ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇ ಹೋದವರ ಊರು...

Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ಬಣ್ಣದ ಗುಬ್ಯಾರು ಮಳಿರಾಜಾ,
ಅವರು ಮಣ್ಣಾಗಿ ಹೋಗ್ಯಾರ ಮಳಿರಾಜಾ
ಬಣ್ಣದ ಗುಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂತು ಮಳಿರಾಜಾ
ಸಲಗಿ ಹಿಟ್ಟಿನ್ಯಾಗ ಮಳಿರಾಜಾ ಅವರು ಸುಣ್ಣವ ತುಂಬ್ಯಾರು ಮಳಿರಾಜಾ
ಸಣ್ಣ ಕೂಸಿಗೆ ಮನ್ನಿಸಿ ತಿನ್ನಿಸಿ, ಕಣ್ಣನ್ನೇ ಮುಚ್ಯಾವೋ ಮಳಿರಾಜಾ
ಬಣ್ಣದ ಗುಬ್ಯಾರು ಮಳಿರಾಜಾ,
ಅವರು ಮಣ್ಣಾಗಿ ಹೋಗ್ಯಾರ ಮಳಿರಾಜಾ
ಬಣ್ಣದ ಗುಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂತು ಮಳಿರಾಜಾ
ಸಲಗಿ ಹಿಟ್ಟಿನ್ಯಾಗ ಮಳಿರಾಜಾ ಅವರು ಸುಣ್ಣವ ತುಂಬ್ಯಾರು ಮಳಿರಾಜಾ
ಸಣ್ಣ ಕೂಸಿಗೆ ಮನ್ನಿಸಿ ತಿನ್ನಿಸಿ, ಕಣ್ಣನ್ನೇ ಮುಚ್ಯಾವೋ ಮಳಿರಾಜಾ


***
ಮಳೆ–ಬೆಳೆ ಬಾರದೇ ಊರು ತೊರೆದವರ, ಅನ್ನ ಕಾಣದೇ ಕಂಗಾಲಾದ ಕೂಸುಗಳಿಗೆ ಸುಣ್ಣವನ್ನು ತಿನ್ನಿಸಿ ಕಣ್ಣೀರಿಟ್ಟ ಹಡೆದ ಕರುಳಿನ ಸಂಕಟವಿದು. ಸ್ವತಃ ಮಳೆರಾಯನೇ ಕರಗಿ ಕಣ್ಣೀರಾಗುವಂತೆ ಹಾಡಿದ ಜನಪದ ಹಾಡು ಇದು.

ಈ ಊರು ಕೂಡ ಗುಳೇ ಎದ್ದಿದೆ. ಅನ್ಯದ ದಿನ ಬಂತು ಎಂದು ಕೊರಗಿ– ಕಂಗಾಲಾಗಿದೆ; ಕಣ್ಣೀರಿಟ್ಟಿದೆ. ಕೈಮಗ್ಗದ ಸದ್ದು ಸ್ತಬ್ಧಗೊಂಡು ದಿಕ್ಕೆಟ್ಟಿದೆ. ಆದರೆ, ಮುರುಟಿದ ಊರವರ ಬದುಕು ಮಕ್ಕಳಿಗೆ ಸುಣ್ಣ ತಿನ್ನಿಸುವ ಹೇಡಿತನಕ್ಕೆ ದೂಡಿಲ್ಲವೆಂಬುದಷ್ಟೇ ಸಮಾಧಾನ.

ಕಳೆದುಹೋದ ದಿನಗಳನ್ನು ನೆನೆದು, ಸಂಭ್ರಮಿಸಿ ಮರುಕ್ಷಣವೇ ವಿಷಾದಕ್ಕೆ ತಿರುಗುವ ಅಗಸಿಕಟ್ಟೆಯ ಮೇಲೆ ಕುಳಿತ ವೃದ್ಧರ ಮಾತುಗಳು ಊರಿನ ಕಥೆ ಹೇಳುತ್ತವೆ. ಆಗ ಅರೆಕ್ಷಣ ಆ ಊರೂ ‘ಹೌದಲ್ಲ! ನಾನೆಲ್ಲಿ ಕಳೆದುಹೋದೆ’ ಎಂದು ತನ್ನ ಹಿಂಬದಿ ನಿಂತ ಗುಡ್ಡಕ್ಕೆ ಮುಖಮಾಡಿ ತನ್ನಷ್ಟಕ್ಕೆ ತಾನೇ ಪ್ರಶ್ನಿಸುತ್ತದೆ. ಅದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡ. ‘ಖಣ’ಕ್ಕೆ ಹೆಸರಾಗಿ, ನೇಕಾರರಿಗೆ ಉಸಿರಾಗಿದ್ದ ಕೈಮಗ್ಗದ ಊರಾಗಿದ್ದ ಗುಳೇದಗುಡ್ಡದ ಕಥೆ ಇದು.

ಬೆಳಗಾವಿ ವಿಭಾಗದಲ್ಲಿ ತೆರಿಗೆ ಕಟ್ಟಲು ನಂ.1 ಆಗಿದ್ದ ಊರು, ಅತಿ ಹೆಚ್ಚು ಟೆಲಿಫೋನ್ ಬಿಲ್ ಪಾವತಿಸಿದ ಊರು, 1956ರಲ್ಲಿಯೇ ಒಳಚರಂಡಿ ವ್ಯವಸ್ಥೆ ಕಂಡ ಜಿಲ್ಲೆಯ ಮೊದಲ ಊರು, ಬಂಗಾರದ ಹೊಗೆ ಹಾಯುತ್ತಿದ್ದ ಸಂಪನ್ನ ಊರು.... ಹೀಗೆ ಹಲವು ಹೆಗ್ಗಳಿಕೆಗಳನ್ನು ತನ್ನದಾಗಿಸಿಕೊಂಡಿದ್ದ ಗುಳೇದಗುಡ್ಡ ಹೀಗೇಕಾಯಿತು?

‘ಇದೊಂದು ಬಿಕ್ಕಿ ಊರು...!’ ಹೀಗೆಂದು ಆ ಅಜ್ಜ ಹೇಳುವಾಗ ಆತನ ಮುಖದಲ್ಲಿ ಯಾವ ಭಾವವೂ ಇರಲಿಲ್ಲ. ಥೇಟ್ ಗುಳೇದಗುಡ್ಡದ ಕಲ್ಲುಗಳಂತೆಯೇ! ಹೊಟ್ಟೆಯ ಕಿಚ್ಚಿಗೆ ಸಿಕ್ಕ ಕೆಲಸ ಮಾಡಬೇಕು. ಬದುಕಬೇಕೆಂದರೆ ಊರನ್ನು ಹಿಂದಕ್ಕೆ ಬಿಟ್ಟು ನಗರಕ್ಕೆ ಮುಖ ಮಾಡಬೇಕು. ‘ಮುದುಕ್‌ ಮನಷ್ಯಾರು ಎಲ್ಲೆಂತ ಹೋಗೋದ್ರಿ’ ಎಂದು ಕೇಳುವ ಆ ಬಸವಣ್ಣೆಪ್ಪಜ್ಜನಿಗೆ ಉತ್ತರ ನೀಡುವವರು ಯಾರೂ ಇಲ್ಲ; ಕೊನೆಗೆ ಮಕ್ಕಳೂ.

