ಶನಿವಾರ, ಡಿಸೆಂಬರ್ 14, 2019
25 °C

ಸಮಾಜಕ್ಕೆ ಕನ್ನಡಿ ಹಿಡಿವ ನಿರ್ದೇಶಕ

ಮಂಜುನಾಥ ಸಿ. Updated:

ಅಕ್ಷರ ಗಾತ್ರ : | |

ಸಮಾಜಕ್ಕೆ ಕನ್ನಡಿ ಹಿಡಿವ ನಿರ್ದೇಶಕ

‘ಸೈರಾಟ್’ ಸಿನಿಮಾ ಬಿಡುಗಡೆಗೆ ಮುಂಚೆ ಮರಾಠಿ ಸಿನಿ ನಿರ್ದೇಶಕ ನಾಗರಾಜ್ ಮಂಜುಳೆ ಹೆಸರು ಸೀಮಿತ ಸಿನಿಪ್ರೇಕ್ಷಕರಿಗೆ ಮಾತ್ರ ತಿಳಿದಿತ್ತು. ಅದಕ್ಕೆ ಕಾರಣ ಅವರ ಚೊಚ್ಚಿಲ ಚಿತ್ರ ‘ಪಂದ್ರಿ’.

ದಲಿತ ಹುಡುಗನೊಬ್ಬನ ಕನಸು, ಕನವರಿಕೆ, ಸಿಟ್ಟು, ಸಮಾಜದ ಒಂದು ಪಾರ್ಶ್ವಕ್ಕೆ ಕನ್ನಡಿ ಹಿಡಿದಂತಿತ್ತು ‘ಪಂದ್ರಿ’ ಚಿತ್ರ. ನಾಗರಾಜ್‌ ಅವರು ‘ಎರಡೂ ಕಣ್ಣಿಟ್ಟು’ ಗಮನಿಸಬೇಕಾದ ನಿರ್ದೇಶಕ ಎಂಬುದನ್ನು ಆ ಚಿತ್ರ ಸಾಬೀತುಪಡಿಸಿತ್ತು.

ಗ್ರಾಮೀಣ ಚಿತ್ರಣ, ಭಾರತೀಯರ ಮನಸುಗಳಲ್ಲಿ ಸುಪ್ತವಾಗಿ ಹರಿಯುತ್ತಿರುವ ಜಾತಿ ಪದ್ಧತಿಯನ್ನು ಭಾಷಣಗಳಿಲ್ಲದೆ, ಉದ್ವೇಗಗಳಿಲ್ಲದೆ ನೋಡುಗರಿಗೆ ದಾಟಿಸುವ ನಾಗರಾಜ್ ಅವರಿಗೆ ಈ ಗುಣಗಳು ಬಂದಿದ್ದು ಅವರ ಜೀವನಾನುಭವದಿಂದ. ನಾಗರಾಜ್ ಈ ವರೆಗೆ ನಿರ್ದೇಶಿಸಿರುವ ಸಿನಿಮಾಗಳ ಮೂಲ ವಸ್ತು ಜಾತಿಪದ್ಧತಿಯೇ ಆಗಿರು ವುದು ಗಮನಾರ್ಹ ಅಂಶ.

ಬಡ ಕುಟುಂಬದಲ್ಲಿ ಹುಟ್ಟಿದವರು ನಾಗರಾಜ್‌. ಸಂಸಾರ ನಡೆಸಲು ಕಲ್ಲು ಕುಟ್ಟುವ ಕೆಲಸ ಮಾಡುತ್ತಿದ್ದ ಅಪ್ಪ ಹೇಳಿದ್ದು ಒಂದೇ ಮಾತು ‘ನೆರಳಲ್ಲಿ ಮಾಡೊ ಕೆಲ್ಸಾ ಹುಡುಕಿಕೊ ಮಗನೇ’. ಆದರೆ ನಾಗರಾಜ್‌ಗೆ ಅದು ಮಾತ್ರವೇ ಜೀವನ ಎನಿಸಿರಲಿಲ್ಲ. ಸರ್ಕಾರಿ ನೌಕರಿಯಾಚೆಗೂ ಅವರು ಜೀವನ ಹುಡುಕುತ್ತಾ ಹೊರಟರು. ಕೀಳು ಜಾತಿಯವರೆಂಬ ಕಾರಣಕ್ಕೆ ಊರ ಹೊರಗಿನ ಕೇರಿಯಲ್ಲಿ ಜೀವನ ಸಾಗಿಸುತ್ತಿದ್ದ ನಾಗರಾಜ ಮಂಜುಳೆ ಎಳವೆಯಿಂದಲೇ ಮೌನದ ಪ್ರತಿಮೆ.

ಜಾತಿಯ ಕಾರಣಕ್ಕೆ ಯಾರೂ ತಮ್ಮನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದನ್ನು ಕಂಡಿದ್ದ ಅವರು ತಮ್ಮ ಅಭಿಪ್ರಾಯ ಹೇಳುವುದೇ ಅಪ್ರಯೋಜಕ ಎಂದು ನಂಬಿ ಸುಮ್ಮನಿದ್ದವರು. ಪಂದ್ರಿ ಚಿತ್ರದ ನಾಯಕನಿಗೆ, ಬಾಲ್ಯದ ನಾಗರಾಜ್‌ ಮಂಜುಳೆಗೂ ಸಾಕಷ್ಟು ಹೋಲಿಕೆಗಳಿವೆಯಂತೆ. ಜಗತ್ತನ್ನು ಗಮನಿಸುತ್ತಾ ಒಳಗೇ ಅಭಿಪ್ರಾಯ ತಳೆಯುತ್ತಾ ಬಾಲ್ಯ ಕಳೆದರು ನಾಗರಾಜ್.

