ಸೋಮವಾರ, ಡಿಸೆಂಬರ್ 9, 2019
25 °C

ಮಂದಿರಾಗಿದು ಸಂತಸದ ಗಳಿಗೆ

Published:
Updated:
ಮಂದಿರಾಗಿದು ಸಂತಸದ ಗಳಿಗೆ

ಮಂದಿರಾ ಬೇಡಿ ಮತ್ತೊಮ್ಮೆ ಖುಷಿಯಾಗಿದ್ದಾರೆ. ಕೈಗೆ ಹೊಸ ಪ್ರಾಜೆಕ್ಟ್‌ ಸೇರಿದಾಗೆಲ್ಲ ಅವರು ಹೊಸ ಹುರುಪು ಪ್ರಕಟಿಸುವುದು ಇದ್ದೇ ಇದೆ. ಈ ಬಾರಿ ಖುಷಿಗೆ ಒಂದಲ್ಲ, ನಾಲ್ಕಾರು ಕಾರಣಗಳಿವೆ. ಎಲ್ಲಕ್ಕೂ ಮುಖ್ಯವಾಗಿ ದಶಕಗಳ ನಂತರವೂ ತಮ್ಮನ್ನು ತಾವು ನಟಿ ಎಂದು ಮತ್ತೊಮ್ಮೆ ನಿರೂಪಿಸುವ ಚಿನ್ನದಂಥ ಅವಕಾಶ ಸಿಕ್ಕಿದ್ದಕ್ಕೆ ಅವರ ಮನಸಿನಲ್ಲಿ ಸಂಭ್ರಮ ತುಂಬಿ ತುಳುಕುತಿದೆ.

ಅಂದಹಾಗೆ ಮಂದಿರಾ ಖುಷಿಗೆ ಕಾರಣವಾದ ಚಿತ್ರ ‘ದಿ ಗಿಫ್ಟ್’. ಈ ಚಿತ್ರದಲ್ಲಿ ಗುಲ್‌ ಪನಾಗ್ ಮತ್ತು ಕುಶಾಲ್ ಪಂಜಾಬಿ ಅವರೊಂದಿಗೆ ಮಂದಿರಾ ತೆರೆ ಹಂಚಿಕೊಳ್ಳಲಿದ್ದಾರೆ.

‘ಈ ಚಿತ್ರವು ಗಂಡ, ಹೆಂಡತಿ ಮತ್ತು ಗರ್ಲ್‌ಫ್ರೆಂಡ್‌ ಎಂಬ ಮೂರು ಪಾತ್ರಗಳ ಸುತ್ತ ಹೆಣೆದ ಕಥೆ ಹೊಂದಿದೆ. ನಾನು ಗರ್ಲ್‌ಫ್ರೆಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನದು ವಿಭಿನ್ನವಾದ ಆಧುನಿಕ ಮಹಿಳೆಯ ಪಾತ್ರ’ ಎಂದಿದ್ದಾರೆ 45ರ ಆಸುಪಾಸಿನ ನಟಿ.

ನಟಿಯಾಗಿಯೇ ಬೆಳ್ಳಿಪರದೆಯನ್ನು ಪ್ರವೇಶಿಸಿದ ಮಂದಿರಾ ಮುಂದೆ ನಿರೂಪಕಿಯಾಗಿ, ಕ್ರಿಕೆಟ್ ಹೋಸ್ಟರ್‌, ಫ್ಯಾಷನ್‌ ಡಿಸೈನರ್‌, ಬಾಲಿವುಡ್‌ ಸ್ಟೈಲಿಸ್ಟ್ ಆಗಿ ಗುರುತಿಸಿಕೊಂಡರು. ‘ನಾನು ನಟಿ ಎನ್ನುವುದು ಜನರ ಮನಸ್ಸಿನಿಂದ ದೂರವಾಯಿತೇನೊ’ ಎಂದು ಎಷ್ಟೋ ಕಡೆ ಅವರು ಕಳವಳ ವ್ಯಕ್ತಪಡಿಸಿದ್ದೂ ಆಯಿತು.

