ಶನಿವಾರ, ಡಿಸೆಂಬರ್ 14, 2019
21 °C

ನಾಯಿಗಳ ಕಾರುಬಾರು: ಭಯದಲ್ಲಿ ಜನರು!

ಯೋಗೇಶ್‌ ಮಾರೇನಹಳ್ಳಿ Updated:

ಅಕ್ಷರ ಗಾತ್ರ : | |

ನಾಯಿಗಳ ಕಾರುಬಾರು: ಭಯದಲ್ಲಿ ಜನರು!

ಮಂಡ್ಯ: ರಸ್ತೆ ಬದಿ ಫಾಸ್ಟ್‌ಫುಡ್‌ ಅಂಗಡಿ, ಚಿಕನ್‌– ಮಟನ್‌ ಸೆಂಟರ್‌, ಮಿಲ್ಟ್ರಿ ಹೋಟೆಲ್‌ಗಳ ಹಾವಳಿ ಯಿಂದಾಗಿ ನಗರದಾದ್ಯಂತ ಬೀದಿನಾಯಿ ಗಳ ಹಾವಳಿ ವಿಪರೀತವಾಗಿದ್ದು, ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀಡಿ ಕಾರ್ಮಿಕರ ಬಡಾವಣೆ, ಗಾಂಧಿನಗರ, ನೂರು ಅಡಿ ರಸ್ತೆ, ಹೊಸಹಳ್ಳಿ ಸರ್ಕಲ್‌, ಗುತ್ತಲು ರಸ್ತೆ, ಪೇಟೆ ಬೀದಿ, ಆನೆಕೆರೆ ರಸ್ತೆ, ಕಲ್ಲಹಳ್ಳಿ, ಶಂಕರ್ ಮಠ ಮುಂತಾದೆಡೆ ಬೀದಿ ನಾಯಿಗಳ ಹಾವಳಿಯಿಂದ ಜನರು ಭಯದಿಂದ ಜೀವನ ನಡೆಸುತ್ತಿದ್ದಾರೆ. ರಸ್ತೆ ಪಕ್ಕದಲ್ಲೇ ಆಡು, ಕುರಿ ಕಡಿದು ಮಾಂಸ ಮಾರಾಟ ಮಾಡುವ ವ್ಯಾಪಾರಿಗಳಿಗೆ ಲೆಕ್ಕವಿಲ್ಲ.

ಮೂಳೆಯನ್ನು ರಸ್ತೆ ಬದಿಯಲ್ಲೇ ಬಿಸಾಡಿ ಹೋಗುವುದರಿಂದ ಬೀದಿನಾಯಿಗಳು ತಂಡೋಪತಂಡವಾಗಿ ಮೂಳೆ ಹುಡುಕುತ್ತವೆ. ಅಲ್ಲದೆ ಎಲ್ಲೆಂದರಲ್ಲಿ ಚಿಕನ್‌ ಸೆಂಟರ್‌ ತಲೆ  ಎತ್ತಿದ್ದು ಅಂಗಡಿ ತ್ಯಾಜ್ಯವೇ ನಾಯಿಗಳ ಪ್ರಮುಖ ಆಹಾರವಾಗಿದೆ. ಇದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಬೀಡಿ ಕಾರ್ಮಿಕರ ಕಾಲೊನಿಯಲ್ಲಂತೂ ನಾಯಿಗಳ ಉಪಟಳ ಮಿತಿ ಮೀರಿದ್ದು, ನಾಯಿ ಗಳಿಂದ ಕಚ್ಚಿಸಿಕೊಂಡವರಿಗೆ ಲೆಕ್ಕವೇ ಇಲ್ಲದಂತಾಗಿದೆ.

‘ನಾಯಿಗಳು ಕಚ್ಚಾಡುವಾಗ ಅವುಗಳ ಬಳಿ ಹೋದರೆ ಮುಗಿಯಿತು. ಕೊಂದೇ ಬಿಡುತ್ತವೆ. ಬೈಕ್‌ನಲ್ಲಿ ತೆರಳುತ್ತಿರುವಾಗಲೂ ಎಗರಿ ಬರುತ್ತವೆ. ನಗರದಲ್ಲಿ ಬೀದಿನಾಯಿಗಳ ಹಾವಳಿ ತಡೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಾಚಿಗೆಗೇಡಿನ ಸಂಗತಿ’ ಎಂದು ಗಾಂಧಿನಗರದ ನಿವಾಸಿ ರಾಜಪ್ಪ ಹೇಳಿದರು.

‘ಕಲ್ಲಹಳ್ಳಿಯಲ್ಲಿ ಬೀದಿನಾಯಿಗಳಿಂದ ಅಪಾರ ತೊಂದರೆ ಆಗಿದೆ. ಸಂಜೆಯಾಗುತ್ತಿದ್ದಂತೆ ಒಬ್ಬರೇ ಬರಲು ಸಾಧ್ಯವಿಲ್ಲ. ಎರಡು ಬಾರಿ ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದಿದ್ದೇನೆ’ ಎಂದು ಮನೆಗೆಲಸ ಮಾಡುವ ನಾಗಲಕ್ಷ್ಮಿ ಹೇಳಿದರು.