ಈ ಅಜ್ಜ ಹೇಳುವಂತೆ ಇಡೀ ಊರು ಒಂದು ತೆರನಾಗಿ ಹಾಳು ಸುರಿಯುತ್ತದೆ. ಎಲ್ಲೆಂದರಲ್ಲಿ ನಿರ್ಭಯದಿಂದ ಓಡಾಡಿಕೊಂಡಿರುವ ಹಂದಿಗಳು ಅಲ್ಲಿನ ಸ್ಥಿತಿಯನ್ನು ಬಯಲು ಮಾಡುತ್ತವೆ. ರಸ್ತೆ ಮಧ್ಯದಲ್ಲಿಯೇ ಹರಿಯುವ ಕೊಳಚೆ ನೀರು, ಕಸದ ರಾಶಿ ಊರು ಹಸನಾಗಿಲ್ಲ ಎಂಬುದನ್ನು ಹೇಳಿದರೆ, ಓಣಿಗೆ ಇಬ್ಬರು ಮೂವರಂತೆ ಸಿಗುವ ಅಂಗವಿಕಲ ಮಕ್ಕಳು ಅಲ್ಲಿನ ಆರೋಗ್ಯ ಸಮಸ್ಯೆಯನ್ನು ಬಿಚ್ಚಿಡುತ್ತವೆ.

ಚಟಕ್–ಪಟಕ್... ಚಟಕ್–ಪಟಕ್... ಎಂದು ಕೈಮಗ್ಗದ ಸದ್ದು ಕೇಳುತ್ತಿದ್ದ ಊರಲ್ಲಿ ಮೌನ ಆವರಿಸಿದೆ. ಮನೆಯ ಪಡಸಾಲೆಯಲ್ಲಿ ನಡುಮಟ ತೆಗೆದ ಕುಣಿ (ತಗ್ಗು) ಖಾಲಿ ಬಿದ್ದಿದೆ. ಕಟ್ಟೆ, ಅಟ್ಟದ ಮೇಲೆ ಬಿದ್ದಿರುವ ಮಗ್ಗದ ಚೌಕಟ್ಟು, ಕುಂಟಿ, ಚಕ್ರ ತಾವಷ್ಟೇ ಅಲ್ಲ ಇಡೀ ಊರನ್ನೇ ಸ್ತಬ್ಧವಾಗಿಸಿವೆ. ‘ಖಣ’ ನೇಯ್ದು ಮಹಾರಾಷ್ಟ್ರದ ಮಾರುಕಟ್ಟೆಯನ್ನು ಆಳಿದ ಗುಳೇದಗುಡ್ಡದಲ್ಲಿ ಈಗ ‘ಯಾರ್ ಮನ್ಯಾಗ ಐತ್ರೀ ಮಗ್ಗ?’ ಎಂದು ಕೇಳುವ ಸ್ಥಿತಿ.

‘ಅವರ್ ಮನ್ಯಾಗ್ ಒಂದಿರಬೇಕ್ರಿ, ಈ ಓಣ್ಯಾಗೇನ ಒಂದ್ ಇದ್ದಂಗೈತ್ರಿ’ ಎಂದು ಸ್ವತಃ ನೇಕಾರರೇ ಹೇಳುವಾಗ ಮಗ್ಗದ ಊರು ಮಕಾಡೆ ಮಲಗಿರುವುದು ಸ್ಪಷ್ಟ. ಮನೆಯವರಿಗೆ ಬೇಡವಾಗಿ, ಅರಳೀಕಟ್ಟೆಗೆ ಬಂದು ಬಿದ್ದ ದೇವರ ಫೋಟೊಗಳ ತೆರದಲ್ಲಿ ಮಗ್ಗದ ಚೌಕಕುಂಟಿ, ಚಕ್ರ, ಕೈಗೂಟ, ಮಿಣಿಗೂಟಗಳೆಲ್ಲ ಮನೆ ಬಾಗಿಲಲ್ಲಿ ಅಲ್ಲಲ್ಲಿ ಬಿದ್ದಿದ್ದು, ‘ಮಗ್ಗಗಳು ಉಳಿದಿಲ್ಲ’ ಎಂಬುದನ್ನು ಸಾರುತ್ತವೆ.

ಯಾರಾದರೂ ಬೇರೆ ಊರಿನಿಂದ ತಮ್ಮ ಮನೆ ಬಾಗಿಲಿಗೆ ಬಂದಿದ್ದಾರೆಂದರೆ ಅವರು ಸರ್ಕಾರಿ ಅಧಿಕಾರಿಗಳೇ ಇರಬೇಕು ಎಂದು ಭಾವಿಸಿ, ವಯಸ್ಸಾದವರೆಲ್ಲ ತಮ್ಮ ದುಃಖ ದುಮ್ಮಾನ, ಆರೋಗ್ಯ ಸಮಸ್ಯೆಯನ್ನೆಲ್ಲ ಹೇಳಲು ಮುಂದಾಗುತ್ತಾರೆ. ಮಕ್ಕಳೆಲ್ಲ ದುಡಿಯಲೆಂದು ಊರು ಬಿಟ್ಟರೆ, ವೃದ್ಧರಿಗೆ ಮನೆ ಕಾಯುವ ಕೆಲಸ. ಊರಲ್ಲೇ ಇರುವ ಯುವಕರು ಸಿಮೆಂಟ್ ಅಂಗಡಿಗಳಲ್ಲಿ ಕೆಲಸ ಮಾಡಲು, ಗೌಂಡಿ ಕೆಲಸಕ್ಕೆಂದು, ಹೋಟೆಲ್‌ಗಳಲ್ಲಿ ದುಡಿಯಲೆಂದು ಬಾಗಲಕೋಟೆಗೆ ಹೋಗುತ್ತಾರೆ ಸಂಜೆಯಾಗು ತ್ತಿದ್ದಂತೆಯೇ ಚೀಲ–ಚಪಾಟಿ ಹೊತ್ತುಕೊಂಡು, ಮಕ್ಕಳು–ಮರಿಗಳನ್ನು ಕಟ್ಟಿಕೊಂಡು ಬಸ್ ನಿಲ್ದಾಣ ಸೇರುವ ಗುಳೇದಗುಡ್ಡ ಮತ್ತು ಸುತ್ತಲಿನ ಗ್ರಾಮದವರು ಮಂಗಳೂರು, ಉಡುಪಿ, ಗೋವಾ, ಬೆಂಗಳೂರಿನ ಬಸ್ಸುಗಳಿಗೆ ಮುಗಿಬೀಳುತ್ತಾರೆ. ಕೆಲಸ ಹುಡುಕಿಕೊಂಡು ಗುಳೇ ಹೋಗುವ ಈ ದೃಶ್ಯ ಅಲ್ಲಿನ ನಿಲ್ದಾಣಕ್ಕೆ ನಿತ್ಯದ ನೋಟ. ಅವತ್ತು ಕೂಡ ಯುವಕರ ದಂಡು ಮುಸ್ಸಂಜೆ ಹೊತ್ತಿಗೆ ಗಂಟು–ಮೂಟೆ ಕಟ್ಟಿಕೊಂಡು ಮಂಗಳೂರು ಬಸ್ಸು ಏರುವ ಧಾವಂತದಲ್ಲಿತ್ತು. ‘ಯಾವೂರ್‌ ತಮ್ಮಾ?’ ಎಂದು ಕೇಳಿದರೆ ಬಸ್ ಕಿಟಕಿಯಲ್ಲಿ ಲಗೇಜ್ ಎಸೆಯುತ್ತಲೇ ‘ಸಬ್ಬಲಹುಣಸಿ’ ಎನ್ನುತ್ತ ಬಾಲಕನೊಬ್ಬ ಅಷ್ಟೇ ವೇಗದಲ್ಲಿ ಧಡಧಡನೇ ಕೆಳಗಿಳಿದು ಮತ್ತೆ ಬಸ್ಸು ಹತ್ತುವ ಧಾವಂತದಲ್ಲಿದ್ದ.

