ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಂದು ವಿಜಯಪುರ ಬಂದ್ ನಿರ್ಧಾರ

Last Updated 3 ಜುಲೈ 2017, 10:40 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣವನ್ನು  ತಾಲ್ಲೂಕು ಕೇಂದ್ರವಾಗಿ  ಘೋಷಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಲು ಇದೇ 10 ರಂದು ವಿಜಯಪುರ ಬಂದ್ ಮಾಡಲು ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ. ಇಲ್ಲಿನ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರೋಟರಿ ಪದಾಧಿಕಾರಿ ಸಿ.ಬಸಪ್ಪ ಮಾತನಾಡಿ,  ‘ರಾಜ್ಯ ಸರ್ಕಾರ ಬಜೆಟ್ ನಲ್ಲಿ 49 ನೂತನ ತಾಲ್ಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದು, ವಿಜಯಪುರವನ್ನು ಕೈ ಬಿಡಲಾಗಿದೆ’ ಎಂದರು.

‘ಒಂದು ದಶಕದಿಂದಲೂ ತಾಲ್ಲೂಕು ಕೇಂದ್ರ ರಚನೆಗಾಗಿ ನಾವು ಮಾಡುತ್ತಿರುವ ಹೋರಾಟಗಳನ್ನು ಸರ್ಕಾರ ಕಡೆಗಣಿಸಿ ಅನ್ಯಾಯ ಮಾಡಿದೆ. ವಾಣಿಜ್ಯ ನಗರವಾಗಿ ಪಟ್ಟಣವು ಬೆಳವಣಿಗೆಯಾಗುತ್ತಿದೆ’ ಎಂದರು.

ತಾಲ್ಲೂಕು ಕೇಂದ್ರವಾಗಿ ಮಾಡುವ ಮೂಲಕ ಈ ಭಾಗದ ಅಭಿವೃದ್ಧಿಗಾಗಿ ಸಹಕರಿಸುವಂತೆ ಮನವಿ ನೀಡಲಾಗುತ್ತಿದೆ. ಅವನ್ನು ಅಧಿಕಾರಿಗಳು ಪರಿಗಣಿಸಿಲ್ಲ, ಆದ್ದರಿಂದ ಸಮಸ್ತ ವರ್ತಕರು, ವ್ಯಾಪಾರಸ್ಥರು, ಸೇರಿದಂತೆ ಎಲ್ಲ ನಾಗರಿಕರು  ಬಂದ್ ಗೆ ಸಹಕಾರ ನೀಡಬೇಕು ಎಂದು ಬಸಪ್ಪ ಮನವಿ ಮಾಡಿದರು.

ಬೆಂಗಳೂರು ವಿದ್ಯಾವರ್ಧಕ ಸಂಘದ ನಿರ್ದೇಶಕ ಸುರೇಶ್ ಬಾಬು ಮಾತನಾಡಿ, ತಾಲ್ಲೂಕು ಕೇಂದ್ರ ರಚನೆಯಿಂದ ವಿಜಯಪುರ ಮಾತ್ರವಲ್ಲದೆ, ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಎಲ್ಲ ನಾಗರಿಕರು ಬಂದ್‌ಗೆ ಸಹಕಾರ ನೀಡಬೇಕು ಎಂದರು.

ಅಯೋಧ್ಯಾ ಶಿವಾಚಾರ ವೈಶ್ಯ ನಗರ್ತ ಮಂಡಳಿ ಅಧ್ಯಕ್ಷೆ ಶೀಲಾರಾಣಿ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.
‘ನಾವು ಚಿಕ್ಕವರಿದ್ದಾಗಿನಿಂದ ವಿಜಯಪುರವನ್ನು ತಾಲ್ಲೂಕು ಮಾಡಬೇಕೆನ್ನುವ ಕೂಗು ಕೇಳಿ ಬರುತ್ತಿದೆ. ಆದರೂ ಸರ್ಕಾರಗಳು ಗಮನಹರಿಸಿಲ್ಲ’ ಎಂದರು.