‘ಜನ ನನ್ನನ್ನು ಕ್ರಿಕೆಟ್‌ ಪ್ರೆಸೆಂಟರ್‌, ನಿರೂಪಕಿ ಎಂದೇ ಇತ್ತೀಚೆಗೆ ಗುರುತಿಸುತ್ತಿದ್ದಾರೆ. ಆದರೆ ಮೂಲತಃ ನಾನು ನಟಿ ಎನ್ನುವುದನ್ನು ಮರೆತಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ಅವರು ಈಚೆಗೆ ಬೇಸರ ಹಂಚಿಕೊಂಡಿದ್ದರು.

‘ಶಾಂತಿ’, ‘ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥೀ’ ಧಾರಾವಾಹಿಯ ಮೂಲಕ ಜನರ ಮನದಲ್ಲಿ ನೆಚ್ಚಿನ ಸೊಸೆಯಾಗಿ ನೆಲೆಯೂರಿದ್ದರು ಮಂದಿರಾ. ತಮ್ಮ ನಟನಾ ಕೌಶಲವನ್ನು ಪ್ರಕಟಿಸಲು ಇದೀಗ ಸಾಕಷ್ಟು ಅವಕಾಶಗಳು ಸಿಗುತ್ತಿವೆ ಎನ್ನುವ ಸಂತಸದಲ್ಲಿದ್ದಾರೆ.

‘ಕ್ರಿಕೆಟ್ ಹೋಸ್ಟಿಂಗ್, ರಿಯಾಲಿಟಿ ಷೋಗಳ ಸರಣಿ ಆರಂಭವಾದ ಮೇಲೆ ಜನ ನಾನು ನಟಿ ಎಂಬುದನ್ನು ಮರೆತು ಬಿಟ್ಟಿದ್ದರು. ಆದರೆ ನನಗೆ ಈಗ ಒಳ್ಳೆಯ ಅವಕಾಶಗಳು ಸಿಕ್ಕಿವೆ. ನಾಲ್ಕಾರು ಮಹತ್ವದ ಕೆಲಸಗಳಲ್ಲಿ ನಾನೀಗ ಬ್ಯೂಸಿ ಆಗಿದ್ದೇನೆ. ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಒಂದಕ್ಕಿಂತ ಒಂದು ಭಿನ್ನ ಪಾತ್ರ. ಖುಷಿಯಾಗುತ್ತಿದೆ...’ ಎಂದಿದ್ದಾರೆ ಮಂದಿರಾ.

ಹಾಗಂತ ಅವರಿಗೆ ಕ್ರಿಕೆಟ್‌ ಪ್ರೆಸೆಂಟರ್‌ ಆಗಿ ಕೆಲಸ ಮಾಡಿದ ಬಗ್ಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ. ‘ಕ್ರಿಕೆಟ್‌ನಿಂದ ನನ್ನ ಪಾಲಿಗೆ ಬಂದ ಅವಕಾಶದ ಬಗ್ಗೆಯೂ ನನಗೆ ಹೆಮ್ಮೆ ಇದೆ. ಅದೊಂದು ಬೇರೆಯದೇ ಆದ ಜಗತ್ತು. ಅಲ್ಲಿ ಈಜಲು ಎಲ್ಲರಿಂದಲೂ ಆಗುವುದಿಲ್ಲ. ನನ್ನ ಜೀವನದಲ್ಲಿ ಅದೊಂದು ವಿಭಿನ್ನ ತಿರುವು. ಆ ಕೆಲಸದ ಬಗ್ಗೆ ಈಗಲೂ ಹೆಮ್ಮೆ ಎನಿಸುತ್ತದೆ. ಅಲ್ಲಿ ಸಾಕಷ್ಟು ಪಾಠಗಳನ್ನು ಕಲಿಯಲು ಸಾಧ್ಯವಾಯಿತು’ ಎಂದೂ ಅವರು ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)