ಹಗಲೆಲ್ಲ ಹಾಳೂರಿನಂತೆ ಕಾಣುವ ಈ ಊರಿನ ಬಸ್‌ ನಿಲ್ದಾಣ ಸಂಜೆಯಾಗುತ್ತಲೇ ಗಿಜಿಗುಡುತ್ತದೆ. ಬಸ್ಸುಗಳು ಭರ್ತಿಯಾಗುತ್ತವೆ. ಮಂದಿಯೇ ಕಾಣದಂಥ ಊರಲ್ಲಿ ಇವರೆಲ್ಲ ಎಲ್ಲಿಂದ ಬಂದರು? ನಿಜ ಹೇಳಬೇಕೆಂದರೆ ಗುಳೇದಗುಡ್ಡವಷ್ಟೆ ಅಲ್ಲ; ಗುಡ್ಡಕ್ಕೆ ಅಂಟಿಕೊಂಡಂತೆ ಇರುವ ಸುತ್ತಲಿನ ಸಬ್ಬಲಹುಣಸಿ, ನಾಗರಾಳ, ಲಾಯದಗುಂದಿ, ಕೊಟ್ನಳ್ಳಿ, ಕಟಗಿನಹಳ್ಳಿ, ಆಸಂಗಿ, ಅಲ್ಲೂರ, ಹಳದೂರ, ಇಂಜನವಾಡಿ ಹೀಗೆ ಹಲವು ಗ್ರಾಮಗಳ ಜನರೆಲ್ಲರೂ ಗುಳೇ ಹೋಗುವವರೇ. ವರ್ಷದಿಂದ ವರ್ಷಕ್ಕೆ ಆ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಊರವರು.

ಒಂದು ಕಾಲಕ್ಕೆ ಕೈಗೆ ಪುರುಸೊತ್ತಿಲ್ಲದಂತೆ ಹತ್ತಾರು ಮಂದಿ ದುಡಿಯುತ್ತಿದ್ದ ಊರಿನ ಪ್ರಮುಖ ವೃತ್ತದ ಹೋಟೆಲ್‌ನಲ್ಲಿ ಈಗ ಒಂದಾಳಿನ ಕೆಲಸವೂ ಇಲ್ಲ. ಒಂದೇ ಮನೆಯ ಮೂವರು ನಡೆಸಿಕೊಂಡು ಹೋಗುತ್ತಿರುವ ಅದು ಈಗ ಬರೀ ಚಾದಂಗಡಿ. ಇಲ್ಲಿ ಆ ಮನೆಯ ತಾಯಿ ತಿಂಡಿ, ಚಹಾ ತಯಾರಿಸಿದರೆ, ಮಕ್ಕಳಿಬ್ಬರು ಸಪ್ಲೈಯರ್, ಕ್ಲೀನರ್ ಆಗಿ, ಗಲ್ಲೆ ಮೇಲೆ ಕೂರುವ ಮಾಲೀಕರಾಗಿಯೂ ಕೆಲಸ ಮಾಡುತ್ತಾರೆ. ಅಂದು ಮುಸ್ಸಂಜೆ ಆ ಚಹಾದಂಗಡಿಯಲ್ಲಿ ಇದ್ದ ಗ್ರಾಹಕರೆಂದರೆ ಆರು ಯುವಕರು ಮಾತ್ರ.

‘ನಮ್ಮೂರಿಗೊಂದ್ ಫ್ಯಾಕ್ಟರಿ ಆಗಬೇಕ್ ನೋಡ್ರಿ. ಅಂದ್ರ ಎಲ್ಲಾರಿಗೂ ಕೆಲ್ಸ ಸಿಗತೈತಿ’ ಎಂದು ಎರಡು ಒಗ್ಗರಣಿಗೆ (ಒಗ್ಗರಣೆ ಮಂಡಕ್ಕಿ) ಕೈಹಾಕಿದ ಆರು ಯುವಕರು ಹೇಳುವಾಗ ಅವರ ಮುಖದ ತುಂಬ ಗೆಲುವು. ಇನ್ನು ಫ್ಯಾಕ್ಟರಿ ಆಗಿಯೇ ಬಿಟ್ಟರೆ...?

ಕಿಲೋ ಜ್ವಾಳನೂ ಬರೋದಿಲ್ಲ!
‘94–95ರಾಗ ಬಂಗಾರದ ಹೊಗಿ ಹಾಯ್ತಿತ್ತು. ಈಗ ನೇಕಾರಿಕಿ ದುಡಕಿಗೆ (ದುಡಿಮೆ) ಒಂದ್ ಕಿಲೋ ಜ್ವಾಳನೂ ಬರೋದಿಲ್ಲ. ಅದರ ಅನುಭವ ರಗಡ (ಸಾಕಷ್ಟು) ಉಂಡೇನಿ. ಖಣ ಯಾರ್ ತೊಡೋರು? ಪಾಲಿಸ್ಟರ್, ಫ್ಯಾಷನ್ ಹೊಡ್ತಕ್ಕ ಎಲ್ಲಾ ನಿಕಾಲಿ ಆಗೇತಿ’ ಎನ್ನುತ್ತಾರೆ ನಾಗಪ್ಪ ಗುಡ್ಡದ. 50 ವರ್ಷಗಳ ಕಾಲ ಮಗ್ಗದ ಸಂಗದಲ್ಲಿದ್ದು ಈಗ ಅದರ ಹಂಗ್ಯಾಕೆ ಎನ್ನುವಂತೆ ಅವರು ಬದುಕುತ್ತಿದ್ದಾರೆ. ಅವರ ಮಗ ನಡೆಸುವ ಖಾರ ಕುಟ್ಟುವ ಗಿರಣಿ ಮನೆಯನ್ನೂ ನಡೆಸುತ್ತಿದೆ.

‘20 ಮೀಟರ್‌ ರೇಷ್ಮಿ ಖಣಾ ನೇಯಾಕ, ಕಮ್ಮಿ ಅಂದ್ರೂ 8 ದಿನಾ ಬೇಕು. ಇಷ್ಟ್‌ ದಿನದ ದುಡಕಿಗೆ (ದುಡಿಮೆ) ನೇಕಾರರಿಗೆ ಸಿಗೋದು ಬರೇ 400 ರೂಪಾಯಿ. ಎದಕ್ಕೂ ಸಾಲೋದಿಲ್ಲ. ಇನ್ನss ಒಂದ ಖಣಕ್ಕ 200 ರೂಪಾಯಿ ಆಕ್ಕೇತಿ. ಅಷ್ಟ ರೊಕ್ಕಾ ಕೊಟ್ಟ ಹಗಲೆಲ್ಲ ಖಣಾ ತೊಗೊಳ್ಳವ್ರ ಯಾರ್‌ ಅದಾರ? ತೊಟಕೊಳ್ಳವ್ರರ ಯಾರ್ ಅದಾರ?’ ಎಂದು ಕೇಳುತ್ತಾರೆ ಅವರು.

ಬಡತನವೇ ಹಾಸು–ಹೊಕ್ಕು
ಗುಗ್ಗರಿ ಪೇಟೆಯ ಈರವ್ವ ಬಂಗಾರಖಡೆಯ ಅವರ ಮನೆಯಲ್ಲಿ ಈಗಲೂ ಎರಡು ಮಗ್ಗಗಳು ಚಟಕ್–ಪಟಕ್ ಸದ್ದು ಮಾಡುತ್ತಿವೆ. ಈರವ್ವ ಅವರ ಕಣ್ಣಿನ ದೃಷ್ಟಿ ಮಂದವಾಗಿದೆ. ಇರುವ ಒಬ್ಬನೇ ಮಗ ಡ್ರೈವರ್‌ ಕೆಲಸಕ್ಕೆ ಹೋಗುತ್ತಾರೆ. ಬೆಳೆದು ನಿಂತ ಐದು ಮಂದಿ ಹೆಣ್ಣುಮಕ್ಕಳಿಗೂ ಹಣಗಿ ಕೆಚ್ಚುವುದು, ಉಂಕಿ ಹೂಡುವುದು ಗೊತ್ತು; ಮಗ್ಗದ ಕುಣಿಯಲ್ಲಿ ಕುಳಿತುಕೊಳ್ಳುವುದು ಗೊತ್ತು! ಅವರಿಗೆ ಗೊತ್ತಿರುವ ಕೆಲಸವೆಂದರೆ ಇದೊಂದೇ. ಗಂಡುಮಕ್ಕಳೇನೋ ಊರು ಬಿಡುತ್ತಾರೆ. ಇವರೇನು ಮಾಡಬೇಕು?