ಬಿಎಸ್ಎನ್ಎಲ್ ನಿರ್ದೇಶಕ ಕನಕರಾಜು ಮಾತನಾಡಿ, ‘ತಾಲ್ಲೂಕು ಕೇಂದ್ರಕ್ಕಾಗಿ ಹೋರಾಟ ಮಾಡುವುದು ನಮ್ಮ ಹಕ್ಕು, ಇದಕ್ಕೆ ಸರ್ಕಾರ ಸ್ಪಂದಿಸಬೇಕು. ಅಧಿಕಾರಿಗಳಿಂದ ನಿಖರವಾದ ಮಾಹಿತಿ ತರಿಸಿಕೊಳ್ಳಬೇಕು’ ಎಂದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎನ್.ರಾಜಗೋಪಾಲ್, ಡಾ.ವಿ.ನಾ. ರಮೇಶ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಶಂಕರಮೂರ್ತಿ, ಮಂಜುನಾಥ್, ಜಿ.ಟಿ.ಸದಾಶಿವರೆಡ್ಡಿ, ಕರವೇ ಮಹೇಶ್, ಟಿಲ್ಲರ್ ಮಂಜಣ್ಣ ಹಾಜರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಪಟ್ಟಣ  ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ದೇವರಾಜು, ಶಿವಕುಮಾರ್, ಮಂಜುನಾಥ್, ವೇಣುಗೋಪಾಲ್, ಪಿಳ್ಳಪ್ಪ, ರವಿಕುಮಾರ್, ಮುನಿಕೃಷ್ಣಪ್ಪ, ವೆಂಕಟೇಶ್, ವಿಜಯಕುಮಾರ್, ಸುಬ್ರಮಣಿ ಉಪಸ್ಥಿತರಿದ್ದರು.

ಇದೇ 28 ಕ್ಕೆ  ಅಹವಾಲು ಮಂಡನೆ
ಮುಖ್ಯಮಂತ್ರಿ ಇದೇ 28 ಕ್ಕೆ ದೇವನಹಳ್ಳಿಗೆ ಭೇಟಿ ನೀಡಲಿದ್ದಾರೆ. ವಿಜಯಪುರವನ್ನು ತಾಲ್ಲೂಕು ಕೇಂದ್ರವಾಗಿ ಮಾಡುವುದಾಗಿ ಘೋಷಣೆ ಮಾಡಬೇಕು ಎನ್ನುವ ಒತ್ತಾಯವನ್ನು ಸರ್ಕಾರದ ಮುಂದೆ ಮಂಡನೆ ಮಾಡುತ್ತಿದ್ದೇವೆ ಎಂದು ಹಿರಿಯ ಮುಖಂಡ ಬಿ.ಕೆ.ಶಿವಪ್ಪ ಹೇಳಿದರು. ಒಂದು ವೇಳೆ ಸರ್ಕಾರ ಈಗಲೂ ನಿರ್ಲಕ್ಷ್ಯ ಮಾಡಿದರೆ, ಮುಂದಿನ ಹೋರಾಟಗಳು ಉಗ್ರವಾಗಿ ರೂಪುಗೊಳ್ಳಲಿವೆ.

ಮುಖ್ಯಮಂತ್ರಿ ಅವರು ಈ ಹಿಂದೆ ಇಲ್ಲಿಗೆ ಸಮೀಪದ ಮಳ್ಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದರು. ಅವರು ವಿಜಯಪುರದ ಮೂಲಕ ಹಾದು ಹೋಗುವಾಗ ‘ವಿಜಯಪುರ ಮುಂದೊಂದು ದಿನ ತಾಲ್ಲೂಕು ಆಗಲಿದೆ’ ಎಂದು ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳಬೇಕು ಎಂದರು.

* * 

ಸ್ವಾತಂತ್ರ್ಯ ಪೂರ್ವದಲ್ಲೇ ಪುರಸಭೆ ಆಗುವಷ್ಟು ಬೆಳವಣಿಗೆಯಾಗಿದ್ದ ಪಟ್ಟಣ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ
ಸಿ.ಬಸಪ್ಪ, ರೋಟರಿ ಪದಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT