ಭಾನುವಾರ, ಡಿಸೆಂಬರ್ 8, 2019
21 °C

26 ವಾರದ ಅಸಹಜ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

26 ವಾರದ ಅಸಹಜ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ತೀವ್ರ ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ತನ್ನ ಭ್ರೂಣದ ಗರ್ಭಪಾತ ಮಾಡಿಸಿಕೊಳ್ಳಲು ಗರ್ಭಧಾರಣೆಯ 26ನೇ ವಾರದಲ್ಲಿ ಮಹಿಳೆಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ಕೋಲ್ಕತ್ತದ ಎಸ್‌ಎಸ್‌ಎಂಕೆ ಆಸ್ಪತ್ರೆಯಲ್ಲಿ ಶೀಘ್ರವಾಗಿ ಗರ್ಭಪಾತ ಪ್ರಕ್ರಿಯೆ ನಡೆಸಿ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ಎಂ. ಖಾನಾವಿಲ್ಕರ್‌ ಅವರನ್ನೊಳಗೊಂಡ ಪೀಠ ಹೇಳಿದೆ.

ಗರ್ಭಧಾರಣೆಯು ಮುಂದುವರಿದರೆ ಮತ್ತು ಮಗು ಜೀವಂತವಾಗಿ ಜನಿಸಿದರೆ ತಾಯಿ ತೀವ್ರ ಮಾನಸಿಕ ಆಘಾತದಿಂದ ಬಳಲುತ್ತಾರೆ. ಮಗು ಜನಿಸಿದ ಬಳಿಕ ತೀವ್ರವಾದ ಹೃದಯ ಕಾಯಿಲೆಗಳಿಗೆ ಹಲವು ಬಗೆಯ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಬೇಕಾಗುತ್ತದೆ ಎಂಬ ಆಧಾರದ ಮೇಲೆ ಗರ್ಭಪಾತ ಮಾಡಿಸುವುದು ಒಳಿತು ಎಂದು ವೈದ್ಯಕೀಯ ಮಂಡಳಿ ಮತ್ತು ಎಸ್‌ಎಸ್‌ಕೆಎಂ ಆಸ್ಪತ್ರೆ ವರದಿ ಮಾಡಿತ್ತು.

‘ವೈದ್ಯಕೀಯ ಮಂಡಳಿಯ ವರದಿಯನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರ(ಮಹಿಳೆ) ಮನವಿ ಮೇರೆಗೆ ಗರ್ಭಪಾತಕ್ಕೆ ಅನುಮತಿಸಲು ನಾವು ಒಲವು ತೋರಿದ್ದೇವೆ’ ಎಂದು ಪೀಠ ಹೇಳಿದೆ.

ತನ್ನ ಗರ್ಭದಲ್ಲಿನ ಭ್ರೂಣವು ಅಸಹಜವಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಮಹಿಳೆ ಮತ್ತು ಆಕೆಯ ಪತಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಗರ್ಭಧಾರಣೆಯ 20 ವಾರಗಳ ನಂತರ ಭ್ರೂಣದ ಗರ್ಭಪಾತವನ್ನು ನಿಷೇಧಿಸುವ ವೈದ್ಯಕೀಯ ಕಾರಣಗಳಿಗಾಗಿ ಗರ್ಭಪಾತ ಕಾಯ್ದೆಯ ವಿಭಾಗದ 3(2)(ಬಿ)ನ ಸಂವಿಧಾನಾತ್ಮಕ ಮಾನ್ಯತೆಯನ್ನೂ ಸಹ ಅವರು ಪ್ರಶ್ನಿಸಿದ್ದರು.

ಅರ್ಜಿದಾರ ಮಹಿಳೆಯ ಆರೋಗ್ಯ ಕುರಿತಾಗಿ, ಪರೀಕ್ಷಿಸಿ ವರದಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ್ದ ಏಳು ಸದಸ್ಯರ ವೈದ್ಯಕೀಯ ಮಂಡಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.  

ಮಹಿಳೆಯ ಆರೋಗ್ಯ ಮತ್ತು 24 ವಾರಗಳ ಭ್ರೂಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಖಚಿತಪಡಿಸಿಕೊಳ್ಳಲು ಏಳು ಮಂದಿ ವೈದ್ಯರ ಮಂಡಳಿ ರಚನೆಗೆ ಜೂನ್‌ 23ರಂದು ನ್ಯಾಯಾಲಯ ಆದೇಶ ನೀಡಿತ್ತು.

‘ಹೃದಯ ಸಂಬಂಧಿ ಸಮಸ್ಯೆಗಳನ್ನು ಒಳಗೊಂಡಂತೆ ಭ್ರೂಣವು ಗಂಭೀರ ಅಸಹಜತೆಗಳಿಂದ ಕೂಡಿದೆ. ಮಗು ಜನಿಸಿದರೆ ಮಗುವನ್ನು ಮೊದಲು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಮೊದಲ ಶಸ್ತ್ರಚಿಕಿತ್ಸೆಯಲ್ಲಿಯೇ ಮಗು ಬದುಕುಳಿಯುವುದಿಲ್ಲ. ಅಲ್ಲದೆ, ಭ್ರೂಣವು ತಾಯಿಗೆ ಮಾರಕವಾಗಬಹುದು’ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರತಿಕ್ರಿಯಿಸಿ (+)