‘ಹೊರಗ ಹೋಗಲಾರದ ಕಿಚ್ಚಿಗೆ ರೊಟ್ಟಿ–ಹಿಂಡಿ ತಿಂದ್ರೂ ಚಿಂತಿಲ್ಲ ಅಂದಖಾಸಿ ಇದ್ನss ಮಾಡ್ಕೊಂಡ್ ಹೊಂಟೇವ್ರಿ’ ಎಂದು ಈರವ್ವ ಅವರ ಮಗಳು ಸಾವಿತ್ರಿ ಒಂದೇ ಉಸಿರಿನಲ್ಲಿ ಹೇಳಿದಾಗ ಆಕೆಯ ಅಕ್ಕಂದಿರೂ ಆಕೆಯ ಮಾತಿಗೆ ಕಿವಿ–ದನಿ ಎರಡೂ ಆದರು. ಮಾತಿಲ್ಲದೇ ದಿನ ದೂಡುವ ಅಂಥ ಮನೆಗಳೋ ಸಾರಿಸಿ, ಸ್ವಚ್ಛ ಮಾಡಿದಂತಿವೆ. ಅವರು ನೇಯುವ ಖಣದಲ್ಲಿನ ಹಾಸು–ಹೊಕ್ಕಿನಂತೆಯೇ ಅವರ ಮನೆಯಲ್ಲಿ ಬಡತನ ಎಂಬುದು ಹಾಸು–ಹೊಕ್ಕು ಎರಡೂ ಆಗಿದೆ.

ಗೊತ್ತಿರದ ದುಡಿಮೆಯಲ್ಲಿ ಬದುಕು
ಬುದ್ಧಿವಂತೆಪ್ಪ ಅವರ ಮನೆಯಲ್ಲಿ ಮಗ್ಗದ ಕುಣಿಗಳ ಮೇಲೆ ಕಪಾಟು, ಬಟ್ಟೆ ತುಂಬಿದ ತೊಟ್ಟಿಲು ತುಂಬಿಕೊಂಡಿವೆ. ಮನೆ ತುಂಬಾ ಕಿರಾಣಿ ಘಾಟು. ಊರು ಬಿಡದೇ ಮನೆಯಲ್ಲಿಯೇ ಚಹಾದಂಗಡಿ (ಹೋಟೆಲ್) ನಡೆಸುವ ಬುದ್ಧಿವಂತಿಕೆ ಮಾಡಿ, ಮಕ್ಕಳನ್ನು ಓದಿಸುತ್ತಿದ್ದಾರೆ ಅವರು. 10 ವರ್ಷದ ಹುಡುಗನಿದ್ದಾಗಿನಿಂದ ಮಗ್ಗದ ಸಖ್ಯದಲ್ಲಿದ್ದ ದಾನಪ್ಪ ಬಿಜಾಪುರ ಅವರಿಗೆ ಈಗ 62–63 ವರ್ಷ. ಇರುವ ಒಬ್ಬ ಮಗನನ್ನು ಊರು ಬಿಡಲು ಕೊಡದೇ ಅಲ್ಲೇ ಇರುವ ಖಣದ ಅಂಗಡಿಯಲ್ಲಿ ಕೆಲಸಕ್ಕೆ ಇಟ್ಟಿದ್ದಾರೆ.

‘ಜಿನಗ ಎಳಿ (ಸಣ್ಣನೆಯ ನೂಲು) ಕೆಲ್ಸಾ ಮಾಡಿ ನೆದರು ಹ್ವಾದ್ವು. ಈಗ ದುಡಕಿ ಆಗದಿಲ್ಲ. ಆದ್ರ ಹೊಟ್ಟಿ ಕೇಳಬೇಕಲ್ಲ? ಕಪ್ಪು–ಬಸಿ ತೊಳದ್ರೂ ಹೊಟ್ಟಿ ತುಂಬತೈತಿ’ ಎನ್ನುತ್ತಾರೆ ಮಕ್ಕಳಿಲ್ಲದ ಬಸಪ್ಪಜ್ಜ. ಆರಂಭದಲ್ಲೆ ಬಿಕ್ಕಿ ಊರು ಎಂದು ಬಿಕ್ಕಿದ್ದ ಈ ಅಜ್ಜ, ಆತ್ಮಹತ್ಯೆ ಮಾಡಿಕೊಳ್ಳವುದೊಂದೇ ದಾರಿ ಎಂದರೆ, ‘ಡಾಳು–ಡಗ್ಗ ಯಾಡ್ ಉಳದಾವ್ರಿ. ದುಡ್ಯಾಕ್‌ ಹ್ವಾದ ಮಂದಿ ಹೊಳ್ಳಿ ಬರಬೇಕಂದ್ರ ಮೊದ್ಲು ಊರು ಸುಧಾರಣಿ ಆಗಬೇಕ್ರಿ’ ಎಂದವರು ನೀಲಮ್ಮ. ಮಲ್ಲಪ್ಪ ಜೋಗೂರ ಅವರ ಮನೆಯಲ್ಲಿ ಮಗ್ಗವನ್ನು ಎತ್ತಿಟ್ಟು ಎಷ್ಟೋ ದಿನಗಳಾಗಿವೆ. ಆದರೆ ಪಡಸಾಲೆಯಲ್ಲಿ ನೆಟ್ಟ ‘ರಾಮಲಿಂಗನ ಗೂಟ’ ಮಾತ್ರ ಅಲ್ಲಿಯೇ ಇದೆ. ಯಾಕೆ ತೆಗೆದಿಲ್ಲ? ಎಂದರೆ ಮಲ್ಲಪ್ಪ ಹೇಳುವುದು ‘ಮತ್ ಯಾವತ್ತರ ಒಂದಿನ ಮೊದ್ಲಿನಂಗ ನೇಕಾರ್‍ಕಿ ದುಡಿಕಿ ಸುರು ಆಗಬೋದ್ರಿ’ ಎಂಬ ಭರವಸೆಯ ಮಾತನ್ನು.

ಕೈಮಗ್ಗಗಳ ಊರು
1983ರಲ್ಲಿ ಈ ಊರಲ್ಲಿಯೇ ಅಂದಾಜು 8 ಸಾವಿರ ಮಗ್ಗಗಳು ಇದ್ದವು. 50 ಸಾವಿರದಷ್ಟು ಜನರು ಈ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು. ದೇವಾಂಗ, ಸ್ವಕುಳ ಸಾಳಿ, ಸಾಳಿ, ಪದ್ಮಸಾಲಿ (ಳಿ), ಪಟ್ಟಸಾಳಿ, ಕುರುಹಿನ ಶೆಟ್ಟಿ, ಪಟ್ಟೇಗಾರ, ಮುಸ್ಲಿಂ, ಕ್ರಿಶ್ಚಿಯನ್‌, ಭಜಂತ್ರಿ, ವಾಲ್ಮೀಕಿ, ಲಿಂಗಾಯತ ಸಮುದಾಯದವರು ಇದರಲ್ಲಿದ್ದರು. 2010ರ ಹೊತ್ತಿಗೆ ಮಗ್ಗಗಳ ಸಂಖ್ಯೆ 1,500ಕ್ಕೆ ಇಳಿಯಿತು. ಈಗ ಶೇ 70ರಷ್ಟು ನೇಕಾರಿರುವ ‘ಕೆಳಗಿನ ಪೇಟೆ’ ಸೇರಿ ಇಡೀ ಊರಲ್ಲಿ 50–60 ಕೈಮಗ್ಗಗಳಿರಬಹುದು ಎನ್ನುತ್ತಾರೆ ಊರವರು.

