತಿದ್ದರು. ಆ ವ್ಯವಸ್ಥೆ ಈಗ ಸ್ಥಗಿತಗೊಂಡಿದೆ. ಇದರಿಂದಾಗಿ ಪೊಲೀಸರು ಮತ್ತೆ ಎಂದಿನಂತೆ ಸೀಟಿ ಊದಿ ಸಂಚಾರ ದಟ್ಟಣೆ ನಿಯಂತ್ರಿಸಬೇಕಾಗಿದೆ.

ಸಂಚಾರ ಸಮಸ್ಯೆ

3 ಪ್ರಮುಖ ವೃತ್ತಗಳಲ್ಲಿ ಸಂಚಾರ ನಿತ್ಯ ಸಮಸ್ಯೆ

ಪ್ರಶಿಕ್ಷಣಾರ್ಥಿಗಳ ಕರ್ತವ್ಯ ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಕರ್ತವ್ಯ ನಿರ್ವಹಣೆ.

8 ಗಂಟೆ ಕಾನ್‌ಸ್ಟೆಬಲ್‌ಗಳ ಕರ್ತವ್ಯ ನಿರ್ವಹಣೆ

* *

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಆಟೊಗಳು ರಸ್ತೆ ಮಧ್ಯೆಯೇ ನಿಲ್ಲುತ್ತಿರುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲಾಗುವುದು.

ಪಿ.ಶಾಂತಿನಾಥ, ಇನ್‌ಸ್ಪೆಕ್ಟರ್, ಸಂಚಾರ ಠಾಣೆ

ಪ್ರತಿಕ್ರಿಯಿಸಿ (+)