ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್‌ ಪ್ರಶಸ್ತಿ ಗಿಟ್ಟಿಸಿದ ‘ಪದವೀಧರರ ಸಂಘ’

Last Updated 3 ಜುಲೈ 2017, 7:36 IST
ಅಕ್ಷರ ಗಾತ್ರ

ಶಿವಮೊಗ್ಗ: ಮೂರು ಬಾರಿ ‘ಉತ್ತಮ ಸಹಕಾರ ಸಂಘ’ ಪ್ರಶಸ್ತಿ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿ ಶಿವಮೊಗ್ಗ ನಗರದ ಪದವೀಧರರ ಸಹಕಾರ ಸಂಘಕ್ಕೆ ಸಲ್ಲುತ್ತದೆ. ಮೈಸೂರಿನ ಪದವೀಧರರ ಸಂಘದ ಮಾದರಿಯಲ್ಲಿ ಪದವಿ ಪಡೆದ ಯುವಕ ರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವ ಗುರಿ ಯೊಂದಿಗೆ 1971ರಲ್ಲಿ ಆರಂಭವಾದ ಸಂಘ ಇಂದು ತನ್ನ ಸದಸ್ಯರಿಗೆ ಕೋಟಿಗಟ್ಟಲೆ ಸಾಲ ನೀಡುವಷ್ಟು ಸದೃಢವಾಗಿ ಬೆಳೆದು ನಿಂತಿದೆ.

45 ವರ್ಷಗಳ ಹಿಂದೆ ಕೇವಲ 163 ಸದಸ್ಯರು ಸೇರಿ ಕೇವಲ ₹ 8,276 ಷೇರು ಬಂಡವಾಳ, ₹ 1,001 ಠೇವಣಿ  ಸಂಗ್ರಹಿಸಿ ಆರಂಭಿಸಿದ್ದ ಈ ಸಂಘ ಇಂದು 5,498 ಸದಸ್ಯರನ್ನು ಹೊಂದಿದ್ದು, ₹ 20.45 ಕೋಟಿ ಸಾಲ ವಿತರಿಸಿದೆ. ₹ 25.49 ಕೋಟಿ ಠೇವಣಿ ಸಂಗ್ರಹಿಸಿದೆ. ₹ 1.65 ಕೋಟಿ ಷೇರು ಬಂಡವಾಳ ಹೊಂದಿದೆ.

ಸಂಘ  ಇಟ್ಟಿರುವ ಆಪತ್‌ಧನವೇ ₹ 1.26 ಕೋಟಿ  ಇದೆ. 2017ರ ಹಣಕಾಸಿನ ವರ್ಷದ ಮುಕ್ತಾಯಕ್ಕೆ ಸಂಘ ₹50.63 ಲಕ್ಷ ನಿವ್ವಳ ಲಾಭ ಗಳಿಸಿದೆ. ಕಳೆದ ಮೂರು ವರ್ಷಗಳಿಂದಲೂ ಲಾಭದ ಪ್ರಮಾಣ ₹ 50 ಲಕ್ಷದ ಆಸುಪಾಸಿನಲ್ಲಿ ಇದೆ. ಸದಸ್ಯರಿಗೆ ₹ 20 ಕೋಟಿಗೂ ಹೆಚ್ಚು ಸಾಲ ನೀಡಿದ್ದರೂ, ವಸೂಲಾಗದ ಸುಸ್ತಿ ಸಾಲ ಶೇ 2.09 ಮಾತ್ರ. ಸಂಘದ ಸಾಧನೆಗೆ 1993,  2016ರಲ್ಲಿ ಜಿಲ್ಲಾ ಉತ್ತಮ ಸಹಕಾರ ಸಂಘ ಪ್ರಶಸ್ತಿ, 2016ರಲ್ಲೇ ರಾಜ್ಯ ಉತ್ತಮ ಸಹಕಾರ ಸಂಘ ಪ್ರಶಸ್ತಿ ಸಂದಿವೆ.