ಎಲ್ಲ ವೃತ್ತಿಯವರಿಗೂ ಕೆಲಸವಿತ್ತು ಮಗ್ಗದ ಚೌಕಟ್ಟು, ಹಲಗಿ, ಚೌಕಕುಂಟಿ, ಚಕ್ರ, ಕೈಗೂಟ, ಮಿಣಿಗೂಟ, ಕಾಲಪಾವಡಿ, ಕಂಬಿ, ಸೆಳ್ಳು, ಕಂಡಕಿ, ತಿರುಕಿ ಲಾಳಿ, ಸವಾಲಾಖ, ಗಾಡದ ಚೂರಿ, ಸಾಕಳಾ ಪಟ್ಟಿ, ಗುಬ್ಬಿ, ಹಗ್ಗ, ಸೇಡಗಟಕಿ, ಮಣಿಕಡ್ಡಿ... ಹೀಗೆ ಕೈಮಗ್ಗವೊಂದು ತಯಾರಾಗಲು ಬೇಕಾದ ಎಲ್ಲ ಸಾಧನಗಳನ್ನು ತಯಾರಿಸಲು ಕನಿಷ್ಠ ಇಪ್ಪತ್ತು ಸಾವಿರ ರೂಪಾಯಿಯಾದರೂ ಬೇಕು. ಇದೆಲ್ಲದಕ್ಕಿಂತ ಮೊದಲು ಈ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಲು ಬಡಿಗೇರ, ಕಮ್ಮಾರ, ಸಿಂಪಿಗ, ಕುಂಬಾರ, ಚಮ್ಮಾರ, ಹಗ್ಗ ಹೊಸೆಯುವವರು, ಹಣಗಿ ಕಟ್ಟುವವರು ಹೀಗೆ ಎಲ್ಲರ ನೆರವು ಬೇಕಾಗುತ್ತದೆ. ನೂಲಿಗೆ, ಪಗಡೆಗಳಿಗೆ ಬಣ್ಣ ತುಂಬುವ ಬಣ್ಣದ ಮನೆಯ ನೀಲಗಾರರೂ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಒಂದು ಮಗ್ಗ ಏನಿಲ್ಲವೆಂದರೂ ಕನಿಷ್ಠ ಹತ್ತು ಜನರಿಗೆ ಉಪ ಕಸುಬುಗಳನ್ನು ನೀಡಿತ್ತು, ಆದರೆ ಮಗ್ಗಗಳ ಸದ್ದಡಗಿದಂತೆ ಈ ಎಲ್ಲ ಕಸುಬುದಾರರೂ ಕೆಲಸ ಕಳೆದುಕೊಂಡರು. ಪರಂಪರಾನುಗತವಾಗಿ ಬಂದಿದ್ದ ಉದ್ಯೋಗವೊಂದನ್ನು ಬಿಟ್ಟು ಬೇರೆ ಕೆಲಸ ಗೊತ್ತಿರದೇ ಜನ ಕಂಗಾಲಾದರು. ಅದರ ಪರಿಣಾಮವೇ ಗಂಟು ಮೂಟೆ ಕಟ್ಟಿಕೊಂಡು ಊರು ತೊರೆಯುತ್ತಿರುವ ಕಾರಣ ಊರಿನ ಜನಸಂಖ್ಯೆ ಕಡಿಮೆಯಾಗುತ್ತ ಬಂದು, ‘ಮಕ್ಕಳು ಎಲ್ಲಿದ್ದಾರೆ? ನನ್ನ ಮಕ್ಕಳು ಎಲ್ಲಿದ್ದಾರೆ?’ ಎಂದು ಗುಳೇದಗುಡ್ಡವೇ ಕೇಳುವ ಸ್ಥಿತಿ ಬಂದಿದೆ.

ಗುಳೆ ತಡೆಯಬೇಕಿದ್ದರೆ ಈ ಊರಿಗೊಂದು ಸರ್ಕಾರಿ ಡಿಪ್ಲೊಮಾ ಕಾಲೇಜು ಹಾಗೂ ಪದವಿ ಕಾಲೇಜು ಆಗಬೇಕು ಎನ್ನುತ್ತಾರೆ ಬಾದಾಮಿ ತಾಲ್ಲೂಕಿನ ಶಿಕ್ಷಕ ಎಚ್‌. ವಿರೂಪಾಕ್ಷ.

ಗತ ವೈಭವದ ನೆನಪಿನಲ್ಲಿ, ಮಗ್ಗಗಳು ಅಳಿದ ವಿಷಾದದಲ್ಲಿ ಈಗಿನ ಮಕ್ಕಳ ಬದುಕನ್ನು ಬಲಿ ಕೊಡುವುದು ಬೇಡ ಎಂಬುದು ಅವರ ಅನಿಸಿಕೆ. ಓದುವುದರ ಜೊತೆಗೆ ಹೊಲದ ಕೆಲಸವನ್ನೂ ಮಾಡಬೇಕಾದ ರೈತರ ಮಕ್ಕಳ ಓದಿಗೆ ಸಹಜವಾಗಿಯೇ ಅಡ್ಡಿಯಾಗುತ್ತದೆ. ಆದರೆ, ನೇಕಾರರಿಗೇ ಕೆಲಸ ಇಲ್ಲದಿರುವುದರಿಂದ ಅವರ ಮಕ್ಕಳಿಗೆ ಕೆಲಸದ ಹೊರೆ ಇಲ್ಲ. ಸಾಕಷ್ಟು ಸಮಯ ಸಿಗುವುದರಿಂದ ಅವರು ಸಹಜವಾಗಿಯೇ ಓದಿನಲ್ಲಿ ಮುಂದೆ ಇದ್ದಾರೆ. ಯಾವುದೇ ವಿಶೇಷ ತರಬೇತಿ ಇಲ್ಲದೇ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 96ರಿಂದ ಶೇ 98 ಅಂಕ ಪಡೆಯುವ ಪ್ರತಿಭಾನ್ವಿತರಿದ್ದಾರೆ. ಅವರಿಗಾಗಿ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆಯೇ ಇಲ್ಲಿಯೇ ಕೌಶಲ ಆಧಾರಿತ ಶಿಕ್ಷಣದ ವ್ಯವಸ್ಥೆ ಆಗಬೇಕು. ಇಲ್ಲದಿದ್ದರೆ ಅವರು ಹುನಗುಂದ, ಬಾಗಲಕೋಟೆ, ಬಾದಾಮಿಯ ಕಾಲೇಜಿನಲ್ಲಿ ಪದವಿ ಓದಿಯೂ ಗಾರೆ ಕೆಲಸಕ್ಕೆಂದು ಊರು ಬಿಡುವುದು ತಪ್ಪುವುದಿಲ್ಲ ಎನ್ನುತ್ತಾರೆ ಅವರು. ಆರ್ಥಿಕ ಪರಿಸ್ಥಿತಿಯಿಂದಾಗಿ ಎಷ್ಟೋ ಜನರಿಗೆ ಅಲ್ಲಿಗೆ ಹೋಗಿ ಪದವಿ ಶಿಕ್ಷಣ ಪೂರೈಸುವುದು ಆಗುವುದಿಲ್ಲ. ಅರ್ಧಕ್ಕೆ ಓದು ಬಿಟ್ಟು, ಊರೂ ಬಿಡುತ್ತಾರೆ ಎನ್ನುತ್ತಾರೆ ಅವರು.

