ಶುಕ್ರವಾರ, ಡಿಸೆಂಬರ್ 6, 2019
17 °C

ಪುನರ್ಜನ್ಮ ಪಡೆದ ಸಾಮಾಜಿಕ ನಾಟಕಗಳು

ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ಪುನರ್ಜನ್ಮ ಪಡೆದ ಸಾಮಾಜಿಕ ನಾಟಕಗಳು

ಯಾದಗಿರಿ: ‘ಮಳೆ ಸ್ವಲ್ಪ ತಡವಾಗಿ, ಬೆಳೆ ಎಡ ಆಯ್ತು ಅಂತ ಯಾರೂ ಎದೆ ಒಡ್ಕೋಬ್ಯಾಡ್ರಪ್ಪೋ... ರೈತರು ಆತ್ಮಹತ್ಯೆ ಮಾಡ್ಕಂಡ್ರ ನಿಮಗೆ ಭೂಮಿತಾಯಿ ಆಣೆ ಆಗೇದ...’

ಎರಡು ವಾರಗಳಿಂದ ನಗರದಲ್ಲಿ ಬೀಡುಬಿಟ್ಟಿರುವ ಕೊಳ್ಳೂರಿನ ಗುರುಮಲ್ಲಿಕಾರ್ಜುನ ನಾಟ್ಯ ಕಂಪೆನಿಯ ಕಲಾವಿದರು ನಿತ್ಯ ಪ್ರದರ್ಶಿಸುತ್ತಿರುವ ‘ಪಲ್ಲಕ್ಕಿ ಪುಟ್ಟವ್ವ’ ನಾಟಕದಲ್ಲಿನ ಕಥಾ ನಾಯಕಿ ಪುಟ್ಟವ್ವ ನಾಟಕದ ಕೊನೆಯಲ್ಲಿ ಜನರಿಗೆ ಬೇಡಿಕೊಳ್ಳುವ ಪರಿ ಇದು.

ಬಂಡವಾಳಶಾಹಿಗಳು ಬಡ ಜನರ ಭೂಮಿ ಕಬಳಿಸಿ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಹಳ್ಳಿಯತ್ತ ಲಗ್ಗೆ ಇಡುತ್ತಾರೆ. ಅನಕ್ಷರಸ್ಥ ಜನರು ಊರಿನ ಬೆಟ್ಟಪ್ಪ ಸಾಹುಕಾರನನ್ನೇ ನಂಬುತ್ತಾರೆ. ಸಾಹುಕಾರ ಕೂಡ ಜನರ ಒಳಿತನ್ನೇ ಬಯಸುತ್ತಾನೆ. ಆತ ಬಂಡವಾಳ ಶಾಹಿಗಳಿಗೆ ಬಗ್ಗುವುದಿಲ್ಲ.

ಈ ಮಧ್ಯೆ ಊರಿನ ಸಾಮರಸ್ಯ ಹಾಳುಮಾಡಲು ಬಂಡವಾಳ ಶಾಹಿಗಳು ಕುತಂತ್ರಿಯೊಬ್ಬನನ್ನು ಸಿದ್ಧಪಡಿಸುತ್ತಾರೆ. ಅಂತಹ ಬಂಡವಾಳ ಶಾಹಿಗಳ ಷಡ್ಯಂತ್ರದ ವಿರುದ್ಧ ಪಲ್ಲಕ್ಕಿಯ ಸುಖಭೋಗದಲ್ಲಿದ್ದ ಪುಟ್ಟವ್ವ ಸಿಡಿದೇಳುತ್ತಾಳೆ. ಜನರನ್ನು ಜಾಗೃತಗೊಳಿಸುತ್ತಾಳೆ.

ಬಂಡವಾಳ ಶಾಹಿಗಳಿಗೆ ಜನಸಾಮಾನ್ಯರ ಭೂಮಿ ದಕ್ಕದಂತೆ ಮಾಡುತ್ತಾಳೆ. ಹೀಗೆ ಸಾಮಾಜಿಕ ನೆಲೆಗಟ್ಟಿನಲ್ಲಿ ಸೃಜನಶೀಲ ಹಾಡುಗಳು, ಅಶ್ಲೀಲವಲ್ಲದ ನವಿರುಹಾಸ್ಯದೊಂದಿಗೆ ‘ಪಲ್ಲಕ್ಕಿ ಪುಟ್ಟವ್ವ’ ವಿಶಿಷ್ಟ ಕಥಾ ಹಂದರದ ಮೂಲಕ ನಗರದ ನಾಟಕ ಪ್ರಿಯರ ಮನಸೂರೆಗೊಂಡಿದೆ. ಇದೊಂದೇ ನಾಟಕ ನಗರದಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು, ಜುಲೈ 3ರಂದು 25ನೇ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ.