ಸ್ವಂತ ಬಹುಮಹಡಿ ಕಟ್ಟಡ: ಡಿವಿಎಸ್‌ ವಿದ್ಯಾಸಂಸ್ಥೆಯ ಚಿಕ್ಕ ಕೊಠಡಿಯಲ್ಲಿ ಆರಂಭವಾಗಿದ್ದ ಸಂಘ ಇಂದು ಪ್ರತಿಷ್ಠಿತ ಕುವೆಂಪು ರಸ್ತೆಯಲ್ಲಿ ಸ್ವಂತ ಬಹುಮಹಡಿ ಕಟ್ಟಡ ಹೊಂದಿದೆ. 125 ಚದರ ಅಡಿ ವಿಸ್ತೀರ್ಣದ ನಾಲ್ಕು ಮಹಡಿಗಳ ಈ ಕಟ್ಟಡವನ್ನು 1990ರಲ್ಲಿ ₹ 1.13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಮೊದಲ ಮಹಡಿಯಲ್ಲಿ ಸಂಘದ ಕಚೇರಿ ಇದೆ. ನೆಲಮಹಡಿ, ಎರಡು, ಮೂರು ಮತ್ತು ನಾಲ್ಕನೇ ಮಹಡಿಗಳನ್ನು ಬಾಡಿಗೆ ನೀಡಲಾಗಿದೆ. ವಾರ್ಷಿಕ ₹ 20 ಲಕ್ಷ ಬಾಡಿಗೆ ಹಣ ಸಂಘದ ಖಜಾನೆಗೆ ಜಮೆಯಾಗುತ್ತದೆ.

ಕನ್ನಡದಲ್ಲೇ ಸಂಪೂರ್ಣ ವ್ಯವಹಾರ: ಸಂಘದ ಎಲ್ಲ ವ್ಯವಹಾರವನ್ನೂ ಕಂಪ್ಯೂಟರೀಕರಣ ಮಾಡಲಾಗಿದೆ. ಲ್ಯಾನ್‌ ಸಿಸ್ಟಂ ಮೂಲಕ ಸಂಪೂರ್ಣ ವ್ಯವಹಾರವನ್ನು ಕನ್ನಡದಲ್ಲೇ ನಿರ್ವಹಿಸಲಾಗುತ್ತಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಸಹಕಾರ ಸಂಘ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸದಸ್ಯರಿಗೆ ಸಾಲ ವಿತರಣೆಯ ವಿಧಾನ: ₹ 1ಲಕ್ಷ ವಿಶೇಷ ಸಾಲ, ₹ 2 ಲಕ್ಷ ವೇತನ ಆಧಾರಿತ ಸಾಲ, ₹ 1ಲಕ್ಷ ವೈಯಕ್ತಿಕ ಸಾಲ ನೀಡಲಾಗುತ್ತದೆ. ವಾರ್ಷಿಕ ಬಡ್ಡಿ ದರ ಶೇ 12 ನಿಗದಿ ಮಾಡಲಾಗಿದೆ. ಶೇ 11.5ರ ವಾರ್ಷಿಕ ಬಡ್ಡಿದರದಲ್ಲಿ ₹ 1 ಲಕ್ಷದವರೆಗೂ ಶೈಕ್ಷಣಿಕ ಸಾಲ, ₹ 50 ಲಕ್ಷದವರೆಗೂ ಅಡಮಾನ ಸಾಲ, ನಿವೇಶನ ಖರೀದಿ ಸಾಲ, ಶೇ 10ರ ಬಡ್ಡಿ ದರದಲ್ಲಿ ₹ 50 ಲಕ್ಷದವರೆಗೂ ಗೃಹ ನಿರ್ಮಾಣ ಸಾಲ,  ₹ 4 ಲಕ್ಷದವರೆಗೂ ಚಿನ್ನ ಅಡಮಾನ ಸಾಲ, ₹ 8 ಲಕ್ಷ ದವರೆಗೆ ಕಾರು ಖರೀದಿಸಲು ಸಾಲ ನೀಡಲಾಗುತ್ತಿದೆ.