17 ವರ್ಷದ ಹಿಂದೆಯೇ ಊರು ಬಿಟ್ಟ ಗುಳೇದಗುಡ್ಡ ಸಮೀಪದ ಹಾನಾಪುರದ ನೀಲಪ್ಪ ದುರ್ಗದ, ಗೋವಾದ ಪಿಡಬ್ಲುಡಿಯಲ್ಲಿ ಕೆಲಸ ಮಾಡುತ್ತಾರೆ. ಊರಲ್ಲಿ ದಿನವಿಡೀ ದುಡಿತಕ್ಕೆ ನೂರು ರೂಪಾಯಿ ಹುಟ್ಟುವುದೂ ಕಷ್ಟವಾದರೆ, ಅಲ್ಲಿ ಐದು ನೂರರವರೆಗೆ ಗಳಿಸಬಹುದು ಎನ್ನುತ್ತಾರೆ ಅವರು. ಹಬ್ಬ, ಮಕ್ಕಳ ಶಾಲೆಗೆ ರಜೆ ಇದ್ದ ಸಮಯದಲ್ಲಿ ಊರಿಗೆ ಹೋಗುವ ಅವರು, 17 ವರ್ಷದ ಹಿಂದೆ ಹೇಗಿತ್ತೋ ಹಾಗೆಯೇ ಇರುವ ಅಲ್ಲಿನ ಪರಿಸ್ಥಿತಿಯನ್ನು ನೋಡಿ ನಿಲ್ಲಲಾಗದೇ ಗೋವಾಕ್ಕೆ ವಾಪಸ್ಸಾಗುತ್ತಾರೆ. ಈಗಂತೂ ಗೋವಾದ ಪಡಿತರ ಚೀಟಿ, ಆಧಾರ್‌ ಹಾಗೂ ಮತದಾರರ ಗುರುತಿನ ಚೀಟಿ ಪಡೆದು ಅಲ್ಲಿಯವರೇ ಆಗಿದ್ದಾರೆ.

ಗುಳೇ ಹೋದ ಜನರು ಊರು ಸುಧಾರಿಸಿ, ಒಳ್ಳೆಯ ಉದ್ಯೋಗಾವಕಾಶ ಸಿಕ್ಕರೆ ವಾಪಸ್‌ ಬರಲೂ ಸಿದ್ಧರಿದ್ದಾರೆ. ಇಲ್ಲಿಯ ಗುರುತಿನ ಚೀಟಿ ರದ್ದು ಮಾಡಿ, ತಮ್ಮೂರಿನದ್ದು ಪಡೆದರಾಯಿತು ಎಂಬುದು ಅವರ ವಿಚಾರ.

ಜೀವ ಹಿಂಡುತಿದೆ ಕೌಟುಂಬಿಕ ಜೀತ ಪದ್ಧತಿ: ಇಡೀ ಕುಟುಂಬವೇ ಸ್ಥಿತಿವಂತ ನೇಕಾರರ ಅಡಿ ಜೀತದಾಳಾಗಿ ಕೆಲಸ ಮಾಡುವ ಪರಿಸ್ಥಿತಿ ಇನ್ನೂ ಇಲ್ಲಿ ಇದೆ. ನೇಕಾರನೇ ಮಾಲೀಕನಾಗಿದ್ದು, ನೇಕಾರರನ್ನು ಶೋಷಿಸುವ ಪದ್ಧತಿ ಇಲ್ಲಿ ಎದ್ದು ಕಾಣುತ್ತಿದ್ದು, ಕೂಲಿಕಾರರು ಬಾಯಿಬಿಟ್ಟು ಹೇಳಿಕೊಳ್ಳದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ತಮ್ಮ ಮನೆಯಲ್ಲಿನ ಮದುವೆಗೋ ಮತ್ತಾವುದಕ್ಕೋ ಎಂದು ಮಗ್ಗದ ಮಾಲೀಕರಿಂದ ₹ 25 ಸಾವಿರ ಪಡೆದರೆ ಆ ಮಾಲೀಕನ ಪರವಾಗಿ ಇಡೀ ಮನೆಯೇ ದುಡಿಯುತ್ತದೆ. ಅವನು ಕೊಡುವ ಕೂಲಿಗಿಂತ ಬೇರೆಯವರು ಹೆಚ್ಚು ಕೊಟ್ಟರೂ ಅವರ ಕೆಲಸ ಮಾಡುವಂತಿಲ್ಲ. ಅಷ್ಟಕ್ಕೂ ಸಾಲ ತೀರದಂತೆ ನೋಡಿಕೊಳ್ಳುವುದು ಮಗ್ಗದ ಮಾಲೀಕರ ಜಾಣತನವಾದರೆ, ಮಾಡಿದ ಸಾಲಕ್ಕೆ ದುಡಿದು, ಹೊಟ್ಟೆಯನ್ನೂ ತುಂಬಿಸಿಕೊಳ್ಳಬೇಕಾದ ಕೂಲಿ ಕಾರರಿಗೆ ಮತ್ತೆ ಮತ್ತೆ ಕೈಯೊಡ್ಡದೇ ವಿಧಿ ಇಲ್ಲ.

ನೇಕಾರರ ನಾಯಕರಿಲ್ಲ
ಇವೆಲ್ಲದರ ಆಚೆಗೆ ಗುಳೇದಗುಡ್ಡ ಎದುರಿಸುತ್ತಿರುವ ಸಮಸ್ಯೆಯೇ ಬೇರೆ. ಇಲ್ಲಿ ನೇಕಾರರು ಒಗ್ಗಟ್ಟಾಗಿಲ್ಲ. ಸ್ವಕುಳಸಾಳಿ, ಪಟ್ಟಸಾಳಿ, ಕುರುಹಿನ ಶೆಟ್ಟಿ ಎಂದು ಒಡೆದುಹೋಗಿದ್ದು, ಆಯಾ ಪಂಗಡದ ಸ್ಥಿತಿವಂತರು ರಾಜಕಾರಣಿಗಳ ಕೈಯಲ್ಲಿದ್ದಾರೆ. ವಾಡಿಗೊಂದರಂತೆ ‘ಮ್ಯಾಳ’ (ಪಂಚಾಯಿತಿ) ಇದ್ದು, ಅದರ ಪ್ರಮುಖರು ಹೇಳುವ ಮಾತನ್ನೂ ವಾಡಿಯಲ್ಲಿರುವ ಯಾರೂ ಉಲ್ಲಂಘಿಸುವುದಿಲ್ಲ. ಎಲ್ಲರೂ ಅವರ ನಿಯಂತ್ರಣದಲ್ಲಿಯೇ ಇರುತ್ತಾರೆ. ಇದರಿಂದ ಅನುಕೂಲವಾಗಿದ್ದು ರಾಜಕಾರಣಿಗಳಿಗೆ. ಅವರು ನೇರವಾಗಿ ನೇಕಾರರೊಂದಿಗೆ ಮಾತನಾಡುವುದೇ ಇಲ್ಲ. ಯಾವುದೇ ಕೆಲಸವಾಗಬೇಕಿದ್ದರೂ ಆಯಾ ಬಣದ ಪ್ರಮುಖರಿಗೆ ಹುದ್ದೆಯ ಆಮಿಷ ತೋರಿಸಿ, ಅವರೊಂದಿಗಷ್ಟೇ ಸಂಪರ್ಕದಲ್ಲಿರುತ್ತಾರೆ. ಸ್ಥಳೀಯರೇ ಇಷ್ಟು ಶೋಷಣೆ ಮಾಡುತ್ತಾರೆಂದರೆ ನೇಕಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಗಿರುವ ಮಾರವಾಡಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕೂಲಿ ನೇಕಾರ ಒಬ್ಬರು.