ನಾಟಕ ಪರಂಪರೆಯೇ ನಶಿಸಿತು ಎನ್ನುವ ದಿನಗಳಲ್ಲಿ ನಗರದಲ್ಲಿ ಸಾಮಾಜಿಕ ನಾಟಕಗಳು ಮತ್ತೆ ಕಲಾವಿದರ ಕೈಬಲಪಡಿಸಿವೆ. ನಗರದಲ್ಲಿ ನಿತ್ಯ ನಡೆಯುವ ಎರಡು ಪ್ರದರ್ಶನಗಳಲ್ಲಿ ಜನರು ಕಿಕ್ಕಿರಿದು ನಾಟಕ ವೀಕ್ಷಿಸುತ್ತಿರುವುದು ಇದಕ್ಕೆ ಸಾಕ್ಷಿ. ನಾಟಕ ಅಭಿರುಚಿಗೆ ಜನ ಮರಳಿರುವ ಬಗ್ಗೆ ಮಲ್ಲಿಕಾರ್ಜುನ ನಾಟ್ಯ ಕಂಪೆನಿ ಮಾಲೀಕ ವೆಂಕಟೇಶ್ ದಂಡೀನ್ ಅಚ್ಚರಿಗೊಂಡಿದ್ದಾರೆ.

₹3 ಲಕ್ಷದಲ್ಲಿ ಕಂಪೆನಿ ಟೆಂಟ್: ಬೆಳಗಾವಿಯಿಂದ 450 ಕಿಲೊ ಮೀಟರ್‌ ದೂರದ ಯಾದಗಿರಿಗೆ ನಾಟಕ ಕಂಪೆನಿ ಟೆಂಟ್‌ ಹಾಕಲು ₹ 3 ಲಕ್ಷ ವೆಚ್ಚ ಮಾಡಲಾಗಿದೆ. ಬಸಪ್ಪ ಫಕೀರಪ್ಪ ದಂಡೀನ್ ಎಂಬ ಹಿರಿಯ ಕಲಾವಿದರ ಕುಟುಂಬದ ಸದಸ್ಯರೇ ಈ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.

ನಿತ್ಯ ₹22 ಸಾವಿರ ವೆಚ್ಚ ಬರುತ್ತದೆ. ಕಂಪೆನಿಯಲ್ಲಿ 30 ಮಂದಿ ಕಲಾವಿದರು ಇದ್ದಾರೆ. ಯಾದಿಗಿರಿಯಲ್ಲಿ ವೆಚ್ಚಕ್ಕೆ ಇದುವರೆಗೆ ಮೋಸವಾಗಿಲ್ಲ ಎಂಬುದಾಗಿ ಕಂಪೆನಿಯ ಮಾಲೀಕ ವೆಂಕಟೇಶ್ ದಂಡೀನ್ ಹೇಳುತ್ತಾರೆ.

ಎಲ್ಲವೂ ಸಾಮಾಜಿಕ ನಾಟಕಗಳು

ಅಶ್ಲೀಲದಿಂದ ದೂರವಾಗಿರುವ ನಾಟಕಗಳನ್ನೇ ಇಲ್ಲಿ ವೃತ್ತಿರಂಗಭೂಮಿ ಕಲಾವಿದರು ಅಭಿನಯಿಸುತ್ತಿದ್ದಾರೆ. ವೃತ್ತಿರಂಗಭೂಮಿಯ ಹಿನ್ನೆಲೆ ಅರಿತ ಹಿರಿಯ ನಟರೂ ಆದ ಮಹೇಶ್‌ ಕವಿ ರಚಿಸಿರುವ ‘ಪಲ್ಲಕ್ಕಿ ಪುಟ್ಟವ್ವ’, ‘ಮನಸ್ಸಿದ್ದರೆ ಮಾರಿ ತೋರಿಸು; ನೆನಪಾದರೆ ಫೋನು ಮಾಡು’, ‘ಗಚ್ಚಿನಮನೆ ಗೌರವ್ವ’ ಕೃಷ್ಣಮೂರ್ತಿ ಶಾಸ್ತ್ರಿ ವಿರಚಿತ ‘ಗ್ರಾಮ ಪಂಚಾಯಿತಿ ಗಂಗವ್ವ’ ನಾಟಕಗಳನ್ನು ಕಂಪೆನಿಯ ಕಲಾವಿದರು ಅಭಿನಯಿಸುತ್ತಾರೆ.