ಸಹ ಸದಸ್ಯತ್ವ ಹೊಂದಿರುವ ಸಂಘ ಸಂಸ್ಥೆಗಳಿಗೆ ಶೇ 12ರ ಬಡ್ಡಿದರದಲ್ಲಿ ₹ 2 ಕೋಟಿವರೆಗೆ ಸಾಲ ನೀಡಲಾಗುತ್ತಿದೆ. ಗ್ರಾಹಕರು ಇಟ್ಟ ಠೇವಣಿ ಮೇಲೆ ಶೇ 7ರಿಂದ 9ರವರೆಗೆ ಬಡ್ಡಿ ನೀಡಲಾಗುತ್ತಿದೆ. ಸದಸ್ಯರಿಗೆ ಇತರೆ ಸೌಲಭ್ಯಗಳು: ಸದಸ್ಯರು ಮರಣ ಹೊಂದಿದರೆ ಸುರಕ್ಷಾ ನಿಧಿ ಅಡಿ ₹ 10 ಸಾವಿರದಿಂದ ₹ 30 ಸಾವಿರದವರೆಗೆ ನೆರವು ನೀಡಲಾಗು ತ್ತದೆ. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡಲಾಗುತ್ತಿದೆ. 2021ರಲ್ಲಿ ಸಂಸ್ಥೆಯು 50 ವರ್ಷ ಪೂರೈಸಲಿದ್ದು, ಅಷ್ಟರ ಒಳಗೆ ಹೊಸ ಬಡಾವಣೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.

ಸಂಘದ ಅಭಿವೃದ್ಧಿಯ ಹರಿಕಾರರು
ಅಂದಿನ ಹೈಕೋರ್ಟ್ ನ್ಯಾಯಮೂರ್ತಿ ಅನ್ವರ್ ಸಂಘದ ಬೈಲಾ ಸಿದ್ಧಪಡಿಸಿದ್ದರು. ಸಂಘದ ಪ್ರಥಮ ಅಧ್ಯಕ್ಷ ಆರ್.ಆರ್. ರುದ್ರಪ್ಪ, ಉಪಾಧ್ಯಕ್ಷ ವಿ.ದೇವೇಂದ್ರ,
ಸತೀಶ್ ಕುಮಾರ್ ಶೆಟ್ಟಿ, ಜೋಗದ ವೀರಪ್ಪ, ಎಸ್‌.ಪಿ. ದಿನೇಶ್‌, ಡಾ.ಚಿದಾನಂದ ಸ್ವಾಮಿ, ಎಸ್‌.ಎಚ್‌.ಪ್ರಸನ್ನ, ಎಚ್‌.ಸಿ.ಸುರೇಶ್, ಭುವನೇಶ್ವರಿ, ಟಿ.ಜಗದೀಶ್, ಎಸ್‌.ಕೆ. ಕೃಷ್ಣಮೂರ್ತಿ, ಸಿ.ಎಂ. ಪಂಚಾಕ್ಷರಯ್ಯ, ಪಿ.ರುದ್ರೇಶ್ ಅವರ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಶಿವಮೊಗ್ಗ ಸುಬ್ಬಣ್ಣ, ಕೆ.ಎಚ್‌.ಶ್ರೀನಿವಾಸ್‌, ಆಯನೂರು ಮಂಜುನಾಥ್, ಡಿ.ಎಚ್‌.ಶಂಕರಮೂರ್ತಿ, ಜಿ.ಮಾದಪ್ಪ ಸಂಘದ ಗಣ್ಯ ಸದಸ್ಯರು. ಪ್ರಸ್ತುತ ಎಸ್‌.ಪಿ.ದಿನೇಶ್‌ ಅಧ್ಯಕ್ಷರಾಗಿ, ಎಸ್‌.ಮಮತಾ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

* * 

ಇದುವರೆಗೂ ಆಡಳಿತ ನಡೆಸಿದ ನಿರ್ದೇಶಕರು, ಪದಾಧಿಕಾರಿಗಳ ನಿಸ್ವಾರ್ಥ ಸೇವೆ, ಸದಸ್ಯರ ಸಾಲ ಮರುಪಾವತಿಯ ಬದ್ಧತೆ ಸಂಘದ ಅಭಿವೃದ್ಧಿಗೆ ಪ್ರಮುಖ ಕಾರಣ.
–ಎಸ್‌.ಪಿ.ದಿನೇಶ್
ಅಧ್ಯಕ್ಷ, ಪದವೀಧರರ ಸಹಕಾರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT