ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ ಕ್ಷೇತ್ರದಲ್ಲಿ ಚಾತುರ್ಮಾಸ್ಯ: ಸಂತಸ

Last Updated 3 ಜುಲೈ 2017, 8:58 IST
ಅಕ್ಷರ ಗಾತ್ರ

ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾ ಸಿಕ ಬಾಹುಬಲಿ ಸ್ವಾಮಿ ಕ್ಷೇತ್ರವಾದ ವೇಣೂರಿನಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುವ ಸೌಭಾಗ್ಯ ದೊರಕಿರುವುದು ಅತೀವ ಸಂತೋಷವನ್ನು ಉಂಟು ಮಾಡಿದೆ ಎಂದು ಪ್ರಸಂಗಸಾಗರ ಮುನಿ ಮಹಾರಾಜರು ಹೇಳಿದರು.

ಚಾತುರ್ಮಾಸ್ಯದ ವ್ರತ ಆಚರಿಸಲು ಭಾನುವಾರ ವೇಣೂರಿಗೆ ಬಂದ ಸಂದ ರ್ಭದಲ್ಲಿ ಊರ - ಪರವೂರ ಶ್ರಾವಕ - ಶ್ರಾವಕಿಯರು ಹಾಗೂ ಭಕ್ತರು ನೀಡಿದ ಭವ್ಯ ಸ್ವಾಗತ ಸ್ವೀಕರಿಸಿದ ಅವರು ಮಾತನಾಡಿದರು.

ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಎಲ್ಲರೂ ಭಾಗಿಗಳಾಗಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು. ಚಾತು ರ್ಮಾಸದ ಅಂಗವಾಗಿ ಇದೇ 14 ರಂದು ಕಲಶ ಸ್ಥಾಪನೆ ಹಾಗೂ 19 ರಂದು ಗುರು ಪೂರ್ಣಿಮೆ ನಿಮಿತ್ತ ಗುರುಪೂಜೆ ನಡೆಯಲಿದೆ. ಅಂದು ವಿಶೇಷ ಪ್ರವಚನ ನೀಡುವುದಾಗಿ ತಿಳಿಸಿದ ಮುನಿಗಳು, ಎಲ್ಲರೂ ಸಭೆಯಲ್ಲಿ ಭಾಗವಹಿಸಬೇಕು ಎಂದರು.

ಯಾತ್ರಿ ನಿವಾಸದಲ್ಲಿ ಚಾತುರ್ಮಾಸ್ಯ ಕಚೇರಿಯನ್ನು ಉದ್ಘಾಟಿಸಿದ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಕಲುಷಿತ ವಾತಾವರಣವಿದ್ದು, ಪೂಜ್ಯರ ಚಾತುರ್ಮಾಸ್ಯದಿಂದ ಇಡೀ ಜಿಲ್ಲೆ ಪವಿತ್ರವಾಗಿದೆ. ಅಹಿಂಸಾ ಪರಮೋ ಧರ್ಮ ಎಂಬ ತತ್ವದೊಂದಿಗೆ ಪೂಜ್ಯರ ಉಪದೇಶದಿಂದ ಎಲ್ಲರಿಗೂ ಧರ್ಮ ಲಾಭವಾಗಲಿ.

ಪರಸ್ಪರ ದ್ವೇಷ ಮರೆತು ಪ್ರೀತಿ - ವಿಶ್ವಾಸದಿಂದ ಹಾಗೂ ಅಹಿಂಸಾ ಧರ್ಮದ ಪಾಲನೆಯೊಂದಿಗೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ಪುರ ಪ್ರವೇಶ ಸಂದರ್ಭ ಮುನಿಗಳಿಗೆ ಪುಷ್ಪವೃಷ್ಟಿಯೊಂ ದಿಗೆ ಶ್ರಾವಕ - ಶ್ರಾವಕಿಯರು ಪಾದ ಪೂಜೆ ಮಾಡಿ, ಭಕ್ತಿಪೂರ್ವಕ ನಮನ ಸಲ್ಲಿಸಿದರು. ಬಂಟ್ವಾಳ - ವೇಣೂರು ಹೆದ್ದಾರಿ ಬದಿಯಿಂದ ಬಾಹುಬಲಿ ಸಭಾ ಭವನದವರೆಗೆ ಭವ್ಯ ಮೆರವಣಿಗೆಯಲ್ಲಿ ಮುನಿಗಳನ್ನು ಕರೆತರಲಾಯಿತು.

ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ ಮಾಡಿ, ಬಾಹುಬಲಿ ಮೂರ್ತಿಯ ದರ್ಶನ ಪಡೆದು ಮುನಿಗಳು, ಬಾಹುಬಲಿ ಸಭಾಭವನದಲ್ಲಿ ಮಂಗಲ ಪ್ರವಚನ ನೀಡಿ ಆಶೀರ್ವದಿಸಿದರು.

ಸಚಿವ ರಮಾನಾಥ ರೈ ಮುನಿಗಳ ಆಶೀರ್ವಾದ ಪಡೆದರು. ಶಾಸಕ ಕೆ. ಅಭಯಚಂದ್ರ ಜೈನ್, ಉಜಿರೆಯ ಪ್ರೊ.ಎಸ್ ಪ್ರಭಾಕರ್, ಮಂಗಳೂರಿನ ಉದ್ಯಮಿಗಳಾದ ರತ್ನಾಕರ ಜೈನ್, ಪುಷ್ಪ ರಾಜ ಜೈನ್, ಯಶೋಧರ ಪೂವಣಿ, ಪದ್ಮಶೇಖರ ಜೈನ್, ಜಿನರಾಜ ಆರಿಗ ಪಚ್ಚಾಜೆ, ಪದ್ಮಶೇಖರ ಜೈನ್, ಎನ್. ಪ್ರೇಮ್‌ಕುಮಾರ್ ಹೊಸ್ಮಾರು, ರಾಜಶ್ರೀ ಎಸ್.ಹೆಗ್ಡೆ, ಹರೀಶ್ ಪೂಂಜ, ಜಯಂತ ಕೋಟ್ಯಾನ್ ಭಾಗವಹಿಸಿದ್ದರು.

* * 

ನಿತ್ಯವೂ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ, ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು. ಕೆಟ್ಟ ಅಂಶಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಸಾರ್ಥಕ ಜೀವನ ನಡೆಸಬೇಕು
ಪ್ರಸಂಗಸಾಗರ ಮುನಿ ಮಹಾರಾಜರು
ಜೈನ ಮುನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT