ಭಾನುವಾರ, ಡಿಸೆಂಬರ್ 8, 2019
21 °C

ಗೋಕಟ್ಟೆ, ಅರಣ್ಯವಿರುವ ಗ್ರಾಮದಲ್ಲಿ ಸಮೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಟ್ಟೆ, ಅರಣ್ಯವಿರುವ ಗ್ರಾಮದಲ್ಲಿ ಸಮೃದ್ಧಿ

ಸಿರಿಗೆರೆ: ‘ಗೋಕಟ್ಟೆ ಹಾಗೂ ಅರಣ್ಯ ಪ್ರದೇಶವಿರುವ ಊರು ಸಮೃದ್ಧವಾಗಿ ಇರುತ್ತದೆ. ಆದರೆ, ಈಚಿನ ದಿನಗಳಲ್ಲಿ ಮಾನವ ಸ್ವಾರ್ಥ ಸಾಧನೆಗೆ ಕೆರೆಗಳನ್ನು ಒತ್ತುವರಿ ಮಾಡುತ್ತಿದ್ದಾನೆ. ಗೋಕಟ್ಟೆಗಳನ್ನು ನಾಶ ಮಾಡುತ್ತಿದ್ದಾನೆ. ಹೀಗಾಗಿ ಮಳೆ, ಬೆಳೆ ಇಲ್ಲವಾಗಿದೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ಸಮೀಪದ ಡಿ.ಮೆದಕೇರಿಪುರದಲ್ಲಿ ಭಾನುವಾರ  ಹಮ್ಮಿಕೊಂಡ ‘ನಮ್ಮೂರು  ನಮ್ಮ ಕೆರೆ’ ಹಸ್ತಾಂತರ  ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ‘ಸುಮಾರು 40 ವರ್ಷಗಳಿಂದ ಈ ಕೆರೆ ಬತ್ತಿದ್ದನ್ನು ನಾವು ನೋಡಿರಲಿಲ್ಲ. ಇಡೀ ಊರಿನ ಜನ ತಮ್ಮ ದೈನಂದಿನ ಕಾರ್ಯಗಳಿಗೆ ಇದೇ ಕೆರೆಯ ನೀರನ್ನು ಬಳಸುತ್ತಿದ್ದರು. ಒಂದು ಬಾರಿ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಈ ಕೆರೆಯ ನೀರನ್ನು ಶುದ್ಧಿಕರಿಸಿದರು.

ಆಗ ಅದರಲ್ಲಿ ಕ್ರಿಮಿಕೀಟಗಳು ಕಂಡುಬಂದವು. ಇದಾದ ಬಳಿಕ ಕೊಳವೆಬಾವಿಗಳಿಗೆ ಆದ್ಯತೆ ನೀಡಲಾಯಿತು. ಕೆರೆಯ ಬಳಕೆ ಕಡಿಮೆಯಾಗುತ್ತಿದ್ದಂತೆ ಒತ್ತುವರಿ ಸಮಸ್ಯೆ ಶುರುವಾಯಿತು’ ಎಂದು ಸ್ವಾಮೀಜಿ ತಿಳಿಸಿದರು.

‘ಕೆರೆಯ ಸ್ಥಿತಿಯನ್ನರಿತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆ ಅಭಿವೃದ್ಧಿ ಸಮಿತಿ, ಪ್ರವೀಣ್‌ಚಂದ್‌ ಮೈನ್ಸ್‌, ನಾರಾಯಣ ಮೈನ್ಸ್‌ ಮತ್ತು ಅಳಗವಾಡಿ ಗ್ರಾಮಪಂಚಾಯ್ತಿಯವರು ಕೆರೆಯ ಹೂಳೆತ್ತಿಸಿದರು. ರೈತರು ಹೊಲಗಳಿಗೆ ಮಣ್ಣು ಹಾಕಿಸಿಕೊಂಡಿದ್ದಾರೆ. ಸುತ್ತಮುತ್ತ ಯಾವ ಕೆರೆಯಲ್ಲೂ ನೀರಿಲ್ಲ. ನೀವು ಅಭಿವೃದ್ಧಿಪಡಿಸಿದ ಕಾರಣ ಇಷ್ಟಾದರೂ ನೀರು ನಿಂತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಗತಿಗೆ ಪ್ರಾಯಶಃ ಇದೇ ಮೊದಲ ಮೆಟ್ಟಿಲು. ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂದು ಊಹಿಸಬಹುದು ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಮಾತನಾಡಿ, ‘ಕೆರೆಯ ಅಂದ ಮತ್ತು ಸ್ವಚ್ಛತೆಯನ್ನು ಹೆಚ್ಚಿಸುವ ಕಾರ್ಯಕ್ರಮವಿದು. ದುರದೃಷ್ಟವಶಾತ್‌ ಕೆರೆಯಲ್ಲಿ ಮಳೆಬಾರದೆ ನೀರು ಕಡಿಮೆ ಇದೆ.

ಮಳೆ ಬಂದು ತುಂಬಿದರೆ ಬಾಗಿನ ಕಾರ್ಯಕ್ರಮ ಹಮ್ಮಿಕೊಂಡಾಗ ಮತ್ತೊಮ್ಮೆ ಬರುತ್ತೇನೆ’ ಎಂದು ಭರವಸೆ ನೀಡಿದರು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ, ಜಿಲ್ಲಾ ನಿರ್ದೇಶಕರಾದ ಬಿ.ಗಣೇಶ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಟಿಎಂಪಿ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಮ್ಮ, ಅಳಗವಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮಿ ನರಸಿಂಹಮೂರ್ತಿ, ಜಾನ್‌ಮೈನ್ಸ್‌ ಧನಂಜಯ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗಂಗಾಧರ, ಚಂದ್ರಶೇಖರ ಪಾಟೀಲ್‌, ತೀರ್ಥಪ್ಪ, ಪಾಂಡುನಾಯಕ ಭಾಗವಹಿಸಿದ್ದರು. ಕೃಷಿ ಮೇಲ್ವಿಚಾರಕ ಮೋಹನ್‌ ಸ್ವಾಗತಿಸಿದರು. ಮೇಲ್ವಿಚಾರಕಿ ಯಶೋದಾ ವಂದಿಸಿದರು. ತಾಲ್ಲೂಕು ಯೋಜನಾಧಿಕಾರಿ ಉಮೇಶ್‌ ಕಾರ್ಯಕ್ರಮ ನಿರೂಪಿಸಿದರು.

ಅಂಕಿ–ಅಂಶ

15 ಎಕರೆ ಕೆರೆಯ ವಿಸ್ತೀರ್ಣ

₹ 27ಲಕ್ಷ ಹೂಳೆತ್ತಲು ಖರ್ಚಾದ ಮೊತ್ತ

ಈ ಕೆರೆಯನ್ನು ಸರ್ಕಾರದ ಕೆರೆ ಎಂದು ಘೋಷಣೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ಸಣ್ಣ ನೀರಾವರಿ ಇಲಾಖೆ ಮತ್ತು ಜಿ.ಪಂ. ಎಂಜಿನಿಯರ್ ಜತೆ ಚರ್ಚಿಸುತ್ತೇನೆ.

ಎಚ್.ಆಂಜನೇಯ, ಸಚಿವ

ಪ್ರತಿಕ್ರಿಯಿಸಿ (+)