‘ಸರ್‌.ಎಂ.ವಿ. ಕ್ರೀಡಾಂಗಣದಲ್ಲಿ ಇರುವಷ್ಟು ನಾಯಿಗಳು ಮತ್ತೆಲ್ಲೂ ಇಲ್ಲ. ಬೆಳಿಗ್ಗೆ –ಸಂಜೆ ವಾಯುವಿಹಾರಕ್ಕೆ ಬರಲೂ ಭಯವಾಗುತ್ತದೆ. ರಾತ್ರಿ ವೇಳೆ ಅಲ್ಲಿ ಹತ್ತಾರು ನಾಯಿಗಳು ಕಚ್ಚಾಡುತ್ತಿರುತ್ತವೆ’ ಎಂದು ವಿದ್ಯಾನಗರದ ಸಂತೋಷ್‌ ಹೇಳುತ್ತಾರೆ.

ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ: ನಗರಸಭೆ ವತಿಯಿಂದ 2011ರಲ್ಲಿ 2,000 ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆದಿತ್ತು. ಮಹಾರಾಷ್ಟ್ರ ಮೂಲದ ಸರ್ವೋದಯ ಸೇವಾಭಾವಿ ಸಂಸ್ಥೆಯ ಸಿಬ್ಬಂದಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆ ಸಂದರ್ಭದಲ್ಲಿ ನಗರಸಭೆ ಸಮೀಕ್ಷೆಯಲ್ಲಿ ನಗರದಾದ್ಯಂತ 5,000 ಬೀದಿನಾಯಿಗಳು ಪತ್ತೆಯಾಗಿದ್ದವು. ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳ ಕಿವಿಯನ್ನು ವಿ ಆಕಾರದಲ್ಲಿ ಕತ್ತರಿಸಿ ಗುರು ಮಾಡಲಾಗಿತ್ತು.

‘ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಎರಡು ಹಂತದ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಮೊದಲ ಹಂತದಲ್ಲಿ 2,000, ಎರಡನೇ ಹಂತದಲ್ಲಿ  3000 ನಾಯಿಗಳಿಗೆ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಯೋಜನೆ ಸಿದ್ಧವಾಗಿತ್ತು. ಮೊದಲ ಹಂತ ಬಹಳ ಚೆನ್ನಾಗಿ ನಡೆಯಿತು.

ದರೆ, ರಾಜಕೀಯ ಕಾರಣದಿಂದ ಎರಡನೇ ಹಂತದ ಶಸ್ತ್ರಚಿಕಿತ್ಸೆ ನಡೆಯಲಿಲ್ಲ. 2011ರಿಂದೀ ಚೆಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಯಲೇ ಇಲ್ಲ. ಹೀಗಾಗಿ, ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಈಗ ಸರ್ವೆ ಮಾಡಿದರೆ 2,000ಕ್ಕೂ ಹೆಚ್ಚು ಬೀದಿನಾಯಿಗಳು ಸಿಗುತ್ತವೆ’ ಎಂದು ನಗರಸಭೆ 11ನೇ ವಾರ್ಡ್‌ ಸದಸ್ಯ ಅರುಣ್‌ಕುಮಾರ್‌ ಹೇಳಿದರು.

‘ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಈಗಾಗಲೇ 2–3 ಬಾರಿ ಟೆಂಡರ್‌ ಕರೆದಿದ್ದೇವೆ. ಯಾರೂ ಮುಂದೆ ಬಂದಿಲ್ಲ. ಹೀಗಾಗಿ, ಈ ಕಾರ್ಯ ಮುಂದಕ್ಕೆ ಹೋಗುತ್ತಲೇ ಇದೆ. ಈ ಕುರಿತು ಶೀಘ್ರ ಸಭೆ ಕರೆದು ಚರ್ಚಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ತಿಳಿಸಿದರು.

ಫಾಸ್ಟ್‌ಫುಡ್‌ ಅಂಗಡಿಗಳ ಹಾವಳಿ

ನಗರದಲ್ಲಿ ಬೀದಿನಾಯಿಗಳು ಹೆಚ್ಚಳವಾಗಲು ನಗರದ ಮುಖ್ಯರಸ್ತೆಗಳ ಬದಿ ಇರುವ ಫಾಸ್ಟ್‌ಫುಡ್‌ ಅಂಗಡಿಗಳ ಹಾವಳಿಯೂ ಒಂದು ಕಾರಣ ಎಂಬ ಅಭಿಪ್ರಾಯ ಇದೆ. ಕಲಾಮಂದಿರ ಹಿಂಭಾಗದಲ್ಲಿ ರುವ ಸಾಲು ಫಾಸ್ಟ್‌ಫುಡ್‌ ಅಂಗಡಿಗಳ ತೆರವುಗೊಳಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ.

‘ಸುಪ್ರೀಂಕೋರ್ಟ್‌ ಆದೇಶ ಇರುವುದರಿಂದ ಫಾಸ್ಟ್‌ಫುಡ್‌ ಅಂಗಡಿ ತೆರವು ಸಾಧ್ಯವಾಗಿಲ್ಲ. ಅವರಿಗೆ ಪ್ರತ್ಯೇಕ ಜಾಗ ನೀಡಿ ತೆರವುಗೊಳಿಸಬೇಕು. ಸದ್ಯ ಜಾಗ ಹುಡುಕಾಟ ನಡೆದಿದ್ದು, ಜಾಗ ಸಿಕ್ಕ ಕೂಡಲೇ ತೆರವುಗೊಳಿಸಲಾ ಗುವುದು’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ಪ್ರತಿಕ್ರಿಯಿಸಿ (+)