ಸಾಲ ಕೊಟ್ಟ ಧಣಿಯನ್ನು ಎದುರು ಹಾಕಿ ಕೊಳ್ಳದೇ, ‘ಮ್ಯಾಳ’ ಮುಖಂಡರ ಕೆಂಗಣ್ಣಿಗೂ ಗುರಿಯಾಗದೇ ಇದರಿಂದ ಹೊರಬರುವುದು ಹೇಗೆ ಎನ್ನುವುದಕ್ಕೆ ಅವರಲ್ಲಿಯೇ ಒಂದಿಷ್ಟು ಪರಿಹಾರಗಳಿವೆ. ಅವರನ್ನು ತಡುವದೇ, ಅವರ ಅಧೀನದಲ್ಲಿದ್ದುಕೊಂಡೇ ಮಕ್ಕಳಿಗೆ, ಯುವಕರಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಅದಕ್ಕಾಗಿ ಸ್ಥಳೀಯವಾಗಿಯೇ ಕಾಲೇಜು ಸ್ಥಾಪನೆ ಆಗಬೇಕು. ಇದರಿಂದ ಸುತ್ತಮುತ್ತಲಿನ ಹಳ್ಳಿಯವರಿಗೂ ಅನುಕೂಲವಾಗುತ್ತದೆ. ಗುಳೇ ತಡೆಯಬೇಕು, ಜನಗಣತಿ ಮಾಡಿಸಬೇಕು, ವಿಧಾನಸಭಾ ಕ್ಷೇತ್ರ ಆಗಬೇಕು ಎಂಬೆಲ್ಲ ‘ಹೋರಾಟ’ಗಳನ್ನು ಸದ್ಯಕ್ಕೆ ಪಕ್ಕಕ್ಕಿಡಬೇಕು. ಎಷ್ಟೋ ಜನ ನೇಕಾರ ಕೂಲಿಕಾರರು ಚುರುಮುರಿ ತಿಂದು ದಿನ ದೂಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವ್ಯವಸ್ಥೆಯನ್ನು ಒಮ್ಮೆಲೇ ವಿರೋಧಿಸಲು ಆಗುವುದಿಲ್ಲ. ಇಲ್ಲಿದ್ದುಕೊಂಡೇ ಹೊರಬರುವ ಯತ್ನ ಮಾಡಬೇಕು ಎಂದು ಯೋಜನೆಯನ್ನು ಬಿಚ್ಚಿಡುತ್ತಾರೆ ಅವರು.

ಸ್ವಂತಕ್ಕೆ ಕಂದಾಯ ಜಮೀನೇ ಇಲ್ಲದ ಈ ಊರಲ್ಲಿ ಕೌಶಲಾಧಾರಿತ ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕು. ಆಗ ತಂತಾನೇ ಹೋಟೆಲ್‌, ಖಾನಾವಳಿಗಳು ಜೀವ ಪಡೆಯುತ್ತವೆ. ಹಾಸ್ಟೆಲ್‌ ನಿರ್ಮಾಣವಾಗುತ್ತವೆ. ಪುಸ್ತಕದ ಅಂಗಡಿಗಳು ಬಾಗಿಲು ತೆರೆಯುತ್ತವೆ. ಅಕ್ಕಪಕ್ಕದ ಹಳ್ಳಿಯವರೂ ಬರುತ್ತಾರೆ. ಈ ಊರಿನಿಂದ ಐಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದನ್ನು ನಿರ್ಮಿಸಿದರೆ ಆ ಭಾಗದಲ್ಲಿ ನೀರಾವರಿ ಸೌಲಭ್ಯ ಇರುವ ರೈತರು ತಮ್ಮ ಉತ್ಪನ್ನಗಳೊಂದಿಗೆ ಇಲ್ಲಿಗೆ ಬರುತ್ತಾರೆ. ಅವರಿಗೆ ಅತ್ತ ಬಾದಾಮಿಯೂ ದೂರ ಇತ್ತ ಹುನಗುಂದವೂ. ರಸ್ತೆ ಆಗಿದ್ದೇ ಆದರೆ ಮಲಪ್ರಭಾ ನದಿ ದಂಡೆಯ ಮೇಲಿನ ಹಳ್ಳಿಗಳೆಲ್ಲ ಗುಳೇದಗುಡ್ಡದ ಸಂಪರ್ಕ ಪಡೆಯುತ್ತವೆ. ಇಡೀ ಊರಿನ ಗತವೈಭವವನ್ನು ಕಂಡು ಸದ್ಯಕ್ಕೆ ಗರಬಡಿದಂತೆ ನಿಂತ ಇಲ್ಲಿಯ ಭಾರತ ಮಾರ್ಕೆಟ್ ಕೂಡ ಗೆಲುವಾಗುತ್ತದೆ.

‘ಬಂಗಾರದ ಹೊಗೆ ಹಾಯುವ’ ಕಾಲ ಬರದೇ ಹೋದರೂ ಗುಣಮಟ್ಟದ ಚಿನ್ನದಾಭರಣಕ್ಕೆ ಹೆಸರಾಗಿದ್ದ ಇಲ್ಲಿನ ಚಿನ್ನದ ಕುಸುರಿ ಕೆಲಸ ಮತ್ತೆ ಜೀವ ಪಡೆಯುತ್ತದೆ. ಹೀಗೆ ಜನರ ಮನದಾಳದಲ್ಲಿ ನೂರೆಂಟು ಯೋಜನೆಗಳಿವೆ. ಅದನ್ನು ಅವರು ಬಾಯಿಬಿಟ್ಟು ಹೇಳುತ್ತಿದ್ದಾರೆ ಕೂಡ. ಆದರೆ ಕೇಳಿಸಿಕೊಳ್ಳುವ ವ್ಯವಧಾನ, ಇಚ್ಛೆ ರಾಜಕೀಯ ನಾಯಕರಿಗೆ ಇಲ್ಲ ಎಂಬ ನೋವೂ ಇದೆ.

‘ಕೈಮಗ್ಗದೂರು’ ‘ಖಣದ ಊರು’ ಎಂದು ಎಷ್ಟು ದಿನ ಅವರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯ? ಹಸಿದ ಹೊಟ್ಟೆ ದುಡಿಮೆ ಹುಡುಕಿ ಎಲ್ಲಿಗಾದರೂ ಹೋಗುತ್ತದೆ. ಇದು ಗುಳೇದಗುಡ್ಡವೊಂದರ ಮಾತಷ್ಟೇ ಅಲ್ಲ; ಕುಲಕಸುಬಿನ ಕುಣಿಕೆಯಲ್ಲಿ ಸಾಯಲೂ ಆಗದೇ ಬದುಕಲೂ ಆಗದೇ ಇರುವ ಎಲ್ಲ ಊರುಗಳ ಸ್ಥಿತಿಯೂ ಹೌದು. ಎಷ್ಟು ದಿನ ಸಂಪ್ರದಾಯದ ಉರುಳಿನಲ್ಲಿರುವುದು?