ನಾಗರಾಜ್ ಅವರ ಮೌನದ ಹಿಂದೆ ಅಡಗಿದ್ದ ಧ್ವನಿ ಹೊರಗೆ ಬರಲು ಸದಾ ತುಡಿಯುತ್ತಲೇ ಇತ್ತು. ಅದನ್ನು ಹೊರ ಹಾಕಲು ಅವರು ಕಂಡುಕೊಂಡ ಮಾಧ್ಯಮ ಸಾಹಿತ್ಯ. ‘ಮರಾಠಿ’ಯಲ್ಲಿ ಎಂ.ಎ ಓದುತ್ತಿದ್ದಾಗಲೇ ನಾಗರಾಜ್ ಬರೆದ ಪುಸ್ತಕ ಮಹಾರಾಷ್ಟ್ರದ ಪ್ರಮುಖ ಸಾಹಿತ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆದರೆ ನಾಗರಾಜ್‌ಗೆ ಅದು ಸಾಕಾಗಲಿಲ್ಲ. ಸಾಹಿತ್ಯದ ಮೂಲಕ ತನ್ನ ಧ್ವನಿ ಸೀಮಿತ ಜನರಿಗೆ ಮಾತ್ರವೇ ತಲುಪುತ್ತಿದೆ ಎಂದೆನಿಸಿ ಅವರು ಚಲನಚಿತ್ರದತ್ತ ಮುಖ ಮಾಡಿದರು.

ಅವರ ಮೊದಲ ಪ್ರಯತ್ನ ‘ಪಿಸ್ತುಲ್ಯ’ ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದುಬಿಟ್ಟಿತು. ಆ ನಂತರ ಅವರ ಚೊಚ್ಚಲ ಚಿತ್ರ ‘ಪಂದ್ರಿ’ ನಾಗರಾಜ್‌ ಪ್ರತಿಭೆಯನ್ನು ಜಗತ್ತಿಗೆ ಸಾರಿತು.

ದಲಿತ ಹುಡುಗನೊಬ್ಬನ ಮೌನ ಪ್ರೇಮ, ಸಮಾಜದೆಡೆಗಿನ ಸಿಟ್ಟು, ಜಾತಿ ಪದ್ಧತಿಯನ್ನು ಸಹಜ ಎಂಬಂತೆ ಆಚರಿಸುವ ಜನರ ಕ್ಷುದ್ರ ಮನಸಿನ ಚಿತ್ರಣ ಸಹೃದಯಿ ಸಿನಿ ಪ್ರೇಕ್ಷಕರಿಗೆ ಅಚ್ಚರಿ ಉಂಟುಮಾಡಿತ್ತು. ಆನಂತರ ಅಜ್ಞಾತಕ್ಕೆ ಸರಿದಿದ್ದ ನಾಗರಾಜ್ ಮತ್ತೆ ಬಂದದ್ದು ‘ಸೈರಾಟ್’ ಚಿತ್ರದ ಮೂಲಕ. ಮರಾಠಿ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಸೃಷ್ಟಿಸಿದ ‘ಸೈರಾಟ್‌’ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮರಾಠಿ ಸಿನಿಮಾ ಮಂದಿಗೆ ಮಾತ್ರ ತಿಳಿದಿದ್ದ ನಾಗರಾಜ್ ರಾತ್ರೋರಾತ್ರಿ ದೇಶದ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡುಬಿಟ್ಟರು.

ಅಂತರ್ಜಾತಿ ವಿವಾಹ ಮತ್ತು ಮರ್ಯಾದೆಗೇಡು ಹತ್ಯೆಯ ಕತೆ ಹೊಂದಿದ್ದ ಸಿನಿಮಾವನ್ನು ಲವಲವಿಕೆಯಿಂದ ನಾಗರಾಜ್ ನಿರೂಪಿಸಿದ್ದ ಪರಿ ಸಿನಿಮಾದ ಆ ಪರಿ ಗೆಲುವಿಗೆ ಮೂಲ ಕಾರಣ ಎಂದು ಸಿನಿ ತಜ್ಞರು ವಿಶ್ಲೇಷಿಸಿದ್ದರು.

ಇದೀಗ ನಾಗರಾಜ್ ತಮ್ಮ ಮೂರನೇ ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶಿಸಲು ತಯಾರಾಗಿದ್ದು, ಅಮಿತಾಬ್ ಬಚ್ಚನ್‌ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ನಾಗರಾಜ್ ಅವರ ನಿರ್ದೇಶಕತ್ವವನ್ನು ಕೊಂಡಾಡಿ ಅಮಿತಾಬ್ ಅವರು ಮಾಡಿದ್ದ ಟ್ವೀಟ್‌ಗಳೂ ಈ ಗಾಳಿ ಸುದ್ದಿಗೆ ಪುಷ್ಟಿ ನೀಡುತ್ತಿವೆ.

ಪ್ರತಿಕ್ರಿಯಿಸಿ (+)