ಮಾಸ್ಟರ್ ಹಿರಣಯ್ಯ, ಕಮತಗಿ ಕಂಪೆನಿ, ಗುಬ್ಬಿ, ಬಸವಣ್ಯಪ್ಪ ಗೋಕಾಕ ಹೀಗೆ ನಾನಾ ರಂಗಭೂಮಿಯಲ್ಲಿ ಪ್ರಬುದ್ಧತೆ ಮತ್ತು ಪ್ರಕ್ವತೆ ಪಡೆದ ಕಲಾವಿದರೇ ಇಲ್ಲಿ ಅಭಿನಯಿಸುತ್ತಿರುವುದು ನಾಟಕಗಳ ಆಕರ್ಷಣೆ ಹೆಚ್ಚಲು ಕಾರಣವಾಗಿದೆ.

ಕಲಾವಿದರು ಯಾರು?

ಪಲ್ಲಕ್ಕಿ ಪುಟ್ಟವ್ವ ನಾಟಕದಲ್ಲಿ ಪುಟ್ಟವ್ವನ ಪಾತ್ರದಲ್ಲಿ ಜ್ಯೋತಿ ಕಲ್ಲೂರು ಹಾಗೂ ಖಾದರ್ ಸಾಬ್‌–ಲಿಂಗರಾಜ್ ಕೊಲ್ಲೂರು, ಬೆಟ್ಟಪ್ಪ ಸಾಹುಕಾರ–ವಿಜಯಶೇಖರ,  ಉರಿಗೊಳ್ಳ ಮಾದಪ್ಪ–ಮಹೇಶ ಕವಿ, ಅಂಬಾದಾಸ್–ಕಿರಣ ಮಂಗಳೂರ, ಕಾಳಿದಾಸ–ಮಲ್ಲೇಶ ಕಲ್ಲೂರ ಹೀಗೆ ಅಭಿನಯ ನೈಪುಣ್ಯತೆ ಪಡೆದ ಹಲವು ಕಲಾವಿದರು ಇಲ್ಲಿ ಪ್ರದರ್ಶನಗೊಳ್ಳುವ ಸಾಮಾಜಿಕ ನಾಟಕಗಳ ಪ್ರತಿಯೊಂದು ಪಾತ್ರಗಳಿಗೆ ಸಹಜ ಅಭಿನಯದಿಂದ ಶಕ್ತಿ ತುಂಬಿದ್ದಾರೆ.

ಪ್ರದರ್ಶನಕ್ಕೆ ತಗುಲುವ ವೆಚ್ಚ

₹3 ಲಕ್ಷ ಟೆಂಟ್‌ ಹಾಕಲು ತಗಲುವ ಒಟ್ಟು ವೆಚ್ಚ

25ನೇ ಪ್ರದರ್ಶನ ಇಂದು ‘ಪಲ್ಲಕ್ಕಿ ಪುಟ್ಟವ್ವ’ ನಾಟಕ ಜುಲೈ 3ರಂದು 25ನೇ ಪ್ರದರ್ಶನ ಕಾಣಲಿದೆ.

₹22ಸಾವಿರ ಪ್ರತಿನಿತ್ಯ ತಗುಲುವ ಒಟ್ಟು ಖರ್ಚು

* * 

ಸಿನಿಮಾ, ಟಿವಿ, ಮೊಬೈಲ್‌ಗಳಿಂದ ಜನ ಬೇಸತ್ತಿದ್ದಾರೆ. ಉತ್ತಮ ಹಾಸ್ಯ, ಕಥೆ, ಸಂದೇಶ ಇರುವ ನಾಟಕಗಳಿಗೆ ಯಾವತ್ತೂ ಪ್ರೇಕ್ಷಕರ ಕೊರತೆ ಉಂಟಾಗಿಲ್ಲ.

ಮಹೇಶ ಕವಿ

ನಾಟಕ ಸಂಭಾಷಣಕಾರ

ಪ್ರತಿಕ್ರಿಯಿಸಿ (+)