ಖಣಕ್ಕೆ ಭೌಗೋಳಿಕ ಮಾನ್ಯತೆ
ನೂಲಿಗೆ (ಹೊಕ್ಕು) ಬೇಕಾದ ನೀಲಿ ಬಣ್ಣವನ್ನು ಸಹಜವಾಗಿ ತಯಾರಿಸಿಕೊಂಡು ಬಳಸುವುದು ಇಲ್ಲಿನ ಖಣದ ಬಣ್ಣ ಬಿಡುವುದಿಲ್ಲ. ಖಣಗಳ ವಿನ್ಯಾಸಕ್ಕೆ ಅನುಗುಣವಾಗಿ ಬಣ್ಣ ಮಾಡುವ ತಂತ್ರಗಾರಿಕೆಯನ್ನು ಗಮನಿಸಿಯೇ ಕೇಂದ್ರ ಸರ್ಕಾರವು ಗುಳೇದಗುಡ್ಡ ಖಣವನ್ನು ಭೌಗೋಳಿಕವಾಗಿ ಗುರುತಿಸಿ ಟ್ರೇಡ್ ಮಾರ್ಕ್ (ಜಿಐ ಟ್ಯಾಗ್) ನೀಡಿದೆ.

ಬಿಡದೇ ಕಾಡುವ ಅಂಗವೈಕಲ್ಯ
ನೇಕಾರರು ಹೆಚ್ಚಾಗಿ ತಮ್ಮ ರಕ್ತಸಂಬಂಧಿಗಳಲ್ಲಿಯೇ ಸಂಬಂಧ ಬೆಳೆಸುತ್ತಾರೆ. ಹೀಗಾಗಿಯೇ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯವೂ ಹೆಚ್ಚು. ಗುಳೇದಗುಡ್ಡದಲ್ಲಿಯಂತೂ ಮೇಲಿನ ಪೇಟೆಯವರು, ಕೆಳಗಿನ ಪೇಟೆಯವರ ನೆಂಟಸ್ತನ ಬೆಳೆದದ್ದೂ ಇದೆ. ಕಮತಗಿ, ಇಳಕಲ್ಲ, ಅಮೀನಗಡ, ಜಾಲಿಹಾಳ, ಕೆರೂರ ಹೀಗೆ ಸುತ್ತಲಿನ ಊರುಗಳ ಜೊತೆ ಬೀಗತನ ಮಾಡಿದರೂ ಅದು ಕೂಡ ನೇಕಾರಿಕೆ ಕುಟುಂಬದವರೊಂದಿಗೇ ಆಗಿರುತ್ತದೆ.

ಗುಳೇದ ಗುಡ್ಡವಾದ ಬಗೆ
ಶತಮಾನಗಳ ಹಿಂದೆ ಗುಡ್ಡದ ಮೇಲೆ ನೆಲೆಗೊಂಡಿದ್ದ ಈ ಊರಿಗೆ ಗೂಳಿಗುಡ್ಡ ಎಂದು ಹೆಸರಿತ್ತು. ಗೂಳಿಯೊಂದು ಇಲ್ಲಿ ತಿರುಗಾಡುತ್ತಿತ್ತು ಎನ್ನುವ ಕಾರಣಕ್ಕೆ ಇದಕ್ಕೆ ಗೂಳಿಗುಡ್ಡ ಎಂದು ಹೆಸರು. ಕಾಲಾನಂತರದಲ್ಲಿ ಜನರು ಗುಡ್ಡದಿಂದ ಕೆಳಗಿಳಿದು ಬಂದು ನೆಲೆಸಿದ್ದರಿಂದ ಗುಳೇದಗುಡ್ಡವಾಯಿತು. ಈಗ ಊರು ಇರುವ ಸ್ಥಳದಲ್ಲಿ ಮೊದಲು ದೊಡ್ಡ ಕೆರೆ ಇತ್ತು ಎನ್ನಲಾಗಿದ್ದು, ಅದು ಒಡೆದು, ನೀರು ಹರಿದು ಹೋದ ಮೇಲೆ ಗುಡ್ಡದ ಜನರೆಲ್ಲ ಇಲ್ಲಿಗೆ ಗುಳೇ ಬಂದರು ಎನ್ನಲಾಗುತ್ತದೆ.

ಗುಡ್ಡದ ನೆತ್ತಿಯ ಮೇಲೆ ಊರಿದ್ದಾಗ ಹೆಣ್ಣುಮಕ್ಕಳು, ಗುಡ್ಡದ ಕೆಳಗಿರುವ ಕೆರೆಯಿಂದ ನೀರು ತರುತ್ತಿದ್ದರಂತೆ. ಒಲೆಯ ಹೆಂಚಿನ ಮೇಲೆ ರೊಟ್ಟಿ ಹಾಕಿ ಒಂದು ಸಲ ನೀರು ತಂದರೆ, ಮತ್ತೆ ಹೆಂಚಿನಲ್ಲಿಯ ರೊಟ್ಟಿಯನ್ನು ತಿರುಗಿಸಿ ಹಾಕಿ ಮತ್ತೊಂದು ಸಾರಿಗೆ ನೀರು ತರುತ್ತಿದ್ದರಂತೆ! ಅವರು ಬೇಯಿಸುವ ರೊಟ್ಟಿ ಅಷ್ಟು ದಪ್ಪನೆಯದೋ ಅಥವಾ ಆ ಹೆಣ್ಣುಮಕ್ಕಳು ಅಷ್ಟು ಗಟ್ಟಿಗರೋ? ಹೀಗೆ ಗುಳೇದಗುಡ್ಡದ ಬಗ್ಗೆ ಹಲವು ಕುತೂಹಲಕರ ಸಂಗತಿಗಳು ತಿಳಿದುಬರುತ್ತವೆ.
ಗುಡ್ಡದಿಂದ ಗುಳೇ ಬಂದ ಊರು ಖಣಕ್ಕೆ ಹೆಸರಾದ ಮೇಲೆ ಇಲ್ಲಿಯ ಸಮೃದ್ಧತೆಗೆ ಬೆರಗಾಗಿ, ‘ಬಂಗಾರದ ಹೊಗೆ ಹಾಯುತ್ತಿತ್ತು’ ಎನ್ನುವವರು ಇಲ್ಲಿದ್ದಾರೆ.

ನೆರೆಯ ರಾಜ್ಯಗಳ ವ್ಯಾಪಾರಸ್ಥರು ವಹಿವಾಟಿಗಾಗಿ ಇಲ್ಲಿ ಬಂದು, ನಿತ್ಯವೂ ಗಿಜಿಗುಡುವ ವಾಣಿಜ್ಯ ನಗರಿಯಾಗಿ ಹೇಗೆ ಮೆರೆಯಿತು ಎಂಬುದನ್ನು ಕಂಡವರಿದ್ದಾರೆ. ಕಾಲದ ಧಡಕಿ, ಯಂತ್ರಗಳ ಹೊಡೆತಕ್ಕೆ ಕಂಗಾಲಾದ ಊರು ದುಡಿಮೆ ಕಳೆದುಕೊಂಡು, ಮತ್ತೆ ಗುಳೇ ಹೋಗುತ್ತಿರುವುದನ್ನೂ ಅವೇ ಕಣ್ಣುಗಳು ನೋಡುತ್ತಿವೆ. ಆ ಊರಿನ ಹೆಸರಿಗಂಟಿಕೊಂಡ ಗುಳೇ ಎಂಬ ಪದ ತಪ್ಪುವುದೇ ಇಲ್ಲವೇನೋ ಎಂಬಂತೆ ನಿತ್ಯ ಮಂಗಳೂರು, ಗೋವಾಕ್ಕೆ ಹೊರಟು ನಿಂತ ಬಸ್ಸುಗಳು ಗಿಜಿಗುಡುತ್ತವೆ.

ಗುಳೇದಗುಡ್ಡದ ಜನಸಂಖ್ಯೆ

ವರ್ಷ ಜನಸಂಖ್ಯೆ
1991 33,896
2001 33,991
2011 33,382

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT