ಶುಕ್ರವಾರ, ಡಿಸೆಂಬರ್ 6, 2019
17 °C

ವಿಧಾನಸಭಾಧ್ಯಕ್ಷರ ಮುಂದೆ ಹಾಜರಾದ ರವಿ ಬೆಳಗೆರೆ, ಅನಿಲ್ ರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸಭಾಧ್ಯಕ್ಷರ ಮುಂದೆ ಹಾಜರಾದ ರವಿ ಬೆಳಗೆರೆ, ಅನಿಲ್ ರಾಜ್‌

ಬೆಂಗಳೂರು: ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ಅವರು ಸೋಮವಾರ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗಿ, ತಮಗೆ ವಿಧಿಸಿರುವ ಒಂದು ವರ್ಷದ ಜೈಲು ಶಿಕ್ಷೆಯನ್ನು ಪುನರ್‌ ಪರಿಶೀಲಿಸುವಂತೆ ಮನವಿ ಮಾಡಿದರು.

‘ಜೈಲು ಶಿಕ್ಷೆ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ವಿಧಾನಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಿ ಮನವಿ ಸಲ್ಲಿಸಿ ಪರಿಹಾರ ಪಡೆಯಿರಿ’ ಎಂದು ಹೈಕೋರ್ಟ್‌ ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ಅವರಿಗೆ ನಿರ್ದೇಶನ ನೀಡಿತ್ತು. ಸಭಾಧ್ಯಕ್ಷರ ಪರ ಹಾಜರಾದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್.ಪೊನ್ನಣ್ಣ, ‘ಅರ್ಜಿದಾರರನ್ನು ಬಂಧಿಸುವುದಿಲ್ಲ’ ಎಂದು ಮೌಖಿಕ ಭರವಸೆ ನೀಡಿದ್ದರು.

ಅದರಂತೆ ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ಅವರು ವಕೀಲರ ಜತೆ ಇಂದು ವಿಧಾನ ಸೌಧದಲ್ಲಿ ವಿಧಾನಸಭಾಧ್ಯಕ್ಷರ ಕಚೇರಿಯಲ್ಲಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರ ಮುಂದೆ ಹಾಜರಾದರು.

ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿಯು ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಶಿಫಾರಸು ಮಾಡಿತ್ತು. ಇದನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿತ್ತು. ಅವರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದರು.

‘ಸದನದ ಒಳಗೆ ಅಥವಾ ಹೊರಗೆ ಹಕ್ಕು ಚ್ಯುತಿಯಾದರೆ ಮಾತ್ರ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಇಬ್ಬರೂ ನದನದ ಒಳಗೆ ಇರಲಿಲ್ಲ ಹಾಗೂ ಸದನ ಹೊರಗೆ ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿಯೂ ಇಲ್ಲ. ಹೀಗಿದ್ದರೂ ತಮ್ಮ ವ್ಯಾಪ್ತಿಯನ್ನು ಮೀರಿ ಶಿಕ್ಷೆಗೆ ಗುರಿಪಡಿಸಿದ್ದೀರಿ. ಆದ್ದರಿಂದ, ತಮ್ಮ ಶಿಕ್ಷೆ ಜಾರಿ ಆದೇಶವನ್ನು ಪುನರ್‌ ಪರಿಶೀಲಿಸಬೇಕು ಎಂದು ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ವಕೀಲ ಶಂಕರಪ್ಪ ಅವರು ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರಿಗೆ ಪುನರ್‌ ಪರಿಶೀಲನಾ ಮನವಿ ಸಲ್ಲಿಸಿದರು.

ಕಕ್ಷಿದಾರರ ವಾದ ಆಲಿಸಿದ ಕೆ.ಬಿ. ಕೋಳಿವಾಡ ಅವರು ಈ ಕುರಿತು ಪರಿಶೀಲಿಸುವುದಾಗಿ ಹೇಳಿದರು.

ವಿವರ: ‘ಹಕ್ಕುಬಾಧ್ಯತಾ ಸಮಿತಿ ಶಿಫಾರಸು ಮಾಡಿರುವ ಶಿಕ್ಷೆಯನ್ನು ಜಾರಿಗೊಳಿಸುವ ನಿರ್ಣಯ ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಜಾ ಮಾಡಿತ್ತು.

ಮುಚ್ಚಳಿಕೆ ಪತ್ರ: ನ್ಯಾಯಪೀಠದ ನಿರ್ದೇಶನದ ಅನುಸಾರ ಅರ್ಜಿದಾರರ ವಕೀಲ ಶಂಕರಪ್ಪ ಅವರು, ‘ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ ಸೋಮವಾರ ಮಧ್ಯಾಹ್ನ 3ಕ್ಕೆ ಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಲಿದ್ದಾರೆ’ ಎಂಬ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು. ಅಂತೆಯೇ ತಮ್ಮ ರಿಟ್‌ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದ್ದರು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಮೂರ್ತಿಗಳು, ‘ಅರ್ಜಿದಾರರು ಕೇಳಿರುವ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅವರು ಸಭಾಧ್ಯಕ್ಷರ ಮುಂದೆ ಹಾಜರಾದಾಗ ಅವರ ಕೋರಿಕೆಗೆ ಮಾನ್ಯತೆ ದೊರೆಯದೇ ಹೋದಲ್ಲಿ ಪುನಃ ಹೈಕೋರ್ಟ್‌ಗೆ ಬಂದು ಪರಿಹಾರ ಕೇಳಬಹುದು’ ಎಂದು ಆದೇಶಿಸಿದ್ದರು.

ಬಂಧಿಸದಂತೆ ಆದೇಶಿಸಲು ನಕಾರ: ‘ಸಭಾಧ್ಯಕ್ಷರ ಮುಂದೆ ಹಾಜರಾದ ಸಮಯದಲ್ಲಿ ಅರ್ಜಿದಾರರನ್ನು ಪೊಲೀಸರು ಬಂಧಿಸದಂತೆ ಆದೇಶದಲ್ಲಿ ಉಲ್ಲೇಖಿಸಬೇಕು’ ಎಂಬ ಶಂಕರಪ್ಪ ಅವರ ಕೋರಿಕೆಯನ್ನು ನ್ಯಾಯಮೂರ್ತಿಗಳು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.

ಪ್ರತಿಕ್ರಿಯಿಸಿ (+)