ಶುಕ್ರವಾರ, ಡಿಸೆಂಬರ್ 6, 2019
17 °C

ಕರೆದರೂ ಬರಲಿಲ್ಲ ಆಂಬುಲೆನ್ಸ್, ಮಗಳ ಶವವನ್ನು ಸೈಕಲ್ ಟ್ರಾಲಿಯಲ್ಲಿ ಸಾಗಿಸಿದ ಅಪ್ಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರೆದರೂ ಬರಲಿಲ್ಲ ಆಂಬುಲೆನ್ಸ್, ಮಗಳ ಶವವನ್ನು ಸೈಕಲ್ ಟ್ರಾಲಿಯಲ್ಲಿ ಸಾಗಿಸಿದ ಅಪ್ಪ!

ಭುಬನೇಶ್ವರ್: ಒಡಿಶಾದ ಪುರಿ ನಗರದಲ್ಲಿ ವ್ಯಕ್ತಿಯೊಬ್ಬರು ಮಗಳ ಶವವನ್ನು ಸೈಕಲ್ ಟ್ರಾಲಿಯಲ್ಲಿ ಹೊತ್ತು ಸಾಗಿಸಿದ ಘಟನೆ ನಡೆದಿದೆ.

ಶನಿವಾರ ರಾತ್ರಿ ದೀನಾ ಸಾಹು ಎಂಬ ವ್ಯಕ್ತಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ತನ್ನ ಮಗಳು ಕಬೀ ಸಾಹು ಮೃತದೇಹವನ್ನು ಸೈಕಲ್ ಟ್ರಾಲಿಯಲ್ಲಿ ಸಾಗಿಸಿದ್ದಾರೆ.

ಕಬೀ ಸಾಹು ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಕಾರಣ ಅಪ್ಪ ದೀನಾ ಸಾಹು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಗೆ ತಲುಪುವ ಹೊತ್ತಿಗೆ ಕಬೀ ಮರಣವನ್ನಪ್ಪಿದ್ದಾಳೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

ಮಗಳ ಮೃತ ಶರೀರವನ್ನು ಸಾಗಿಸಲು ಆಂಬುಲೆನ್ಸ್ ಅಥವಾ ಶ್ರದ್ದಾಂಜಲಿ ವಾಹನ ಸಿಗದೇ ಇದ್ದಾಗ ಸಾಹು ಅವರು ಸೈಕಲ್ ಟ್ರಾಲಿಯಲ್ಲಿ ಮಗಳ ಮೃತದೇಹವನ್ನಿರಿಸಿ ಸ್ಮಶಾನಕ್ಕೆ ಒಯ್ದಿದ್ದಾರೆ.

ಮಗಳ ಮೃತದೇಹವನ್ನು ಒಯ್ಯಲು ಶ್ರದ್ಧಾಂಜಲಿ ವಾಹನವನ್ನು ಕರೆದರೂ ಬರಲಿಲ್ಲ. ಹಾಗಾಗಿ ಸೈಕಲ್ ಟ್ರಾಲಿಯಲ್ಲೇ ಹೊತ್ತು ಕೊಂಡು ಬಂದೆ. ಅಲ್ಲಿದ್ದ ಯಾರೊಬ್ಬರೂ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಸಾಹು ದೂರಿದ್ದಾರೆ.

ತನಿಖೆಗೆ ಆದೇಶ: ಮೃತದೇಹವನ್ನು ಹೊತ್ತೊಯ್ಯಲು ಆಂಬುಲೆನ್ಸ್ ನಿರಾಕರಿಸಿರುವ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪುರಿ ಉಪ ಜಿಲ್ಲಾಧಿಕಾರಿ ಮಧುಸೂಧನ್ ದಾಸ್ ಆದೇಶಿಸಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಸಾಹು ಅವರು ಸೈಕಲ್ ಟ್ರಾಲಿ ವ್ಯವಸ್ಥೆ ಮಾಡುವ ಮುನ್ನ ಆಸ್ಪತ್ರೆಯವರಿಗೆ ತಿಳಿಸಿಲ್ಲ ಎಂದು ದಾಸ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ಸಾಹು ಹೇಳುತ್ತಿರುವುದೇನು?
ಮಗಳ ಶವ ಹೊತ್ತೊಯ್ಯಲು ನಾನು 108 ಡಯಲ್ ಮಾಡಿ ಸರ್ಕಾರಿ ಆಂಬುಲೆನ್ಸ್ ಕರೆದರೂ ಅವರು ಬರಲು ಒಪ್ಪಲಿಲ್ಲ. ಆ ಹೊತ್ತಿಗೆ ಮಹಾಪ್ರಯಾಣ್ ವಾಹನ (ಶ್ರದ್ಧಾಂಜಲಿ ವಾಹನ)ವೂ ಸಿಗಲಿಲ್ಲ. ಹಾಗಾಗಿ ನಾನು ಸೈಕಲ್ ಟ್ರಾಲಿ ಮೂಲಕ ಸ್ವರ್ಗಧ್ವರ್‍ ಸ್ಮಶಾನಕ್ಕೆ ಕರೆದೊಯ್ದೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)